Karnataka Weather: ಮುಂದಿನ ದಿನ ಹೆಚ್ಚಲಿದೆ ಮತ್ತಷ್ಟು ಚಳಿ: ಬೆಂಗಳೂರು, ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲೂ ಚಳಿ ಅಧಿಕ
North Karntaka Weather ಉತ್ತರ ಕರ್ನಾಟಕದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆ ಕಂಡು ಬಂದು ಚಳಿ ಅಧಿಕವಾಗಿದೆ. ಕರ್ನಾಟಕದ ಇತರೆ ಭಾಗದಲ್ಲಿ ಹೇಗಿದೆ ಚಳಿ ವಾತಾವರಣ.. ಇಲ್ಲಿದೆ ಮಾಹಿತಿ.
ಬೆಂಗಳೂರು: ಈಗಾಗಲೇ ಚಳಿಯ ಅನುಭವಿಸುತ್ತಿರುವ ಕರ್ನಾಟಕದ ಹಲವು ಭಾಗಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಚಳಿ ಅಧಿಕವಾಗಲಿದೆ. ಉತ್ತರ ಒಳನಾಡಿನ ಜಿಲ್ಲೆಗಳು ಹಾಗೂ ದಕ್ಷಿಣ ಕರ್ನಾಟಕದ ಜತೆಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಲ್ಲೂ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಬಂದಿದ್ದು. ಚಳಿಯ ಅನುಭವ ದಟ್ಟವಾಗುತ್ತಿದೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಕನಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್ ಕುಸಿಯಲಿದೆ. ಎಲ್ಲಿಯೂ ಮಳೆಯ ವಾತಾವರಣ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ.
ಎಲ್ಲಿ ಎಷ್ಟು ಉಷ್ಣಾಂಶ
ಕರ್ನಾಟಕ ರಾಜ್ಯ ಸಮತಟ್ಟಾದ ಪ್ರದೇಶದಲ್ಲಿ ಅತಿ ಕಡಿಮೆ ಉಷ್ಣಾಂಶ ಭಾನುವಾರ ಬೆಳಿಗ್ಗೆ ವಿಜಯಪುರದಲ್ಲಿ 10.2 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ.
ಧಾರವಾಡದಲ್ಲಿ 11 ಡಿಗ್ರಿ, ಬಾಗಲಕೋಟೆ ಹಾಗೂ ಬೀದರ್‌ನಲ್ಲಿ 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಗದಗದಲ್ಲಿ 13.5 ಡಿಗ್ರಿ,. ಹಾವೇರಿಯಲ್ಲಿ 13.6 ಡಿಗ್ರಿ ,ಬೆಳಗಾವಿ ವಿಮಾನ ನಿಲ್ದಾಣದಲ್ಲಿ 14 ಡಿಗ್ರಿ, ಬೆಳಗಾವಿ ನಗರ ಹಾಗೂ ಕೊಪ್ಪಳದಲ್ಲಿ 15 ಡಿಗ್ರಿ ಸೆಲ್ಸಿಯಸ್, ರಾಯಚೂರಿನಲ್ಲಿ 15.8 ಡಿಗ್ರಿ ಹಾಗೂ ಕಲಬುರಗಿಯಲ್ಲಿ 17.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವು ದಾಖಲಾಗಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಉಷ್ಣಾಂಶ ಕುಸಿದಿದೆ. ಇಲ್ಲಿ 12.3 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಮಂಡ್ಯದಲ್ಲಿ 12.6 ಡಿಗ್ರಿ, ಮಡಿಕೇರಿಯಲ್ಲಿ 12.7 ಡಿಗ್ರಿ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 13.2 ಡಿಗ್ರಿ, ಚಾಮರಾಜನಗರದಲ್ಲಿ 13.3 ಡಿಗ್ರಿ. ದಾವಣಗೆರೆಯಲ್ಲಿ 13.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿತ್ತು.
ಚಿಕ್ಕಮಗಳೂರಿನಲ್ಲಿ 14 ಡಿಗ್ರಿ, ಚಿತ್ರದುರ್ಗದಲ್ಲಿ 14.6 ಡಿಗ್ರಿ, ಚಿಂತಾಮಣಿಯಲ್ಲಿ 14.7 ಡಿಗ್ರಿ ಹಾಗೂ ಬೆಂಗಳೂರು ನಗರದಲ್ಲಿ 15 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಟ ಉಷ್ಣಾಂಶ ಕಂಡು ಬಂದಿದೆ.
ಕರಾವಳಿಯಲ್ಲೂ ಚಳಿ ಏರಿಕೆ
ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕನಿಷ್ಠ ಉಷ್ಣಾಂಶದಲ್ಲಿ ಮೊದಲ ಬಾರಿಗೆ ಕುಸಿತ ಕಂಡು ಬಂದಿದೆ. ಹೊನ್ನಾವರದಲ್ಲಿ 18.4 ಡಿಗ್ರಿ. ಕಾರವಾರದಲ್ಲಿ 19.5 ಡಿಗ್ರಿ., ಮಂಗಳೂರು ವಿಮಾನ ನಿಲ್ದಾಣದಲ್ಲಿ 21.6 ಡಿಗ್ರಿ, ಪಣಂಬೂರಿನಲ್ಲಿ 22 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಭಾನುವಾರ ಕಂಡು ಬಂದಿತು.
ಬೆಂಗಳೂರು ಹವಾಮಾನ
ಬೆಂಗಳೂರಿನಲ್ಲಿ ಸೋಮವಾರ ಹಾಗೂ ಮಂಗಳವಾರದಂದು ಚಳಿಯ ವಾತಾವರಣ ಅಧಿಕವಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಸೋಮವಾರದಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವವೇ ದಟ್ಟ ಮಂಜು ಹೆಚ್ಚಾಗಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದೆ.
ಮುಂದಿನ 48 ಗಂಟೆಗಳಲ್ಲಿ ಅಂದರೆ ಮಂಗಳವಾರದಂದು ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಮಂಜು ಕಾಣಿಸಲಿದೆ. ಭಾಗಶಃ ಮೋಡ ಕವಿದ ವಾತಾವರಣವೂ ಇರಲಿದೆ. ಗರಿಷ್ಠ ಉಷ್ಣಾಂಶವು 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 15 ಡಿಗ್ರಿ ಸೆಲ್ಸಿಯಸ್‌ನಷ್ಟಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.