Karnataka Weather: ಕಾದ ಕಾವಲಿಯಂತಾದ ಕಲುಬರಗಿ, 41.2 ಗರಿಷ್ಠ ಉಷ್ಣಾಂಶ ದಾಖಲು; ವಾರಾಂತ್ಯಕ್ಕೆ ಬೆಂಗಳೂರು ಭಾಗದಲ್ಲಿ ಮಳೆಯುಂಟು
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಕಾದ ಕಾವಲಿಯಂತಾದ ಕಲುಬರಗಿ, 41.2 ಗರಿಷ್ಠ ಉಷ್ಣಾಂಶ ದಾಖಲು; ವಾರಾಂತ್ಯಕ್ಕೆ ಬೆಂಗಳೂರು ಭಾಗದಲ್ಲಿ ಮಳೆಯುಂಟು

Karnataka Weather: ಕಾದ ಕಾವಲಿಯಂತಾದ ಕಲುಬರಗಿ, 41.2 ಗರಿಷ್ಠ ಉಷ್ಣಾಂಶ ದಾಖಲು; ವಾರಾಂತ್ಯಕ್ಕೆ ಬೆಂಗಳೂರು ಭಾಗದಲ್ಲಿ ಮಳೆಯುಂಟು

Karnataka Weather: ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. ಕಲಬುರಗಿ ಭಾಗದಲ್ಲಂತೂ ಉಷ್ಣಾಂಶದ ಪ್ರಮಾಣ 41 ಡಿಗ್ರಿ ಸೆಲ್ಸಿಯಸ್‌ ಅನ್ನೂ ದಾಟಿದೆ.

ಕಲಬುರಗಿ ಭಾಗದಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ಕಲಬುರಗಿ ಭಾಗದಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

Karnataka Weather: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ಬಿಸಿಲಿನ ಬೇಗೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಈಗಾಗಲೇ ಕಲಬುರಗಿ ಹಾಗೂ ಆ ಭಾಗದಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 41.2 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಕಲಬುರಗಿ ಭಾಗದಲ್ಲಿ ಸತತ ಒಂದೂವರೆ ತಿಂಗಳಿನಿಂದ ಉಷ್ಣಾಂಶದ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಲೇ ಇದ್ದು, ಮಾರ್ಚ್‌ ಮೂರನೇ ವಾರದಲ್ಲಿಯೇ ಕಾದ ಕಾವಲಿಯಂತಹ ಸನ್ನಿವೇಶವನ್ನು ಸೃಷ್ಟಿಸಿದೆ. ಇದಲ್ಲದೇ ಉತ್ತರ ಕರ್ನಾಟಕದ ಬೀದರ್‌, ರಾಯಚೂರು, ಬಾಗಲಕೋಟೆ, ಗದಗ ಸಹಿತ ಹಲವು ಜಿಲ್ಲೆಗಳಲ್ಲೂ ಉಷ್ಣಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೆ ದಕ್ಷಿಣ ಕರ್ನಾಟಕ ಹಾಗೂ ಬೆಂಗಳೂರು ಭಾಗದಲ್ಲಿ ಈ ವಾರಾಂತ್ಯದಲ್ಲಿ ಮೂರು ದಿನ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರ ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲೆಲ್ಲಿ ಹೇಗಿದೆ ಉಷ್ಣಾಂಶ

ಕರ್ನಾಟಕದ ಬೆಳಗಾವಿ, ಧಾರವಾಡ. ಗದಗ, ಹಾವೇರಿ ಹಾಗೂ ಕೊಪ್ಪಳದಲ್ಲಿ 35 ರಿಂದ 37 ಡಿಗ್ರಿ ಸೆಲ್ಸಿಯಸ್‌, ಬೀದರ್‌, ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ ಭಾಗದಲ್ಲಿ 38 ರಿಂದ 41 ಡಿಗ್ರಿ ಸೆಲ್ಸಿಯಸ್‌, ದಕ್ಷಿಣ ಕರ್ನಾಟಕದ ಆಗುಂಬೆ, ಹಾಸನ, ಮಡಿಕೇರಿ, ಚಿಕ್ಕಮಗಳೂರು ಭಾಗದಲ್ಲಿ 31 ರಿಂದ 34 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಚಿಂತಾಮಣಿ, ಮಂಡ್ಯ, ಮೈಸೂರು ಹಾಗೂ ಶಿವಮೊಗ್ಗದಲ್ಲಿ 35 ರಿಂದ 37 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಕರ್ನಾಟಕದ ಧಾರವಾಡದಲ್ಲಿ ಮಾತ್ರ ಉಷ್ಣಾಂಶ ಇಳಿಕೆಯಾಗಿದ್ದರೆ, ಉಳಿದೆಡೆ ಭಾರೀ ಬದಲಾವಣೆ ಏನೂ ಆಗಿಲ್ಲ. ಆದರೆ ಕಲಬುರಗಿ, ಬಾಗಲಕೋಟೆ, ಬೀದರ್‌, ಬೆಂಗಳೂರು ನಗರ ಸಹಿತ ಕೆಲವು ಕಡೆಗಳಲ್ಲಿ ಸಾಮಾನ್ಯ ಉಷ್ಣಾಂಶಕ್ಕಿಂತ ಕೊಂಚ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬುಧವಾರ ಕರ್ನಾಟಕದ ಕೆಲವು ಭಾಗದಲ್ಲಿ ಗಾಳಿಯ ವಾತಾವರಣ ಇರಲಿದೆ. ರಾಜ್ಯದಾದ್ಯಂತ ಒಣಹವೆಯ ವಾತಾವರಣವೇ ಮುಂದುವರಿಯಲಿದೆ.

ಮಳೆ ನಿರೀಕ್ಷೆ

ಆದರೆ ಮಾರ್ಚ್‌ 22ರ ಶನಿವಾರದಿಂದ ಮೂರು ದಿನ ಮಳೆಯಾಗುವ ಮುನ್ಸೂಚನೆಯಿದೆ. ಶನಿವಾರದದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಭಾಗದಲ್ಲಿ ಲಘುವಾಗಿ ಮಳೆಯಾಗಲಿದೆ. ಅದೇ ರೀತಿ ಭಾನುವಾರವೂ ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘುವಾಗಿ ಮಳೆಯಾಗುವ ಸೂಚನೆಯಿದೆ.

ಮಾರ್ಚ್‌ 24ರ ಸೋಮವಾರದಂದು ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಪ್ರತ್ಯೇಕ ಭಾಗಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ.

ಹಳೆ ಮೈಸೂರು ಭಾಗದಲ್ಲಿ ಸೋಮವಾರ ಹಾಗೂ ಮಂಗಳವಾರ ಅಲ್ಲಲ್ಲಿ ಮಳೆಯಾದ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟ, ಬಂಡೀಪುರ, ಮೈಸೂರು ಜಿಲ್ಲೆಯ ಎಚ್‌ಡಿಕೋಟೆ, ಹುಣಸೂರು, ಸರಗೂರು, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಉತ್ತಮ ಮಳೆಯಾಗಿದೆ.

ಬೆಂಗಳೂರು ಹವಾಮಾನ

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂದಿನ ಎರಡು ದಿನಗಳ ಕಾಲ ಸ್ಪಷ್ಟವಾದ ಆಕಾಶ ಇರಲಿದೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಬೆಂಗಳೂರು ಭಾಗದಲ್ಲಿ ಗರಿಷ್ಠ ಉಷ್ಣಾಂಶವು 35 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ ಉಷ್ಣಾಂಶವು 23 ಡಿಗ್ರಿ ಸೆಲ್ಸಿಯಸ್‌ ನಷ್ಟು ದಾಖಲಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ತಿಳಿಸಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner