Karnataka Weather: ಕರ್ನಾಟಕದಲ್ಲೂ ದಾಟಿತು 45ಡಿಗ್ರಿ ಉಷ್ಣಾಂಶದ ಪ್ರಮಾಣ, ಉತ್ತರದಲ್ಲಿ ರಣಬಿಸಿಲು, ರೆಡ್‌ ಅಲರ್ಟ್‌ ಘೋಷಣೆ-karnataka weather updates today north karnataka 4 districts temperature reaches 45 degree red alert announced kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ಕರ್ನಾಟಕದಲ್ಲೂ ದಾಟಿತು 45ಡಿಗ್ರಿ ಉಷ್ಣಾಂಶದ ಪ್ರಮಾಣ, ಉತ್ತರದಲ್ಲಿ ರಣಬಿಸಿಲು, ರೆಡ್‌ ಅಲರ್ಟ್‌ ಘೋಷಣೆ

Karnataka Weather: ಕರ್ನಾಟಕದಲ್ಲೂ ದಾಟಿತು 45ಡಿಗ್ರಿ ಉಷ್ಣಾಂಶದ ಪ್ರಮಾಣ, ಉತ್ತರದಲ್ಲಿ ರಣಬಿಸಿಲು, ರೆಡ್‌ ಅಲರ್ಟ್‌ ಘೋಷಣೆ

ಬೇಸಿಗೆಯ ಬಿಸಿಲ ಪ್ರಮಾಣ ಏರಿಕೆಯಾಗುತ್ತಲೇ ಇದೆ.ಕರ್ನಾಟಕದ ನಾಲ್ಕು ಕಡೆಗಳಲ್ಲಿ ಉಷ್ಣಾಂಶದ ಪ್ರಮಾಣ 45 ಡಿಗ್ರಿ ಸೆಲ್ಸಿಯಸ್‌ ದಾಟಿದೆ.

ಬಿಸಿಲ ನಡುವೆಯೇ ಬದುಕು.
ಬಿಸಿಲ ನಡುವೆಯೇ ಬದುಕು.

ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣ ದಾಖಲೆಯನ್ನು ಬರೆದಿದೆ. ಮೊದಲ ಬಾರಿಗೆ ಮೇ 1ರ ಬುಧವಾರ ನಾಲ್ಕು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 45 ಡಿಗ್ರಿ ಸೆಲ್ಸಿಯಸ್‌ ಅನ್ನು ದಾಟಿದೆ. ಈಗಾಗಲೇ ಕಲಬುರಗಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ಮೂರು ತಿಂಗಳಿನಿಂದ ಏರಿಕೆಯಾಗುತ್ತಲೇ ಇದೆ. 44 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದ ಉಷ್ಣಾಂಶದ ಪ್ರಮಾಣ ಈಗ ಅದನ್ನೂ ದಾಟಿದೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿರುವಂತೆಯೇ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದು ಜನ ತತ್ತರಿಸುವಂತೆ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ಹಲವು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಿದ್ದು ಬಿಸಿಲಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಬಾಗಲಕೋಟೆ ಜಿಲ್ಲೆಯ ಕರಡಿ ಗ್ರಾಮದಲ್ಲಿ 45.3 ಡಿಗ್ರಿ ಸೆಲ್ಸಿಯಸ್‌, ರಾಯಚೂರು ಜಿಲ್ಲೆಯ ಗಿಲ್ಲೆಸೂಗೂರಿನಲ್ಲಿ 45.2 ಡಿಗ್ರಿ ಸೆಲ್ಸಿಯಸ್‌, ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮದಲ್ಲಿ 45.1 ಡಿಗ್ರಿ ಸೆಲ್ಸಿಯಸ್‌ ಹಾಗೂ ವಿಜಯಪುರ ಜಿಲ್ಲೆಯ ಮುದ್ದೆ ಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿ 45 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶವು ದಾಖಲಾಗಿದೆ.

ಕಲಬುರಗಿ ನಗರದಲ್ಲಿ 42.8 ಡಿಗ್ರಿ ಸೆಲ್ಸಿಯಸ್‌,ರಾಯಚೂರಿನಲ್ಲಿ 42.4 ಡಿಗ್ರಿ ಸೆಲ್ಸಿಯಸ್‌ , ಬಾಗಲಕೋಟೆ ಹಾಗೂ ವಿಜಯಪುರ ನಗರದಲ್ಲಿ 42 ಡಿಗ್ರಿ ಸೆಲ್ಸಿಯಸ್‌, ಕೊಪ್ಪಳದಲ್ಲಿ 41.7 ಡಿಗ್ರಿ, ಗದಗ ಹಾಗೂ ದಾವಣಗೆರೆಯಲ್ಲಿ 40 ಡಿಗ್ರಿ ಸೆಲ್ಸಿಯಸ್‌, ಬೀದರ್‌ನಲ್ಲಿ 39.6 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿದೆ.

ರೆಡ್‌ ಅಲರ್ಟ್‌ ಘೋಷಣೆ

ಮುಂದಿನ ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಹಳೆ ಮೈಸೂರು, ಮಲೆನಾಡು ಭಾಗದಲ್ಲೂ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಬೀದರ್‌, ಕಲಬುರಗಿ, ಯಾದಗರಿ, ರಾಯಚೂರು, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ. ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು. ಕೋಲಾರ, ಬಳ್ಳಾರಿ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.

ಇದಲ್ಲದೇ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 4ರವರೆಗೆ ಬಿಸಿ ಹಾಗೂ ಆರ್ದ್ರ ಪರಿಸ್ಥಿತಿಗಳು ಮೇಲುಗೈ ಸಾಧಿಸಲಿವೆ. ಮುಂದಿನ ಐದು ದಿನಗಳವರೆಗೆ ಬಾಗಲಕೋಟೆ, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಬೆಚ್ಚನೆಯ ರಾತ್ರಿಯ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದ್ದು ಮುನ್ನೆಚ್ಚರಿಕೆ ಅನಿವಾರ್ಯ ಎಂದು ಹೇಳಲಾಗಿದೆ.

ಬಿಸಿಲಿನ ಹಿನ್ನೆಲೆಯಲ್ಲಿ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗಡೆ ಸಂಚರಿಸಬಾರದು. ಅನಿವಾರ್ಯ ಸ್ಥಿತಿಇದ್ದರೆ ಛತ್ರಿ ಬಳಸಿ ಇಲ್ಲವೇ ತಲೆಗೆ ಮೇಲೆ ಏನಾದರೂ ಬಳಸಿ ಬಿಸಿಲಿನಿಂದ ತಪ್ಪಿಸಿಕೊಳ್ಳಬೇಕು ಎಂದು ಸಲಹೆಯನ್ನು ನೀಡಲಾಗಿದೆ.

ಅಲ್ಲಲ್ಲಿ ಮಳೆ

ಬಿಸಿಲಿನ ನಡುವೆಯೂ ಕರ್ನಾಟಕದ ಹಲವು ಕಡೆ ಬುಧವಾರ ಮಧ್ಯಾಹ್ನ ಮಳೆಯಾಗಿದೆ. ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರವಾದ ಮಳೆಯಾದ ವರದಿಯಾಗಿದೆ.

ಮೇ 6 ಮತ್ತು 7ರಂದು ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸೂಚನೆಯಿದೆ. ಕೊಡಗು, ಮಂಡ್ಯ,ಮೈಸೂರು, ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಬಳ್ಳಾರಿ, ಚಿತ್ರದುರ್ಗ, ತುಮಕೂರು ಸಹಿತ ಹಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point