Karnataka Rains: ಮುಂದಿನ 5 ದಿನವೂ ಕರ್ನಾಟಕದ ಹಲವೆಡೆ ಇದೆ ಸಾಧಾರಣ ಮಳೆ: ಬೆಂಗಳೂರಲ್ಲೂ ಹಗುರ ಮಳೆ ನಿರೀಕ್ಷೆ
Karnataka Weather Updates ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮುಂದಿನ ಐದು ದಿನ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ.
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ಡಿಸೆಂಬರ್ 9ರಿಂದ ಮುಂದಿನ 5 ದಿನ ಕಾಲ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ತುಮಕೂರು, ಮಲೆನಾಡು ಸಹಿತ ಹಲವು ಜಿಲ್ಲೆಗಳು, ಉತ್ತರ ಒಳನಾಡಿನ ಭಾಗವಾದ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲೂ ಹಗುರವಾಗಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ( IMD) ಬೆಂಗಳೂರು ಪ್ರಾದೇಶಿಕ ಕೇಂದ್ರವು ನೀಡಿದೆ.
ಆದರೆ ಈ ಅವಧಿಯಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ಕರ್ನಾಟಕದ ಯಾವುದೇ ಭಾಗದಲ್ಲಿ ಇಲ್ಲ. ಈ ಅವಧಿಯೊಳಗೆ ಗುಡುಗು, ಮಿಂಚಿನ ವಾತಾವರಣವೂ ಇರುವುದಿಲ್ಲ. ತಾಪಮಾನದಲ್ಲೂ ಭಾರೀ ವ್ಯತ್ಯಾಸ ಕಾಣದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಳೆ ಸ್ಥಿತಿಗತಿ ಹೇಗಿದೆ
ಡಿಸೆಂಬರ್ 9ರ ಶನಿವಾರ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ ಭಾಗದ ಮೂರು ಜಿಲ್ಲೆಗಳು, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರವಾಗಿ ಮಳೆಯಾಗಬಹುದು.
ಡಿಸೆಂಬರ್ 10ರ ಭಾನುವಾರದಂದು ಕರಾವಳಿಯ ಮೂರು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ. ಆದರೆ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಬಹುದು
ಡಿಸೆಂಬರ್ 11ರ ಸೋಮವಾರ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಅಧಿಕವಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಾತ್ರ ಹಗುರ ಮಳೆ ಕಾಣಬಹುದು.
ಡಿಸೆಂಬರ್ 12ರ ಮಂಗಳವಾರದಂದು ಕರಾವಳಿಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾದರೆ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಾತ್ರ ಮಳೆಯಾಗಲಿದೆ.
ಡಿಸೆಂಬರ್ 13ರ ಬುಧವಾರದಂದು ಕರಾವಳಿ ಭಾಗದ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರವಾಗಿ ಮಳೆಯಾಗಬಹುದು. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಕಂಡುಬರಲಿದೆ.
ದಕ್ಷಿಣದಲ್ಲಿ ಮಳೆ
ಗುರುವಾರ ಹಾಗೂ ಶುಕ್ರವಾರವೂ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಾತ್ರ ಮಳೆಯಾಗಿದ್ದರೆ. ಕರಾವಳಿ ಮತ್ತು ಉತ್ತರ ಪಳನಾಡಿನ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣವಿತ್ತು.
ಕರ್ನಾಟಕದ ಸಮತಟ್ಟಾದ ಪ್ರದೇಶಗಳಲ್ಲಿ ಉಷ್ಣಾಂಶ ಕುಸಿದಿತ್ತು.ಉತ್ತರ ಕರ್ನಾಟಕದ ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ 12.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ಅವಧಿಯಲ್ಲಿ ಅತಿ ಕಡಿಮೆ ಉಷ್ಣಾಂಶವಿದು.
ಬೆಂಗಳೂರಲ್ಲೂ ಮಳೆ
ಬೆಂಗಳೂರು ಮಹಾನಗರ ಹಾಗೂ ಸುತ್ತಯಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಹಾಗೂ ಭಾನುವಾರ ಹಗುರ ಮಳೆಯಾಗಬಹುದು.
ಮುಂದಿನ 24 ಗಂಟೆಗಳಲ್ಲಿ ಅಂದರೆ ಭಾನುವಾರ ಬೆಳಿಗ್ಗೆವರೆಗೂ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಹಗುರವಾಗಿ ಮಳೆಯಾಗುವ ಸಾಧ್ಯತೆಯೂ ಬಹಳಷ್ಟಿದೆ. ಕೆಲವು ಭಾಗಗಳಲ್ಲಿ ಮುಂಜಾನೆ ಹೊತ್ತಿನಲ್ಲಿ ಮಂಜು ಮುಸುಕುವ ಸಾಧ್ಯತೆಗಳಿವೆ. ಬೆಂಗಳೂರಿನ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಬಹುದು.
ಭಾನುವಾರದಿಂದ ಸೋಮವಾರದ ಬೆಳಿಗನವರೆಗೂ ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಮೋಡ ಕವಿದ ವಾತಾವರವಣೂ ಇರಲಿದೆ. ಅಲ್ಲಲ್ಲಿ ಹಗುರವಾಗಿ ಮಳೆ ಸುರಿಯಬಹುದು. ಕೆಲವು ಕಡೆಗಳಲ್ಲಿ ಮಂಜಿನ ವಾತಾವರಣ ಬೆಳಗಿನ ಜಾವದ ಹೊತ್ತಿನಲ್ಲಿ ಕಾಣ ಸಿಗಲಿದೆ. ಗರಿಷ್ಠ ಉಷ್ಣಾಂಶದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಗರಿಷ್ಠ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ಮುನ್ಸೂಚನೆ ನೀಡಿದೆ.