ಕರ್ನಾಟಕ ಹವಾಮಾನ ಏಪ್ರಿಲ್ 12: ಕಲಬುರ್ಗಿಯಲ್ಲಿ ಗರಿಷ್ಠ 40.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು; ಇಂದು 25 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
Karnataka Weather: ಏಪ್ರಿಲ್ 12ರ ಶುಕ್ರವಾರ ಕರ್ನಾಟಕದ 25 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಬೆಳಗಾವಿಯ ಸಂಕೇಶ್ವರದಲ್ಲಿ 3 ಸೆಂ.ಮೀ ಮಳೆಯಾಗಿದ್ದರೆ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ.
ಬೆಂಗಳೂರು: ನಿರೀಕ್ಷೆಯಂತೆ ಯುಗಾದಿ ಮುಗಿದ ಬಳಿಕ ಕರ್ನಾಕಟದಲ್ಲಿ ತಾಪಮಾನ ಕಡಿಮೆಯಾಗುತ್ತಿದ್ದು (Karnataka Temperature), ರಣ ಬಿಸಿಲಿಗೆ ತತ್ತರಿಸಿದ್ದ ಜನರಿಗೆ ವರುಣ ತಂಪೆೆರೆಯುತ್ತಿದ್ದಾನೆ (Rains in Karnataka). ಬೆಳಗಾವಿ ಜಿಲ್ಲೆಯ ಕೆಲವೊಂದು ಕಡೆಗಳಲ್ಲಿ ಮಳೆಯಾಗಿದೆ. ಏಪ್ರಿಲ್ 11 ರ ಗುರುವಾರದ ವರದಿಯಂತೆ ಬೆಳಗಾವಿಯ ಸಂಕೇಶ್ವರದಲ್ಲಿ 3 ಸೆಂಟಿ ಮೀಟರ್ ಮಳೆಯಾಗಿದೆ. ಹುಕ್ಕೇರಿಯಲ್ಲಿ 2 ಸೆಂಟಿ ಮೀಟರ್ ಹಾಗೂ ಯಡವಾಡದಲ್ಲಿ 1 ಸೆಂಟಿ ಮೀಟರ್ ಮಳೆಯಾಗಿದೆ. ಉಳಿದಂತೆ ಇತರೆ ಕಡೆಗಳಲ್ಲಿ ಒಣಹವೆ ಮುಂದುವರೆದಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ (Weather Today) ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಉಷ್ಣಾಂಶದಲ್ಲಿನ ಬದಲಾವಣೆಗಳನ್ನು ನೋಡುವುದಾದರೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ತಾಪಮಾನ ಗಮನಾರ್ಹವಾಗಿ ಇಳಿಕೆಯಾಗಿದೆ. 2.1 ಡಿಗ್ರಿ ಸೆಲ್ಸಿಯಸ್ ನಿಂದ 4 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆಯಾಗಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಉಷ್ಣಾಂಶದಲ್ಲಿ ಹೆಚ್ಚಿನ ಬದಲಾವಣೆಗಳು ಆಗಿಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಾತ್ರ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ಅತಿ ಗರಿಷ್ಠ ಉಷ್ಣಾಂಶ ಬಿಸಿಲ ನಾಡು ಕಲಬುರಗಿಯಲ್ಲಿ ಗುರುವಾರ (ಏಪ್ರಿಲ್ 11) ದಾಖಲಾಗಿದೆ. ಇಲ್ಲಿ 40.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇಂದು (ಏಪ್ರಿಲ್ 12, ಶುಕ್ರವಾರ) ಮತ್ತು ನಾಳೆ (ಏಪ್ರಿಲ್ 13, ಶನಿವಾರ) ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಇಂದು 25 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ
ಕರ್ನಾಟಕದ 25 ಜಿಲ್ಲೆಗಳಲ್ಲಿ ಇಂದು (ಏಪ್ರಿಲ್ 12, ಶುಕ್ರವಾರ) ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ರಾಮನಗರ, ಶಿವಮೊಗ್ಗ, ವಿಜಯನಗರ ಹಾಗೂ ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
ಏಪ್ರಿಲ್ 13ರ ಶನಿವಾರ ಮಳೆ ಸಾಧ್ಯತೆ ಜಿಲ್ಲೆಗಳು: ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರು, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯನಗರ, ಮೈಸೂರು ಜಿಲ್ಲೆಗಳ ಒಂದೆರಡು ಕಡೆ.
ಏಪ್ರಿಲ್ 14ರ ಭಾನುವಾರ ಮಳೆ ಸಾಧ್ಯತೆ ಜಿಲ್ಲೆಗಳು: ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ವಿಜಯಪುರ, ಚಾಮರಾಜನಗರ, ಚಿಕ್ಕಮಗಲೂರು, ದಾವಣಗೆರೆ, ಕೊಡಗು, ಶಿವಮೊಗ್ಗ, ಮೈಸೂರು ಜಿಲ್ಲೆಗಳ ಒಂದೆರಡು ಕಡೆ
ಏಪ್ರಿಲ್ 15ರ ಸೋಮವಾರ ಮಳೆ ಸಾಧ್ಯತೆ ಜಿಲ್ಲೆಗಳು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ಬೆಂಗಳೂರು ಹವಾಮಾನ
ರಾಜಧಾನಿ ಬೆಂಗಳೂರಿನಲ್ಲಿ ಸ್ಪಷ್ಟವಾದ ಆಕಾಶ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶ 36 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇರುತ್ತದೆ. ನಾಳೆಯೂ ಇದೇ ವಾತಾವರಣ ಇರುವ ಬಹಳಷ್ಟು ಸಾಧ್ಯತೆ ಇರಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
ವಿಭಾಗ