ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಬಳ್ಳಾರಿ ಸಹಿತ 11 ಜಿಲ್ಲೆಗಳಲ್ಲಿ ಇಂದು ಗುಡುಗು ಭಾರೀ ಮಳೆ ಮುನ್ಸೂಚನೆ, ಬೆಂಗಳೂರಿನಲ್ಲೂ ಉಂಟು ಮಳೆ
ಕರ್ನಾಟಕದಲ್ಲಿ ಪೂರ್ವ ಮುಂಗಾರಿನ ಅಬ್ಬರ ಜೋರಾಗಿಯೇ ಇದೆ. ಮಂಗಳವಾರ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಬುಧವಾರವೂ ಹನ್ನೊಂದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು: ಬೆಂಗಳೂರು,ಮೈಸೂರು, ಬೆಳಗಾವಿ, ವಿಜಯಪುರ, ಧಾರವಾಡ, ಬಳ್ಳಾರಿ, ಚಿಕ್ಕಮಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮಂಗಳವಾರವೂ ಭಾರೀ ಮಳೆಯಾಗಿದ್ದು, ಬುಧವಾರವೂ ಕರ್ನಾಟಕದ ಹನ್ನೊಂದು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇದಲ್ಲದೇ ಇನ್ನೂ ಏಳೆಂಟು ಜಿಲ್ಲೆಗಳಲ್ಲಿ ಗುಡುಗು ಮಿಶ್ರಿತ ಸಾಧಾರಣ ಮಳೆ ಆಗಬಹುದು ಎನ್ನುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿದೆ. ಗುಡುಗು ಹಾಗು ಮಿಂಚು ಸಹಿತ ಮಳೆಯಿಂದ ಅನಾಹುತಗಳು ಸಂಭವಿಸಿದೆ. ಮುಂದಿನ ನಾಲ್ಕೈದು ದಿನವೂ ಗುಡುಗು ಸಹಿತ ಮಳೆ ಹಲವು ಜಿಲ್ಲೆಗಳಲ್ಲಿ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆಗಳನ್ನು ನೀಡಲಾಗಿದೆ. ಬೆಂಗಳೂರು ನಗರದಲ್ಲೂ ಮಂಗಳವಾರ ರಾತ್ರಿ ಬಹು ಹೊತ್ತಿನವರೆಗೂ ಮಳೆಯಾಗಿದ್ದು, ಬುಧವಾರವೂ ಸಾಧಾರಣ ಮಳೆ ಗುಡುಗು ಸಹಿತ ಆಗಬಹುದು ಎನ್ನುವ ಸೂಚನೆಗಳಿವೆ.
ಹೇಗಿದೆ ಬುಧವಾರದ ಹವಾಮಾನ
ಮೇ 14ರ ಬುಧವಾರದಂದು ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡದ ಒಂದು ಅಥವಾ ಎರಡು ಕಡೆಗಳಲ್ಲಿ ಭಾರೀ ಮಳೆ ಗುಡುಗು ಸಹಿತ ಆಗಲಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ಗುಡುಗು ಕೂಡ ಇರಲಿದೆ.
ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳ ಗುಡುಗು ಸಹಿತ ಆಗುವ ಮುನ್ಸೂಚನೆಯಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆ ಗುಡುಗು ಸಹಿತ ಇರಲಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆಗಳಲ್ಲಿ ಭಾರೀ ಮಳೆಯಾಗಲಿದೆ. ಗಾಳಿಯ ವಾತಾವರಣವೂ ಜೋರಾಗಿ ಇರಲಿದ್ದು, ಗುಡುಗು ಕೂಡ ಕಾಣಿಸಿಕೊಳ್ಳಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಕೊಡಗು,ಕೋಲಾರ,ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಾಳಿಯದ ವೇಗದ ಪ್ರಮಾಣವೂ ಹೆಚ್ಚಿರಲಿದೆ.
ಮಳೆ ಎಲ್ಲೆಲ್ಲಿ ಆಗಿದೆ
ಸೋಮವಾರ ಹಾಗೂ ಮಂಗಳವಾರವೂ ಕರ್ನಾಟಕದ ಹಲವು ಭಾಗದಲ್ಲಿ ಭಾರೀ ಮಳೆಯಾಗಿದೆ.
ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಜಯಪುರ, ತುಮಕೂರಿನ ವೈ.ಎನ್.ಹೊಸಕೋಟೆ, ಕಿಬ್ಬನಹಳ್ಳಿ, ಸಿರಾ, ತಿಪಟೂರು, ಬಾಗಲಕೋಟೆ ಜಿಲ್ಲೆಯ ಹುನಗುಂದ, ಮಂಡ್ಯ ಜಿಲ್ಲೆ ಮದ್ದೂರು, ನಾಗಮಂಗಲ, ಕೆಆರ್‌ಪೇಟೆ, ಬೆಳ್ಳೂರು, ಮಳವಳ್ಳಿ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಬೇಲೂರು, ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟ, ಚಿತ್ರದುರ್ಗ, ಹುಬ್ಬಳ್ಳಿ ನಗರ, ದಾವಣಗೆರೆ ಜಿಲ್ಲೆ ಚನ್ನಗಿರಿ, ಬೆಳಗಾವಿ ಜಿಲ್ಲೆ ಖಾನಾಪುರ, ಕಲಬುರಗಿ ಜಿಲ್ಲೆಯ ಅಫ್ಜಲ್‌ಪುರ್, ಜೇವರ್ಗಿ, ಗುರುಮಿಠಕಲ್, ಚಿಂಚೋಳಿ, ರಾಯಚೂರು ಜಿಲ್ಲೆಯ ಕುರ್ಡಿ, ಉತ್ತರ ಕನ್ನಡ ಜಿಲ್ಲೆಯ ಮಂಚಿ, ಕುಮಟಾ, ಕ್ಯಾಸಲ್‌ರಾಕ್, ಹೊನ್ನಾವರ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಹಾವೇರಿ ಜಿಲ್ಲೆ ಶಿಗ್ಗಾಂವ್,ಬೆಳಗಾವಿ ಜಿಲ್ಲೆಯ ಸಂಕೇಶ್ವರ, ಹಿಡಕಲ್, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಳೆಯಾಗಿದೆ.
ಬೆಂಗಳೂರು ಹವಾಮಾನ
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಸಂಜೆಯ ಹೊತ್ತಿಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಬುಧವಾರ ಹಾಗೂ ಗುರುವಾರ ಸಾಧಾರಣ ಮಳೆಯಾಗಲಿದೆ. ಗುಡುಗು ಕೂಡ ಇರಲಿದೆ. ಬಿರುಗಾಳಿಯೂ ಕೆಲವು ಕಡೆಗಳಲ್ಲಿ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ತನ್ನ ವರದಿಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಎರಡೂ ದಿನವೂ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶವು 21 ಡಿಗ್ರಿ ಸೆಲ್ಸಿಯಸ್ ಇರಲಿದೆ.