ಕರ್ನಾಟಕ ಹವಾಮಾನ: ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿಕೆ, ಬಹುತೇಕ ಕಡೆ ಒಣಹವೆ; ಇನ್ನೂ 3 ದಿನ ರಾಜ್ಯದಲ್ಲಿ ಮಳೆಯಿಲ್ಲ
Karnataka Rain: ಇಂದು (ಮಾರ್ಚ್ 26) ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಇನ್ನೂ 3 ದಿನಗಳ ಕಾಲ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದ್ದು, ಮಳೆ ಬರುವ ಯಾವುದೇ ಮುನ್ಸೂಚನೆ ಇಲ್ಲ. ಕರ್ನಾಟಕದ ಇಂದಿನ ಹವಾಮಾನ ವರದಿ ಗಮನಿಸಿ.

ಬೆಂಗಳೂರು: ಕಳೆದ ಮೂರುಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇಂದು (ಮಾರ್ಚ್ 26) ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಕಡೆ ಒಣಹವೆ ಮುಂದುವರಿಯಲಿದೆ. ಇನ್ನೂ 3 ದಿನಗಳ ಕಾಲ ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.
ಈಗಾಗಲೇ ಬಿಸಿಲಿನಿಂದ ಕಂಗೆಟ್ಟ ರಾಜ್ಯದ ಜನತೆಗೆ ಮಳೆ ಬಾರದೇ ಇರುವುದು ಸಮಸ್ಯೆ ತಂದೊಡ್ಡಬಹುದು. ಅತಿಯಾದ ಬಿಸಿಲು, ಸೆಖೆಯ ಜೊತೆ ಅಲ್ಲಲ್ಲಿ ನೀರಿನ ಕೊರತೆಯು ಎದುರಾಗಿದೆ. ರಾಜ್ಯದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿರುವ ಕಾರಣ ಭೂಮಿ ಕಾದ ಹೆಂಚಿನಂತಾಗಿದೆ. ಹಾಗಾಗಿ ಮಳೆ ಬಾರದೇ ಇದ್ದರೆ ಸಮಸ್ಯೆ ಇನ್ನಷ್ಟು ಮುಂದುವರಿಯಬಹುದು. ಆದರೆ ಮಾರ್ಚ್ 30ರ ಯುಗಾದಿ ಹಬ್ಬದ ದಿನದಂದು ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇಂದು ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ವಿವರ ಇಲ್ಲಿದೆ ಗಮನಿಸಿ.
ಕರಾವಳಿಯಲ್ಲಿ ಜಿಲ್ಲೆಗಳಲ್ಲಿಂದು ಮಳೆ ಇಲ್ಲ
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಇಂದು ಮಳೆಯಾಗುವ ಸಾಧ್ಯತೆ ಬಹುತೇಕ ಕಡಿಮೆ ಇದೆ. ಈ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಮಾರ್ಚ್ 29ರವರೆಗೂ ಇದೇ ಸ್ಥಿತಿ ಇರಲಿದ್ದು, ಮಾರ್ಚ್ 30 ರಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿಗಿಲ್ಲ ಮಳೆ ಭಾಗ್ಯ
ಸದ್ಯ ಉತ್ತರ ಒಳನಾಡಿನ ಯಾವುದೇ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಕಾಣುತ್ತಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಮಾರ್ಚ್ ತಿಂಗಳ ಅಂತ್ಯದವರೆಗೆ ಒಣಹವೆ ಮುಂದುವರಿಯಲಿದೆ. ಗಾಳಿಯ ತೀವ್ರತೆ ಹೆಚ್ಚಿದ್ದು, ಗರಿಷ್ಠ, ಕನಿಷ್ಠ ತಾಪಾಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಗಳು ಆಗುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆಯ ಜೊತೆ ಪ್ರಬಲ ಗಾಳಿ
ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು ಕೂಡ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿನ 4 ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಜೊತೆಗೆ ಈ ಭಾಗದಲ್ಲಿ ಜೋರಾದ ಗಾಳಿ ಬೀಸಲಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಬೆಂಗಳೂರಲ್ಲಿ ಮಳೆ ಸಾಧ್ಯತೆ ಕಡಿಮೆ
ಬೆಂಗಳೂರಲ್ಲಿ ಸದ್ಯ ಮಳೆ ಬರುವ ಯಾವುದೇ ಮುನ್ಸೂಚನೆಗಳಿಲ್ಲ. ಸಿಲಿಕಾನ್ ಸಿಟಿಯಲ್ಲೂ ತಾಪಮಾನ ಏರಿಕೆಯಾಗಿದ್ದು, ರಾತ್ರಿ ಹೊತ್ತು ಕೂಡ ಸೆಖೆಯ ವಾತಾವರಣವಿರುತ್ತದೆ. ಹಗಲಿನ ಹೊತ್ತು ಅತಿಯಾದ ಬಿಸಿಲಿನಿಂದ ಹೊರಗಡೆ ಹೋಗುವುದೇ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಎದುರಾಗಿ ಇರುತ್ತದೆ. ದಿನೇ ದಿನೇ ಬಿಸಿಲಿನ ತಾಪ ಏರಿಕೆಯಾಗುತ್ತಿರುವ ಕಾರಣ ಜನರು ತಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ.
