Karnataka Rains: ಕರಾವಳಿ, ಬೆಂಗಳೂರು, ಮೈಸೂರು ಭಾಗದಲ್ಲಿ ಇಂದೂ ಭಾರೀ ಮಳೆ, ಈ 12 ಜಿಲ್ಲೆಗಳಲ್ಲಿ ಅಲರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಕರಾವಳಿ, ಬೆಂಗಳೂರು, ಮೈಸೂರು ಭಾಗದಲ್ಲಿ ಇಂದೂ ಭಾರೀ ಮಳೆ, ಈ 12 ಜಿಲ್ಲೆಗಳಲ್ಲಿ ಅಲರ್ಟ್‌

Karnataka Rains: ಕರಾವಳಿ, ಬೆಂಗಳೂರು, ಮೈಸೂರು ಭಾಗದಲ್ಲಿ ಇಂದೂ ಭಾರೀ ಮಳೆ, ಈ 12 ಜಿಲ್ಲೆಗಳಲ್ಲಿ ಅಲರ್ಟ್‌

Karnataka Rains ಕರ್ನಾಟಕದ ಹನ್ನೆರಡು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಹನ್ನೆರಡು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಕೂಡ ನೀಡಲಾಗಿದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆಯ ವಾತಾವರಣ ಮುಂದುವರಿದಿದೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆಯ ವಾತಾವರಣ ಮುಂದುವರಿದಿದೆ.

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರವೂ ಮಳೆಯ ಅಬ್ಬರ ಜೋರಾಗಿಯೇ ಇರಲಿದೆ. ಸತತ ವಾರದಿಂದ ಭಾರೀ ಮಳೆಯಾಗುತ್ತಿರುವ ಕೆಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕೈದು ದಿನ ಮಳೆಯಾಗುವ ಸೂಚನೆಯಿದೆ. ಉತ್ತರ ಕರ್ನಾಟಕ, ಕರಾವಳಿ, ಹಳೆ ಮೈಸೂರು, ಬೆಂಗಳೂರು ಭಾಗದಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಮುನ್ನೆಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ನೀಡಿದೆ. ಒಟ್ಟು 12 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಅನ್ನು ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ, ಬೆಳಗಾವಿ, ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು, ಮಂಡ್ಯ, ರಾಮನಗರ ಸಹಿತ ಹಲವು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಮಂಗಳವಾರವು ಕೆಲವು ಭಾಗಗಳಲ್ಲಿ ಮಳೆಯಾಗಿದ್ದು, ಅಲ್ಲಲ್ಲಿ ಅನಾಹುತಗಳೂ ನಡೆದಿವೆ. ಭಾರೀ ಮಳೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ಶಾಲೆಗಳಿಗೆ ರಜೆ ನೀಡಲಾಗಿದೆ.

ಎಲ್ಲೆಲ್ಲಿ ಮಳೆಯಿದೆ

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ. ಗುಡುಗು ಸಹಿತ ಮಳೆಯೂ ಇರಲಿದೆ.

ಉತ್ತರ ಕರ್ನಾಟಕದ ಬೆಳಗಾವಿ. ಧಾರವಾಡ, ಹಾವೇರಿ ಜಿಲ್ಲೆಗಳಲ್ಲೂ ಭಾರೀ ಮಳೆ ಸುರಿಯಲಿದೆ. ಮಲೆನಾಡಿನ ಹಾಸನ, ಕೊಡಗು, ಬೆಂಗಳೂರು ಭಾಗದ ರಾಮನಗರ, ತುಮಕೂರು, ಮಧ್ಯ ಕರ್ನಾಟಕದ ಚಿತ್ರದುರ್ಗ, ಹಳೆ ಮೈಸೂರು ಭಾಗದ ಮಂಡ್ಯ, ಮೈಸೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.

ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಘಬಹುದು. ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗುರುವಾರ ಹಾಗೂ ಶುಕ್ರವಾರವೂ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾದರೆ, ಇತರೆ ಭಾಗದಲ್ಲೂ ಸಾಧಾರಣ ಮಳೆಯಾಗಬಹುದು.

ಎಲ್ಲೆಲ್ಲಿ ಮಳೆಯಾಗಿದೆ

ಕರ್ನಾಟಕದಲ್ಲಿ ಮಂಗಳವಾರವೂ ಭಾರೀ ಮಳೆಯಾಗಿದೆ. ಅತಿ ಹೆಚ್ಚು ಮಳೆ ದಾಖಲಾಗಿರುವುದು ಬೆಂಗಳೂರಿನಲ್ಲಿ. 14 ಸೆ.ಮೀನಷ್ಟು ಮಳೆ ಕರ್ನಾಟಕ ವಿಪತ್ತು ನಿರ್ವಹಣಾ ಘಟಕದ ಭಾಗದಲ್ಲಿ ದಾಖಲಾಗಿದೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿ 13 ಸೆ. ಮೀ ಮಳೆ ಸುರಿದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ 8 ಸೆ. ಮೀ ಮಳೆಯಾಗಿದೆ. ಬೀದರ್‌ ಜಿಲ್ಲೆಯ ಚಿಟಗುಪ್ಪ. ಗದಗ, ಚಿಕ್ಕಬಳ್ಳಾಪುರದಲ್ಲಿ 6 ಸೆ.ಮೀ, ಬಾಗಲಕೋಟೆ ಜಿಲ್ಲೆ ಲೋಕಾಪುರ, ತುಮಕೂರು ಜಿಲ್ಲೆ ಶಿರಾ, ಚಿಕ್ಕಮಗಳೂರು, ಕೋಲಾರ, ಮಂಡ್ಯ ಜಿಲ್ಲೆ ಕೆಆರ್‌ಪೇಟೆ, ಚಿತ್ರದುರ್ಗ ಜಿಲ್ಲೆಯ ಪರುಶುರಾಂಪುರದಲ್ಲಿ ಐದು ಸೆ.ಮೀ ಮಳೆ ಸುರಿದಿದೆ. ವಿಜಯನಗರ ಜಿಲ್ಲೆ ಹಡಗಲಿ, ಹಗರಿಬೊಮ್ಮನಹಳ್ಳಿ, ರಾಮನಗರ ಜಿಲ್ಲೆ ಮಾಗಡಿ, ಕನಕಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ಹೊಸಕೋಟೆ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಬೀದರ್‌ ಜಿಲ್ಲೆಯ ಮನ್ನಳ್ಳಿ, ಬೀದರ್‌, ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಸುತಗಟ್ಟಿ, ಗೋಕಾಕ್‌, ರಾಯಬಾಗ, ಬೈಲಹೊಂಗಲ, ಸಂಕೇಶ್ವರ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ, ಯಲ್ಲಾಪುರ, ಕಿರವತ್ತಿ, ಸಿದ್ದಾಪುರ, ಹುಬ್ಬಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿ ಬಿದನೂರು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ತರೀಕೆರೆ, ಅಜ್ಜಂಪುರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ದಾವಣಗೆರೆ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಹಾವೇರಿ ಜಿಲ್ಲೆಯ ಹಿರೇಕೆರೂರು, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ, ಕೊಡಗಿನ ಭಾಗಮಂಡಲ, ಕೋಲಾರದ ರಾಯಲ್ಪಾಡುವಿನಲ್ಲಿ ಮಳೆಯಾಗಿದೆ.