ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ, ಕರ್ನಾಟಕದ ಉಳಿದೆಡೆ ಒಣಹವೆ, ಉತ್ತರ ಒಳನಾಡಲ್ಲಿ ಚಳಿ
Karnataka weather: ಬೆಂಗಳೂರು ಸುತ್ತಮುತ್ತ ಇಂದು (ಜನವರಿ 15) ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕರ್ನಾಟಕದ ಉಳಿದೆಡೆ ಒಣಹವೆ ಇರಲಿದ್ದು, ಒಳನಾಡು ಪ್ರದೇಶಗಳಲ್ಲಿ ಚಳಿ ಕಾಡಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ ಹವಾಮಾನದ ವಿವರ ಇಲ್ಲಿದೆ.

Karnataka weather: ಮಕರ ಸಂಕ್ರಾಂತಿ ದಿನ (ಜನವರಿ 14) ನಿರೀಕ್ಷೆಯಂತೆ ದಕ್ಷಿಣ ಕನ್ನಡ, ಉಡುಪಿ ಸೇರಿ ಆರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗಿತ್ತು. ಇಂದು (ಜನವರಿ 15) ಕರ್ನಾಟಕದ ಯಾವುದೇ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಆದಾಗ್ಯೂ ಕೆಲವು ಕಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎನ್ನುತ್ತಿದೆ ಹವಾಮಾನ ಮುನ್ಸೂಚನೆ ವರದಿ. ಒಳನಾಡು ಪ್ರದೇಶಗಳಲ್ಲಿ, ಜಲಾಶಯಗಳ ಸಮೀಪದ ಪ್ರದೇಶಗಳಲ್ಲಿ ಮುಂಜಾನೆ ಮಂಜು ಇರಲಿದೆ. ಅದೇ ರೀತಿ ಇಬ್ಬನಿ ಬೀಳಲಿದೆ.
ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ
ಬೆಂಗಳೂರಲ್ಲಿ ಮುಂಜಾನೆ ಮಂಜು, ಚಳಿ ಗಾಳಿ ಇದ್ದರೂ ಬಳಿಕ ಮೋಡ ಕವಿದ ವಾತಾವರಣ ಇರಬಹುದು. ಇಂದು (ಜನವರಿ 15) ಬಹುತೇಕ ಪ್ರದೇಶಗಳಲ್ಲಿ ಅಂದರೆ ಬಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಒಳನಾಡು ಪ್ರದೇಶಗಳಲ್ಲಿ, ಜಲಾಶಯಗಳ ಸಮೀಪ ಇಬ್ಬನಿ, ಮಂಜು ಕಾಡಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು (ಜನವರಿ 15) ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ವರದಿ ಹೇಳಿದೆ. ಬೆಂಗಳೂರು ನಗರ ಭಾಗದಲ್ಲಿ ನಿನ್ನೆ (ಜನವರಿ 14) ಗರಿಷ್ಠ ತಾಪಮಾನ 26.2 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 19.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 26.5 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 18.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
ವಿವಿಧ ನಗರಗಳಲ್ಲಿ ಇಂದಿನ ತಾಪಮಾನ (ಬೆಳಗ್ಗೆ 7 ಗಂಟೆಗೆ) ಮತ್ತು ಆರ್ದ್ರತೆಯ ಮಟ್ಟ
ಬೆಂಗಳೂರು ನಗರ - ತಾಪಮಾನ 17.4 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 90
ಮಂಗಳೂರು - ತಾಪಮಾನ 24 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 89
ಚಿತ್ರದುರ್ಗ- ತಾಪಮಾನ 26.4 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 52
ಗದಗ - ತಾಪಮಾನ 19.3 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 83
ಹೊನ್ನಾವರ- ತಾಪಮಾನ 24.6 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 77
ಕಲಬುರಗಿ - ತಾಪಮಾನ 24 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 69
ಬೆಳಗಾವಿ - ತಾಪಮಾನ 20 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 88
ಕಾರವಾರ -ತಾಪಮಾನ 32 ಡಿಗ್ರಿ ಸೆಲ್ಶಿಯಸ್, ಆರ್ದ್ರತೆಯ ಮಟ್ಟ ಶೇಕಡ 65
ಕರ್ನಾಟಕ ಹವಾಮಾನ ಇಂದು - ಚಳಿಗಾಲದ ಚಳಿ, ಒಣಹವೆ
ಕರ್ನಾಟಕದಲ್ಲಿ ಇಂದು (ಜನವರಿ 15) ಚಳಿಗಾಲದ ಚಳಿ ಮತ್ತು ಒಣಹವೆ ಇರಲಿದೆ. ಕರಾವಳಿಯಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿಯ ವಿವಿಧೆಡೆ ನಿನ್ನೆ ಹಗುರ ಮಳೆಯಾಗಿತ್ತು. ಆದರೆ ಇಂದು ಮಳೆ ಇಲ್ಲ. ಉತ್ತರ ಕನ್ನಡದಲ್ಲೂ ಮಳೆ ಇರಲ್ಲ. ಒಳನಾಡು ಪ್ರದೇಶಗಳಲ್ಲಿ ಮುಂಜಾನೆ ಮಂಜು, ಇಬ್ಬನಿ ಕಾಡಬಹುದು ಎಂದು ಹವಾಮಾನ ವರದಿ ವಿವರಿಸಿದೆ.
