ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಘೋಷಣೆ, ಮಾಂಬಾಡಿ ಗುರುಗಳಿಗೆ ಪಾರ್ತಿಸುಬ್ಬ ಪ್ರಶಸ್ತಿ, 10 ಕಲಾವಿದರಿಗೆ ಯಕ್ಷಸಿರಿ ಗೌರವ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಘೋಷಣೆ, ಮಾಂಬಾಡಿ ಗುರುಗಳಿಗೆ ಪಾರ್ತಿಸುಬ್ಬ ಪ್ರಶಸ್ತಿ, 10 ಕಲಾವಿದರಿಗೆ ಯಕ್ಷಸಿರಿ ಗೌರವ

ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಘೋಷಣೆ, ಮಾಂಬಾಡಿ ಗುರುಗಳಿಗೆ ಪಾರ್ತಿಸುಬ್ಬ ಪ್ರಶಸ್ತಿ, 10 ಕಲಾವಿದರಿಗೆ ಯಕ್ಷಸಿರಿ ಗೌರವ

Yakshagana Academy Awards: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ರ ಪ್ರಶಸ್ತಿ ಘೋಷಣೆಯಾಗಿದೆ. ಮಾಂಬಾಡಿ ಗುರುಗಳು ಎಂದು ಪ್ರಸಿದ್ಧರಾಗಿರುವ ತೆಂಕತಿಟ್ಟು ಯಕ್ಷಗಾನ ಕಲಾವಿದ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪ್ರಕಟವಾಗಿದೆ. 10 ಕಲಾವಿದರಿಗೆ ಯಕ್ಷಸಿರಿ ಗೌರವ ಘೋಷಣೆಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಪ್ರಕಟವಾಗಿದ್ದು, ಮಾಂಬಾಡಿ ಗುರುಗಳಿಗೆ (ಬಲ ಚಿತ್ರ) ಪಾರ್ತಿಸುಬ್ಬ ಪ್ರಶಸ್ತಿ, 10 ಕಲಾವಿದರಿಗೆ ಯಕ್ಷಸಿರಿ ಗೌರವ ಘೋಷಣೆಯಾಗಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಪ್ರಕಟವಾಗಿದ್ದು, ಮಾಂಬಾಡಿ ಗುರುಗಳಿಗೆ (ಬಲ ಚಿತ್ರ) ಪಾರ್ತಿಸುಬ್ಬ ಪ್ರಶಸ್ತಿ, 10 ಕಲಾವಿದರಿಗೆ ಯಕ್ಷಸಿರಿ ಗೌರವ ಘೋಷಣೆಯಾಗಿದೆ.

Yakshagana Academy Awards: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗಳ ಘೋಷಣೆಯಾಗಿದ್ದು ತೆಂಕತಿಟ್ಟು ಯಕ್ಷಗಾನ ಕಲಾವಿದ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ ತಲ್ಲೂರು ಶಿವರಾಮ್ ಶೆಟ್ಟಿ ಮಾಹಿತಿ ನೀಡಿದ್ದಾರೆ. 2024ನೇ ಸಾಲಿನ ಗೌರವ ಪ್ರಶಸ್ತಿಗೆ ಬೆಳ್ತಂಗಡಿಯ ಕೊಳ್ತಿಗೆ ನಾರಾಯಣ ಗೌಡ, ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಬಂಟ್ಚಾಳದ ರಾಘವ ದಾಸ್, ಬಂಟ್ವಾಳದ ಸುಬ್ರಾಯ ಹೊಳ್ಳ, ತುಮಕೂರಿನ ಕಾಂತರಾಜು ಅವರನ್ನು ಆಯ್ಕೆ ಮಾಡಲಾಗಿದೆ

10 ಕಲಾವಿದರಿಗೆ ಯಕ್ಷಸಿರಿ ಪ್ರಶಸ್ತಿ

1) ಹಿರಿಯ ಅರ್ಥಧಾರಿ ಕಾಸರಗೋಡಿನ ಅಡ್ಕ ಗೋಪಾಲಕೃಷ್ಣ ಭಟ್

2) ಯಕ್ಷಗಾನ ಕಲಾವಿದ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ ಬಡಗುತಿಟ್ಟು

3) ಮವ್ವಾರು ಬಾಲಕೃಷ್ಣ ಮಣಿಯಾಣಿ ತೆಂಕುತಿಟ್ಟು, ಹಾಸ್ಯಗಾರ, ಕಾಸರಗೋಡು

4) ಉಮೇಶ್ ಕುಪ್ಪೆಪದವು ತೆಂಕುತಿಟ್ಟು. ಬಣ್ಣದ ವೇಷಧಾರಿ, ಮಂಗಳೂರು

5) ಶಿವಾನಂದ ಗೀಜಗಾರು, ಬಡಗುತಿಟ್ಟು, ಸ್ತ್ರೀ ವೇಷಧಾರಿ, ಶಿವಮೊಗ್ಗ

6) ಮುಗ್ವಾ ಗಣೇಶ್ ನಾಯ್ಕ ಬಡಗುತಿಟ್ಟು-ಸ್ತ್ರೀ ವೇಷಧಾರಿ, ಹೊನ್ನಾವರ

7) ಸುರೇಂದ್ರ ಮಲ್ಲಿ ತೆಂಕುತಿಟ್ಟು-ಸ್ತ್ರೀ ವೇಷಧಾರಿ, ಮಂಗಳೂರು

8) ಅಂಡಾಲ ದೇವಿಪ್ರಸಾದ ಶೆಟ್ಟಿ ಯಕ್ಷಗಾನ ಪ್ರಸಂಗಕರ್ತ ಮತ್ತು ಭಾಗವತ ಮಂಗಳೂರು

9) ಕೃಷ್ಣಪ್ಪ ಮೂಡಲಪಾಯ ಯಕ್ಷಗಾನ, ಬೆಂಗಳೂರು ಗ್ರಾಮಾಂತರ

10) ಹಳುವಳ್ಳಿ ಜ್ಯೋತಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಚಿಕ್ಕಮಗಳೂರು

ಯಕ್ಷಗಾನ ಅಕಾಡೆಮಿ ದತ್ತಿ ನಿಧಿ ಪ್ರಶಸ್ತಿ

2024ನೇ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ಟ ತೆಂಕುತಿಟ್ಟು ಯಕ್ಷಗಾನ, ಬಂಟ್ವಾಳ ಆಯ್ಕೆಯಾಗಿದ್ದಾರೆ.

ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಅವರ ಅನುಭವಿ ಶಿಷ್ಯ ಪರಂಪರೆ

ತೆಂಕುತಿಟ್ಟು ಹಿಮ್ಮೇಳದಲ್ಲಿ ಇಂದು ಪ್ರಸಿದ್ಧ ಕಲಾವಿದರಾಗಿ ಗುರುತಿಸಿಕೊಂಡಿರುವ ಬಹುತೇಕ ಹಿಮ್ಮೇಳ ಕಲಾವಿದರ ಗುರುಗಳಾಗಿರುವ ಹಿರಿಯ ಯಕ್ಷಗಾನ ಕಲಾವಿದ ಮಾಂಬಾಡಿ ಸುಬ್ರಮಣ್ಯ ಭಟ್ ಅವರಿಗೆ ಈ ಬಾರಿ ಕರ್ನಾಟಕ ಯಕ್ಷಗಾನ ಅಕಾಡಮಿ ಕೊಡಮಾಡುವ ಸರ್ವೋಚ್ಛ ಪ್ರಶಸ್ತಿಯಾದ ಪಾರ್ತಿಸುಬ್ಬ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಬಂಟ್ವಾಳ ತಾಲೂಕಿನ ಕರೋಪಾಡಿಯ ಮಾಂಬಾಡಿಯವರಾದ ಸುಬ್ರಹ್ಮಣ್ಯ ಭಟ್ಟರು ಪ್ರಸ್ತುತ ಇಡ್ಕಿದು ಗ್ರಾಮದ ಉರಿಮಜಲು ಸಮೀಪ ಪ್ರಶಾಂತಿ ಲೇಔಟ್ ನಲ್ಲಿ ವಾಸಿಸುತ್ತಿದ್ದಾರೆ.

1949 ಮಾರ್ಚ್ 27ರಂದು ಮಾಂಬಾಡಿ ನಾರಾಯಣ ಭಾಗವತ - ಲಕ್ಷ್ಮೀ ಅಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲೊಬ್ಬರಾಗಿ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಮಾಂಬಾಡಿಯಲ್ಲಿ ಜನಿಸಿದರು. ಪತ್ನಿ ಲಕ್ಷ್ಮೀ. ಮಕ್ಕಳಾದ ವೇಣುಗೋಪಾಲ್ ಮಾಂಬಾಡಿ ಮತ್ತು ನಾರಾಯಣ ಪ್ರಸನ್ನ ಮಾಂಬಾಡಿ - ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರರು. ವೇಣುಗೋಪಾಲ್ ಅವರು ಉತ್ತಮ ಹಿಮ್ಮೇಳವಾದಕರಾಗಿ ಹೆಸರು ಗಳಿಸಿದ್ದಾರೆ.

ಶಿಕ್ಷಕರಾಗಿ ಪರಂಪರೆಯನ್ನು ಮುನ್ನಡೆಸುತ್ತಿರುವ ವಿಶ್ವವಿನೋದ ಬನಾರಿ, ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ, ವೃತ್ತಿ ಮೇಳಗಳಲ್ಲಿ ಸಕ್ರಿಯರಾಗಿರುವ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಅಂಡಾಲ ದೇವಿಪ್ರಸಾದ ಶೆಟ್ಟಿ, ಪಟ್ಲ ಸತೀಶ ಶೆಟ್ಟಿ, ಬೋಂದೆಲ್ ಸತೀಶ್ ಶೆಟ್ಟಿ, ಪ್ರಶಾಂತ ವಗೆನಾಡು, ಪೊಳಲಿ ದಿವಾಕರ ಆಚಾರ್ಯ, ಪದ್ಯಾಣ ಗೋವಿಂದ ಭಟ್, ಪೆಲತ್ತಡ್ಕ ಗೋಪಾಲಕೃಷ್ಣ ಮಯ್ಯ, ನೆಕ್ಕರೆಮೂಲೆ ಗಣೇಶ ಭಟ್, ಯೋಗೀಶ ಆಚಾರ್ಯ ಉಳೆಪ್ಪಾಡಿ, ಹೊಸಮೂಲೆ ಗಣೇಶ ಭಟ್, ಪ್ರಫುಲ್ಲಚಂದ್ರ ನೆಲ್ಯಾಡಿ, ದೇವಿಪ್ರಸಾದ್ ಆಳ್ವ, ಪೂರ್ಣೇಶ ಅಚಾರ್ಯ, ಸುಬ್ರಾಯ ಹೊಳ್ಳ ಕಾಸರಗೋಡು, ಲವಕುಮಾರ ಐಲ ಮುಂತಾದವರು ಇವರ ಶಿಷ್ಯರು.

ಹವ್ಯಾಸಿ ರಂಗದ ಯಕ್ಷಗಾನ ಪ್ರತಿಭೆಗಳಾದ ಜಿ.ಕೆ.ನಾವಡ ಬಾಯಾರು, ನಿಡುವಜೆ ಪುರುಷೋತ್ತಮ ಭಟ್, ನಿಡುವಜೆ ಶಂಕರ ಭಟ್, ಕೋಳ್ಯೂರು ಭಾಸ್ಕರ, ಸುಬ್ರಾಯ ಸಂಪಾಜೆ, ಕೃಷ್ಣರಾಜ ನಂದಳಿಕೆ, ವೇಣುಗೋಪಾಲ ಮಾಂಬಾಡಿ, ಅರ್ಜುನ ಕೊರ್ಡೇಲ್, ಕಾರ್ತಿಕ್ ಕೊರ್ಡೇಲ್, ಪ್ರಶಾಂತ ಶೆಟ್ಟಿ, ರಾಮಪ್ರಸಾದ್ ವಧ್ವ ಕೂಡ ಮಾಂಬಾಡಿಯವರಲ್ಲೇ ಶಿಷ್ಯತ್ವ ಪಡೆದವರು.

ಸಂದ ಪ್ರಶಸ್ತಿಗಳು: ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಯಕ್ಷಧ್ರುವ ಪಟ್ಲ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ದೆಹಲಿ ಕನ್ನಡ ಸಂಘ ಪ್ರಶಸ್ತಿ, ಕೀಲಾರು ಪ್ರತಿಷ್ಠಾನ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ನೆಡ್ಲೆ ಪ್ರತಿಷ್ಠಾನ ಪ್ರಶಸ್ತಿ, ರಸಿಕ ರತ್ನ ಗೋಪಾಲಕೃಷ್ಣ ಜೋಶಿ ಪ್ರತಿಷ್ಠಾನ ಪ್ರಶಸ್ತಿ, ಶ್ರೀಹರಿಲೀಲಾ ಪ್ರಶಸ್ತಿ ಹವ್ಯಾಸಿ ಬಳಗ ಕದ್ರಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಯಕ್ಷಗಾನ ಕೇಂದ್ರ , ಉಡುಪಿ, ಕೋಡಪದವು ವೀರಾಂಜನೇಯ ಪ್ರತಿಷ್ಠಾನ, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ, ಮಾಂಬಾಡಿ ಶಿಷ್ಯ ವೃಂದ ಮಂಗಳೂರು, ಮಾಂಬಾಡಿ ಶಿಷ್ಯ ಸಮಾವೇಶದ ಗುರುವಂದನೆ, ಕೋಳ್ಯೂರು ದೇವಸ್ಥಾನ, ಚಿಗುರುಪಾದೆ ಮುಂತಾದೆಡೆಗಳಲ್ಲಿ ಅವರಿಗೆ ಪುರಸ್ಕಾರಗಳು ಸಂದಿವೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner