ಕರ್ನಾಟಕ ಹವಾಮಾನ: ಕೋಲಾರ ಸಹಿತ 3 ಜಿಲ್ಲೆಗಳಲ್ಲಿ ಇಂದು ಮಳೆ, ನಾಳೆ ಬೆಂಗಳೂರು, ಮೈಸೂರು ಭಾಗದಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ
ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿನಿಂದ(2024 ರ ಡಿಸೆಂಬರ್ 11) ಮೂರ್ನಾಲ್ಕು ದಿನ ಮಳೆಯಾಗಲಿದೆ. ಅದರಲ್ಲೂ ಗುರುವಾರ ಹಾಗೂ ಶುಕ್ರವಾರದಂದು ಬೆಂಗಳೂರು ನಗರ, ಮೈಸೂರು ಸೇರಿ ಹಲವೆಡೆ ಭಾರೀ ಮಳೆ ಮುನ್ಸೂಚನೆಯಿದೆ.
ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಮಳೆ ಪ್ರಮಾಣ ತಗ್ಗಿದ್ದರೂ ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. 2024 ರ ಡಿಸೆಂಬರ್ 11ರ ಬುಧವಾರ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯಿದೆ. ಉಳಿದಂತೆ ಇತರೆ ಭಾಗಗಳಲ್ಲಿ ಬೆಳಗಿನ ವೇಳೆ ಚಳಿ, ನಂತರ ಒಣಹವೆಯ ವಾತಾವರಣ ಇರಲಿದೆ. ಡಿಸೆಂಬರ್ 12ರ ಗುರುವಾರದಂದು ಬೆಂಗಳೂರು, ಮೈಸೂರು ಸಹಿತ 9 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆಯನ್ನು ನೀಡಿದೆ. ಇದಲ್ಲದೇ ಇನ್ನೂ 15 ಜಿಲ್ಲೆಗಳಲ್ಲಿ ಗುರುವಾರ ಸಾಧಾರಣ ಮಳೆಯಾಗಬಹುದು. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಚಳಿಯ ಅನುಭವವೂ ದಟ್ಟವಾಗಿದೆ.
ಮಳೆ ವಾತಾವರಣ ಹೇಗಿದೆ
ಬುಧವಾರದಂದು ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ ಕೆಲವಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು.
ಗುರುವಾರದಂದು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ತುಮಕೂರು, ರಾಮನಗರ, ಚಿತ್ರದುರ್ಗ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಗುಡುಗು ಸಹಿತ ಮಳೆಯೂ ಆಗುವ ಮುನ್ಸೂಚನೆಯಿದೆ. ಬಳ್ಳಾರಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗುಡುಗು ಸಹಿತ ಮಳೆಯಾಗುವ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ರಾಯಚೂರು, ಕೊಪ್ಪಳ, ಗದಗ, ಧಾರವಾಡ ಜಿಲ್ಲೆಗಳ ಒಂದೆರಡು ಭಾಗದಲ್ಲಿ ಗುರುವಾರ ಹಗುರ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.
ಶುಕ್ರವಾರದಂದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ. ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಬಹುದು.
ಶನಿವಾರದಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಭಾಗಗಳಲ್ಲಿ ಹಗುರವಾರ ಮಳೆಯಾಗುವ ಸೂಚನೆಗಳಿವೆ.
ಮಳೆ ಪ್ರಮಾಣ
ಕರ್ನಾಟಕ ಕೆಲವು ಭಾಗಗಳಲ್ಲಿ ಮಂಗಳವಾರದಂದೂ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಭಾಗದಲ್ಲಿ ಒಂದು ಸೆ.ಮೀನಷ್ಟು ಮಳೆ ಸುರಿದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ, ಕೊಡಗಿನ ಭಾಗ ಮಂಡಲ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲೂ ತಲಾ ಒಂದು ಸೆ.ಮೀನಷ್ಟು ಮಳೆಯಾದ ವರದಿಯಾಗಿದೆ.
ಬೆಂಗಳೂರು ಹವಾಮಾನ ಹೇಗಿದೆ
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಮೋಡ ಕವಿದ ವಾತಾವರಣ ಇರಲಿದೆ. ಗುರುವಾರ ಹಾಗೂ ಶುಕ್ರವಾರ ಮಳೆಯಾಗಬಹುದು. ಬೆಂಗಳೂರಿನಲ್ಲಿ ಬೆಳಗಿನ ಜಾವ ಆಳದಿಂದ ಮಧ್ಯಮ ರೀತಿಯಲ್ಲಿ ಮಂಜಿನ ಪ್ರಭಾವ ಕಾಣಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 19 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು.
ಚಾಮರಾಜನಗರದಲ್ಲಿ ಕನಿಷ್ಠ
ಕರ್ನಾಟಕದ ಹಲವು ಭಾಗಗಳಲ್ಲಿ ಚಳಿಯ ವಾತಾವರಣವೂ ದಟ್ಟವಾಗಿದೆ. ಬೆಳಗಿನ ಹೊತ್ತಿನಲ್ಲಿ ಕನಿಷ್ಠ ಉಷ್ಣಾಂಶದಿಂದ ಚಳಿ ಹೆಚ್ಚಾಗಿದೆ. ಚಾಮರಾಜನಗರದಲ್ಲಿ ಕರ್ನಾಟಕದ ಸಮತಟ್ಟಾದ ಪ್ರದೇಶಗಳಲ್ಲಿನ ಅತೀ ಕಡಿಮೆ ಉಷ್ಣಾಂಶ 17.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಚಿಕ್ಕಮಗಳೂರು, ಚಿಂತಾಮಣಿ, ಉತ್ತರ ಕನ್ನಡದ ಶಿರಾಲಿ, ರಾಯಚೂರು, ಬೀದರ್, ವಿಜಯಪುರದಲ್ಲೂ ಚಳಿಯ ವಾತಾವರಣವಿದೆ.