K'taka ZP & TP elections: ಪಂಚಾಯಿತಿ ಚುನಾವಣೆ ʻವಿಳಂಬʼ; ರಾಜ್ಯ ಸರ್ಕಾರಕ್ಕೆ ಬಿತ್ತು ದಂಡ- ಏನಿದು ವಿದ್ಯಮಾನ?
K'taka ZP & TP elections: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವಿಳಂಬವಾಗಿರುವ ವಿಚಾರ ಹೈಕೋರ್ಟ್‌ನಲ್ಲಿದ್ದು, ಸರ್ಕಾರವನ್ನು ಅದು ತರಾಟೆಗೆ ತೆಗೆದುಕೊಂಡು 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.
ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸುವಲ್ಲಿ ʻವಿಳಂಬ ನೀತಿʼ ಅನುಸರಿಸಿದ ಆರೋಪಕ್ಕಾಗಿ ಕರ್ನಾಟಕ ಹೈಕೋರ್ಟ್ ಬುಧವಾರ ರಾಜ್ಯ ಸರ್ಕಾರಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮೂರು ತಿಂಗಳ ಒಳಗಾಗಿ ಕ್ಷೇತ್ರ ಮರುವಿಂಗಡಣೆ ಪೂರ್ತಿಗೊಳಿಸುವಂತೆ ಮತ್ತು ಈ ಚುನಾವಣೆಗಳಿಗೆ ಒಬಿಸಿ ಮೀಸಲು ಪಟ್ಟಿ ಪೂರ್ಣಗೊಳಿಸವಂತೆಯೂ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ 2022 ಅನ್ನು ರದ್ದುಪಡಿಸಲು ಮತ್ತು ಕ್ಷೇತ್ರ ಮರುವಿಂಗಡಣೆ ಪಟ್ಟಿಯನ್ನು ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿದ ವೇಳೆ ಸರ್ಕಾರವನ್ನು ಈ ರೀತಿ ತರಾಟೆಗೆ ತೆಗೆದುಕೊಂಡು ದಂಡ ವಿಧಿಸಿತು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ವಿಂಗಡಣೆಗಾಗಿ ರಾಜ್ಯ ರಚಿಸಿರುವ ಸೀಮಾ ನಿರ್ಣಯ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲರು, ಕ್ಷೇತ್ರ ಮರುವಿಂಗಡಣೆ ಕಾರ್ಯವನ್ನು ಪೂರ್ಣಗೊಳಿಸಲು 90 ದಿನಗಳ ಕಾಲಾವಕಾಶ ಕೋರಿದರು.
ಈ ಪ್ರಕ್ರಿಯೆಯನ್ನು ʻಬಸವನ ಹುಳದ ವೇಗʼ ಎಂದು ಟೀಕಿಸಿದ ಹೈಕೋರ್ಟ್, ಪದೇಪದೆ ಅವಧಿ ವಿಸ್ತರಣೆ ಕೋರುವುದು ಅಸಮರ್ಪಕ. ಆರು ತಿಂಗಳ ಕಾಲಾವಕಾಶ ನೀಡಿದ ನಂತರವೂ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲವಾಗಿದೆ ಮತ್ತು ಇದು ಹೈಕೋರ್ಟ್ ಆದೇಶವನ್ನು ಬುಡಮೇಲು ಮಾಡುವ ಪ್ರಯತ್ನದಂತೆ ತೋರುತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಫೆ.2 ಸರ್ಕಾರಕ್ಕೆ ಗಡುವು; ಅದೇ ದಿನಕ್ಕೆ ವಿಚಾರಣೆ ನಿಗದಿ
ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ನಾವು ರಾಜ್ಯ ಸರ್ಕಾರ ಮತ್ತು ರಾಜ್ಯ ಸೀಮಾ ನಿರ್ಣಯ ಆಯೋಗದ ವಿಧಾನವನ್ನು ಅನುಮೋದಿಸುತ್ತಿಲ್ಲ. ಆದರೆ ನ್ಯಾಯಯುತ ಅಂತ್ಯವನ್ನು ಪೂರೈಸಲು ಅವಕಾಶವನ್ನು ನೀಡಲು ಉದ್ದೇಶಿಸಿದ್ದೇವೆ. ಅದಕ್ಕಾಗಿ 2023ರ ಫೆಬ್ರವರಿ 2 ರವರೆಗೆ ಅವಧಿಯನ್ನು ವಿಸ್ತರಿಸುತ್ತಿದ್ದೇವೆ” ಎಂದು ಹೇಳಿದೆ.
ಅಲ್ಲದೆ, “ರಾಜ್ಯ ಸರ್ಕಾರ ಮತ್ತು ರಾಜ್ಯ ಸೀಮಾ ನಿರ್ಣಯ ಆಯೋಗವು ಫೆಬ್ರವರಿ 1, 2023 ರ ಮೊದಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದ ಮೀಸಲು ಮತ್ತು ಮೀಸಲಿನ ಸಂಪೂರ್ಣ ಕೆಲಸಗಳನ್ನು 2023ರ ಜನವರಿ 31ರ ಮೊದಲು ಪೂರ್ಣಗೊಳಿಸಬೇಕು. ಅದರ ಅನುಸರಣೆ ವರದಿಯನ್ನು ಸಲ್ಲಿಸಲು ಮುಂದಿನ ವಿಚಾರಣೆಯ ದಿನಾಂಕ, 2023ರ ಫೆಬ್ರವರಿ 2ರ ತನಕ ಕಾಲಾವಕಾಶವಿದೆ” ಎಂದು ಹೇಳಿದೆ.
ಹೈಕೋರ್ಟ್ ನ್ಯಾಯಪೀಠವು 2022ರ ಮೇ 24ರಂದು ನೀಡಿದ ತೀರ್ಪಿನಲ್ಲಿ, 12 ವಾರಗಳ ಒಳಗೆ OBC ಮೀಸಲಾತಿ ಪಟ್ಟಿ ಮತ್ತು ಕ್ಷೇತ್ರ ಮರುವಿಂಗಡಣಾ ಕೆಲಸ ಎರಡನ್ನೂ ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಸರ್ಕಾರ 5 ಲಕ್ಷ ರೂಪಾಯಿ ʻವೆಚ್ಚʼ ಹೇಗೆ ಮತ್ತು ಯಾವಾಗ ಪಾವತಿಸಬೇಕು?
ರಾಜ್ಯ ಸರ್ಕಾರವು 5 ಲಕ್ಷ ರೂಪಾಯಿ ದಂಡವನ್ನು ಯಾವ ರೀತಿ ಪಾವತಿಸಬೇಕು ಎಂಬುದನ್ನೂ ಹೈಕೋರ್ಟ್ ನ್ಯಾಯಪೀಠ ಸೂಚಿಸಿದೆ. ಈ ನಿರ್ದೇಶನ ಪ್ರಕಾರ ಸರ್ಕಾರವು ಜನವರಿ 28ರ ಒಳಗೆ 5 ಲಕ್ಷ ರೂಪಾಯಿ ʻವೆಚ್ಚʼವನ್ನು ಕೋರ್ಟ್‌ಗೆ ಪಾವತಿಸಬೇಕು. ಅಂದರೆ ಈ ಪೈಕಿ ತಲಾ 2 ಲಕ್ಷ ರೂಪಾಯಿಯನ್ನು ಕರ್ನಾಟಕ ಸ್ಟೇಟ್ ಲೀಗಲ್ ಸರ್ವೀಸಸ್ ಅಥಾರಿಟಿ ಖಾತೆಗೆ ಮತ್ತು ಬೆಂಗಳೂರು ಅಡ್ವೋಕೇಟ್ಸ್ ಅಸೋಸಿಯೇಷನ್‌ಗೆ ಹಾಗೂ 1 ಲಕ್ಷ ರೂಪಾಯಿಯನ್ನು ಅಡ್ವೋಕೇಟ್ಸ್ ಕ್ಲರ್ಕ್ಸ್ ವೆಲ್‌ಫೇರ್ ಅಸೋಸಿಯೇಷನ್ ಖಾತೆಗೆ ಪಾವತಿಸಬೇಕು.