ಶಿರೂರು ಭೂಕುಸಿತ; 10 ನೇ ದಿನದ ಕಾರ್ಯಾಚರಣೆ ಇಂದು, ಅರ್ಜುನನ ಶೋಧಕ್ಕೆ ಹವಾಮಾನ ಅಡ್ಡಿ, ಉತ್ತರ ಕನ್ನಡದಲ್ಲಿ ಭಾರಿ ಗಾಳಿ ಮಳೆ
ಕನ್ನಡ ಸುದ್ದಿ  /  ಕರ್ನಾಟಕ  /  ಶಿರೂರು ಭೂಕುಸಿತ; 10 ನೇ ದಿನದ ಕಾರ್ಯಾಚರಣೆ ಇಂದು, ಅರ್ಜುನನ ಶೋಧಕ್ಕೆ ಹವಾಮಾನ ಅಡ್ಡಿ, ಉತ್ತರ ಕನ್ನಡದಲ್ಲಿ ಭಾರಿ ಗಾಳಿ ಮಳೆ

ಶಿರೂರು ಭೂಕುಸಿತ; 10 ನೇ ದಿನದ ಕಾರ್ಯಾಚರಣೆ ಇಂದು, ಅರ್ಜುನನ ಶೋಧಕ್ಕೆ ಹವಾಮಾನ ಅಡ್ಡಿ, ಉತ್ತರ ಕನ್ನಡದಲ್ಲಿ ಭಾರಿ ಗಾಳಿ ಮಳೆ

ಉತ್ತರ ಕನ್ನಡ ಜಿಲ್ಲೆಯ ಶಿರೂರು ಭೂಕುಸಿತ ಸ್ಥಳದಲ್ಲಿ10 ನೇ ದಿನದ ಕಾರ್ಯಾಚರಣೆ ಇಂದು ನಡೆಯುತ್ತಿದೆ. ಕೇರಳದ ಲಾರಿ ಚಾಲಕ ಅರ್ಜುನನ ಶೋಧಕ್ಕೆ ಹವಾಮಾನ ಅಡ್ಡಿ ಉಂಟುಮಾಡಿದೆ. ಉತ್ತರ ಕನ್ನಡದಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಇನ್ನಷ್ಟು ಅನಾಹುತ ಸಾಧ್ಯತೆ ಕಾರಣ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋ‍ಷಿಸಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಶಿರೂರು ಭೂಕುಸಿತ; 10 ನೇ ದಿನದ ಕಾರ್ಯಾಚರಣೆ ಇಂದು ನಡೆಯುತ್ತಿದೆ. ಉತ್ತರ ಕನ್ನಡದಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಕೇರಳದ ಲಾರಿ ಚಾಲಕ ಅರ್ಜುನನ ಶೋಧಕ್ಕೆ ಹವಾಮಾನ ಅಡ್ಡಿ ಉಂಟುಮಾಡಿದೆ.
ಶಿರೂರು ಭೂಕುಸಿತ; 10 ನೇ ದಿನದ ಕಾರ್ಯಾಚರಣೆ ಇಂದು ನಡೆಯುತ್ತಿದೆ. ಉತ್ತರ ಕನ್ನಡದಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಕೇರಳದ ಲಾರಿ ಚಾಲಕ ಅರ್ಜುನನ ಶೋಧಕ್ಕೆ ಹವಾಮಾನ ಅಡ್ಡಿ ಉಂಟುಮಾಡಿದೆ.

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿದದಿಂದ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಕೇರಳದ ಲಾರಿಯ ಶೋಧಕ್ಕಾಗಿ ತೀವ್ರ ಪ್ರಯತ್ನಗಳು ಸಾಗಿವೆ. ಬುಧವಾರ ಒಂಭತ್ತು ದಿನಗಳ ಕಾರ್ಯಾಚರಣೆ ಅಂತ್ಯವಾಗಿದ್ದು, ಗುರುವಾರ 10ನೇ ದಿನದ ಕಾರ್ಯಾಚರಣೆ ಆರಂಭಗೊಂಡಿದ್ದು, ಇದು ಅಂತಿಮ ಹಂತದ ಕಾರ್ಯಾಚರಣೆಯಾಗಲಿದೆ ಎಂಬ ವಿಶ್ವಾಸವನ್ನು ಅಂಕೋಲಾ ಶಾಸಕ ಸತೀಶ್ ಸೈಲ್ ವ್ಯಕ್ತಪಡಿಸಿದ್ದಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ಮಧ್ಯೆ, ಉತ್ತರ ಕನ್ನಡದ ಶಿರೂರಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಇತ್ತೀಚಿಗೆ ಸಂಭವಿಸಿದ ಗುಡ್ಡ ಕುಸಿದ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದವರ ಪೈಕಿ 8 ಜನರ ಮೃತದೇಹಗಳು ದೊರೆತಿದ್ದು, ರಕ್ಷಣಾ ಕಾರ್ಯ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ.

ಜುಲೈ 16ರಂದು ಶಿರೂರು ಭೂಕುಸಿತ ಘಟನೆ ನಡೆದಿದ್ದು, ಮಣ್ಣಿನಡಿ ಹಲವರು ಸಿಲುಕಿದ್ದರು. ಈಗಾಗಲೇ 8 ಮೃತ ದೇಹಗಳು ಪತ್ತೆಯಾಗಿವೆ. ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿಯ ಅವಶೇಷಗಳು ಗುಡ್ಡ ಕುಸಿತ ಪ್ರದೇಶದ ಗಂಗಾವಳಿ ನದಿ ಅಂಚಿನಲ್ಲಿ ಲಾಂಗ್ ಆರ್ಮ್ ಬೂಮರ್ ಪೋಕ್ಲೈನ್ ತಂತ್ರಜ್ಞಾನದ ಮೂಲಕ ಕಾರ್ಯಾಚರಣೆ ವೇಲೆ ಪತ್ತೆಯಾಗಿವೆ ಎನ್ನಲಾಗಿದ್ದು, ಲಾರಿ ಚಾಲಕ ಅರ್ಜುನ್ ಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎನ್ನಲಾಗಿದೆ. ನದಿ ಆಳದಲ್ಲಿ ಲಾರಿ ಕುರುಹು ಪತ್ತೆಯಾಗಿರುವ ವಿಚಾರವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಟ್ವೀಟ್ ಮಾಡಿ ತಿಳಿಸಿದ್ದಾರೆ. ಆದರೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಶಾಸಕ ಸತೀಶ್ ಸೈಲ್ ಇನ್ನೂ ಅಧಿಕೃತವಾಗಿ ಈ ವಿಚಾರವನ್ನು ಹೇಳಬೇಕಷ್ಟೇ.

ಶಿರೂರು ಭೂಕುಸಿತ; ಕರ್ನಾಟಕ ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ

ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿರುವ ಜನರ ರಕ್ಷಣೆ ಹಾಗೂ ಪತ್ತೆ, ಹೆದ್ದಾರಿಯಲ್ಲಿ ಬಿದ್ದಿರುವ ಕಲ್ಲು-ಮಣ್ಣು ತೆರವುಗೊಳಿಸಲು 24 ಗಂಟೆಗಳ ಕಾಲವೂ ನಿರಂತರವಾಗಿ ಸಾಧ್ಯವಿರುವ ಎಲ್ಲಾ ಕ್ರಮ ಜರುಗಿಸಬೇಕು. ಸೇನಾಪಡೆಗಳನ್ನು ನಿಯೋಜಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ವಕೀಲರಾದ ಸಿ.ಜಿ.ಮಲೈಯಿಲ್ ಮತ್ತು ಕೆ.ಎಸ್.ಸುಭಾಷ್ ಚಂದ್ರ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠಕ್ಕೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟಿರ್ ಜನರಲ್ ಕೆ.ಅರವಿಂದ ಕಾಮತ್ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಒದಗಿಸಿದ್ದಾರೆ.

ತಂತ್ರಜ್ಞಾನ ಮೂಲಕ ಶೋಧ ಮುಂದುವರಿಕೆ

ತಂತ್ರಜ್ಞಾನದ ಮೂಲಕ ಶೋಧ ಕಾರ್ಯವನ್ನು ಮುಂದುವರಿಸಲಾಗಿದ್ದು, ಲಾರಿ ನದಿಯಲ್ಲೇ ಇದೆ ಎನ್ನಲಾಗಿದೆ. ಮುಳುಗುತಜ್ಞರು ನೀರಿಗಿಳಿಯಲು ಸಾಧ್ಯವಾಗಿಲ್ಲ. ಲಾರಿ ಸಿಲುಕಿರಬಹುದಾದ ಸ್ಥಳದ ಮಾಹಿತಿ ಸಿಗುತ್ತಲೇ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಶಾಸಕ ಸತೀಶ್ ಸೈಲ್, ಕೇರಳದ ಮಂಜೇಶ್ವರ ಶಾಸಕ ಅಶ್ರಫ್, ಇನ್ನಿತರರು ಗಂಗಾವಳಿಯಲ್ಲಿ ಬೋಟ್ ಮೂಲಕ ತೆರಳಿ, ಪರಿಶೀಲಿಸಿದ್ದು, ಇದೇ ಪ್ರದೇಶವನ್ನು ಕೇಂದ್ರೀಕೃತವಾಗಿಸಿಕೊಂಡು, ಗುರುವಾರ ಕಾರ್ಯಾಚರಣೆ ನಡೆಯುತ್ತಿದೆ.

ಕೋಯಿಕ್ಕೋಡ್ ಮೂಲದ ಮುನಾಫ್ ಅವರಿಗೆ ಸೇರಿದ ಭಾರತ್ ಬೆಂಜ್ ಲಾರಿ ಮರ ತುಂಬಿಕೊಂಡು ಜೋಯಿಡಾದಿಂದ ಕೇರಳಕ್ಕೆ ಸಾಗುತ್ತಿತ್ತು. ಜುಲೈ 15ರಂದು ಅಂಕೋಲಾ ದಾಟಿ ಬಂದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಕಂಡುಬಂದಿವೆ. ಶಿರೂರು ಬಳಿ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿದ ಚಾಲಕ ಅರ್ಜುನ್ ವಿಶ್ರಾಂತಿ ಪಡೆಯುತ್ತಿದ್ದರು. ಗುಡ್ಡ ಕುಸಿತ ಸಂಭವಿಸಿ ಅವರು ಲಾರಿ ಸಹಿತ ಕೊಚ್ಚಿಹೋಗಿದ್ದಾರೆ.

ಇದೀಗ ಒಂಭತ್ತು ದಿನಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕವೂ 4 ಮಂದಿಯ ಮೃತದೇಹ ಪತ್ತೆಯಾಗಬೇಕಿದೆ. ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ ಗಳನ್ನು ಬಳಸಿ ಕಾರ್ಯಾಚರಣೆ ನಡೆಯುತ್ತಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner