Karwar News: ಸೇತುವೆ ಕುಸಿತದಿಂದ ಕಾರವಾರ ಗೋವಾ ಹೆದ್ದಾರಿ ಬಂದ್, ಗುಡ್ಡ ಕುಸಿತ ನಂತರ ಮತ್ತೊಂದು ದುರಂತ, ಲಾರಿ ಉರುಳಿ ತಪ್ಪಿದ ಅನಾಹುತ
Kali Bridge Collapse ಕಾರವಾರ ನಗರದ ಸಮೀಪವೇ ಇರುವ ಕಾಳಿ ನದಿಯ ಸೇತುವೆ ಕುಸಿದು ಗೋವಾ ಹೆದ್ದಾರಿ( Karwar Goa Highway Ban) ಬಂದ್ ಮಾಡಲಾಗಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ( Uttara Kannada Rains) ಕಳೆದ ತಿಂಗಳು ಶಿರೂರು ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಹುತೇಕ ಎರಡು ವಾರ ವ್ಯತ್ಯಯಗೊಂಡು ಹಲವರು ಜೀವ ಕಳೆದುಕೊಂಡಿದ್ದರು. ಇದರ ನಡುವೆಯೇ ಕಾರವಾರ ನಗರದ ಸಮೀಪವೇ ಕೋಡಿಭಾಗದಲ್ಲಿ ಕಾಳಿ ನದಿಗೆ( Kali River Bridge) ನಿರ್ಮಿಸಿದ ಬೃಹತ್ ಸೇತುವೆ ಕುಸಿದು ಬಿದ್ದಿದೆ. ಈ ವೇಳೆ ಸಂಚರಿಸಿದ ಲಾರಿಯೊಂದು ಅದರಲ್ಲಿ ಉರುಳಿ ಬಿದ್ದು ಚಾಲಕನನ್ನು ರಕ್ಷಣೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಕಾರವಾರ ಗೋವಾ ನಡುವಿನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧ ಮಾಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ಧಾರೆ. ಅಲ್ಲದೇ ಸೇತುವೆ ಸಂಚಾರ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ದವೂ ಅಸಮಾಧಾನ ವ್ಯಕ್ತವಾಗಿದೆ.
ಕಾರವಾರದಿಂದ ಗೋವಾಕ್ಕೆ ಹಾಗೂ ಗೋವಾದಿಂದ ಕಾರವಾರಕ್ಕೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳಿವೆ. ಅದು ಸದಾಶಿವಗಢ ಸೇತುವೆ, ಕೋಡಿಯಾಭಾಗ್ ಸೇತುವೆ ಎಂತಲೂ ಕರೆಯಲಾಗುತ್ತದೆ. ಇದರಲ್ಲಿ ಗೋವಾದಿಂದ ಕಾರವಾರಕ್ಕೆ ಬರುವ ಸೇತುವೆ ಹಳೆಯದಾಗಿತ್ತು. ಕಾರವಾರ ನಗರಕ್ಕೆ ಹೊಂದಿಕೊಂಡಂತೆ ಇರುವ ಕಾಳಿ ನದಿ ಸಮುದ್ರಕ್ಕೆ ಸೇರುವ ವಿಶಾಲ ಸೇತುವೆಯಿದು. ಇದನ್ನು 41 ವರ್ಷದ ಹಿಂದೆ ಕಟ್ಟಲಾಗಿದೆ. ಅಲ್ಲಲ್ಲಿ ಶಿಥಿಲಗೊಂಡಿದ್ದು ನಿರ್ವಹಣೆಯನ್ನು ಮಾಡಲಾಗಿತ್ತು.
ಇತ್ತೀಚಿನ ಮಳೆಗೆ ಈ ಸೇತುವೆ ಇನ್ನಷ್ಟು ಶಿಥಿಲಗೊಂಡಿತ್ತು. ಮಂಗಳವಾರ ಮಧ್ಯರಾತ್ರಿಯ ವೇಳೆ ಸೇತುವೆ ಏಕಾಏಕಿ ಕುಸಿದಿದೆ. ಈ ವೇಳೆ ಕಾರು ಹಾಗೂ ಬೈಕ್ ನಲ್ಲಿ ಬಂದವರು ಮುಂದೆ ಬಂದ ತಕ್ಷಣವೇ ಸೇತುವೆ ಕುಸಿದು ಅವರು ಅಪಾಯದಿಂದ ಪಾರಾಗಿದ್ದಾರೆ.
ಇದರ ಹಿಂದೆ ಬಂದ ತಮಿಳುನಾಡು ಮೂಲದ ಲಾರಿಯೊಂದು ಕುಸಿದ ಸೇತುವೆಯಿಂದ ಕಾಳಿ ನದಿಗೆ ಬಿದ್ದಿದೆ. ಚಾಲಕ ಮುರುಗನ್ ಎಂಬುವವರನ್ನು ಸ್ಥಳೀಯರು ಕೂಡಲೇ ರಕ್ಷಿಸಿದ್ದಾರೆ. ಗೋವಾದಿಂದ ಹುಬ್ಬಳ್ಳಿಗೆ ತೆರಳುತಿದ್ದ ಖಾಲಿ ಲಾರಿ ಕಾಳಿನದಿಯ ಸೇತುವೆಮೇಲೆ ವೇಗವಾಗಿ ಹೋಗುತ್ತಿದ್ದ ವೇಳೆ ಸೇತುವೆ ಕುಸಿದಿದೆ. ಕೂಡಲೇ ಚಾಲಕ ಲಾರಿಯ ಕ್ಯಾಬಿನ್ ಮೇಲೆ ನಿಂತು ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಅವರ ರಕ್ಷಣೆ ಮಾಡಲಾಗಿದೆ.
ಲಾರಿ ಕೊಚ್ಚಿ ಹೋಗಿದ್ದು. ಹುಡುಕಾಟ ನಡೆದಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಕೂಡಲೇ ಆಗಮಿಸಿ ವಾಹನ ಬಂದ್ ಮಾಡಿಸಿ ಪೊಲೀಸ್ ಭದ್ರತೆ ಹಾಕಿಸಿದ್ದಾರೆ.
ಡಿಸಿ ಆದೇಶ
ಘಟನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಕಾರವಾರ ಗೋವಾ ಹೆದ್ದಾರಿ ಬಂದ್ ಮಾಡಲು ಆದೇಶಿಸಿದ್ದಾರೆ.
ಕಾಳಿ ನದಿಗೆ ಕಟ್ಟಲಾಗಿದ್ದ ಹಳೆಯ ಸೇತುವೆ ಕುಸಿದ ಪರಿಣಾಮವಾಗಿ, ಅದರ ಹತ್ತಿರದಲ್ಲೇ ಕಟ್ಟಲಾಗಿರುವ ಹೊಸ ಸೇತುವೆಯ ಗುಣಮಟ್ಟವನ್ನು ಪರಿಶೀಲಿಸುವಂತೆಯೂ ಸೂಚಿಸಿದ್ದಾರೆ.
ಈಗ ಇರುವ ಇನ್ನೊಂದು ಸೇತುವೆ ವಾಹನ ಧಾರಣಾ ಸಾಮರ್ಥ್ಯದ ವರದಿಯನ್ನು ಇಂದು ಮಧ್ಯಾಹ್ನದೊಳಗೆ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ವರದಿ ಆಧರಿಸಿ ಮತ್ತೊಂದು ಸೇತುವೆಯ ಬಳಕೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೂ ಕಾರವಾರದಿಂದ ಕದ್ರಾ ಮಾರ್ಗದ ಪರ್ಯಾಯ ವ್ಯವಸ್ಥೆಯನ್ನು ವಾಹನ ಸಂಚಾರಕ್ಕೆ ಕಲ್ಪಿಸಲಾಗಿದೆ.
ಪ್ರಕರಣ ದಾಖಲು
ಘಟನೆ ನಂತರ ನಿರ್ಲಕ್ಷ್ಯ ವಹಿಸಿದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಹಾಗೂ ಸೇತುವೆ ಕೆಲಸ ವಹಿಸಿಕೊಂಡಿರುವ ಐಆರ್‌ಬಿ ಕಂಪನಿ ವಿರುದ್ದ ಜಿಲ್ಲಾಡಳಿತವು ಪ್ರಕರಣವನ್ನು ದಾಖಲಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಐಆರ್‌ಬಿ ಕಂಪನಿ ನಡೆಸುತ್ತಿದೆ. ಕಾಳಿ ನದಿಯಲ್ಲಿ ಒಂದು ಹೊಸ ಸೇತುವೆ ನಿರ್ಮಿಸಿದೆ. ಶಿಥಿಲ ಸ್ಥಿತಿಯಲ್ಲಿದ್ದರೂ ಇನ್ನೊಂದು ಕಡೆಯಲ್ಲಿ ಹಳೇಯ ಸೇತುವೆಯ ಮೇಲೆ ಸಂಚಾರಕ್ಕೆ ಅನುಮತಿ ನೀಡಿತ್ತು. ನಿಯಮದಂತೆ ಐಆರ್‌ಬಿ ಎರಡು ಹೊಸ ಸೇತುವೆಗಳನ್ನು ನಿರ್ಮಾಣ ಮಾಡಬೇಕಿತ್ತು. ಆದರೆ 41 ವರ್ಷದ ಸೇತುವೆಯ ಮೇಲೆ ಸಂಚಾರಕ್ಕೆ ಅನುಮತಿ ನೀಡಿದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನುವ ಅಂಶ ಆಧರಿಸಿ ಕಾರವಾರ ನಗರ ಠಾಣೆಯಲ್ಲಿ ಬಿಎನ್‌ಎಸ್ ಕಲಂ 110, 125, 285 ಅಡಿ ಐಆರ್‌ಬಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆದಿದೆ.