Karnataka Weather: ಬೆಂಗಳೂರು, ಮಲೆನಾಡಿನಲ್ಲಿ ಹೆಚ್ಚಿದ ಚಳಿ, ಶಿವಮೊಗ್ಗದಲ್ಲಿ ಕನಿಷ್ಠ ಉಷ್ಣಾಂಶ: ಕರಾವಳಿ ಭಾಗದಲ್ಲಿ ಸಾಧಾರಣ ಮಳೆ ನಿರೀಕ್ಷೆ
Karnataka Rain Updates ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಭಾಗಗಳಲ್ಲಿ ಹಗುರ ಮಳೆ ಮಂಗಳವಾರ ಆಗಬಹುದು ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ(IMD) ನೀಡಿದೆ. ಕೆಲವು ಭಾಗದಲ್ಲಿ ಚಳಿಯೂ ಹೆಚ್ಚಿದೆ. ಕರ್ನಾಟಕ ಹವಾಮಾನ ಚಿತ್ರಣ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ಮಲೆನಾಡು ಭಾಗದಲ್ಲಿ ಎರಡು ದಿನದಿಂದ ಚಳಿಯ ಪ್ರಮಾಣ ಅಧಿಕವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು, ಮೈಸೂರು ಭಾಗದಲ್ಲೂ ಗರಿಷ್ಠ ಉಷ್ಣಾಂಶದಲ್ಲಿ ಏರಿಳಿತ ಕಂಡು ಬಂದಿದ್ದು, ಚಳಿಯ ಅನುಭವ ಹೆಚ್ಚಿದೆ.
ಧನುರ್ಮಾಸದ ಕೊರೆಯುವ ಚಳಿಯ ಅನುಭವ ಕರ್ನಾಟಕದ ಹಲವು ಭಾಗದಲ್ಲಿ, ವಿಶೇಷವಾಗಿ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ಸೋಮವಾರದಿಂದ ಆಗುತ್ತಿದೆ.
ಮಂಗಳವಾರದಂದು ಕರಾವಳಿಯ ಮೂರು ಜಿಲ್ಲೆಗಳು, ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ತನ್ನ ದೈನಂದಿನ ಹವಾಮಾನ ವರದಿಯಲ್ಲಿ ಉಲ್ಲೇಖಿಸಿದೆ.
ಮಲೆನಾಡಲ್ಲಿ ಅಧಿಕ ಚಳಿ
ಉತ್ತರ ಕರ್ನಾಟಕದ ವಿಜಯಪುರದಲ್ಲಿ ಕಳೆದ ಒಂದು ತಿಂಗಳಿಗೂ ಅಧಿಕ ಕಾಲದಿಂದ ಕರ್ನಾಟಕದ ಸಮತಟ್ಟಾದ ಪ್ರದೇಶದಲ್ಲಿನ ಕನಿಷ್ಠ ಉಷ್ಣಾಂಶ ದಾಖಲಾಗುತ್ತಿತ್ತು. ಕಳೆದ ವಾರ ಅಲ್ಲಿ 6 ಡಿಗ್ರಿ ಸೆಲ್ಸಿಯಸ್ಗೂ ಇಳಿದಿತ್ತು. ಸೋಮವಾರ ವಿಜಯಪುರದಲ್ಲಿ 17.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿತ್ತು. ಈಗ ಅಲ್ಲಿ ಏರಿಕೆ ಕಂಡು ಬರುತ್ತಿದೆ. ಬೀದರ್, ದಾವಣಗೆರೆಯಲ್ಲೂ ಒಂದೆರಡು ಬಾರಿ ಕನಿಷ್ಠ ಉಷ್ಣಾಂಶದ ವಾತಾವರಣ ಇತ್ತು. ಆನಂತರ ಏರಿಕೆ ಕಂಡು ಬಂದಿತು. ಸೋಮವಾರದಂದು ಬೀದರ್ನಲ್ಲಿ 16 ಡಿಗ್ರಿ ಸೆಲ್ಸಿಯಸ್ ಹಾಗೂ ದಾವಣಗೆರೆಯಲ್ಲಿ 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.
ಈಗ ಮಲೆನಾಡು ಭಾಗದಲ್ಲಿ ಚಳಿಯ ವಾತಾವರಣ ಅಧಿಕಗೊಂಡಿದೆ. ಸೋಮವಾರ ಕರ್ನಾಟಕ ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. ಶಿವಮೊಗ್ಗದಲ್ಲಿ 15.8 ಡಿಗ್ರಿ ಸೆಲ್ಸಿಯಸ್ನಷ್ಟು ಕಂಡು ಬಂದಿತು ಜನ ಚಳಿ ಅನುಭವಿಸಿದರು. ಮಂಗಳವಾರ ಬೆಳಿಗ್ಗೆಯೂ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಳಿ ಅಧಿಕವಾಗಿತ್ತು. ಅದೇ ರೀತಿ ಕಣಿವೆ ಜಿಲ್ಲೆ ಹಾಗೂ ನಗರ ಚಿಕ್ಕಮಗಳೂರಿನಲ್ಲಿ ಶಿವಮೊಗ್ಗಕ್ಕಿಂತ ಹೆಚ್ಚಿನ ಚಳಿಯಿದೆ. ಚಿಕ್ಕಮಗಳೂರಿನಲ್ಲಿ ಸೋಮವಾರ 14.6 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಠ ಉಷ್ಣಾಂಶ ದಾಖಲಾಯಿತು. ಮಂಗಳವಾರವೂ ಚಿಕ್ಕಮಗಳೂರು ಜನ ಚಳಿಯನ್ನು ಅನುಭವಿಸಿದರು.
ಮೈಸೂರು ಭಾಗದಲ್ಲಿ ಚಳಿ ಪ್ರಮಾಣ ಹೆಚ್ಚಿದೆ. ಮಂಗಳವಾರ ಬೆಳಗಿನ ಜಾವ ಕೊರೆವ ಚಳಿಯ ವಾತಾವರಣ ಕಂಡು ಬಂದಿತು. ಇದರಿಂದ ಬೆಳಿಗ್ಗೆಯೇ ಕಾಯಕ ಆರಂಭಿಸುವವರು ಬಿಸಿ ಕಾಯಿಸಿಕೊಳ್ಳಲು ಮುಂದಾಗಿದ್ದು ಕಂಡು ಬಂದಿತು. ಇನ್ನು ಕೆಲವರು ಬಿಸಿ ಕಾಫಿ ಸೇವಿಸಿ ದೇಹದ ಬಿಸಿ ಏರಿಸಿಕೊಂಡರು.
ಬೆಂಗಳೂರಲ್ಲೂ ಉಷ್ಣಾಂಶ ಏರಿಳಿತ
ಮುಂದಿನ ಎರಡು ದಿನಗಳ ಕಾಲ ಬೆಂಗಳೂರಲ್ಲಿ ಮಳೆಯ ಯಾವುದೇ ಮುನ್ಸೂಚನೆ ಇಲ್ಲ. ಆದರೆ ಉಷ್ಣಾಂಶದಲ್ಲಿ ಏರಿಳಿತ ಕಾಣಲಿದ್ದು ಚಳಿಯ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶದ ಜತೆಗೆ ಕನಿಷ್ಠ ಉಷ್ಣಾಂಶದಲ್ಲೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಲಿದೆ.
ಮುಂದಿನ 24 ಗಂಟೆಗಳ ಕಾಲ ಅಂದರೆ ಮಂಗಳವಾರ ಬೆಳಿಗ್ಗೆಯಿಂದ ಬುಧವಾರ ಬೆಳಿಗ್ಗೆವರೆಗೂ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡದ ಕವಿದ ವಾತಾವರಣ ಸಾಮಾನ್ಯವಾಗಿ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಅಧಿಕ. ಬೆಂಗಳೂರಿನ ಗರಿಷ್ಠ ಉಷ್ಣಾಂಶದಲ್ಲಿ ಸ್ವಲ್ಪ ಕುಸಿತ ಕಂಡು ಬರಲಿದೆ. ಗರಿಷ್ಠ ಉಷ್ಣಾಂಶದ ಪ್ರಮಾಣ 24 ಡಿಗ್ರಿ ಸೆಲ್ಸಿಯಸ್ನಷ್ಟು ಇರಲಿದೆ. ಕನಿಷ್ಠ ಉಷ್ಣಾಂಶವು 19 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ಅಂದರೆ ಗುರುವಾರ ಬೆಳಿಗ್ಗೆವರೆಗೂ ಸಾಮಾನ್ಯವಾಗಿ ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾರಣ ಇರಬಹುದು. ಮಂಜು ಮುಸುಕಿದ ವಾತಾವರಣವೂ ಕೆಲವು ಭಾಗದಲ್ಲಿ ಇರಲಿದೆ. ಬೆಂಗಳೂರಿನ ಗರಿಷ್ಠ ಉಷ್ಣಾಂಶವು ಬುಧವಾರದಂದು 25 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾದರೆ, ಕನಿಷ್ಠ ಉಷ್ಣಾಂಶವು 18 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಬಹುದು. ಇದರಿಂದ ಬೆಂಗಳೂರಿನಲ್ಲಿ ಚಳಿ ಪ್ರಮಾಣ ಇನ್ನಷ್ಟು ಅಧಿಕವಾಗಬಹುದು.
ಮಳೆ ಎಲ್ಲೆಲ್ಲಿ
ಸೋಮವಾರ ಕರ್ನಾಟಕದ ಒಂದೆರಡು ಕಡೆ ಹಗುರ ಮಳೆಯಾಗಿದೆ. ಮಂಗಳವಾರವೂ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯ ಒಂದೆರಡು ಕಡೆಗಳಲ್ಲಿ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಇದಲ್ಲದೇ ದಕ್ಷಿಣ ಒಳನಾಡಿನ ಒಂದೆರಡು ಭಾಗಗಲ್ಲೂ ಹಗುರ ಮಳೆಯಾಗಲಿದೆ. ಆದರೆ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಮಳೆಯ ಸೂಚನೆ ಈ ಭಾಗದಲ್ಲಿ ಇಲ್ಲ.
ಮುಂದಿನ 48 ಗಂಟೆಗಳಲ್ಲಿ ಅಂದರೆ ಬುಧವಾರ ಬೆಳಿಗ್ಗೆ ನಂತರ ಕರ್ನಾಟಕದ ಎಲ್ಲಾ ಭಾಗದಲ್ಲೂ ಒಣ ಹವೆ ಇರುವ ಸಾಧ್ಯತೆಗಳು ಹೆಚ್ಚಿವೆ. ಬುಧವಾರ ಎಲ್ಲಿಯೂ ಮಳೆಯಾಗಬಹುದಾದ ಮುನ್ಸೂಚನೆಗಳಿಲ್ಲ.