ಕರ್ನಾಟಕ ಹವಾಮಾನ: ಬಾಗಲಕೋಟೆ, ಹಾವೇರಿ, ಹಿರಿಯೂರು ಸುತ್ತಮುತ್ತ ಕನಿಷ್ಠ ತಾಪಮಾನ, ವಿವಿಧೆಡೆ ಚಳಿಗೆ ನಡುಗಿದ ಜನ, ಬೆಂಗಳೂರಲ್ಲಿ ಸಹಜ ಚಳಿ
Weather Update: ಕರ್ನಾಟಕದಲ್ಲಿ ಇಂದು (ಜನವರಿ 2) ಚಳಿಗಾಲದ ಸಹಜ ಚಳಿ ಮತ್ತು ಒಣ ಹವೆ ಇರಲಿದೆ. ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ, ಬಾಗಲಕೋಟೆ, ಹಾವೇರಿ, ಹಿರಿಯೂರು ಸುತ್ತಮುತ್ತ ಕನಿಷ್ಠ ತಾಪಮಾನ ದಾಖಲಾಗಿದ್ದು, ವಿವಿಧೆಡೆ ಚಳಿಗೆ ಜನ ನಡುಕ ಅನುಭವಿಸಿದ್ದಾರೆ. ಬೆಂಗಳೂರಲ್ಲಿ ಸಹಜ ಚಳಿ, ಮುಂಜಾನೆ ಮಂಜು ನಿರೀಕ್ಷಿಸಬಹುದು.
Weather Update: ಕರ್ನಾಟಕದ ಹವಾಮಾನದಲ್ಲಿ ಇಂದು (ಜನವರಿ 2) ಹೆಚ್ಚೇನೂ ಬದಲಾವಣೆ ಇಲ್ಲ. ಕರ್ನಾಟಕದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿ ವಿವಿಧೆಡೆ ಚಳಿಗಾಲದ ಚಳಿ, ಮುಂಜಾನೆ ಮಂಜು, ಇಬ್ಬನಿ ಕಾಣಬಹುದು. ರಾಜ್ಯ ರಾಜಧಾನಿ ಬೆಂಗಳೂರು ಸುತ್ತಮುತ್ತ ಕೂಡ ಸಹಜ ಚಳಿ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಶಿಯಸ್ ಇರಬಹುದು. ಜನವರಿ 4ರ ತನಕ ಇದೇ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಕರ್ನಾಟಕ ಹವಾಮಾನ ವರದಿ ಪ್ರಕಾರ, ಬಾಗಲಕೋಟೆ, ಹಾವೇರಿ, ಹಿರಿಯೂರು ಸುತ್ತಮುತ್ತ ಕನಿಷ್ಠ ತಾಪಮಾನ ದಾಖಲಾಗಿದೆ. ವಿವಿಧೆಡೆ ಚಳಿಗೆ ಜನ ನಡುಕ ಅನುಭವಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ ನಿನ್ನೆ (ಜನವರಿ 1) ಅಪರಾಹ್ನ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಕರ್ನಾಟಕದಲ್ಲಿ ಸದ್ಯ ಚಳಿ ಮತ್ತು ಒಣಹವೆ ಮುಂದುವರಿಯಲಿದೆ. ಕೆಲವು ಕಡೆ ದಟ್ಟ ಮಂಜು ಮುಸುಕಿದ ವಾತಾವರಣ ಮತ್ತು ಚಳಿಯ ವಾತಾವರಣ ಹೆಚ್ಚು ಕಂಡುಬರಲಿದೆ.
ಬೆಂಗಳೂರು ಹವಾಮಾನ ಇಂದು (ಜನವರಿ 2, 2025)
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ಚಳಿ ಮತ್ತು ಒಣಹವೆ ಇರಲಿದೆ. ಮುಂಜಾನೆ ಮಂಜು ಕವಿದ ವಾತಾವರಣ ಇರಲಿದೆ. ಗ್ರಾಮಾಂತರ ಭಾಗದಲ್ಲಿ, ಜಲಾಶಯಗಳಿರುವಲ್ಲಿ ಸ್ವಲ್ಪ ದಟ್ಟ ಮಂಜು, ಇಬ್ಬನಿ ಕಾಡಬಹುದು. ಚಳಿಯೂ ಹೆಚ್ಚು ಕಾಡಬಹುದು. ಉಳಿದಂತೆ ಎಲ್ಲಡೆ ಚಳಿಗಾಲದ ಸಹಜ ವಾತಾವರಣ ಇರಲಿದೆ. ಎರಡೂ ಜಿಲ್ಲೆಗಳಲ್ಲಿ ಇಂದು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ಹಾಗೂ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕಮ್ ತಿಳಿಸಿದ್ದಾರೆ.
ಹೊಸ ವರ್ಷದ ಮುನ್ನಾ ದಿನವಾದ ನಿನ್ನೆ (ಜನವರಿ 1) ಬೆಂಗಳೂರು ನಗರದಲ್ಲಿ ರಾತ್ರಿ ಚಳಿ ಇದ್ದರೂ, ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮ ಹೆಚ್ಚಿತ್ತು. ನಿನ್ನೆ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 16.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಗರಿಷ್ಠ ತಾಪಮಾನ 29.3 ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ತಾಪಮಾನ ಮತ್ತು ಆರ್ದ್ರತಾ ಮಟ್ಟ ಬೆಳಗ್ಗೆ 6 ಗಂಟೆಗೆ
ಬೆಂಗಳೂರು ನಗರ - ಕನಿಷ್ಠ ತಾಪಮಾನ 18.4 ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತಾ ಮಟ್ಟ 90%
ಮಂಗಳೂರು - ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತಾ ಮಟ್ಟ 61%
ಚಿತ್ರದುರ್ಗ - ಕನಿಷ್ಠ ತಾಪಮಾನ 25.6 ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತಾ ಮಟ್ಟ 48%
ಗದಗ - ಕನಿಷ್ಠ ತಾಪಮಾನ 17.2 ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತಾ ಮಟ್ಟ 79%
ಹೊನ್ನಾವರ - ಕನಿಷ್ಠ ತಾಪಮಾನ 23.6 ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತಾ ಮಟ್ಟ 75%
ಕಲಬುರಗಿ - ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತಾ ಮಟ್ಟ 77%
ಬೆಳಗಾವಿ - ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತಾ ಮಟ್ಟ 60%
ಕಾರವಾರ - ಕನಿಷ್ಠ ತಾಪಮಾನ 31.2 ಡಿಗ್ರಿ ಸೆಲ್ಶಿಯಸ್ ಮತ್ತು ಆರ್ದ್ರತಾ ಮಟ್ಟ 61%
ಕರ್ನಾಟಕ ಹವಾಮಾನ ಇಂದು (ಜನವರಿ 2, 2025)
ಕರ್ನಾಟಕದ ಉದ್ದಗಲಕ್ಕೂ ಇಂದು (ಜನವರಿ 2) ಚಳಿಗಾಲ ಮತ್ತು ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನಿನ್ನೆ (ಜನವರಿ 1) ಅಪರಾಹ್ನ ಬಿಡುಗಡೆ ಮಾಡಿರುವ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. ಕರಾವಳಿಯಲ್ಲಿ ಹೆಚ್ಚಿನ ಚಳಿ ಇಲ್ಲದೇ ಇದ್ದರೂ, ಒಣ ಹವೆ ಇರಲಿದೆ.
ಇದರಂತೆ, ಜನವರಿ 4 ರ ತನಕ ಕರ್ನಾಟಕದ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಇರಲಿದೆ. ಇಬ್ಬನಿ ಹಾಗೂ ಚಳಿಯ ವಾತಾವರಣ ಕಾಡಲಿದೆ. ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬರಲಾರದು. ಅದೇ ರೀತಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಜನವರಿ 4 ರ ತನಕ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮಂಜು ಮತ್ತು ಇಬ್ಬನಿ ಬೀಳುವ ಸಾಧ್ಯತೆ ಇದೆ. ಉಳಿದಂತೆ ಒಣಹವೆ ಮುಂದುವರಿಯಲಿದೆ. ಕನಿಷ್ಠ ತಾಪಮಾನದಲ್ಲೂ ಹೆಚ್ಚಿನ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.