Water Story: ಒರತೆಯೇ ಇಲ್ಲದ ಬಾವಿಗೆ ನೀರು ಹರಿಸಿ ಜಲಪಾಠ ಮಾಡಿದ ಬಟ್ಯ ಮಾಸ್ಟರ್: ಜಲಾಂದೋಲನದ ಕಥೆ ಇದು
Water Conservation ಕಾಸರಗೋಡು ಜಿಲ್ಲೆಯ ನಿವೃತ್ತ ಶಿಕ್ಷಕರೊಬ್ಬರು ಜಲ ಸಂರಕ್ಷಣೆಯ ಹಲವು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಅದರ ಯಶೋಗಾಥೆ ಇಲ್ಲಿದೆವರದಿ: ಹರೀಶ ಮಾಂಬಾಡಿ ಮಂಗಳೂರು
ಮಂಗಳೂರು: ಪೊಟ್ಟು ಬಾವಿ ಎಂದೇ ಸ್ಥಳೀಯವಾಗಿ ಹೇಳುವ ನೀರಿಲ್ಲದ ಬಾವಿಯಲ್ಲಿ ನೀರು ಹರಿಯುತ್ತಿದೆ. 65 ಅಡಿ ಆಳದ ಬಾವಿಯಲ್ಲಿ ಜಲಸಿಂಚನವಾಗಿದೆ. ಇದು ಹನಿ ನೀರನ್ನೂ ಬಿಡದೆ ಮಳೆಕೊಯ್ಲು ಮಾಡಿದ್ದರ ಪರಿಣಾಮ ಕಾಸರಗೋಡು ಜಿಲ್ಲೆಯ ಪಡ್ರೆ ಎಂಬಲ್ಲಿರುವ ವಾಣೀನಗರ ಸರಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಬಟ್ಯ ಮಾಸ್ತರ್ ಅವರ ಪ್ರಯತ್ನದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಆರ್ಲಪದವು ಸಮೀಪದ ಬರಡು ಭೂಮಿ ಜತೆಗಿನ ಅವರ ಎಡೆ ಬಿಡದ ಸಾಂಗತ್ಯ ಫಲ ನೀಡಿದ್ದು ಹೀಗೆ.
ಪೊಟ್ಟು ಬಾವಿಯಲ್ಲಿ ಮಳೆ ಕೊಯ್ಲಿನ ಒರತೆ ನೀರು ಸಮೃದ್ಧಾಗಿದೆ. ಜಮೀನಿನಲ್ಲಿ ಬೀಳುವ ಒಂದು ಹನಿ ನೀರನ್ನೂ ಹೊರ ಹರಿಯ ಬಿಡದೆ ಅಲ್ಲೆ ಇಂಗಿಸಿ ಮಾಸ್ತರ್ ಕುಟುಂಬ ಟೆನ್ಶನ್ ಫ್ರೀ ಆಗಿದ್ದಾರೆ.
ಬೇಸಗೆಯಲ್ಲಿ ನೀರು ಮೇಲೆತ್ತಲಾಗದಷ್ಟು, ತುಂಬ ಅಳಕ್ಕೆ ಇಳಿದಾಗ ಮಾತ್ರ ಮಾಸ್ತರ್ ಕೊಳವೆ ಬಾವಿಯ ನೀರು ಬಳಸುತ್ತಿದ್ದಾರೆ. ಒರತೆಯೇ ಇಲ್ಲದ ಅವರ ಬಾವಿಯಲ್ಲಿ ಮಾನವ ಯತ್ನದಿಂದ ಒರತೆ ಸೃಷ್ಟಿಯಾಗಿದೆ. ಪ್ರಸ್ತುತ ಅವರ ಬಾವಿ ದಿನಕ್ಕೆ ಸಾವಿರ ಲೀಟರ್ ಗೂ ಹೆಚ್ಚು ನೀರು ಕೊಡುತ್ತಿದೆ. 2019ರಲ್ಲಿ ಬಟ್ಯ ಮಾಸ್ತರ್ ಹೊಸ ಮನೆ ನಿರ್ಮಿಸಿದ್ದಾರೆ. 2023ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ ಅವರ ಬಾವಿ ಊರಿಗೇ ಪಾಠ ಹೇಳುತ್ತಿದೆ.
ಬಟ್ಯ ಪಾಟಾಳಿ (ಮಾಸ್ಟರ್) ನೀರು ಪ್ರೀತಿಯ ಕಥೆ
ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿಯ ಕಾಟುಕುಕ್ಕೆ ಕುರಿಯತ್ತಡ್ಕ ನಿವಾಸಿ ಕೆ.ಬಟ್ಯ ಪಾಟಾಳಿ, ಪಡ್ರೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ವೇಳೆ 2006ರಲ್ಲಿ ಕರ್ನಾಟಕದ ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಆರ್ಲಪದವು ಪೇಟೆ ಸಮೀಪ ಪರಾರಿ ಎಂಬಲ್ಲಿ 38 ಸೆಂಟ್ವ್ ಜಾಗ ಖರೀದಿಸಿದ್ದರು. ನೀರಾಸೆಯಲ್ಲಿ 1 ವರ್ಷದ ಹಿಂದೆ ಬಾವಿ ತೋಡಿದ್ದರು. 28 ಕೋಲು (ಸುಮಾರು 65 ಅಡಿ) ಆಳ ತಲುಪಿದ್ದರೂ ಅದರಲ್ಲಿ ಒಂದು ಹನಿ ನೀರೂ ಸಿಗದೆ ಅವರಿಗೆ ದೊಡ್ಡ ನಿರಾಸೆ ಮೂಡಿಸಿತ್ತು.
ಕಂಪ್ರೆಸರ್ ಬಳಸಿ ಅಗೆದರೂ ಬಾವಿಯೊಳಗಿನ ಕಲ್ಲು ಒಡೆಯಲು ಸಾಧ್ಯವಾಗಿಲ್ಲ. ವೃತ್ತಾಕಾರದ ಬಾವಿಯೊಳಗೆ 10 ಕೋಲು (25 ಅಡಿ) ಸುರಂಗ ತೋಡಿದರೂ ನೀರು ಲಭಿಸಿಲ್ಲ. ಜಾಗ ಖರೀದಿಸಿ ಮೂರು ವರ್ಷ ಪಾಣಾಜೆ ಗ್ರಾಮ ಪಂಚಾಯಿತಿಯ ಕುಡಿಯುವ ನೀರು ಸರಬರಾಜು ಪಡೆದುಕೊಂಡರು. ಪಕ್ಕದ ಗಣಪತಿ ಬಲ್ಯಾಯರ ಬಾವಿಯ ನೀರು ಮನೆ ಖರ್ಚಿಗೆ ಸಾಕಾದರೂ ಖರೀದಿಸಿದ ಜಾಗದಲ್ಲಿ ಕೃಷಿ ಮಾಡುವ ಅವರ ಕನಸು ಕಮರಿಹೋಗಿತ್ತು. ನೆರೆಹೊರೆಯನ್ನು ಅವಲಂಬಿಸದೆ ತನ್ನದೇ ಆದ ಬಾವಿಯಲ್ಲಿ ನೀರು ಪಡೆಯಬೇಕೆಂಬ ಛಲ ಅವರಿಗಿತ್ತು.
Competitive Exam Training: ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಯಾಗುತ್ತೀದ್ದೀರಾ, ಇಲ್ಲಿ ತರಬೇತಿ ಉಚಿತ -ಯಶಸ್ಸು ಖಚಿತ; ಯಾವುದೀ ಸಂಸ್ಥೆ
ಅಲ್ಲಲ್ಲಿ ಇಂಗುಗುಂಡಿ ತೋಡಿದರು
ಧೃತಿಗೆಡದ ಮಾಸ್ತರ್ ಹಳೆಯ ಮನೆ ಸಮೀಪದ ಗೇರು ತೋಟದ ಅಲ್ಲಲ್ಲಿ ಇಂಗು ಗುಂಡಿ ತೋಡಿದರು. ಇದರಿಂದಾಗಿ ಬಾವಿಯಲ್ಲಿ ನೀರು ಕಾಣತೊಡಗಿದರೂ ಅಗತ್ಯದ ನೀರು ಲಭಿಸಲಿಲ್ಲ. ಬಾವಿಯಲ್ಲಿ ನೀರು ಸಿಗದ ಕಾರಣ ಆವರಣ ಗೋಡೆ ನಿರ್ಮಿಸಿರಲಿಲ್ಲ. ಮನೆಗೆ ಬಂದವರೆಲ್ಲಾ ಮನೆ ಮುಂಭಾಗದ ಬರಡು ಬಾವಿಯನ್ನು ಮುಚ್ಚುವಂತೆ ಸಲಹೆ ನೀಡಿದರು. ಆದರೆ ಬಟ್ಯ ಮಾಸ್ತರ್ ಅದಕ್ಕೆ ತಯಾರಾಗಲಿಲ್ಲ. ಬಾವಿಯಲ್ಲಿ ಇನ್ನೂ ಹೆಚ್ಚು ನೀರು ಸಿಗುವ ನಿರೀಕ್ಷೆಯಲ್ಲಿ ಬಾವಿ ಪಕ್ಕದಲ್ಲೆ ದೊಡ್ಡ ಇಂಗು ಗುಂಡಿ ತೋಡಿದರು. ತೆಂಗಿನ ಮರಗಳ ಸುತ್ತಲೂ ಇಂಗು ಗುಂಡಿ ನಿರ್ಮಿಸಿದರು. ಕೆಲವು ಇಂಗು ಗುಂಡಿಗಳಲ್ಲಿ ಅಡಕೆ ಗಿಡ ನೆಟ್ಟರೂ ಗುಂಡಿ ಮುಚ್ಚಲಿಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ಬಾವಿಯಲ್ಲಿ ನೀರಿನ ಮಟ್ಟ ಏರುತ್ತಾ ಹೋಯಿತು.
ಬಟ್ಯ ಮಾಸ್ತರ್ ಮಳೆ ನೀರಿಂಗಿಸುವ ಕೆಲಸವನ್ನು ಇನ್ನೂ ಹೆಚ್ಚಿಸಿದರು. ಮೇಲ್ಬಾಗದ ಇಪ್ಪತ್ತು ಸೆಂಟ್ಸ್ ಜಾಗದಿಂದ ಅಂಗಳದ ಮೂಲಕ ಇಳಿದು ಹೊರಹೋಗುತ್ತಿದ್ದ ನೀರನ್ನು ತಡೆದು ಇಂಗಿಸಿದರು. ಮನೆ ಮೇಲ್ಚಾವಣಿಯ ನೀರನ್ನು ಪೈಪಿನ ಮೂಲಕ ನೇರವಾಗಿ ಬಾವಿಗಿಳಿಸುವ ಕೆಲಸ ಮಾಡಿದರು. ಟ್ಯಾಂಕ್ ತುಂಬಿ ಹೊರ ಹೋಗುವ ನೀರನ್ನು ನೇರವಾಗಿ ಬಾವಿಗೆ ಇಳಿಸಿದರು. ಜಮೀನಿನಲ್ಲಿ ಬೀಳುವ ಮಳೆ ನೀರು, ಬಟ್ಟೆ, ಪಾತ್ರೆ ತೊಳೆದ ಒಂದು ಹನಿ ನೀರನ್ನೂ ಹೊರಬಿಡದೆ ಜಮೀನಿನಲ್ಲಿ ಇಂಗಿಸಿದರು.
ಬರಡು ಬಾವಿ ಒರತೆ ನೀರಿನಿಂದ ಕುಸಿದಾಗ ಹತ್ತಿಪ್ಪತ್ತು ಸಾವಿರ ಖರ್ಚು ಮಾಡಿ ಬಾವಿಯ ಒಳಗೆ ರಿಂಗ್ ಇಳಿಸಿದ್ದರು. ಜಮೀನಿನಲ್ಲಿ ನೂರು ಅಡಕೆ, 25 ತೆಂಗು ಗಿಡ ನೆಟ್ಟು ತೋಟ ಎಬ್ಬಿಸಿದರು. ಇದರೊಂದಿಗೆ ಮನೆ ಅಗತ್ಯದ ಜೊತೆ ತೋಟಕ್ಕೂ ನೀರು ಬೇಕಾಯಿತು. 2010ರಲ್ಲಿ 304 ಅಡಿ ಆಳದ ಕೊಳವೆಬಾವಿ ತೋಡಿಸಿದರು. ಅದರಲ್ಲಿ ನೀರು ಸಿಕ್ಕಿತು. ಜಮೀನಿನಲ್ಲಿ ನೀರು ಇಂಗುವಿಕೆಗೆ ಅನುಗುಣವಾಗಿ ಬಾವಿಯಲ್ಲಿ ಸ್ವಲ್ಪ ಸ್ವಲ್ಪವೇ ನೀರಿನ ಮಟ್ಟ ಹೆಚ್ಚ ತೊಡಗಿತು. ಪ್ರಸ್ತುತ ಮೇ ತಿಂಗಳಲ್ಲೂ ಮನೆ ಖರ್ಚಿನ ನೀರು ಸಿಗುತ್ತಿದೆ.
ಬಾವಿ, ಬಾವಿಯಲ್ಲಿ ಸುರಂಗ ನಿರ್ಮಾಣ, ರಿಂಗ್ ಇಳಿಸುವುದು ಸೇರಿ ಲಕ್ಷಾಂತರ ರೂ.ಖರ್ಚು ಮಾಡಿದ್ದೇನೆ. ಬರಡು ಬಾವಿಯಲ್ಲಿ ನೀರಿಂಗಿಸುವ ವರ್ಷಗಳ ಪ್ರಯತ್ನ ಕೊನೆಗೂ ಫಲ ನೀಡಿದೆ. ಛಲ ಬಿಡದ ಅವಿರತ ಯತ್ನ ಒಂದಲ್ಲಾ ಒಂದು ದಿನ ಫಲ ನೀಡುವುದು. ಪ್ರಕೃತಿ ಜತೆಗಿನ ಸಮತೋಲನದ ಮೈತ್ರಿಯಿಂದ ನೆಮ್ಮದಿಯ ಬದುಕು ಕಾಣಬಹುದು ಎಂಬುದು ಬಟ್ಯ ಮಾಸ್ತರ್ ಖಚಿತ ನಂಬಿಕೆ.
ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು