ಕರ್ನಾಟಕ ಹವಾಮಾನ ಏಪ್ರಿಲ್ 21: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ 13 ಸೆಂಟಿ ಮೀಟರ್ ಮಳೆ; ಇಂದು ರಾಜ್ಯದ 21 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ
ಉಡುಪಿ, ದಕ್ಷಿಣ ಕನ್ನಡ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗಿದೆ. ಏಪ್ರಿಲ್ 21ರ ಭಾನುವಾರದ ಹವಾಮಾನ ವರದಿ ತಿಳಿಯಿರಿ.
ಬೆಂಗಳೂರು: ಕರ್ನಾಟಕದ (Karnataka Rains) ವಿವಿಧ ಭಾಗಗಳಲ್ಲಿ ಕಳೆದ ಮೂರ್ನಾಲು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಮಳೆ ಕೊಂಚ ರಿಲೀಫ್ ನೀಡಿದಂತಾಗಿದೆ. ಏಪ್ರಿಲ್ 20ರ ಶನಿವಾರ ರಾತ್ರಿ 7.45ಕ್ಕೆ ವರದಿಯಾಗಿರುವ ಹವಾಮಾನ ಇಲಾಖೆಯ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕರಾವಳಿಯ ಹಲವು ಕಡೆಗಳಲ್ಲಿ ವರುಣ ಅಬ್ಬರಿಸಿದ್ದರೆ, ದಕ್ಷಿಣ ಒಳನಾಡಿನ ಕೆಲವು ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬರೋಬ್ಬರಿ 13 ಸೆಂಟಿ ಮೀಟರ್ ಮಳೆಯಾಗಿದೆ.
ಭಾರಿ ಮಳೆಯಾಗಿರುವ ಇತರೆ ಜಿಲ್ಲೆಗಳ ವಿವರಗಳನ್ನು ನೋಡುವುದಾದರೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ 10, ಮಂಕಿಯಲ್ಲಿ 8 ಸೆಂಟಿ ಮೀಟರ್ ಮಳೆಯಾಗಿದೆ. ಚಿಕ್ಕಮಗಳೂರಿನ ಕೊಪ್ಪ ಮತ್ತು ಕಮ್ಮರಡಿಯಲ್ಲಿ ತಲಾ 7 ಸೆಂಟಿ ಮೀಟರ್ ಮಳೆ ಸುರಿದಿದೆ. ಮಂಗಳೂರು 6, ಉಡುಪಿ 6, ಕುಂದಾಪುರ 5, ಚಿಕ್ಕಮಗಳೂರು 5, ಕೋಟ, ಧರ್ಮಸ್ಥಳ, ಕೊಟ್ಟಿಗೆಹಾರದಲ್ಲಿ ತಲಾ 4, ಸಿದ್ದಾಪುರ, ಬೀದರ್, ಕಳಸ ಹಾಗೂ ಕುಶಾಲನಗರದಲ್ಲಿ ತಲಾ 3, ಕಡೂರು, ಎನ್‌ಆರ್ ಪುರ, ಸಕಲೇಶಪುರ, ಹೊನ್ನಾಳಿ, ಸಂತೆಬೆನ್ನೂರು, ಹೊನಕರೆ, ತ್ಯಾಗರ್ತಿ, ಶ್ರವಣಬೆಳಗೊಳ, ಹಾಸನ, ಶಿವಮೊಗ್ಗ, ಕುಣಿಗಲ್‌ನಲ್ಲಿ ತಲಾ 2 ಸೆಂಟಿ ಮೀಟರ್ ಮಳೆಯಾಗಿದೆ.
ಕರ್ನಾಟಕದ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುತ್ತಿರುವುದರಿಂದ ಉಷ್ಣಾಂಶದಲ್ಲಿ ಬದಲಾವಣೆಯಾಗಿದ್ದು, ತಾಪಮಾನ ಅತ್ಯಂತ ಗಮನಾರ್ಹವಾಗಿ ಇಳಿಕೆಯಾಗಿದೆ. ಕರಾವಳಿ, ಒಳನಾಡಿನ ಹಲವು ಕಡೆಗಳಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಆದರೆ ದಕ್ಷಿಣ ಒಳನಾಡಿನ ಒಂದರೆಡು ಕಡೆಗಳಲ್ಲಿ ಮಾತ್ರ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಳವಾಗಿರುವುದಾಗಿ ವರದಿಯಾಗಿದೆ. ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 40.7 ಡಿಗ್ರಿ ಸೆಲ್ಸಿಯಸ್ ಚಿಕ್ಕನಹಳ್ಳಿಯಲ್ಲಿ ದಾಖಲಾಗಿದೆ.
ಏಪ್ರಿಲ್ 21ರ ಭಾನುವಾರ ಯಾವ ಜಿಲ್ಲೆಯಲ್ಲಿ ಮಳೆಯಾಗುತ್ತೆ?
ಏಪ್ರಿಲ್ 21ರ ಭಾನುವಾರ ಕರ್ನಾಟಕದ 21 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ಬುಲೆಟಿನ್‌ನಲ್ಲಿ ತಿಳಿಸಿದೆ. ಉಡುಪಿ, ದಕ್ಷಿಣ ಕನ್ನಡ, ಕಲಬುಪರಗಿ, ವಿಜಯಪುರ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹೇಳಿದೆ. ಇನ್ನ ಬೀದರ್, ಕೊಪ್ಪಳ, ಯಾದಗಿರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳ ಕೆಲವಡೆ ಲಘು ಮಳೆಯಾಗುವ ಮುನ್ಸೂಚನೆ ಇದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳ ಕೆಲವೊಂದು ಕಡೆಗಳಲ್ಲಿ ಲಘು ಮಳೆ ಬೀಳುವ ಸಾಧ್ಯತೆ ಇದೆ. ಏಪ್ರಿಲ್ 22ರ ಸೋಮವಾರ ಕೊಡಗು ಸೇರಿದಂತೆ 18 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ಇದೆ.
ಬೆಂಗಳೂರು ಹವಾಮಾನ
ಮಳೆಯ ನಡುವೆಯೇ ಬಿಸಿಯೂ ಜೋರಾಗಿಯೇ ಇದೆ. ಇವತ್ತು (ಏಪ್ರಿಲ್ 21, ಭಾನುವಾರ) ರಾಜ್ಯದಾದ್ಯಂತ ಗರಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಇನ್ನ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ. ಮುಂದಿನ 48 ಗಂಟೆಗಳ ಕಾಲ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.