Karnataka Rains: ಬೆಂಗಳೂರು ಸಹಿತ ಕರ್ನಾಟಕದಲ್ಲಿ ಗೌರಿ ಹಬ್ಬಕ್ಕೆ ಮಳೆ ಬಿಡುವು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಭಾರೀ ಮಳೆ ಮುನ್ಸೂಚನೆ
Bangalore Rains ಬೆಂಗಳೂರು ನಗರ ಸಹಿತ ಬಹುತೇಕ ಕಡೆಗಳಲ್ಲಿ ಶುಕ್ರವಾರ ಮಳೆ ಸಾಧ್ಯತೆ ಕಡಿಮೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಭಾರೀ ಮಳೆ ಮುನ್ಸೂಚನೆ ಇದೆ.
ಬೆಂಗಳೂರು: ಕರ್ನಾಟಕದಲ್ಲಿ ಗೌರಿ ಹಬ್ಬಕ್ಕೆ ಮಳೆರಾಯ ಬಿಡುವು ಕೊಡಲಿದ್ಧಾನೆ. ಒಂದು ಜಿಲ್ಲೆ ಹೊರತುಪಡಿಸಿದರೆ ಶುಕ್ರವಾರದ ಗೌರಿ ಹಬ್ಬಕ್ಕೆ ಕರ್ನಾಟಕದಲ್ಲಿ ಮಳೆ( Karnataka Rains) ಪ್ರಮಾಣ ಕಡಿಮೆ ಇರಲಿದೆ. ಬೆಂಗಳೂರು, ಮೈಸೂರು, ದಾವಣಗೆರೆ, ಕಲಬುರಗಿ, ಶಿವಮೊಗ್ಗ, ಮಂಗಳೂರು, ತುಮಕೂರು, ವಿಜಯಪುರ ಸೇರಿದಂತೆ ಕೆಲವು ಕಡೆಗಳಲ್ಲಿ ಹಗುರ ಮಳೆಯಾಗಬಹುದು. ಅದನ್ನು ಬಿಟ್ಟರೆ ಕಡೆಗಳಲ್ಲಿ ಮಳೆ ಇರುವುದಿಲ್ಲ. ಆದರೆ ಈಗಾಗಲೇ ನಿರಂತರವಾಗಿ ಮಳೆಯಾಗುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಭಾರೀ ಮಳೆಯಾಗಲಿದೆ. ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದೆ. ಇದರಿಂದ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು( IMD Bangalore Center) ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಮಳೆ ಹೇಗಿದೆ
ಶುಕ್ರವಾರದಂದು ಉತ್ತರ ಕನ್ನಡ ಜಿಲ್ಲೆಯ ಒಂದು ಅಥವಾ ಎರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳು ಅಧಿಕವಾಗಿವೆ.
ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲೂ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎನ್ನುವ ಸೂಚನೆಯಿದೆ. ಈ ಭಾಗದಲ್ಲಿ ಗಾಳಿಯ ವೇಗವು ಅಧಿಕವಾಗಿರಲಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ಹವಾಮಾನ
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣವೇ ಇರಲಿದೆ.
ಅಲ್ಲಲ್ಲಿ ಹಗುರವಾಗಿ ಮಳೆಯಾಗುವ ಸಾಧ್ಯತೆಗಳು ಹೆಚ್ಚು. ಬೆಂಗಳೂರಿನ ಗರಿಷ್ಠ ಹಾಗೂ ಕನಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಹಾಗೂ 21 ಡಿಗ್ರಿ ಸೆಲ್ಸಿಯಸ್ ನಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ. ಉಳಿದಂತೆ ಬೆಂಗಳೂರು ಭಾಗಕ್ಕೆ ಮಳೆಯ ಆತಂಕವಿಲ್ಲ.
ಉತ್ತಮ ಮಳೆ
ಕರ್ನಾಟಕದ ನಾನಾ ಭಾಗಗಳಲ್ಲಿ ಗುರುವಾರವೂ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಅತ್ಯಧಿಕ 6 ಸೆ.ಮೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿಯೂ ಮಳೆ ಸುರಿದ ವರದಿಯಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ, ಸಿದ್ದಾಪುರ, ಕೋಟ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಮಂಗಳೂರು ವಿಮಾನ ನಿಲ್ದಾಣ, ಉಪ್ಪಿನಂಗಡಿ, ಪಣಂಬೂರು, ಮೂಲ್ಕಿ, ಪುತ್ತೂರು, ಮಂಗಳೂರು ನಗರದಲ್ಲೂ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ, ಕದ್ರಾ, ಮಂಕಿ, ಹೊನ್ನಾವರ, ಕ್ಯಾಸಲ್ ರಾಕ್, ಜಗಲ್‌ಬೆಟ್, ಜೋಯಿಡಾ, ಶಿರಾಲಿ, ಬೀದರ್ ಜಿಲ್ಲೆಯ ಔರಾದ್, ಯಾದಗಿರಿ ಜಿಲ್ಲೆಯ ಶಹಾಪುರ, ಚಿಕ್ಕಮಗಳೂರು ಜಿಲ್ಲೆಯ ಜಯಪುರ, ಕಮ್ಮರಡಿ, ಬಾಳೆಹೊನ್ನೂರು, ಕೊಪ್ಪ, ಕಳಸ, ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ, ಬೆಳಗಾವಿ ಜಿಲ್ಲೆಯ ಲೋಂಡಾ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಕೊಡಗಿನ ಸೋಮವಾರಪೇಟೆ, ಭಾಗಮಂಡಲದಲ್ಲಿ ಮಳೆಯಾಗಿದೆ.