ಕರ್ನಾಟಕದ ಹಲವೆಡೆ ಅಬ್ಬರಿಸಿದ ವರುಣ, ತಗ್ಗಿದ ತಾಪಮಾನ; ಇಂದು 29 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -Karnataka Weather Today
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಹಲವೆಡೆ ಅಬ್ಬರಿಸಿದ ವರುಣ, ತಗ್ಗಿದ ತಾಪಮಾನ; ಇಂದು 29 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -Karnataka Weather Today

ಕರ್ನಾಟಕದ ಹಲವೆಡೆ ಅಬ್ಬರಿಸಿದ ವರುಣ, ತಗ್ಗಿದ ತಾಪಮಾನ; ಇಂದು 29 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -Karnataka Weather Today

Karnataka Weather: ಬೀದರ್, ಕಲಬುರ್ಗಿ, ವಿಜಯಪುರ ಹಾಗೂ ಬಾಗಲಕೋಟೆ ಸೇರಿ 7 ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದೆ. ಆದರೆ ರಾಜ್ಯದ ಕರಾವಳಿ ಭಾಗದಲ್ಲಿ ಒಣಹವೆ ಮುಂದುವರಿಸಿದೆ. ಏಪ್ರಿಲ್ 13ರ ಶನಿವಾರದ ಹವಾಮಾನ ತಿಳಿಯಿರಿ.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಏಪ್ರಿಲ್ 12ರ ಶುಕ್ರವಾರ ಮಳೆಯಾಗಿದೆ (ಫೋಟೊ-ಸಂಗ್ರಹ)
ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಏಪ್ರಿಲ್ 12ರ ಶುಕ್ರವಾರ ಮಳೆಯಾಗಿದೆ (ಫೋಟೊ-ಸಂಗ್ರಹ)

ಬೆಂಗಳೂರು: ರಣ ಬಿಸಿಲಿಗೆ ಬಳಲಿ ಬೆಂಡಾಗಿದ್ದ ಕರ್ನಾಟಕದ ಜನತೆಗೆ ವರುಣ (Karnataka Rain) ತಂಪೆರೆಯುತ್ತಿದ್ದಾನೆ. ರಾಜ್ಯದ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಶುಕ್ರವಾರ (ಏಪ್ರಿಲ್ 12) ಗುಡುಗು ಸಹಿತ ಮಳೆಯಾಗಿದೆ. ಬಿಸಿಲಿಗೆ ಹೆಸರುವಾಸಿಯಾಗಿರುವ ಕಲಬುರ್ಗಿಯಲ್ಲಿ ಶುಕ್ರವಾರ 3 ಸೆಂಟಿ ಮೀಟರ್ ಮಳೆಯಾಗಿದೆ. ಬೀದರ್ ಜಿಲ್ಲೆಯ ಮಂಠಾಳದಲ್ಲೂ 3 ಸೆಂಟಿ ಮೀಟರ್ ಮಳೆಯಾಗಿದೆ. ಕಲಬುರ್ಗಿಯ ಖಜೂರಿ, ಆಳಂದ, ವಿಜಯಪುರ ಜಿಲ್ಲೆಯ ಇಂಡಿ, ಬಾಗಲಕೋಟೆಯ ಇಳಕಲ್‌ನಲ್ಲಿ 2 ಸೆಂಟಿ ಮೀಟರ್, ಯಾದಗಿರಿ ಜಿಲ್ಲೆಯ ನಾರಾಯಣಪುರ, ಚಿಕ್ಕಮಗಳೂರಿನ ಕಳಸ, ಬಾಳೆಹೊನ್ನೂರು, ಬೀದರ್‌ ಜಿಲ್ಲೆಯ ಭಾಲ್ಕಿ, ಬೆಳಗಾವಿಯ ಯಡ್ವಾಡ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ 1 ಸೆಂಟಿ ಮೀಟರ್ ಮಳೆಯಾಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಳೆ ಹಾಗೂ ಮೋಡ ಕವಿದ ವಾತಾವರಣದ ಪರಿಣಾಮವಾಗಿ ರಾಜ್ಯದಲ್ಲಿ ತಾಪಮಾನ ಕೊಂಚ ಇಳಿಕೆಯಾಗಿದೆ. ಆದರೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೊಂದು ಕಡೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ. ಇಲ್ಲಿ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದೆ. ಉಳಿದಂತೆ ರಾಜ್ಯಾದ್ಯಂತೆ ಸಾಮಾನ್ಯವಾಗಿದೆ. ಕರ್ನಾಟಕದಲ್ಲಿ ಅತಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಬಾಗಲಕೋಟೆಯಲ್ಲಿ ದಾಖಲಾಗಿದೆ.

ಏಪ್ರಿಲ್ 14ರ ಭಾನುವಾರದ ವರೆಗೆ ರಾಜ್ಯದ ಒಂದೆರಡು ಸ್ಥಳಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಇಂದು (ಏಪ್ರಿಲ್ 13, ಶನಿವಾರ) ಮತ್ತು ನಾಳೆ (ಏಪ್ರಿಲ್ 14, ಭಾನುವಾರ) ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿಯು ವೇಗ ಮತ್ತು ರಭಸದಿಂದ ಬೀಸುವ ಸಾಧ್ಯತೆ ಇದೆ.

ಬೆಂಗಳೂರು ಹವಾಮಾನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ಆಕಾಶ ಇರುತ್ತದೆ. ಸಂಜೆ ಅಥವಾ ರಾತ್ರಿ ಸಮಯದಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುುವ ಸಾಧ್ಯತೆ ಇದೆ. ಗರಿಷ್ಠ 34 ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಬಹಳಷ್ಟು ಸಾಧ್ಯತೆ ಇರುತ್ತದೆ.

ಏಪ್ರಿಲ್ 13ರ ಶನಿವಾರ ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ

ಇಂದು ರಾಜ್ಯದ 29 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮಗನರ, ಶಿವಮೊಗ್ಗ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.

ಏಪ್ರಿಲ್ 14ರ ಭಾನುವಾರ ಮಳೆಯ ಮುನ್ಸೂಚನೆ: ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ವಿಜಯಪುರ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆ

ಏಪ್ರಿಲ್ 15ರ ಸೋಮವಾರ ಮಳೆಯ ಮುನ್ಸೂಚನೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಕೊಡಗು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗುವ ಮುನ್ಸೂಚನೆ ಇದೆ

ಏಪ್ರಿಲ್ 16ರ ಮಂಗಳವಾರ ಮಳೆಯ ಮುನ್ಸೂಚನೆ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 16ರ ಮಂಗಳವಾರ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

Whats_app_banner