Karnataka Rains: ತಗ್ಗಿದ ಮಳೆ ಪ್ರಭಾವ; ಕರಾವಳಿ ಪ್ರದೇಶ,ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಉಂಟು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ತಗ್ಗಿದ ಮಳೆ ಪ್ರಭಾವ; ಕರಾವಳಿ ಪ್ರದೇಶ,ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಉಂಟು

Karnataka Rains: ತಗ್ಗಿದ ಮಳೆ ಪ್ರಭಾವ; ಕರಾವಳಿ ಪ್ರದೇಶ,ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಉಂಟು

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅಕ್ಟೋಬರ್‌ನಲ್ಲಿ ಅಬ್ಬರಿಸಿದ್ದ ಮಳೆ ಈಗ ಕಡಿಮೆಯಾಗಲಿದೆ. ಗುರುವಾರದಿಂದ ಮಳೆಯ ತೀವ್ರತೆ ತಗ್ಗಲಿದ್ದು, ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.ಗುರುವಾರ ಯಾವ ಜಿಲ್ಲೆಗಳಲ್ಲಿ ಮಳೆ ಇದೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ.
ಕರ್ನಾಟಕದ ಕೆಲವು ಭಾಗಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ.

ಬೆಂಗಳೂರು: ಕರ್ನಾಟಕದ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು, ದಕ್ಷಿಣ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಅಬ್ಬರಿಸಿದ್ದ ಮಳೆ ಪ್ರಮಾಣ ಇಂದಿನಿಂದ ಕಡಿಮೆಯಾಗಲಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದಾಖಲೆ ಮಳೆ ಸುರಿದ ಜತೆಗೆ ಇತರೆ ಭಾಗದಲ್ಲೂ ಭಾರೀ ಮಳೆಯಾಗಿತ್ತು. ಉತ್ತರ ಕನ್ನಡ ಸಹಿತ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಸುರಿದಿದೆ. ಇದರ ನಡುವೆ ಗುರುವಾರದಿಂದ ಮುಂದಿನ ನಾಲ್ಕೈದು ದಿನಗಳ ಕಾಲ ಕರ್ನಾಟಕದ ನಾನಾ ಭಾಗಗಳಲ್ಲಿ ಮಳೆಯಾದರೂ ಹಗುರದಿಂದ ಸಾಧಾರಣ ಮಾತ್ರ. ಭಾರೀ ಮಳೆ ಎಲ್ಲಿಯೂ ಇರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ನೆಚ್ಚರಿಕೆಯನ್ನು ನೀಡಿದೆ. ಇದರ ನಡುವೆ ಕರಾವಳಿ, ಉತ್ತರ ಕರ್ನಾಟಕ ಸೇರಿ ಕೆಲವು ಭಾಗಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದು ಚಳಿಯ ಅನುಭವ ಆಗತೊಡಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಳೆ ಎಲ್ಲೆಲ್ಲಿ

ಗುರುವಾರದಂದ ಕರಾವಳಿಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಾತ್ರ ಹಗುರ ಮಳೆಯಾಗಬಹುದು. ದಕ್ಷಿಣ ಒಳನಾಡಿನ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಬಹುದು, ಕೆಲವು ಭಾಗಗಳಲ್ಲಿ ಗುಡುಗು ಕೂಡ ಇರಬಹುದು. ಉತ್ತರ ಒಳನಾಡಿನ ಹೆಚ್ಚಿನ ಭಾಗದಲ್ಲಿ ಒಣ ಹವೆಯ ವಾತಾವರಣ ಇರಲಿದೆ.

ಶುಕ್ರವಾರದಂದು ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾದರೆ, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಒಣ ಹವೆ ಕಂಡು ಬರಲಿದೆ.

ಶನಿವಾರದಂದು ಮಾತ್ರ ಶಿವಮೊಗ್ಗ, ಚಿಕ್ಕಮಗಳೂರು,ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಉತ್ತರಕರ್ನಾಟಕ, ಕರಾವಳಿ ಭಾಗದಲ್ಲಿ ಒಣ ಹವೆ ಮುಂದುವರಿಯಲಿದೆ.

ಭಾನುವಾರದಂದು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಾತ್ರ ಮಳೆಯಿದೆ.

ಮಂಡ್ಯದಲ್ಲಿ ಅತ್ಯಧಿಕ ಮಳೆ

ಬುಧವಾರ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಳ್ಳೂರಿನಲ್ಲಿ ಅತ್ಯಧಿಕ ಮಳೆಯಾಗಿರುವುದು ದಾಖಲಾಗಿದೆ. ಬೆಳ್ಳೂರಿನಲ್ಲಿ 7 ಸೆ.ಮೀ ಮಳೆಯಾಗಿದೆ. ಕೃಷ್ಣರಾಜ ಪೇಟೆಯಲ್ಲೂ 6 ಸೆ. ಮೀ ಮಳೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಮೈಸೂರು ಜಿಲ್ಲೆಯ ಕೆಆರ್‌ನಗರ, ಎಚ್‌ಡಿಕೋಟೆ, ತುಮಕೂರು ಜಿಲ್ಲೆಯ ಬರಗೂರು, ಹಾಸನ ಜಿಲ್ಲೆಯ ಬೇಲೂರು, ಚನ್ನರಾಯಪಟ್ಟಣ, ಕೊಣನೂರು, ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರು, ಶೃಂಗೇರಿ, ಕಡೂರು, ಜಯಪುರ, ಕೊಪ್ಪ ಬೀದರ್‌ ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್‌, ಮಂಡ್ಯ ಜಿಲ್ಲೆ ಕೆಆರ್‌ಎಸ್‌, ಶ್ರೀರಂಗಪಟ್ಟಣ, ನಾಗಮಂಗಲ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆ, ಕಲಬುರಗಿ ಜಿಲ್ಲೆ ಕಮಲಾಪುರ, ಯಡ್ರಾಮಿ, ಖಜೂರಿ, ಸುಲೇಪೇಟ, ಚಿಂಚೋಳಿ ಬೆಳಗಾವಿ ಜಿಲ್ಲೆ ಹಿಡಕಲ್‌ ಆಣೆಕಟ್ಟೆ, ನಿಪ್ಪಾಣಿ, ಗೋಕಾಕ, ಬೈಲಹೊಂಗಲ, ದಾವಣಗೆರೆ ಜಿಲ್ಲೆ ಚನ್ನಗಿರಿ, ಚಾಮರಾಜನಗರ ಜಿಲ್ಲೆ ಬಂಡೀಪುರ, ಬೇಗೂರು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ದಾಪುರದಲ್ಲೂ ಮಳೆಯಾಗಿದೆ.

Whats_app_banner