ಕರ್ನಾಟಕ ಹವಾಮಾನ: ದಕ್ಷಿಣ ಕನ್ನಡ, ಮೈಸೂರು, ಕೊಡಗು ಸಹಿತ ಐದಾರು ಜಿಲ್ಲೆಗಳಲ್ಲಿ ಇಂದು ಮಳೆ; ಮುಂದಿನ ಐದು ದಿನ ಮಳೆ ಮುನ್ಸೂಚನೆ
ಕರ್ನಾಟಕದ ಹಲವು ಭಾಗಗಳಲ್ಲಿ ಬುಧವಾರವೂ ಮಳೆಯಾಗಿದ್ದರೆ, ಗುರುವಾರವೂ ಐದಾರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ನೀಡಿದೆ.

ಬೆಂಗಳೂರು: ಬೇಸಿಗೆಯ ಬಿರು ಬಿಸಿಲಿನ ನಡುವೆ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ ಸಹಿತ ಹಲವು ಭಾಗಗಳಲ್ಲಿ ಮಳೆಯಾಗಿದೆ. ಬುಧವಾರ ಸಂಜೆಯಂತೂ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದರೆ, ಗುರುವಾರವೂ ಐದಾರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಬೆಂಗಳೂರು ನಗರದಲ್ಲಂತೂ ಬುಧವಾರ ಸುರಿದ ಮಳೆಗೆ ಕೆಲ ಭಾಗದಲ್ಲಿ ಅಡಚಣೆಗಳೂ ಆದರೂ ಬಿಸಿಲಿನಿಂದ ಬಳಲಿದ ಜನರಿಗೆ ಮಳೆ ನಿರಾಳತೆಯನ್ನು ತಂದಿತು. ಗುಡುಗು ಸಿಡಿಲು ಸಹಿತ ಮಳೆಯೂ ಕೆಲವು ಜಿಲ್ಲೆಗಳಲ್ಲಿ ಆಗಬಹುದು. ಇಲ್ಲದೇ ಮುಂದಿನ ಐದು ದಿನಗಳವರೆಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕೇಂದ್ರವು ತನ್ನ ದೈನಂದಿನ ವರದಿಯಲ್ಲಿ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಬಿಸಿಲಿನ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯಿದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆಯೇ ಗುರುವಾರ ಕಂಡು ಬರಲಿದೆ.
ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಾಳಿಯ ಪ್ರಮಾಣವೂ ಅಧಿಕವಾಗಿರಲಿದ್ದು. ಗಾಳಿಯೊಂದಿಗೆ ಗುಡುಗು ಸಹಿತ ಮಳೆಯೂ ಆಗಬಹುದು. ಕೆಲವೆಡೆ ಬಿರುಗಾಳಿ ವಾತಾವರಣವೂ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
ಬೆಂಗಳೂರು ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಭಾಗದಲ್ಲಿ ಹಗುರ ಮಳೆಯಾಗಬಹುದು. ಉಷ್ಣಾಂಶದ ಪ್ರಮಾಣವೂ ಕ್ರಮವಾಗಿ ಗರಿಷ್ಠ ಹಾಗೂ ಕನಿಷ್ಠ 34 ಡಿಗ್ರಿ ಸೆಲ್ಸಿಯಸ್ ಹಾಗೂ 21 ಡಿಗ್ರಿ ಸೆಲ್ಸಿಯಸ್ ಇರಲಿದೆ
ಮುಂದಿನ ನಾಲ್ಕೈದು ದಿನಗಳ ಕಾಲ ಚಿಕ್ಕಮಗಳೂರು, ಕೊಡಗು, ಹಾಸನ , ಶಿವಮೊಗ್ಗ ಜಿಲ್ಲೆಗಳಲ್ಲಿ, ಉಡುಪಿ. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಮೂರು ದಿನ ಒಣ ಹವೆ ಇರಲಿದ್ದು, ಎರಡು ದಿನದ ನಂತರ ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೀದರ್, ಕೊಪ್ಪಳ,ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಭಾಗದಲ್ಲಿ ಮಳೆಯಾಗಬಹುದು ಎಂದು ತಿಳಿಸಲಾಗಿದೆ.
ಕರ್ನಾಟಕದಲ್ಲಿ ಬುಧವಾರವೂ ಕೆಲವು ಭಾಗಗಳಲ್ಲಿ ಮಳೆಯಾದ ವರದಿಯಾಗಿದೆ. ಹಾವೇರಿ ನಗರ, ಚಿತ್ರದುರ್ಗ, ಬಾಗಲಕೋಟೆ ಜಿಲ್ಲೆ ಇಳಕಲ್, ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಹಾಗೂ ತ್ಯಾಗರ್ತಿಯಲ್ಲೂ ಮಳೆಯಾಗಿದೆ.
ಬುಧವಾರದಂದ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಉಷ್ಣಾಂಶ ಪ್ರಮಾಣ ಹೆಚ್ಚಿತ್ತು. ಕರ್ನಾಟಕದ ಕರಾವಳಿ ಭಾಗದಲ್ಲಿ ಉಷ್ಣಾಂಶ ಪ್ರಮಾಣವು 34-36 ಡಿಗ್ರಿ ಸೆಲ್ಸಿಯಸ್ ಇತ್ತು.ಬೆಳಗಾವಿ, ಬಾಗಲಕೋಟೆ, ಧಾರವಾಡ,. ಗದಗ, ಹಾವೇರಿ ಹಾಗೂ ಕೊಪ್ಪಳ ಭಾಗದಲ್ಲಿ ಉಷ್ಣಾಂಶ ಪ್ರಮಾಣ 35-38 ಡಿಗ್ರಿ ಸೆಲ್ಸಿಯಸ್, ಬೀದರ್, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಭಾಗದಲ್ಲಿ 39 ರಿಂದ
41 ಡಿಗ್ರಿ ಸೆಲ್ಸಿಯಸ್ , ಬೆಂಗಳೂರು ನಗರ, ಎಚ್‌ಎಎಲ್ ವಿಮಾನ ನಿಲ್ದಾಣ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮಂಡ್ಯ ಭಾಗದಲ್ಲಿ 39 ರಿಂದ 41 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚಾಮರಾಜನಗರ,ದಾವಣಗೆರೆ, ಚಿತ್ರದುರ್ಗ, ಚಿಂತಾಮಣಿ, ಮೈಸೂರು ಭಾಗದಲ್ಲಿ ಉಷ್ಣಾಂಶವು 35-37 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.
ಕರಾವಳಿಯ ಕಾರವಾರದಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚೇ ಇತ್ತು. ಉತ್ತರ ಒಳನಾಡಿನ ಕೊಪ್ಪಳದಲ್ಲಿ ಕಡಿಮೆ ಇತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.


