Perumkaliyattam 2025: 351 ವರ್ಷಗಳ ಬಳಿಕ ಪೆರುಂಕಳಿಯಾಟ; ಇದು ತುಳು- ಮಲಯಾಳಂ ಸಂಸ್ಕೃತಿ ಸಮ್ಮಿಲನ
Perumkaliyattam 2025: ಕೇರಳ - ಕರ್ನಾಟಕ ಗಡಿಪ್ರದೇಶ ಆದೂರಿನಲ್ಲಿ ಜನವರಿ 19ರಿಂದ 24 ತನಕದ ಪೆರುಂಕಳಿಯಾಟ ಮಹೋತ್ಸವು ತುಳು ಮಲಯಾಳಂ ಸಂಸ್ಕೃತಿಗಳ ಸಮ್ಮಿಲನವಾಗಿ ರೂಪುಗೊಂಡು ಗಮನ ಸೆಳೆಯಿತು. ಇದು 351 ವರ್ಷಗಳ ಬಳಿಕ ನಡೆದ ಉತ್ಸವವಾಗಿದ್ದು, ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Perumkaliyattam 2025: ಕರ್ನಾಟಕ ಹಾಗೂ ಕೇರಳದ ಕರಾವಳಿ ಭಾಗವಾದ ಕಾಸರಗೋಡಿನಿಂದ ಉಡುಪಿವರೆಗಿನ ಜನರಿಗೆ ದೈವಾರಾಧನೆ ಎಂಬುದು ಹೊಸ ವಿಷಯವೇನಲ್ಲ. ಆದರೆ, ಕೇರಳ - ಕರ್ನಾಟಕ ಗಡಿಪ್ರದೇಶವಾದ ಆದೂರಿನಲ್ಲಿ ಜನವರಿ 19ರಿಂದ ಪ್ರಾರಂಭವಾಗಿ ಶುಕ್ರವಾರ (ಜ.24) ತನಕದ ಪೆರುಂಕಳಿಯಾಟ ತುಳು ಮಲಯಾಳಂ ಸಂಸ್ಕೃತಿಗಳ ಸಮ್ಮಿಲನವಾಗಿ ರೂಪುಗೊಂಡು ಗಮನ ಸೆಳೆಯಿತು. ವಿಶೇಷವೆಂದರೆ ಇಂಥದ್ದೊಂದು ಕಾರ್ಯಕ್ರಮ 351 ವರ್ಷಗಳ ಬಳಿಕ ನಡೆದಿದೆ.
351 ವರ್ಷಗಳ ಬಳಿಕ ಪೆರುಂಕಳಿಯಾಟ
ಕರ್ನಾಟಕ ಕರಾವಳಿಯ ಸೋಮೇಶ್ವರದಿಂದ ಕಾಸರಗೋಡುವರೆಗೆ ವಾಸಿಸುತ್ತಿರುವ ಮುಖಾಯ ಬೋವಿ ಸಮುದಾಯದ ಹನ್ನೊಂದು ಆರಾಧನಾ ಮೂಲಸ್ಥಾನಗಳ ಪೈಕಿ ಪುರಾತನವಾಗಿರುವ ಆದೂರು ಶ್ರೀ ಭಗವತೀ ದೈವಸ್ಥಾನವು 351 ವರ್ಷಗಳ ಬಳಿಕ ಪೆರುಂಕಳಿಯಾಟದ ಸಂಭ್ರಮ ಆಚರಿಸುತ್ತಿದೆ.
ಪೆರುಂ ಎಂದರೆ ದೊಡ್ಡದು. ಪೆರುಂಕಳಿಯಾಟ ಎಂದರೆ ದೊಡ್ಡ ಕಳಿಯಾಟ ಎಂದರ್ಥ. ಆರು ರಾತ್ರಿ ಮತ್ತು 6 ಹಗಲು ನಡೆಯುವ ಕುಳಿಚ್ಚಾಟಂ, ಆಂದಿತೋಟ್ಟಂ, ಉಚ್ಚ ತೋಟಂ ಇತ್ಯಾದಿ ಇಲ್ಲಿ ನಡೆಯಿತು. ಒಂದು ಅಂದಾಜಿನ ಪ್ರಕಾರ, ಜನವರಿ 19ರಿಂದ ಪ್ರತಿ ದಿನ ಸುಮಾರು 45 ಸಾವಿರ ಮಂದಿ ಈ ಉತ್ಸವವನ್ನು ವೀಕ್ಷಿಸಿದ್ದಾರೆ.
ಪ್ರಧಾನಿಯಿಂದಲೂ ಶುಭ ಹಾರೈಕೆ: ಪೆರುಂಕಳಿಯಾಟ ಮಹೋತ್ಸವಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಶುಭ ಹಾರೈಸಿದ್ದಾರೆ. ಐತಿಹಾಸಿಕ ಪೆರುಂಕಳಿಯಾಟ ಯಶಸ್ವಿಯಾಗಿ ನಡೆಯಲಿ ಎಂದು ಸಮಿತಿಗೆ ಪತ್ರಮುಖೇನ ಅವರು ಶುಭ ಹಾರೈಸಿದ್ದಾರೆ.
ಮೂವರು ಭಗವತಿ ಮಾತೆಯರ ಕ್ಷೇತ್ರ
ಆದೂರು ಶ್ರೀ ಭಗವತೀ ಕ್ಷೇತ್ರದ ಗರ್ಭಗೃಹದಲ್ಲಿ ಪುನಕ್ಕಾಲ್ ಭಗವತಿ, ಉಚ್ಚಿಲ್ ಕಡವತ್ ಭಗತವತಿ, ಆಯಿಟ್ಟಿ ಭಗವತಿ ಎಂಬ ಮೂವರು ಭಗವತಿ ಮಾತೆಯರ ಪ್ರತಿಷ್ಠೆಯಾಗಿದೆ. ಮುಖಮಂಟಪದಲ್ಲಿ ಬಿಲ್ಲಾವರತ್ ಅಸುರಾಳ ದೈವ, ಶ್ರೀ ಮಲಾಂಗುಯಿ ಚಾಮುಂಡಿ ಮತ್ತು ಶ್ರೀ ಮೇಚ್ಚೇರಿ ಚಾಮುಂಡಿ ಅಲ್ಲದೆ, ಶ್ರೀ ಕಲ್ಲಂಗರ ಮೂವಾಳ ಚಾಮುಂಡಿ ಮತ್ತು ಶ್ರೀ ಪಂಜುರ್ಲಿ ದೈವಗಳನ್ನು ಆರಾಧಿಸಲಾಗುತ್ತದೆ. ಶ್ರೀ ವಿಷ್ಣುಮೂರ್ತಿ ಹಾಗೂ ಶ್ರೀ ಕುಂಢಾರ್ ಚಾಮುಂಡಿ ಶಕ್ತಿಗಳಿಗೆ ಗುಡಿ ಆವರಣದಲ್ಲಿ ಪ್ರತ್ಯೇಕ ಸ್ಥಾನಗಳೂ ದೈವರಾಜ ಶ್ರೀ ಗುಳಿಗಜ್ಜನಿಗೆ ಗುಡಿಯೂ ಶ್ರೀ ನಾಗರಾಜ ನಾಗಕನ್ನಿಕೆ ಶಕ್ತಿಗಳಿಗೆ ಮತ್ತು ಶ್ರೀ ತೂವಕ್ಕಾಳಿ ಅಮ್ಮನಿಗೆ ಬನವೂ ಇಲ್ಲಿದೆ.
ತುಳು-ಮಲಯಾಳ ಸಂಸ್ಕೃತಿಗಳ ಸಮ್ಮಿಲನ
ತುಳುನಾಡಿನಲ್ಲಿ ಕೇರಳ - ಕರ್ನಾಟಕ ಗಡಿಪ್ರದೇಶದಲ್ಲಿ "ದೈವಗಳು" ಹಾಗೂ "ತೆಯ್ಯಂ" ಒಂದೇ ಕಡೆಯಲ್ಲಿ ನೋಡುವ ಅವಕಾಶ ಇಲ್ಲಿ ಒದಗಿಬಂತು.ಕರಾವಳಿಯ ದೈವಗಳಿಗೆ ಹೋಲಿಸಿದರೆ ಹೋಲಿಸಿದರೆ ಕೇರಳದ ತೆಯ್ಯಂ ನ ಮುಖ ಬಣ್ಣ, ಅಣಿಗಳು, ನರ್ತನ ಪದ್ಧತಿಗಳು ತೀರಾ ಭಿನ್ನವಾಗಿರುತ್ತವೆ. ಮುಖದ ಬಣ್ಣಗಾರಿಕೆಯಿಂದಾಗಿ ತುಂಬಾ ಆಕರ್ಷಕವಾಗಿರುತ್ತವೆ.
ಕಳಿಯಾಟ ಎಂದರೆ ಒಂದು ಸ್ಥಾನದಲ್ಲಿರುವ (ಪ್ರತ್ಯೇಕ ಸ್ಥಳದಲ್ಲಿರುವ) ಸಾನಿಧ್ಯದ ಉತ್ಸವ ಆಗಿದ್ದರೆ ಪೆರುಂಕಳಿಯಾಟ ಹೆಸರೆ ಸೂಚಿಸುವಂತೆ ದೊಡ್ಡ ಕಳಿಯಾಟ.ಇಡೀ ಗ್ರಾಮದ ಸಾನಿಧ್ಯಗಳಿಗೆ ಇಲ್ಲಿ ದಿನವಿಡೀ ಕೋಲ ನಡೆಯಿತು.
ತುಳು ಪದ್ದತಿಯ ನರ್ತನ ಹಾಗೂ ಮಲಯಾಳಂ ಪದ್ದತಿಯ ನರ್ತನ ಒಂದೆ ಅಂಗಳದಲ್ಲಿ ಒಂದೇ ಸಮಯದಲ್ಲಿ ನಡೆಯುತ್ತಿರುವುದು ವಿಶೇಷ 51 ವರ್ಷಗಳ ಬಳಿಕ ಪುನ್ನಕ್ಕಲ್ ಭಗವತಿ, ಉಚ್ಚೂಳಿ ಕಡವತ್ ಭಗವತಿ, ಆಯಿಟ್ಟಿ ಭಗವತಿ ಎಂಬ ಮೂವರು ಭಗವತಿ ಅಮ್ಮನವರು ಒಂದೇ ಆಸನದಲ್ಲಿ ಕುಳಿತುಕೊಳ್ಳುವ ದೃಶ್ಯ ಕಂಡುಬಂತು. ಇದರ ಜೊತೆಯಲ್ಲಿ ತುಳು ಮಲಯಾಳಂ ಸಂಸ್ಕೃತಿಯ ಮಿಲನವಾಯಿತು. ಮಲಯಾಳಂ ಸಂಸ್ಕೃತಿಯ ಪ್ರತೀಕವಾದ ತಿರುವಾದಿರ, ಕೈಕೊಟ್ಟಿ ಕಳಿ, ತುಳು ಸಂಸ್ಕೃತಿಯ ಭಾಗವಾದ ಭಜನೆ, ಯಕ್ಷಗಾನ , ನಾಟಕಗಳ ಸಮ್ಮಿಲನ ಇಲ್ಲಿತ್ತು.
39 ದೈವಗಳ ಕುಳಿಚ್ಚಾಟ: ಪೆರುಂಕಳಿಯಾಟದಲ್ಲಿ ಶ್ರೀ ಪುನ್ಸಕ್ಕಾಲ್ ಭಗವತಿ, ಉಚ್ಚೊಳಿ ಕಡವತ್ ಭಗವತಿ, ಆಯಟ್ಟ ಭಗವತಿ, ವೈರಾಪುರತ್ತ್, ವಡಕಾಂಕೋಡಿ, ಚಳ್ಳಂಗೋಡು, ವಿಷ್ಣುಮೂರ್ತಿ, ಕುಂಟಾರು ಚಾಮುಂಡಿ, ಕಲ್ಲಂಗರ ಚಾಮುಂಡಿ, ಮೇಚೇರಿ ಚಾಮುಂಡಿ, ಅಸುರಾಳನ್, ಮಲಂಗರ ಚಾಮುಂಡಿ, ಪನ್ನಿಕುಳತ್ ಚಾಮುಂಡಿ, ಪಡಿಂಞಾರ್ ಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ಭಗವತಿ ದೈವ, ಪಡುಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ರಕ್ತೇಶ್ವರಿ, ಕೊರತ್ತಿ, ತೂವಕ್ಕಾಳನ್, ಸಂಚಾರ ಗುಳಿಗ, ಮಾಂತ್ರಿಕ ಗುಳಿಗ ಮೊದಲಾದ ದೈವಗಳ ಕುಳಿಚ್ಚಾಟ, ಕೋಲಗಳು ನಡೆಯಿತು.
ಇಲ್ಲಿನ ನಂಬಿಕೆಗಳು ಹೀಗಿವೆ: ಶ್ರೀ ಕ್ಷೇತ್ರ ಪೂಜ್ಯ ತೂವಕ್ಕಾಳಿಯಮ್ಮನವರ ನೆಲೆಯಲ್ಲಿ ಸೀಯಾಳ ಹರಕೆ ನಿವೇದಿಸಿದರೆ, ತುರಿಕೆ ವ್ಯಾಧಿ ಶೀಘ್ರ ನಿವಾರಣೆಯಾಗುತ್ತದೆ, ಆವರಣದಲ್ಲಿರುವ ಬಾವಿಯ ನೀರನ್ನು ಸೇವಿಸಿದರೆ, ಮಾನಸಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ, ಪವಿತ್ರ ಜಲಸೇವನೆಯಿಂದ ಸಂತಾನರಹಿತರಿಗೆ ಸಂತಾನ ಪ್ರಾಪ್ರಿಯಾಗುತ್ತದೆ ಎಂಬ ನಂಬಿಕೆ ಇದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
