ಕರ್ನಾಟಕ ಹವಾಮಾನ ಮಾರ್ಚ್ 18: ಉತ್ತರ ಒಳನಾಡಿನಲ್ಲಿ ಹಗುರ ಮಳೆಯ ಮುನ್ಸೂಚನೆ; ಈ 5 ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಬಿಸಿ ಹೆಚ್ಚಳದ ಸಾಧ್ಯತೆ
Karnataka Weather: ಒಳನಾಡಿನ ಕೆಲವೊಂದು ಕಡೆ ಇಂದು (ಮಾರ್ಚ್ 18) ಸಾಮಾನ್ಯಕ್ಕಿಂತ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಉತ್ತರ ಒಳನಾಡಿನಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಇದೆ.

ಬೆಂಗಳೂರು: ಸುಡು ಬಿಸಿಲಿಗೆ ಕಂಗಾಲಾಗಿರುವ ಕರ್ನಾಟಕದಿ (Karnataka Weather Today) ಕೆಲವೊಂದು ಕಡೆ ವರುಣ ತಂಪೆರೆದಿದ್ದಾನೆ. ಆದರೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರೆದಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮಂದಿಗೆ ಹವಾಮಾನ ಕೇಂದ್ರ ಕೊಂಚ ರಿಲೀಫ್ ನೀಡಿದೆ. ನಗರದಲ್ಲಿ ಇಂದು (ಮಾರ್ಚ್ 18, ಸೋಮವಾರ) ಮೋಡ ಕವಿದ ವಾತಾವರಣ ಇರಲಿದೆ ಎಂದು ಹೇಳಿದೆ. ಆದರೆ ಮಳೆಯ ಸಾಧ್ಯತೆ ಕಡಿಮೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯಾದಲ್ಲಿ ಒಣಹವೆ ಮುಂದುವರಿದಿದೆ. ಯಾವುದೇ ಭಾಗದಲ್ಲಿ ಮಳೆಯಾಗಿಲ್ಲ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಹವಾಮಾನ ವರದಿ ಪ್ರಕಾರ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೊಂದು ಕಡೆ ಬಿಸಿ ಹೆಚ್ಚಾಗಿದೆ.
ಬಿಸಿಯಿಂದ ತತ್ತರಿಸಿರುವ ಉತ್ತರ ಒಳನಾಡಿನ ಜನರಿಗೆ ಸಿಹಿ ಸುದ್ದಿ
ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಮಾರ್ಚ್ 18 ರ ಸೋಮವಾರವೂ ಹಗುರ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಬಿಸಿಲಿನಿಂದ ಬಳಲಿರುವ ಜನರಿಗೆ ಇದು ನಿಟ್ಟುಸಿರು ಬಿಡುವಂತ ಸುದ್ದಿಯಾಗಿದೆ. ಮಳೆ ಇಲ್ಲದ ಪರಿಣಾಮ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗುತ್ತಿದ್ದು, ಬೆಳೆಗಳಿಗೆ ಸರಿಯಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಪಶುಗಳಿಗೆ ಮೇವು ಒದಗಿಸುವುದು ದೊಡ್ಡ ಸವಾಲಾಗಿದೆ. ಇದರ ನಡುವೆಯೇ ಹಗುರ ಮಳೆಯ ಮುನ್ಸೂಚನೆ ಅನ್ನದಾತರ ಸಮಸ್ಯೆಗಳಿಗೆ ಸ್ವಲ್ಪ ಪರಿಹಾರವಾಗಬಹುದು. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಒಳನಾಡಿನ ಒಂದೆರಡು ಕಡೆಗಳಲ್ಲಿ ಅಂದರೆ ಬಾಗಲಕೋಟೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.
ಕರವಾಳಿ ಹಾಗೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಕಡೆ ವಾತಾವರಣದಲ್ಲಿ ಬದಲಾವಣೆ ಕಾಣಬಹುದು. ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ವಿಚಲನೆಯನ್ನು ನೋಡುವುದಾದರೆ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ. ಅಂದರೆ 1.6 ಡಿಗ್ರಿ ಸೆಲ್ಸಿಯಸ್ ನಿಂದ 3.0 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಏರಿಕೆಯಾಗಿದೆ. ಉತ್ತರ ಒಳನಾಡಿನ ಒಂದೆೆರಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಳವಾಗಿದೆ. ಅಂದರೆ 3.1 ಡಿಗ್ರಿ ಸೆಲ್ಸಿಯಸ್ ನಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಏರಿಕೆಯಾಗಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿಯ ಬಹುತೇಕ ಕಡೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಬದಲಾವಣೆಯಾಗಿಲ್ಲ. ರಾಜ್ಯದಲ್ಲಿ ಕಡಿಮೆ ಉಷ್ಣಾಂಶ ಶಿವಮೊಗ್ಗದಲ್ಲಿ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗರಿಷ್ಠ ಉಷ್ಣಾಂಶ ಕೊಪ್ಪಳದಲ್ಲಿ 39.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ಹವಾಮಾನ
ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕರ್ನಾಟಕದ ಕರಾವಳಿ ಪ್ರದೇಶಗಳಾಗಿವೆ. ಈ ಭಾಗವನ್ನು ಕೆನರಾ ಅಂತಲೂ ಕರೆಯಲಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕರ್ನಾಟಕದ ದಕ್ಷಿಣ ಒಳನಾಡಿಗೆ ಬರುತ್ತವೆ. ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಇನ್ನೂ ಉತ್ತರ ಒಳನಾಡಿನ ವ್ಯಾಪ್ತಿಗೆ ಬರುತ್ತವೆ. ವಾರ್ಷಿಕ ಈ ಭಾಗದಲ್ಲಿ ಸರಾಸರಿ 711.5 ಮಿಲಿ ಮೀಟರ್ ಮಳೆಯಾಗುತ್ತದೆ.

ವಿಭಾಗ