Karnataka Weather: ಕರ್ನಾಟಕದಲ್ಲಿ ಮುಂದುವರಿದ ಚಳಿ; ಬೆಂಗಳೂರಿನಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ
ರಾಜ್ಯಕ್ಕೆ ಡಿಸೆಂಬರ್ 22ರ ಶುಕ್ರವಾರ ಮಳೆಯ ಮುನ್ಸೂಚನೆ ಇಲ್ಲ. ಬೆಂಗಳೂರಿನಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ ಇರಲಿದ್ದು, ಕೆಲ ಜಿಲ್ಲೆಗಳಲ್ಲಿ ಚಳಿ ಹೆಚ್ಚಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bangalore Weather), ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ (South Interior Karnataka) ಇಂದು (ಡಿಸೆಂಬರ್ 22, ಶುಕ್ರವಾರ) ಚಳಿಯ ವಾತಾವರಣ (Cold Weather) ಇದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ರಾಮನಗರ, ಹಾಸನ ಹಾಗೂ ಇತರೆ ಕಡೆಗಳಲ್ಲಿ ಜನರು ಚಳಿಯ ನಡುವೆ ತಮ್ಮ ದೈನಂದಿನ ಕೆಲಸಗಳನ್ನು ಮುಂದುವರಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಮಳೆಯಾಗಿತ್ತು. ಆದರೆ ಇದೀಗ ಮಳೆ ದೂರವಾಗಿತ್ತು. ಚಳಿ ಆರಂಭವಾಗಿದೆ. ಡಿಸೆಂಬರ್ 21ರ ಗುರುವಾರ ಬೆಳಗ್ಗೆ 8.30ರ ವರೆಗೆ ದಾಖಲಾಗಿರುವ ವರದಿಯ ಪ್ರಕಾರ ರಾಜ್ಯಾದ್ಯಂತ ಒಣ ಹವೆ ಮುಂದುವರಿಸಿದೆ.
ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ
ನಾಳೆ (ಡಿಸೆಂಬರ್ 23, ಶನಿವಾರ) ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿಯಲ್ಲೂ ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ಹವಾಮಾನ ವರದಿಯ ಪ್ರಕಾರ ಕರ್ನಾಟಕದಲ್ಲಿ ಚಂಡಮಾರುತ ಸೇರಿದಂತೆ ಯಾವುದೇ ರೀತಿಯ ಮಳೆಯ ಭೀತಿ ಇಲ್ಲ. ಪರಿಣಾಮವಾಗಿ ಭಾರಿ ಮಳೆ, ಗುಡುಗು ಸಹಿತ ಮಳೆ ಹಾಗೂ ಮೀನುಗಾರರಿಗೆ ಯಾವುದೇ ರೀತಿಯ ಮುನ್ನೆಚ್ಚರಿಕೆಯೂ ಇಲ್ಲ ಅಂತ ಹೇಳಿದೆ.
ಉಷ್ಣಾಂಶ ಅತ್ಯಂತ ಗಮನಾರ್ಹವಾಗಿ 4.1 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆ ಕಂಡಿದೆ. ಕರಾವಳಿಯ ಕೆಲವು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಸಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಳವಾಗಿದೆ. ಇಲ್ಲಿ 3.1 ರಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳ ಕಂಡಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 11.5 ಡಿಗ್ರಿ ಸೆಲ್ಸಿಯಸ್ ಬೀದರ್‌ನಲ್ಲಿ ದಾಖಲಾಗಿದೆ.
ಬೆಂಗಳೂರು ಹವಾಮಾನ ಹೇಗಿದೆ
ಇವತ್ತು ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಬೆಳಗಿನ ಜಾನ ಮಂಜು ಮುಸುಕುವ ಬಹಳಷ್ಟು ಸಾಧ್ಯತೆ ಇರುತ್ತದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ. ನಾಳೆ ಡಿಸೆಂಬರ್ 23 (ಶನಿವಾರ) ಮತ್ತು ನಾಡಿದ್ದು (ಡಿಸೆಂಬರ್ 24, ಭಾನುವಾರ) ನಗರದಲ್ಲಿ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
ವಿಭಾಗ