ಕನ್ನಡ ಸುದ್ದಿ  /  Karnataka  /  Karnataka Weather Today March 26 Temperature Reaches 40 Degree At Kalburgi Bagalkot Rain In Kudala Sangama Kub

Karnataka Weather:ಕಲಬುರಗಿ, ಬಾಗಲಕೋಟೆಯಲ್ಲಿ ರಣಬಿಸಿಲು; 40 ಡಿಗ್ರಿ ತಲುಪಿದ ಉಷ್ಣಾಂಶ, ಕೂಡಲಸಂಗಮದಲ್ಲಿ ಮಳೆ

ಉತ್ತರ ಕರ್ನಾಟಕದ ಕಲಬುರಗಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಿದೆ. ಬೆಂಗಳೂರು, ಹಳೆ ಮೈಸೂರು, ಮಲೆನಾಡು ಭಾಗದಲ್ಲೂ ಏರಿಕೆ ಕಂಡು ಬಂದಿದೆ. ಹೇಗಿದೆ ಕರ್ನಾಟಕದ ಹವಾಮಾನ. ಇಲ್ಲಿದೆ ವರದಿ.

ಬಿಸಿಲಿನ ಝಳ ಹೆಚ್ಚಿನ ನೀರಿನ ಯಥೇಚ್ಛ ಬಳಕೆ ಅನಿವಾರ್ಯ ಎನ್ನುವಂತಾಗಿದೆ.
ಬಿಸಿಲಿನ ಝಳ ಹೆಚ್ಚಿನ ನೀರಿನ ಯಥೇಚ್ಛ ಬಳಕೆ ಅನಿವಾರ್ಯ ಎನ್ನುವಂತಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣ ನಿಧಾನವಾಗಿ ಏರುತ್ತಲೇ ಇದೆ. ಅದರಲ್ಲೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಂತೂ ಉಷ್ಣಾಂಶದ ಗರಿಷ್ಠ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿ ಹಾಗೂ ಕಿತ್ತೂರು ಕರ್ನಾಟಕ ಭಾಗದ ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಈ ಬಾರಿ ಜೋರಾಗಿಯೇ ಇದೆ. ಎರಡೂ ಜಿಲ್ಲೆಗಳಲ್ಲಿ ಸೋಮವಾರದಂದು ಉಷ್ಣಾಂಶದ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಆದರೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಸಹಿತ ಉತ್ತರ ಕರ್ನಾಟಕದ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವುದು ಕೊಂಚ ನಿರಾಳತೆ ತಂದಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕಲಬುರಗಿ ಜಿಲ್ಲೆಯಲ್ಲಿಯೇ 39.9 ಡಿಗ್ರಿ ಸೆಲ್ಸಿಯಸ್‌ ಹಾಗೂ ಬಾಗಲಕೋಟೆಯಲ್ಲಿ 39.8 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಣ ಉಷ್ಣಾಂಶ ದಾಖಲಾಗಿರುವುದನ್ನು ಭಾರತೀಯ ಹವಾಮಾನ ಇಲಾಖೆ( IMD) ಬೆಂಗಳೂರು ಪ್ರಾದೇಶಿಕ ಕೇಂದ್ರ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖ ಮಾಡಿದೆ.

ಕಲಬುರಗಿಯಲ್ಲಿ ಕನಿಷ್ಠ ತಾಪಮಾನ 27.2 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಬಾಗಲಕೋಟೆಯಲ್ಲಿ ಕನಿಷ್ಠದ ಪ್ರಮಾಣ 23 ಡಿಗ್ರಿಯಷ್ಟಿತ್ತು.

ಉತ್ತರದಲ್ಲಿ ಏರಿಕೆ

ಉತ್ತರ ಕರ್ನಾಟಕದ ರಾಯಚೂರಿನಲ್ಲಿ 38.4 ಡಿಗ್ರಿ ಸೆಲ್ಸಿಯಸ್‌, ಕೊಪ್ಪಳದಲ್ಲಿ 38 ಡಿಗ್ರಿ, ವಿಜಯಪುರದಲ್ಲಿ 37.5 ಡಿಗ್ರಿ, ಗದಗದಲ್ಲಿ 37.2 ಡಿಗ್ರಿ, ಹಾವೇರಿಯಲ್ಲಿ 36.6 ಡಿಗ್ರಿ, ಧಾರವಾಡದಲ್ಲಿ 36.4 ಡಿಗ್ರಿ, ಬೀದರ್‌ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 36.2 ಡಿಗ್ರಿ ಸೆಲ್ಸಿಯಸ್‌ ನಷ್ಟಿತ್ತು. ಬೆಳಗಾವಿ ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಂಡು ಬಂದಿತು.

ಮಲೆನಾಡಿನ ಶಿವಮೊಗ್ಗದಲ್ಲಿ 37.2 ಡಿಗ್ರಿ, ಹಾಸನದಲ್ಲಿ 34.8 ಡಿಗ್ರಿ ಹಾಗೂ ಚಿಕ್ಕಮಗಳೂರಿನಲ್ಲಿ ಕಡಿಮೆ ಎಂದರೆ 29.2 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.

ಮೈಸೂರು ಭಾಗದಲ್ಲೂ ಹೆಚ್ಚಳ

ಮೈಸೂರು ಭಾಗದ ಮೈಸೂರಿನಲ್ಲಿ 35.1 ಡಿಗ್ರಿ, ಮಡಿಕೇರಿಯಲ್ಲಿ 35.5 ಡಿಗ್ರಿ, ಮಂಡ್ಯ ಹಾಗೂ ಚಾಮರಾಜನಗರದಲ್ಲಿ 37 ಡಿಗ್ರಿ ಸೆಲ್ಸಿಯಸ್‌ ನಷ್ಟು ಉಷ್ಣಾಂಶ ಕಂಡು ಬಂದಿದೆ.

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ 37.2 ಡಿಗ್ರಿ ಸೆಲ್ಸಿಯಸ್‌ ಹಾಗೂ ಚಿತ್ರದುರ್ಗದಲ್ಲಿ 36.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು. ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ 35.6 ಡಿಗ್ರಿ ಹಾಗೂ ಕೋಲಾರದ ಚಿಕ್ಕನಹಳ್ಳಿಯಲ್ಲಿ 38.3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರಾವಳಿ ಉಷ್ಣಾಂಶ

ಕರಾವಳಿಯಲ್ಲೂ ಬಿಸಿಲಿನ ವಾತಾವರಣವಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 35.7 ಡಿಗ್ರಿ, ಶಿರಾಲಿಯಲ್ಲಿ 35.3 ಡಿಗ್ರಿ. ಮಂಗಳೂರಿನ ಪಣಂಬೂರಿನಲ್ಲಿ 35 ಡಿಗ್ರಿ. ಮಂಗಳೂರು ವಿಮಾನ ನಿಲ್ದಾಣದಲ್ಲಿ 34.3 ಡಿಗ್ರಿ ಹಾಗೂ ಉತ್ತರ ಕನ್ನಡದ ಹೊನ್ನಾವರದಲ್ಲಿ 32.9 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ

ಹೆಚ್ಚಿನ ಉಷ್ಣಾಂಶ ಕಂಡು ಬಂದಿರುವ ಬಾಗಲಕೋಟೆ ಜಿಲ್ಲೆಯಲ್ಲೂ ಸೋಮವಾರ ಮಳೆಯಾದ ವರದಿಯಾಗಿದೆ. ಪ್ರಸಿದ್ದ ಯಾತ್ರಾ ಸ್ಥಳವಾಗಿರುವ ಕೂಡಲಸಂಗಮ ಭಾಗದಲ್ಲಿ ಉತ್ತಮ ಮಳೆ ಸುರಿದಿದೆ. ಇಲ್ಲಿ ಒಂದೇ ದಿನದಲ್ಲಿ 2 ಸೆ.ಮೀನಷ್ಟು ಮಳೆಯಾಗಿರುವ ಕುರಿತು ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ. ಇದಲ್ಲದೇ ಉತ್ತರ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ಒಣ ಹವೆಯ ವಾತಾವರಣವಿತ್ತು.

ಎರಡು ದಿನ ಒಣ ಹವೆ

ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಲ್ಲಿ ಮುಂದಿನ ಎರಡು ಒಣಹವೆಯ ವಾತಾವರಣ ಮುಂದುವರಿಯಲಿದೆ. ಕರ್ನಾಟಕದ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಗಿಂತಲೂ ಹೆಚ್ಚಾಗುವ ಮುನ್ಸೂಚನೆಯನ್ನು ನೀಡಲಾಗಿದೆ.

ಕರ್ನಾಟಕದ ಯಾವ ಭಾಗದಲ್ಲಿಯೂ ಮಳೆಯ ಮುನ್ಸೂಚನೆಗಳಿಲ್ಲ. ಗುಡುಗು, ಮಿಂಚಿನ ಮುನ್ನೆಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿಲ್ಲ.

ಬೆಂಗಳೂರು ಹವಾಮಾನ ಹೇಗಿದೆ

ಬೆಂಗಳೂರು ಮಹಾನಗರ( Bangalore Weather) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಅಂದರೆ ಬುಧವಾರದ ಬೆಳಿಗ್ಗೆವರೆಗೆ ಭಾಗಶಃ ಮೋಡ ಕವಿದ ವಾತಾರವಣ ಕಂಡು ಬರಲಿದೆ. ಗರಿಷ್ಠ ಉಷ್ಣಾಂಶವು 35 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಹವಾಮಾನ ಕೇಂದ್ರವು ತಿಳಿಸಿದೆ.

ಇದೇ ರೀತಿ ಮುಂದಿನ 48 ಗಂಟೆಗಳವರೆಗೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದಂತಹ ವಾತಾವರಣವೇ ಮುಂದುವರಿಯಲಿದೆ. ಈ ಅವಧಿಯಲ್ಲೂ ಗರಿಷ್ಠ ಉಷ್ಣಾಂಶವು 35 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ಗರಿಷ್ಠ ಉಷ್ಣಾಂಶದ ಪ್ರಮಾಣವು 35 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲೇ ಇತ್ತು. ಬೆಂಗಳೂರು ನಗರದಲ್ಲಿ 35.4 , ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ35.1, ಎಚ್‌ ಎಎಲ್‌ ವಿಮಾನ ನಿಲ್ದಾಣ ಪ್ರದೇಶದಲ್ಲಿ 34.6 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು.

IPL_Entry_Point