Breaking News: ಅಂಕೋಲಾ ಶಿರೂರು ಬಳಿ ಹೆದ್ದಾರಿಯಲ್ಲಿ ಗುಡ್ಡಕುಸಿತ, ಮಣ್ಣಿನಡಿ ಸಿಲುಕಿದ 7 ಮಂದಿ ಸಾವು
Uttarakannada News ಭಾರೀ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಬಳಿ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಅನಾಹುತವಾಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು
ಕಾರವಾರ: ಸತತ ಮೂರು ದಿನಗಳಿಂದ ಉತ್ತರ ಕನ್ನಡದಲ್ಲಿ ಭಾರೀ ಮಳೆ ಎಡಬಿಡದೇ ಸುರಿಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದ್ದು. ಅಲ್ಲಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಂಗಳವಾರ ಬೆಳಿಗ್ಗೆಯೂ ಸುರಿದ ಭಾರಿ ಮಳೆಯ ಪರಿಣಾಮ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಈ ವೇಳೆ ರಸ್ತೆ ದಾಟತ್ತಿದ್ದ ಒಂದೇ ಕುಟುಂಬದ ಸೇರಿದಂತೆ ಒಟ್ಟು 9 ಮಂದಿ ಮಣ್ಣಿನಡಿ ಸಿಲುಕಿ 7 ಮಂದಿ ಮೃತಪಟ್ಟಿದ್ದಾರೆ.
ಮಂಗಳವಾರ(ಜು.16ರಂದು) ಭೀಕರ ಮಳೆಯಿಂದ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಮಣ್ಣಿನಡಿಯಲ್ಲಿ 5 ಮಂದಿ ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಹೆದ್ದಾರಿ ಪಕ್ಕದಲ್ಲಿದ್ದ ಮನೆಯಲ್ಲಿನ ಕುಟುಂಬದ ಸದಸ್ಯರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎನ್ನುವ ಆತಂಕವಿದ್ದು. ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದರು, ಈ ವೇಳೆ 7 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ಎರಡು ಕುಟುಂಬದ ಒಟ್ಟು ಒಂಬತ್ತು ಮಂದಿ ಮಣ್ಣಿನಡಿ ಸಿಲುಕೊಂಡಿದ್ದಾರೆ ಎನ್ನುವ ಆರಂಭಿಕ ಮಾಹಿತಿ ದೊರೆತಿತ್ತು. ಸ್ಥಳೀಯರಾದ ಲಕ್ಷ್ಮಣ ನಾಯ್ಕ (47), ಶಾಂತಿ ನಾಯ್ಕ (36), ರೋಶನ್ (11), ಅವಾಂತಿಕಾ (6), ಜಗನ್ನಾಥ(55 ) ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಮಣ್ಣಿನಡಿ ಸಿಲುಕಿ ರಕ್ಷಣಾ ಕಾರ್ಯ ನಡೆದರೂ 7 ಮಂದಿ ಅಂತಿಮವಾಗಿ ಪ್ರಾಣ ಕಳೆದುಕೊಂಡಿರುವುದಾಗಿ ಮಾಹಿತಿ ದೊರೆತಿದೆ.
ಗುಡ್ಡ ಕುಸಿತದಿಂದಾಗಿ ಅಂಕೋಲ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಾರವಾರ ಗೋವಾ ಅಂಕೋಲಾದಿಂದ ಕೇರಳ, ಮಂಗಳೂರು, ಕುಮಟಾ ಮತ್ತಿತರ ಭಾಗಗಳಿಗೆ ತೆರಳುವ ವಾಹನಗಳು ಹೆದ್ದಾರಿಯಲ್ಲಿ ಮೂರು ತಾಸಿನಿಂದ ಕಾಲ ಕಳೆಯುವಂತಾಗಿದೆ. ಆದಷ್ಟು ಬೇಗನೇ ರಸ್ತೆಗೆ ಬಿದ್ದಿರುವ ಗುಡ್ಡದ ಮಣ್ಣನ್ನು ತೆಗೆದು ಒಳಗೆ ಸಿಲುಕಿಕೊಂಡವರನ್ನು ರಕ್ಷಿಸಲಾಗುತ್ತಿದೆ.
ಡಿಸಿ ಲಕ್ಷ್ಮಿಪ್ರಿಯಾ ಸೂಚನೆ
ಉತ್ತರಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಗುಡ್ಡ, ನದಿ, ಹಳ್ಳಕೆರೆ ಹತ್ತಿರದಲ್ಲಿ ವಾಸಿಸುತ್ತಿರುವ ಕುಟುಂಬಸ್ಥರನ್ನು ಮತ್ತು ಸಾರ್ವಜನಿಕರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಅವಶ್ಯಕತೆ ಇರುತ್ತದೆ ಎಂದು ಉತ್ತರ ಕನ್ನಡ ಡಿಸಿ ಲಕ್ಷ್ಮೀ ಪ್ರಿಯ ತಿಳಿಸಿದ್ದಾರೆ. ಆದ್ದರಿಂದ ಜಿಲ್ಲೆಯ ಸಂಬಂಧಪಟ್ಟ ಎಲ್ಲಾ ತಾಲ್ಲೂಕಿನ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರು, ಸಹಾಯಕ ಆಯುಕ್ತರು ಕೂಡಲೇ ಮುನ್ನೆಚರಿಕೆ ಕ್ರಮವಾಗಿ ಗುಡ್ಡ, ನದಿ, ಹಳ್ಳ,ಕರ ದಡದಲ್ಲಿರುವ ಎಲ್ಲಾ ಮನೆಗಳಲ್ಲಿರುವ ಕುಟುಂಬದ ಸದಸ್ಯರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮತ್ತು ಕಟ್ಟುನಿಟ್ಟಿನ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲು ಅದೇಶಿಸಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿ/ಸಿಬ್ಬಂಧಿಗಳ ಮೇಲೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ.
ವರದಿ: ಹರೀಶ ಮಾಂಬಾಡಿ.ಮಂಗಳೂರು