ಧಾರವಾಡದಲ್ಲಿ ಇಂದಿನಿಂದ 6 ದಿನ ಚಿಂತಕ ರಹಮತ್‌ ತರೀಕೆರೆ ಅವರ ನಾನಾ ಪಂಥದ ಉಪನ್ಯಾಸ, ಯಾವ ದಿನ ಯಾವುದು, ಲೈವ್‌ ಇಲ್ಲಿ ವೀಕ್ಷಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  ಧಾರವಾಡದಲ್ಲಿ ಇಂದಿನಿಂದ 6 ದಿನ ಚಿಂತಕ ರಹಮತ್‌ ತರೀಕೆರೆ ಅವರ ನಾನಾ ಪಂಥದ ಉಪನ್ಯಾಸ, ಯಾವ ದಿನ ಯಾವುದು, ಲೈವ್‌ ಇಲ್ಲಿ ವೀಕ್ಷಿಸಿ

ಧಾರವಾಡದಲ್ಲಿ ಇಂದಿನಿಂದ 6 ದಿನ ಚಿಂತಕ ರಹಮತ್‌ ತರೀಕೆರೆ ಅವರ ನಾನಾ ಪಂಥದ ಉಪನ್ಯಾಸ, ಯಾವ ದಿನ ಯಾವುದು, ಲೈವ್‌ ಇಲ್ಲಿ ವೀಕ್ಷಿಸಿ

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕದಲ್ಲಿನ ವಿವಿಧ ಪಂಥಗಳ ಕುರಿತಾಗಿ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಂಡಿದ್ದು, ಸಾಹಿತಿ ಪ್ರೊ.ರಹಮತ್‌ ತರೀಕೆರೆ ವಿಚಾರ ಮಂಡಿಸುವರು. ಯಾವ ದಿನ ಯಾವ ಪಂಥದ ವಿಚಾರ ಮಂಡನೆ ಇದೆ ಎನ್ನುವ ವಿವರ ಇಲ್ಲಿದೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪಂಥಗಳ ಕುರಿತ  ಉಪನ್ಯಾಸವನ್ನು ಪ್ರೊ.ರಹಮತ್‌ ತರೀಕೆರೆ ನೀಡುವರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪಂಥಗಳ ಕುರಿತ ಉಪನ್ಯಾಸವನ್ನು ಪ್ರೊ.ರಹಮತ್‌ ತರೀಕೆರೆ ನೀಡುವರು.

ಧಾರವಾಡ: ಕನ್ನಡದ ಪ್ರಸಿದ್ದ ಚಿಂತಕ, ಸಾಹಿತಿ ಪ್ರೊ.ರಹಮತ್‌ ತರೀಕೆರೆ ಅವರು ನಾನಾ ಪಂಥದ ಕುರಿತು ಆರು ದಿನಗಳ ಕಾಲ ಧಾರವಾಡದಲ್ಲಿ ಪ್ರವಚನ ನೀಡುವರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ ದಾರ್ಶನಿಕ ಪಂಥಗಳು ಎನ್ನುವ ಉಪನ್ಯಾಸ ಮಾಲಿಕೆಯನ್ನು ಹಮ್ಮಿಕೊಂಡಿದ್ದು, 2024ರ ಡಿಸೆಂಬರ್‌ 8ರಿಂದ ಆರು ದಿನಗಳ ಕಾಲ ಉಪನ್ಯಾಸ ಇರಲಿದೆ. ಆರು ದಿನದಲ್ಲಿ ಸೂಫಿ, ನಾಥ, ಶಾಕ್ತ, ಆರೂಢ, ಶರಣ, ಧಮ್ಮ ಪಂಥದ ಕುರಿತು ವಿಚಾರವನ್ನು ಹಂಚಿಕೊಳ್ಳಲಿದ್ದಾರೆ. ಕರ್ನಾಟಕಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಸಂಜೆ 6 ರಿಂದ 7.30ರವರೆಗೆ ಆರು ದಿನ ಪ್ರವಚನ ನಡೆಯಲಿದೆ.

ಡಿಸೆಂಬರ್‌ 8ರಂದು ಸೂಫಿ ಪಂಥದ ಕುರಿತು ಅವರು ಮಾತನಾಡುವರು. ಡಿಸೆಂಬರ್‌ 9ರ ಸೋಮವಾರದಂದು ನಾಥ ಪಂಥದ ಕುರಿತು ಹಾಗೂ ಡಿಸೆಂಬರ್‌ 10 ರ ಮಂಗಳವಾರದಂದು ಶಾಕ್ತ ಪಂಠದ ಕುರಿತಾಗಿ ಅವರು ವಿಚಾರ ಮಂಡಿಸುವರು. ಡಿಸೆಂಬರ್‌ 11ರ ಬುಧವಾರದಂದು ಆರೂಢ ಪಂಥ, ಡಿಸೆಂಬರ್‌ 12ರ ಗುರುವಾರದಂದು ಶರಣ ಪಂಥ, ಡಿಸೆಂಬರ್‌ 13 ರ ಶುಕ್ರವಾರದಂದು ಧಮ್ಮ ಪಂಥದ ಕುರಿತು ಮಾತನಾಡುವರು. ಈ ವೇಳೆ ಚರ್ಚೆ, ಸಂವಾದಕ್ಕೂ ಅವಕಾಶವನ್ನು ಮಾಡಿಕೊಡಲಾಗಿದೆ.

ರಹಮತ್‌ ತರೀಕೆರೆ ವಿವರ

ಈ ಕುರಿತು ಫೇಸ್‌ ಬುಕ್‌ ನಲ್ಲಿ ನಾನೂ ಪ್ರವಚನಕಾರನಾದೆ ಬರೆದುಕೊಂಡಿರುವ ರಹಮತ್‌ ತರೀಕೆರೆ ಅವರು ಮೂರು ದಿನದ ಉಪನ್ಯಾಸದ ವಿವರಗಳನ್ನು ನೀಡಿದ್ದಾರೆ.

ಕನ್ನಡನಾಡಿನ ಜನಸಮುದಾಯಗಳ ಆಲೋಚನಕ್ರಮ, ಭಾಷೆ, ಸಾಹಿತ್ಯ, ಸಂಸ್ಕ್ರತಿ, ಆಚರಣೆಗಳನ್ನು ಗಾಢವಾಗಿ ಪ್ರಭಾವಿಸಿರುವ ಪ್ರಮುಖ ದಾರ್ಶನಿಕ ಪಂಥಗಳೆಂದರೆ ಸೂಫಿ ನಾಥ ಆರೂಢ ಶರಣ ಶಾಕ್ತ ಧಮ್ಮ. ಸಾಧನೆ ಮತ್ತು ಅರಿವು/ಪ್ರಜ್ಞೆ ಪ್ರಧಾನವಾಗಿರುವ ಗುರುಪಂಥಗಳಿವು. ಇವುಗಳ ವಿಶೇಷತೆಯೆಂದರೆ, ಏಕಕಾಲದಲ್ಲೇ ತತ್ವಶಾಸ್ತ್ರ ಸಾಹಿತ್ಯ, ಸಂಗೀತ, ರಂಗಭೂಮಿ, ಆಚರಣ ಲೋಕಗಳನ್ನು ಒಳಗೊಂಡಿರುವುದು. ಈ ದಾರ್ಶನಿಕ ಧಾರೆಗಳು‌ ನಿರ್ಮಿಸಿರುವ ಪರಂಪರೆಯಲ್ಲಿ, ನಮ್ಮ ಕಾಲಕ್ಕೆ ಬೇಕಾದ ಮೌಲ್ಯಗಳು ಯಾವುವು? ಅವನ್ನು ಸಂವಿಧಾನ ಪ್ರಜ್ಞೆಯ ಜತೆಗೆ ಹೇಗೆ ಲಗತ್ತಿಸಿ ನೋಡಬಹುದು? ಇದು ಎದುರಿನ ಪ್ರಶ್ನೆ. ಸಂವಾದಕ್ಕೆ ಹೆಚ್ಚು ಅವಕಾಶವಿರುವಂತೆ ಸಂಕ್ಷಿಪ್ತವಾಗಿ ವಿಚಾರ ಮಂಡಿಸಬೇಕು ಎಂದು ಆಲೋಚಿಸಿರುವೆ. ಹುಬ್ಬಳ್ಳಿ ಧಾರವಾಡ ಸೀಮೆಯ ಗೆಳೆಯರು, ಯುವ ಸಂಶೋಧಕರು, ಸಾಹಿತ್ಯದ ವಿದ್ಯಾರ್ಥಿಗಳು ಸವುಡು ಮಾಡಿಕೊಂಡು ಇತ್ತ ಹಣಿಕಿದರೆ, ನನಗೂ ಶಾನೆ ಪ್ರಯೋಜನ ಆಗುವುದು ಎಂದು ತಿಳಿಸಿದ್ದಾರೆ.

ಹಲವರಿಗೆ ಖುಷಿ

ಇದಕ್ಕೆ ಹಲವರು ಸಂತಸ ಕೂಡ ವ್ಯಕ್ತಪಡಿಸಿದ್ದಾರೆ. ನಿಮ್ಮ ಆಗಾಧ ಕ್ಷೇತ್ರ ಕಾರ್ಯದಲ್ಲಿ ಸಂಗ್ರಹಿಸಿದ ಬಹಳಷ್ಟು ಮಾಹಿತಿಯನ್ನು ನೀವು ಪುಸ್ತಕಗಳು ರೂಪುಗೊಳ್ಳುವ ಸಂದರ್ಭದಲ್ಲಿ ಬಳಸಿಕೊಂಡಿಲ್ಲದೇ ಇರುಬಹುದು.ಅಂದ ವಿಷಯ ಮತ್ತು ಘಟನೆಗಳನ್ನು ಕೇಂದ್ರವಾಗಿಟ್ಟುಕೊಂಡು ಮಾತನಾಡಿ ಎಂದು ಲೇಖಕ ಮಹೇಶ್‌ ಹರವೆ ಹೇಳಿದ್ದಾರೆ.

ಈ ಉಪನ್ಯಾಸ ಮಾಲಿಕೆ ಎಲ್ಲಾ ಕಡೆ ಆಯೋಜಿಸುವ ಅಗತ್ಯವಿದೆ. ಧಾರ್ಮಿಕ, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಮತ್ತು ವಿವಿಧ ಶೈಕ್ಷಣಿಕ ಸಂಸ್ಥೆಗಳು ಈ ಬಗ್ಗೆ ಆಸಕ್ತಿ ತೋರಬೇಕಿದೆ ಎನ್ನುವ ಸಲಹೆಯನ್ನು ದೇವೇಂದ್ರ ಹೆಗ್ಗಡೆ ನೀಡಿದ್ದಾರೆ.

ಅಪರೂಪದ ಕಾರ್ಯಕ್ರಮ. ತಕ್ಕಮಟ್ಟಿಗೆ ಜಾತೀಯತೆಯ ಮಾಡದ ಪ್ರಜಾಪ್ರಭುತ್ವ ಮಾದರಿಯ‌ಶಾಲೆಗಳು ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿವೆ. ಗುರುಪಂಥ ಅರಿಯುವ ಮೂಲಕ ಗುರುತಿಸಲ್ಪಡಬಹದಾಗಿದೆ ಎಂದು ಉಜ್ಜಜ್ಜಿ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ಲೈವ್‌ ಇಲ್ಲಿ ವೀಕ್ಷಿಸಿ

ಆರು ದಿನದ ಚಟುವಟಿಕೆಯೂ ಲೈವ್‌ ಇರಲಿದೆ. ಫೇಸ್‌ಬುಕ್‌ ಮೂಲಕ ಇದನ್ನು ವೀಕ್ಷಿಸಬಹುದು.

Liveಗಾಗಿ ವಿದ್ಯಾವರ್ಧಕ ಸಂಘದ Facebook ಪೇಜ್:

Whats_app_banner