Karnataka Rains: ನೈರುತ್ಯ ಮುಂಗಾರು ಮತ್ತಷ್ಟು ಚುರುಕು: ಕರ್ನಾಟಕದ ಕರಾವಳಿ, ಉತ್ತರ ಭಾಗದಲ್ಲಿ ಭಾರೀ ಮಳೆ ಅಲರ್ಟ್
Karnataka weather updates ಕರ್ನಾಟಕದಲ್ಲಿ ಒಂದು ವಾರದಿಂದ ನೈರುತ್ಯ ಮುಂಗಾರು ಚುರುಕಾಗಿದ್ದು, ಬುಧವಾರ ಬಹಳಷ್ಟು ಕಡೆ ಮಳೆಯಾಗಿದೆ. ಗುರುವಾರ, ಶುಕ್ರವಾರ ಹಾಗೂ ಶನಿವಾರವೂ ಕರ್ನಾಟಕದ ಉತ್ತರ, ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ.
ಬೆಂಗಳೂರು: ಕರ್ನಾಟಕದಾದ್ಯಂತ ನೈರುತ್ಯ ಮುಂಗಾರು ಚುರುಕಾಗಿದೆ. ಬುಧವಾರವೂ ಹಲವು ಭಾಗದಲ್ಲಿ ಉತ್ತಮ ಮಳೆಯಾಗಿದ್ದು. ಮುಂದಿನ ಎರಡು ದಿನವೂ ಉತ್ತರ, ದಕ್ಷಿಣ ಒಳನಾಡಿನ ಜತೆಗೆ ಕರಾವಳಿ ಭಾಗದಲ್ಲೂ ಆಗಲಿದೆ. ಈಗಾಗಲೇ ಉತ್ತರ ಒಳನಾಡಿನ ಕಲಬುರಗಿ, ಬೀದರ್, ದಕ್ಷಿಣ ಒಳನಾಡಿನ ಶಿವಮೊಗ್ಗ, ಕೊಡಗು, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಲ್ಲೊ ಅಲೆರ್ಟ್ ಕೂಡ ಘೋಷಣೆಯಾಗಿದೆ.
ಮುಂದಿನ ಇಪ್ಪತ್ನಾಲು ಗಂಟೆಗಳಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ.
ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಮುಂದಿನ ನಲವತ್ತೆಂಟು ಗಂಟೆಗಳಲ್ಲೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ. ಕರಾವಳಿಯ ಬಹುತೇಕ ಕಡೆ ಹಾಗೂ ಉತ್ತರ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ಬೆಂಗಳೂರಲ್ಲೂ ಮಳೆ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಸಂಜೆ ಅಥವಾ ರಾತ್ರಿಯ ವೇಳೆ ಒಂದೆರಡು ಬಾರಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿಯೂ ಅಲ್ಲಲ್ಲಿ ಬೀಸಲಿದೆ. ಬೆಂಗಳೂರು ನಗರದ ಉಷ್ಣಾಂಶವು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ನಷ್ಟಿದ್ದರೆ, ಕನಿಷ್ಠಪ್ರಮಾಣವು 20 ಡಿಗ್ರಿ ಸೆಲ್ಸಿಯಸ್ ತಲುಪಲಿದೆ.
ಬೆಂಗಳೂರು ನಗರದಲ್ಲಿ ಒಂದು ವಾರದಿಂದ ಮಳೆಯ ವಾತಾವರಣವಿದೆ. ಭಾರೀ ಮಳೆಯಲ್ಲದೇ ಇದ್ದರೂ ಆಗಾಗ ಮಳೆ ಬಂದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ, ಎಆರ್ ಜಿ, ಜ್ಞಾನಭಾರತಿ ಕ್ಯಾಂಪಸ್, ಜಿಕೆವಿಕೆ ಸಹಿತ ಕೆಲವು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗಿರುವುದು ದಾಖಲಾಗಿದೆ. ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೊಡ್ಡಬಳ್ಳಾಪುರದಲ್ಲೀ ಮಳೆಯಾಗಿದೆ. ಇದೇ ವಾತಾವರಣ ಮುಂದಿನ ನಲವತ್ತೆಂಟು ಗಂಟೆಗಳವರೆಗೂ ಇರಲಿದೆ ಎನ್ನುವುದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳ ವಿವರಣೆ.
ರಾಮನಗರದಲ್ಲಿ ಅಧಿಕ
ನೈರುತ್ಯ ಮುಂಗಾರು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಬುಧವಾರ ಚುರುಕಾಗಿರುವುದು ಕಂಡು ಬಂದಿತು. ಕರಾವಳಿಯಲ್ಲಿ ಮುಂಗಾರು ಸಾಮಾನ್ಯವಾಗಿದ್ದರೆ ದಕ್ಷಿಣ ಒಳನಾಡಿನ ಪ್ರದೇಶದಲ್ಲಿ ಅಷ್ಟಾಗಿ ಪ್ರಬಲವಾಗಿರಲಿಲ್ಲ. ಆದರೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಸುರಿದಿರುವ ವರದಿಯಾಗಿದೆ.
ರಾಮನಗರ ಜಿಲ್ಲೆಯಲ್ಲಿ ಬುಧವಾರ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 7 ಸೆ.ಮಿ.ಮೀಟರ್ ಮಳೆಯಾಗಿದೆ. ಮಾಗಡಿಯಲ್ಲಿ ನಾಲ್ಕು ಸೆ.ಮೀ, ಕನಕಪುರ. ಚನ್ನಪಟ್ಟಣದಲ್ಲಿ ತಲಾ ಒಂದು ಸೆ.ಮಿ.ನಷ್ಟು ಮಳೆ ಸುರಿದಿದೆ.
ಕೊಡಗಲ್ಲೂ ಮಳೆ
ಕೊಡಗಿನಲ್ಲಿ ಮಳೆಯ ಸನ್ನಿವೇಶ ಸೃಷ್ಟಿಯಾಗಿದೆ. ಹೆಚ್ಚು ಮಳೆಯಾಗುವ ಭಾಗಮಂಡಲದಲ್ಲಿ ಬುಧವಾರ ಮಳೆ ಐದು ಸೆ.ಮಿ.ಗೂ ಅಧಿಕ ಸುರಿದಿದೆ. ನಾಪೊಕ್ಲು,ಪೊನ್ನಂಪೇಟೆಯಲ್ಲೂ ಉತ್ತಮ ಮಳೆಯಾಗಿದೆ. ಇದರಿಂದ ಕಾವೇರಿ ನದಿ ಮತ್ತೆ ಅಲಲ್ಲಿ ಉಕ್ಕಿ ಹರಿಯುವ ಸನ್ನಿವೇಶ ಸೃಷ್ಟಿಯಾಗಿದೆ.
ಮಲೆನಾಡಲ್ಲಿ ವರುಣ ದರ್ಶನ
ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆ ಮಳೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಅಗ್ರಹಾರ ಕೋಣಂದೂರು, ಹುಂಚದಕಟ್ಟೆ, ಸಾಗರ ತಾಲ್ಲೂಕಿನ ಲಿಂಗದಮಕ್ಕಿಯಲ್ಲಿ ಮಳೆಯಾಗಿದೆ. ಶಿವಮೊಗ್ಗ ನಗರ, ಆನವಟ್ಟಿ, ಮಂಡಗದ್ದೆ, ಭದ್ರಾವತಿಯಲ್ಲೂ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿ, ಕೊಟ್ಟಿಗೆಹಾರ, ಜಯಪುರ, ಬಾಳೆಹೊನ್ನೂರು, ಎನ್‌ಆರ್ ಪುರ, ಯಗಟಿ, ಶೃಂಗೇರಿ, ಕೊಪ್ಪ, ಅಜ್ಜಂಪುರದಲ್ಲೂ ಮಳೆ ಸುರಿದಿದೆ.
ಕರಾವಳಿಯಲ್ಲಿ ಪಣಂಬೂರು, ಪುತ್ತೂರು, ಧರ್ಮಸ್ಥಳ, ಮಂಗಳೂರು ವಿಮಾನ ನಿಲ್ದಾನ, ಮಾಣಿ, ಬೆಳ್ತಂಗಡಿ, ಉಪ್ಪಿನಂಗಡಿ, ಕೊಲ್ಲೂರು, ಕಾರವಾರ, ಕದ್ರಾ, ಸಿದ್ದಾಪುರ, ಮಂಚಿಕೇರಿ, ಕ್ಯಾಸಲ್ ರಾಕ್ , ಶಿರಾಲಿ, ಅಂಕೋಲಾ, ಮಂಕಿ. ಕುಮಟಾ, ಬನವಾಸಿ, ಯಲ್ಲಾಪುರ, ಮುಂಡಗೋಡ, ಹಳಿಯಾಳದಲ್ಲಿ ಮಳೆಯಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ, ತುಮಕೂರು ಜಿಲ್ಲೆಯ ಮಧುಗಿರಿ, ಕುಣಿಗಲ್, ಹೆಬ್ಬೂರು, ತಿಪಟೂರು, ಕೋನೇಹಳ್ಳಿ ಕೆವಿಕೆ. ಮೈಸೂರು ಜಿಲ್ಲೆಯ ಸುತ್ತೂರು, ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ, ಸಂತೇಬೆನ್ನೂರು, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ, ಲಿಂಗಸುಗೂರು, ಗದಗ ಜಿಲ್ಲೆಯ ಶಿರಹಟ್ಟಿ, ಹಾವೇರಿ ಜಿಲ್ಲೆಯ ಸವಣೂರು, ರಾಣೆಬೆನ್ನೂರು, ಹನುಮನಮಟ್ಟಿ,ಬೀದರ್ ಜಿಲ್ಲೆಯ ಹುಮ್ನಾಬಾದ್, ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಮಳೆಯಾಗಿದೆ.
ಭಾರೀ ಮಳೆ ಮುನ್ಸೂಚನೆ
ಮುಂದಿನ ಇಪ್ಪತ್ತಾಲ್ಕು ಗಂಟೆಗಳಲ್ಲಿ ಉತ್ತರ ಒಳನಾಡಿನ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಈಗಾಗಲೇ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ , ಬಾಗಲಕೋಟೆ, ವಿಜಯಪುರ, ರಾಯಚೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚೆನ್ನಾಗಿಯೇ ಮಳೆಯಾಗುತ್ತಿದೆ. ಒಂದು ವಾರದಿಂದ ಎಡಬಿಡದೇ ಮಳೆ ಸುರಿದು ಹಲವು ಕಡೆ ಅನಾಹುತಗಳೂ ಆಗಿವೆ. ಬಹುತೇಕ ಕಡೆ ಮಳೆಯಿಂದ ಬಿತ್ತನೆ ಕಾರ್ಯಗಳೂ ಚುರುಕಾಗಿ ಜನ ಹರ್ಷಚಿತ್ತರಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅದೇ ರೀತಿ ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳು ಅಧಿಕವಾಗಿವೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ನಲವತ್ತೆಂಟು ಗಂಟೆ ಭಾರೀ ಮಳೆಯಾಗುವ ಯಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ.
ಮೀನುಗಾರರರಿಗೆ ಮುನ್ಸೂಚನೆ
ಕರಾವಳಿ ಭಾಗದಲ್ಲಿ ಮುಂದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ. ಅಲ್ಲದೇ ಕರಾವಳಿಯ ಹಲವು ಕಡೆ ಬಿರುಗಾಳಿಯ ಸನ್ನಿವೇಶವೂ ಇರಲಿದೆ. ಗಂಟೆಗೆ 40-45 ರಿಂದ 55 ಕಿ.ಮಿ ವೇಗದಲ್ಲಿ ಗಾಳಿಯು ಬಲವಾಗಿ ಬೀಸುವ ಸಾಧ್ಯತೆಗಳು ಹೆಚ್ಚಿವೆ. ಇದು ಅಪಾಯಕಾರಿಯಾಗುವ ಸಾಧ್ಯತೆಯೂ ಇರುವುದರಿಂದ ಮೀನುಗಾರರು ಶುಕ್ರವಾರ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯು ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಶುರುವಾಗಿದೆ. ಈಗ ಮಳೆಯ ವಾತಾವರಣದ ಜತೆಗೆ ಗಾಳಿಯೂ ಬೀಸುವ ಸನ್ನಿವೇಶ ಇರುವುದರಿಂದ ಅಪಾಯ ತಂದೊಡ್ಡಿಕೊಳ್ಳುವ ಬದಲು ಮೀನುಗಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.