Forest News: ಮರಗಳ್ಳರಿಂದ ಏಟು ತಿಂದರೂ ಕಳ್ಳ ಸಾಗಣೆ ಮಟ್ಟ ಹಾಕಿ ಲೈಸೆನ್ಸ್ ರದ್ದುಗೊಳಿಸಲು ಶ್ರಮಿಸಿದ ಐಎಫ್‌ಎಸ್ ಜೋಡಿ
Forest News: ಕರ್ನಾಟಕದಲ್ಲಿ ಮರಗಳ್ಳತನವನ್ನು ತಡೆಯಲು ಶ್ರಮಿಸಿದ ಹಿರಿಯ ಐಎಫ್‌ಎಸ್ ಅಧಿಕಾರಿ ಎ.ಸಿ.ಲಕ್ಷ್ಮಣ ಅವರ ಅನುಭವ ಆತ್ಮಕಥನ ವನವೆಲ್ಲ ಕಲ್ಪತರು ಕೃತಿಯಲ್ಲಿ ದಾಖಲಾಗಿದೆ.

Forest News:ಕರ್ನಾಟಕದಲ್ಲಿ ಮರಕಳ್ಳಸಾಗಣೆ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ಜತೆಗೆ ಮರಗಳ್ಳರು ಗುಂಡೇಟು ಹಾರಿಸುವುದು ಗಾಯಗೊಳ್ಳುವುದು ಆಗಾಗ ನಡೆಯುತ್ತಲೇ ಇರುತ್ತದೆ. ಈಗ ಈ ಪ್ರಮಾಣ ಕಡಿಮೆಯಾಗಿದ್ದರೂ ಆಗಾಗ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ನಾಲ್ಕೈದು ದಶಕಗಳ ಹಿಂದೆ ಮರಗಳ್ಳತನ ಮಿತಿ ಮೀರಿತ್ತು. ಉರುವಲಿಗಾಗಿ ಕರ್ನಾಟಕ ಅರಣ್ಯ ಇಲಾಖೆಯೇ ಇಂತದೊಂದು ಅವಕಾಶವನ್ನು ಜನರಿಗೆ ಮಾಡಿಕೊಟ್ಟಿತ್ತು. ಆದರೆ ಜನಕ್ಕಿಂತ ಮರಗಳ್ಳರ ಉಪಟಳವೇ ಜೋರಾಗಿತ್ತು. ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರದಲ್ಲಿ ಹೀಗೆ ಮರಗಳ್ಳತನದ ಪ್ರಕರಣಗಳು, ಇಲಾಖೆ ಹಾಗೂ ಜನರ ನಡುವೆ ಸಂಘರ್ಷ ಇದ್ದೇ ಇರುತ್ತಿತ್ತು. ಆಗ ಚಾಮರಾಜನಗರದಲ್ಲಿಯೇ ಯುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದ ಎ.ಸಿ.ಲಕ್ಷ್ಮಣ ಹಾಗೂ ಅ.ನಾ. ಯಲ್ಲಪ್ಪರೆಡ್ಡಿ ಅವರು ಈ ವಿಚಾರದಲ್ಲಿ ಗಟ್ಟಿ ನಿಲುವು ತಾಳಿ ಅಕ್ರಮ ಮರ ಕಡಿತ, ಸಾಗಣೆಗೆ ತಡೆ ಹಾಕಿದ್ದರು. ಅವರು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ.
ಇಂತಹ ಅನುಭವವನ್ನು ಅರಣ್ಯ ಇಲಾಖೆಯಿಂದ ನಿವೃತ್ತರಾಗಿ ಮೂರೂವರೆ ದಶಕ ಕಳೆದರೂ ಈಗಲೂ ಸಕ್ರಿಯರಾಗಿರುವ ಎ.ಸಿ.ಲಕ್ಷ್ಮಣ ಅವರು ವನವೆಲ್ಲ ಕಲ್ಪತರು ಎನ್ನುವ ತಮ್ಮ ಆತ್ಮಕಥನದಲ್ಲಿ ವಿವರಿಸಿದ್ದಾರೆ. ಕೆ.ಪುಟ್ಟಸ್ವಾಮಿ ಅವರು ಹೊರ ದಾಖಲಿಸಿರುವ ಕೃತಿಯ ಭಾಗವೊಂದು ಇಲ್ಲಿದೆ.
ಕಳ್ಳ ಸಾಗಾಣಿಕೆಯ ಪ್ರಕರಣಗಳು
"ನಾನು ಚಾಮರಾಜನಗರದಲ್ಲಿದ್ದ ಸಮಯದಲ್ಲಿಯೇ, ಪದವಿಯಲ್ಲಿ ನನ್ನ ಸಹಪಾಠಿ ಮತ್ತು ಜೊತೆಯಲ್ಲಿಯೇ ಅರಣ್ಯ ತರಬೇತಿ ಮುಗಿಸಿ ಬಂದಿದ್ದ ಎ. ಎನ್. ಯಲ್ಲಪ್ಪ ರೆಡ್ಡಿ ಅವರು ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದರು. ಕಳ್ಳಬೇಟೆ ಮತ್ತು ಸಾಗಾಣಿಕೆಯನ್ನು ತಡೆಯಲು ನಾವು ರಾತ್ರಿ ತಿರುಗುತ್ತಿದ್ದ ಗಸ್ತಿಗೆ ಅವರೂ ಜೊತೆಯಾಗುತ್ತಿದ್ದರು. ರೈತರ ಉರುವಲಿನ ಸಮಸ್ಯೆ ಪರಿಹರಿಸಲು ಸರ್ಕಾರ ಜಾರಿಗೊಳಿಸಿದ್ದ ಪ್ರೀ-ಪೇಯ್ ಲೈಸೆನ್ಸ್ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಿದ್ದವು. ಈ ಲೈಸೆನ್ಸ್ ನೀಡುವ ಅವಕಾಶದ ಪ್ರಕಾರ ನಮ್ಮ ರಾಜ್ಯದಲ್ಲಿ ಗ್ರಾಮಸ್ಥರು ಅರಣ್ಯದಿಂದ ಉರುವಲನ್ನು ಸಂಗ್ರಹಿಸಿ ತರಬಹುದಿತ್ತು. ಇದು ಎಂದಿನಿಂದ ಜಾರಿಗೆ ಬಂತೋ ತಿಳಿಯದು. ಈ ಪರವಾನಗಿಯ ಪ್ರಕಾರ ಗ್ರಾಮಸ್ಥರು ಕಾಡಿಗೆ ಹೋಗಿ ಒಣಗಿದ ಸೌದೆಯನ್ನು ಸಂಗ್ರಹಿಸಿ ಗಾಡಿಯಲ್ಲಿ ತುಂಬಿಕೊಂಡು ಬರಬಹುದಿತ್ತು. ಗಾಡಿಯೊಂದಕ್ಕೆ ತೆರಬೇಕಿದ್ದ ಶುಲ್ಕ ಒಂದು ರೂಪಾಯಿ ಮಾತ್ರ. ಇದು ಮನೆಬಳಕೆಗೆ ಬೇಕಾದ ಸೌದೆಯನ್ನು ತರಲು ಅನುಕೂಲ ಮಾಡಿಕೊಟ್ಟ ನಿಯಮವಾದರೂ ಅನೇಕ ಮಂದಿ ನೂರಾರು ಸಂಖ್ಯೆಯಲ್ಲಿ ಗಾಡಿಗಳನ್ನು ಕಟ್ಟಿಕೊಂಡು ಹೋಗಿ ಸೌದೆ ತಂದು ಪಟ್ಟಣಗಳಲ್ಲಿ ಮಾರುತ್ತಿದ್ದರು. ಇದರ ಅವಕಾಶ ಪಡೆದು ಹಲವರು ಕಾಡಿನಲ್ಲಿ ಮರಗಳನ್ನು ಕತ್ತರಿಸಿ ಸಾಗಿಸುವ ದಂಧೆಗೂ ಇಳಿದರು. ಇಂಥ ಅಕೃತ್ಯಕ್ಕೆ ಸಾ-ಮಿಲ್ ಮಾಲೀಕರ ಒತ್ತಾಸೆಯೂ ಇತ್ತು. ಹಾಗಾಗಿ ಇದೊಂದು ಆದಾಯ ಮೂಲವಾಗಿ ಪರಿಣಮಿಸಿದ ಕಾರಣ ರೈತರು ಅಪಾಯಕಾರಿ ಸಾಹಸಗಳಿಗೆ ಕೈಹಾಕುತ್ತಿದ್ದರು. ಇವರ ಅಕೃತ್ಯಗಳನ್ನು ಪ್ರಶ್ನಿಸಿದ ಗಾರ್ಡ್‌ಗಳನ್ನು ಬೆದರಿಸುತ್ತಿದ್ದರು. ಹಾಗೆ ಪ್ರಶ್ನಿಸಿದ ಅರಣ್ಯ ಸಿಬ್ಬಂದಿಯೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಸುಟ್ಟ ಪ್ರಕರಣವೂ ವರದಿಯಾಗಿತ್ತು.
ಒಮ್ಮೆ ಯಲ್ಲಪ್ಪರೆಡ್ಡಿ ಮತ್ತು ನಾನು ಇಬ್ಬರೂ ಜೊತೆಗೂಡಿ ಕಳ್ಳ ಸಾಗಾಣಿಕೆದಾರರ ವಿರುದ್ಧ ರಾತ್ರಿಯ ಹೊತ್ತು ನಡೆಸಿದ ಕಾರ್ಯಾಚರಣೆಯಲ್ಲಿ ನಾವು ಎರಡು ವಿಭಿನ್ನ ಮಾರ್ಗಗಳನ್ನು ಹಿಡಿದು ಕಾಡಿಗೆ ಹೋದೆವು. ನನ್ನ ನೇತೃತ್ವದ ತಂಡ ಹೊಂಗನೂರಿನ ಮರಗಳ್ಳರನ್ನು ಎದುರಾಯಿತು. ಆಗ ನೂರಾರು ಗಾಡಿಗಳೊಡನೆ ಬಂದಿದ್ದ ಅವರು ನಮ್ಮ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಿದರು. ಹೊಡೆತ ತಿಂದರೂ ನಾವು ಸಾಹಸದಿಂದ ತಪ್ಪಿಸಿಕೊಂಡೆವು. ಈ ಘಟನೆಯ ವಿವರಗಳನ್ನು ನನ್ನ ಇನ್ನೊಂದು "ಕಾಡಿನ ಕಥನಗಳು" ಕೃತಿಯಲ್ಲಿ ವಿವರಿಸಿದ್ದೇನೆ. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿ ಮರಗಳ್ಳರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿ ಮಾಡಿ ಕಳ್ಳ ಸಾಗಾಣಿಕೆ ಪ್ರಕರಣಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾದೆವು. ಮುಂದೆ ದೇವರಾಜ ಅರಸುರವರು ಮುಖ್ಯಮಂತ್ರಿಯಾಗಿ ಮತ್ತು ಕೆ. ಎಚ್. ಪಾಟೀಲ ಅವರು ಅರಣ್ಯ ಸಚಿವರಾದ ಕಾಲದಲ್ಲಿ ಈ ಅನರ್ಥಕಾರಿ ಪ್ರೀ-ಪೇಯ್ಡ್ ಲೈಸೆನ್ಸ್ ರದ್ದಾಯಿತು."