ಕರ್ನಾಟಕ ಹವಾಮಾನ ಮೇ 14: ದಕ್ಷಿಣ ಕನ್ನಡ, ಉಡುಪಿ ಸೇರಿ 10 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ; ತಗ್ಗಿದ ತಾಪಮಾನ
ಬೆಂಗಳೂರಿನಲ್ಲಿ ಮೇ 13ರ ಸೋಮವಾರ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಮೇ 14 ರ ಮಂಗಳವಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ.

ಬೆಂಗಳೂರು: ಕರ್ನಾಟಕ (Karnataka Weather) ರಾಜಧಾನಿ ಬೆಂಗಳೂರು (Bengaluru Rain) ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ವರುಣ ಅಬ್ಬರಿಸುತ್ತಿದ್ದು, ತಾಪಮಾನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬೇಸಿಗೆಯ ಮಳೆಯಿಂದ ಜನರು ಫುಲ್ ಖುಷ್ ಆಗಿದ್ದರೆ, ಕೆಲವೆಡೆ ಭಾರಿ ಮಳೆ (Heavy Rain In Bengaluru) ಅವಾಂತರಗಳನ್ನೇ ಸೃಷ್ಟಿ ಮಾಡಿದೆ. ರಸ್ತೆಗಳಲ್ಲಿ ಮಳೆ ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಕೆಲವೊಂದು ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿರುವುದು ವರದಿಯಾಗಿದೆ. ಇಂದು (ಮೇ 14, ಮಂಗಳವಾರ) ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (India Meteorological Department) ಮುನ್ಸೂಚನೆ ನೀಡಿದೆ.
ಬೆಂಗಳೂರು ಹವಾಮಾನ ಕೇಂದ್ರದ (Meteorological Centre Bengaluru) ದೈನಂದಿನ ವರದಿಯ ಪ್ರಕಾರ, ವಿಶೇಷವಾಗಿ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಕಲಬುರಗಿ, ಯಾದಗಿರಿ ಹಾಗೂ ಬೆಳಗಾವಿಯಲ್ಲಿ ಬಿರುಗಾಳಿ ಸಹಿತಿ ಮಳೆಯಾಗುವ ಮುನ್ಸೂಚನೆ ಇದೆ.
ಮೇ 13ರ ಸೋಮವಾರ ಪುತ್ತೂರು, ರಾಯಚೂರಿನಲ್ಲಿ 10 ಸೆಂಟಿ ಮೀಟರ್ ಮಳೆ
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೋಲಾರ, ವಿಜಯಪುರರ, ಬಾಗಲಕೋಟೆ, ಬೀದರ್, ಧಾರವಾಡ, ಗದಗ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಬಿರುಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಸೋಮವಾರ (ಮೇ 13) ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಪುತ್ತೂರು ಹಾಗೂ ರಾಯಚೂರಿನಲ್ಲಿ 10 ಸೆಂಟಿ ಮೀಟರರ್ ಮಳೆಯಾಗಿದೆ. ಉಪ್ಪಿನಂಗಡಿ 9, ಸಿರಾ 8, ಕೊಟ್ಟಿಗೆಹಾರ 8, ರಾಯಚೂರು ಜಿಲ್ಲೆಯ ಗಬ್ಬೂರು ಮತ್ತು ಬೆಳಗಾವಿಯಲ್ಲಿ ತಲಾ 7 ಸೆಂಟಿ ಮೀಟರ್ ಮಳೆಯಾಗಿದೆ.
ರಾಜ್ಯದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ತಾಪಮಾನದಲ್ಲಿ ಬದಲಾವಣೆಯಾಗಿದ್ದು, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಗರಿಷ್ಠ ಉಷ್ಣಾಂಶ 39.4 ಡಿಗ್ರಿ ಸೆಲ್ಸಿಯಸ್ ರಾಯಚೂರಿನಲ್ಲಿ ದಾಖಲಾಗಿದೆ. ಮೇ 20 ರ ಸೋಮವಾರದ ವರೆಗೆ ರಾಜ್ಯದಲ್ಲಿ ಕೆಲವು ಕಡೆ ಭಾರಿ ಮಲೆ, ಹಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನ ಬೆಂಗಳೂರಿನಲ್ಲಿ ಇವತ್ತು (ಮೇ 14, ಮಂಗಳವಾರ) ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಹಗುರದಿಂದ ಕೂಡಿದ ಸಾಧಾರಣ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಏಪ್ರಿಲ್‌ನಲ್ಲಿ ಮಳೆಯಾಗಿಲ್ಲ, ಆದರೆ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಕೆಲವೊಂದು ಕಡೆಗಳಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರಿದಿದೆ. ಈಗಾಗಲೇ ಹಳದಿ ಎಚ್ಚರಿಕೆ ನೀಡಲಾಗಿದ್ದು, ಮುಂದಿನ ಕೆಲವು ದಿನಗಳಲ್ಲಿ 7 ಸೆಂ.ಮೀ.ಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಹಿರಿಯ ವಿಜ್ಞಾನಿ ತಿಳಿಸಿದ್ದಾರೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ಇತ್ತೀಚೆಗೆ ಎರಡು ತಿಂಗಳ ನಿರಂತರ ಸುಡುವ ಬಿಸಿಲಿನ ನಂತರ ಮಾರ್ಚ್‌ನಿಂದ ಕನಿಷ್ಠ ತಾಪಮಾನ ದಾಖಲಾಗಿದೆ. ಶುಕ್ರವಾರ (ಮೇ 10) ನಗರದಲ್ಲಿ ತಾಪಮಾನ 31.9 ಡಿಗ್ರಿ ಸೆಲ್ಸಿಯಸ್ ಇತ್ತು. ಫೆಬ್ರವರಿಯ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಉಷ್ಣಾಂಶ ದಾಖಲಾಗಿದೆ. ಒಂದೆರಡು ದಿನಗಳವರೆಗೆ ಇದೇ ಮಟ್ಟಕ್ಕೆ ಇಳಿದಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಅಂಕಿ ಅಂಶಗಳು ತಿಳಿಸಿವೆ.

ವಿಭಾಗ