ಕರ್ನಾಟಕದಲ್ಲಿ ತಗ್ಗುತ್ತಿದೆ ಚಳಿ, ಏರುತ್ತಿದೆ ಉಷ್ಣಾಂಶ, ಧಾರವಾಡ ಕೂಲ್ ಕೂಲ್; ಹೀಗಿದೆ ಭಾನುವಾರದ ಹವಾಮಾನ -Karnataka Weather
Karnataka Weather Update: ಕರ್ನಾಟಕದಲ್ಲಿ ಚಳಿಯ ವಾತಾವರಣ ಕಡಿಮೆಯಾಗಿದ್ದು, ನಿಧಾನವಾಗಿ ಬಿಸಿ ಏರುತ್ತಿದೆ. ಫೆಬ್ರವರಿ 4ರ ರಾಜ್ಯದ ಹವಾಮಾನ ಹೇಗಿದೆ ಅನ್ನೋದರ ವರದಿ ಇಲ್ಲಿದೆ.
Karnataka Weather Update: ಕರ್ನಾಟಕದಲ್ಲಿ ಕೊರೆಯುವ ಚಳಿ (Cold) ಕಡಿಮೆಯಾಗುತ್ತಿದ್ದು, ನಿಧಾನವಾಗಿ ಬಿಸಿ (Heat) ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಬಿಸಿ ಹೆಚ್ಚಾಗುತ್ತಲೇ ಇದೆ. ಇಂದು (ಫೆಬ್ರವರಿ 4, ಭಾನುವಾರ) ಕೂಡ ಮುಂಜಾನೆ ವೇಳೆ ಸಾಧಾರಣ ಚಳಿಯ ವಾತಾವರಣ ಇದ್ದರೂ ಮಧ್ಯಾಹ್ನದ ವೇಳೆ ಉಷ್ಣಾಂಶ ಹೆಚ್ಚಾಗಲಿದೆ. ರಾಜಧಾನಿ ಬೆಂಗಳೂರಿನ (Bangalore Weather) ಕೆಲವೆಡೆ ರಾತ್ರಿ ವೇಳೆಯೂ ಬಿಸಿಯ ಪರಿಸ್ಥಿತಿ ಇದೆ.
ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಅತಿ ಗಮನಾರ್ಹವಾಗಿ ಉಷ್ಣಾಂಶ ಹೆಚ್ಚಳವಾಗಿದೆ. ಅದು 5.1 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ. ಕರಾವಳಿ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯವಾಗಿದೆ. ಅಂದರೆ -1.5 ಡಿಗ್ರಿ ಸೆಲ್ಸಿಯಸ್ ನಿಂದ 1.5 ಡಿಗ್ರಿ ಸೆಲ್ಸಿಯಸ್ ನಡುವೆಯೇ ಇದೆ.
ಬೆಂಗಳೂರಿನ ಹವಾಮಾನ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಎಲ್ಲಾ ಕಡೆ ಒಣಹವೆ ಮುಂದುವರಿದಿದೆ. ಭಾರಿ ಮಳೆ, ಗುಡುಗು ಮಿಂಚು ಯಾವುದೂ ಇಲ್ಲದಿರುವ ಕಾರಣ ಮೀನುಗಾರರಿಗೆ ಮುನ್ನಚ್ಚರಿಕೆ ಇರುವುದಿಲ್ಲ. ಎಂದಿನಂತೆ ಮೀನುಗಾರಿಕೆ ನಡೆಸಬಹುದು. ಮುಂದಿನ ಎರಡ್ಮೂರು ದಿನಗಳ ಕಾಲ ಇದೇ ವಾತಾವರಣ ಇರಲಿದೆ. ರಾಜ್ಯದಲ್ಲಿ ಕಡಿಮೆ ಉಷ್ಣಾಂಶ ಧಾರವಾಡದಲ್ಲಿ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕರ್ನಾಟಕದಾದ್ಯಂತ ಇಂದು (ಫೆಬ್ರವರಿ 4, ಭಾನುವಾರ) ಮತ್ತು ನಾಳೆ (ಫೆಬ್ರವರಿ 5, ಸೋಮವಾರ) ಒಣ ಹವೆ ಮುಂದುವರಿಯಲಿದೆ.
ರಾಜ್ಯ ರಾಜಧಾನಿ ಬೆಂಗಳೂರು ಹವಾಮಾನ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇವತ್ತು (ಫೆಬ್ರವರಿ 4, ಭಾನುವಾರ) ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗಿನ ಜಾವ ಕೆಲವೆಡೆ ಮಂಜು ಮುಸುಕಿದ ವಾತಾವರಣ ಇದೆ. ನಗರದಲ್ಲಿ ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ. ಫೆಬ್ರವರಿ 5ರ ಸೋಮವಾರ ಕೂಡ ಬೆಂಗಳೂರಿನಲ್ಲಿ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಕೇಂದ್ರ ಹೇಳಿದೆ. ಚಳಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಸಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕರ್ನಾಟಕದ ಕರಾವಳಿ ಪ್ರದೇಶಗಳಾಗಿವೆ. ಈ ಭಾಗವನ್ನು ಕೆನರಾ ಅಂತಲೂ ಕರೆಯಲಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿಗೆ ಬರುತ್ತವೆ. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಇನ್ನೂ ಉತ್ತರ ಒಳನಾಡಿನ ವ್ಯಾಪ್ತಿಗೆ ಬರುತ್ತವೆ. ವಾರ್ಷಿಕ ಈ ಭಾಗದಲ್ಲಿ ಸರಾಸರಿ 711.5 ಮಿಲಿ ಮೀಟರ್ ಮಳೆಯಾಗುತ್ತದೆ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ