ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ; ಈ ದೇವಾಲಯದಲ್ಲಂಟು ಹತ್ತು ಹಲವು ವಿಶೇಷ
ಕನ್ನಡ ಸುದ್ದಿ  /  ಕರ್ನಾಟಕ  /  ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ; ಈ ದೇವಾಲಯದಲ್ಲಂಟು ಹತ್ತು ಹಲವು ವಿಶೇಷ

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ; ಈ ದೇವಾಲಯದಲ್ಲಂಟು ಹತ್ತು ಹಲವು ವಿಶೇಷ

ಮಧೂರು ಶ್ರೀ ಮದನಂತೇಶ್ವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ – ಮೂಡಪ್ಪಸೇವೆಯ ಸಂಭ್ರಮದಲ್ಲಿದೆ. ಹತ್ತೂರಿನ ಕಡೆಗಳಲ್ಲಿ ಮಧೂರು ಬ್ರಹ್ಮಕಲಶೋತ್ಸವದ ಸಂಭ್ರಮದ ಚರ್ಚೆ ನಡೆಯುತ್ತಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ

ಮಂಗಳೂರು: ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಮಧುವಾಹಿನಿಯ ತಟದಲ್ಲಿ ಪುನಃ ನಿರ್ಮಾಣಗೊಂಡಿರುವ ಮಧೂರು ಶ್ರೀ ಮದನಂತೇಶ್ವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇದೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ – ಮೂಡಪ್ಪಸೇವೆಯ ಸಂಭ್ರಮದಲ್ಲಿದೆ. ಹತ್ತೂರಿನ ಕಡೆಗಳಲ್ಲಿ ಮಧೂರು ಬ್ರಹ್ಮಕಲಶೋತ್ಸವದ ಸಂಭ್ರಮದ ಚರ್ಚೆ ನಡೆಯುತ್ತಿದೆ.

ಮಧೂರು ದೇವಸ್ಥಾನದಲ್ಲಿ ಗಣಪತಿ ದೇವರಿಗೆ ಮೂಡಪ್ಪ ಸೇವೆ ಅತ್ಯಂತ ವಿಶೇಷವಾದ ಸೇವೆ. ಹೀಗಾಗಿ ಇಲ್ಲಿ ಮೂಡಪ್ಪ ಸೇವೆಯನ್ನು ಸಲ್ಲಿಸಲೆಂದೇ ಹರಕೆ ಹೊತ್ತು ದೂರದೂರುಗಳಿಂದ ಜನರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೊಸರೂಪ ನೀಡುವ ಬ್ರಹ್ಮಕಲಶೋತ್ಸವ , ಜೀರ್ಣೋದ್ಧಾರ ಕಾರ್ಯಗಳು ಕೆಲ ವರ್ಷಗಳಿಂದ ನಡೆಯುತ್ತಿದ್ದು, ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದೆ. ಮಾರ್ಚ್ 27ರಿಂದ ಆರಂಭಗೊಂಡು ಏಪ್ರಿಲ್ 7ರವರೆಗೆ ಮಧೂರು ಬ್ರಹ್ಮಕಲಶೋತ್ಸವ ನಡೆಯಲಿದೆ.

ದಿನನಿತ್ಯ ನೂರಾರು ಮಂದಿ ಸ್ವಯಂಸೇವಕರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಆಗಮಿಸುವ ಸ್ವಯಂಸೇವಕರ ತಂಡದಲ್ಲಿ ಮಹಿಳೆಯರೂ ಮಕ್ಕಳೂ ಜೊತೆಗಿರುತ್ತಾರೆ. ಅತ್ಯುತ್ಸಾಹದಿಂದ ದೇವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಒಳಾಂಗಣದ ಚಪ್ಪರದ ಕೆಲಸಗಳು ಮುಗಿಯುವ ಹಂತಕ್ಕೆ ತಲುಪಿದೆ.

ಬಿದಿರಿನ ಅಟ್ಟಳಿಕೆ ನಿರ್ಮಾಣ

ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಶ್ರೀ ದೇವರ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಮೇಲ್ಭಾಗದಲ್ಲಿ ಸ್ಥೂಪಿಕಾ (ಮುಗುಳಿ) ಪ್ರತಿಷ್ಠೆ ಮಾಡುವುದಕ್ಕೂ ವಿಶೇಷ ಪ್ರಾಧಾನ್ಯವಿದೆ. ಅದಕ್ಕಾಗಿ ಮಾಡಿನ ಮೇಲೇರುವುದು ಬಲುಸಾಹಸದ ಕೆಲಸ. ಒಂದೆಡೆ ಬಿಸಿಲಿನ ಹೊಡೆತವನ್ನು ತಾಳಿಕೊಳ್ಳಬೇಕು, ಮಾಡಿನ ಮೇಲ್ಭಾಗವೂ ಬಿಸಿಯಾಗಿರುವುದರಿಂದ ಕಾಲಿಟ್ಟು ನಿಲ್ಲುವುದೂ ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಬಿದಿರಿನಿಂದ ತಯಾರಿಸಿದ ವಿಶೇಷ ಅಟ್ಟಳಿಕೆಯನ್ನೂ ನಿರ್ಮಿಸಲಾಗಿದೆ. ಗಜಪೃಷ್ಠಾಕಾರದ ಗರ್ಭಗುಡಿಯ ಪಶ್ಚಿಮ ಭಾಗದಲ್ಲಿ ಈ ಬಿದಿರಿನ ಮಂಟಪವನ್ನು ಕಾಣಬಹುದು. ಬಿದಿರಿನ ಮಂಟಪದ ಮೂಲಕ ಮೇಲೇರಿ ದೇವಾಲಯದ ಗರ್ಭಗುಡಿಯ ತುತ್ತತುದಿಯಲ್ಲಿ ತಾಂತ್ರಿಕ ವಿಭಾಗದ ವೈದಿಕರಿಗೆ ಮುಗುಳಿಯನ್ನು ಇಡುವುದಕ್ಕೆ ಅನುಕೂಲವಾಗಲಿದೆ.

ಕಿನ್ನಿಂಗಾರು ಸಮೀಪದ ಕುಳೂರುನಿಂದ ಬಿದಿರು

ಕಾಸರಗೋಡು ಜಿಲ್ಲೆಯ ಕಿನ್ನಿಂಗಾರು ಕುಳೂರು ನಿವಾಸಿ ಡಾ. ತಿರುಮಲೇಶ್ವರ ಭಟ್ಟರು 15 ವರ್ಷಗಳ ಹಿಂದೆ ತಮ್ಮ ತೋಟದ ಸಮೀಪದಲ್ಲಿ ನೆಟ್ಟು ಬೆಳೆಸಿದ ಬಿದಿರು ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಇದನ್ನು ಏನು ಮಾಡಬಹುದು ಎಂದು ಚಿಂತಿತರಾಗಿರುವ ಸಂದರ್ಭ ಬ್ರಹ್ಮಕಲಶೋತ್ಸವದ ಅಗತ್ಯಕ್ಕೆ ಬೇಕೆಂಬ ಮಾಹಿತಿ ಲಭಿಸಿತು. ಹರ್ಷಚಿತ್ತರಾಗಿ ಶ್ರೀದೇವರಿಗೆ ಸಮರ್ಪಿಸಲು ಅವರು ಮುಂದೆ ಬಂದಿದ್ದಾರೆ. ಕೂಡಲೇ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಬಿದಿರುಗಳನ್ನು ಸಂಗ್ರಹಿಸಿ ಮಧೂರು ಕ್ಷೇತ್ರಕ್ಕೆ ತಲುಪಿಸಿರುತ್ತಾರೆ. ಇದಕ್ಕಾಗಿ ಸುಮಾರು ನಾಲ್ಕು ದಿನಗಳ ಶ್ರಮದಾನವೂ ನಡೆದಿದೆ. ಸ್ವಯಂಸೇವಕರಿಗೆ ಊಟೋಪಚಾರಗಳನ್ನೂ ನೀಡಿ ಡಾ. ತಿರುಮಲೇಶ್ವರ ಭಟ್ಟರ ಮನೆಯವರು ತಾವೂ ದೇವರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಯಂತ್ರದಲ್ಲಿ ಲಡ್ಡು ತಯಾರಿ

ಲಕ್ಷಾಂತರ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇರುವ ಕಾರಣ, ಗಂಟೆಗೆ 600ಕ್ಕೂ ಅಧಿಕ ಲಡ್ಡು ತಯಾರಿಸುವ ಯಂತ್ರ ಆಗಮನವಾಗಿದೆ. ಲಡ್ಡು ತಯಾರಿಸಲು ಸರಿಯಾದ ಪಾಕ ತಯಾರಿಸಿ, ಯಂತ್ರದಲ್ಲಿ ಹಾಕಿದರೆ, ಅದು ಕಟ್ಟಿಕೊಡುತ್ತದೆ. ಇದರ ವೇಗವನ್ನು ಇನ್ನಷ್ಟು ಹೆಚ್ಚಿಸಲೂ ಅವಕಾಶವಿದೆ. ಹೀಗಾಗಿ ನುರಿತ ಪಾಕತಜ್ಞರ ಆಗಮನವೂ ಆಗುತ್ತಿದೆ.

ಪಾರ್ತಿಸುಬ್ಬ ನೀಡಿದ ಜಲದ್ರೋಣಿ

ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದ ಭಕ್ತನಾಗಿರುವ ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಶ್ರೀ ಮದನಂತೇಶ್ವರನಿಗೆ ದಿನವೂ ಅಭಿಷೇಕ ಮಾಡುವುದಕ್ಕಾಗಿ ತಾಮ್ರದ ಧಾರಾಬಟ್ಟಲು (ಜಲದ್ರೋಣಿ)ಯನ್ನು ಸೇವಾರೂಪದಲ್ಲಿ ಒಪ್ಪಿಸಿದ್ದನಂತೆ. ಆ ಜಲದ್ರೋಣಿ ಈಗಲೂ ದೇವಸ್ಥಾನದಲ್ಲಿದೆ.

ಕಗ್ಗಲ್ಲಿನ ವಿಜಯಸ್ತಂಭ

ಕುಂಬಳೆ ಅರಸೊತ್ತಿಗೆ ಮೊದಲ ರಾಜನಾದ ಒಮ್ಮುಡಿ ಜಯಸಿಂಹ ದಕ್ಷಿಣದಿಂದ ದಂಡೆತ್ತಿ ಬಂದ ಪಾಂಡ್ಯರಾಜನನ್ನು ಜಯಿಸಿದ ಸವಿನೆನಪಿಗೆ ಪ್ರತಿಷ್ಠಾಪಿಸಿದ ಕಗ್ಗಲ್ಲಿನ ವಿಜಯಸ್ತಂಭ ದೇವಸ್ಥಾನದ ರಾಜಾಂಗಣದ ಈಶಾನ್ಯ ಭಾಗದಲ್ಲಿ ಈಗಲೂ ಇದೆ. ಪಾಂಡ್ಯರಾಜ ಸೈನ್ಯಸಹಿತ ಬಂದು, ಕೇರಳ ರಾಜ್ಯವನ್ನು ನಾಶ ಮಾಡುತ್ತಾ ಪಯಸ್ವಿನಿ ನದಿಯಲ್ಲಿ ಬೀಡುಬಿಟ್ಟಿದ್ದ. ಕುಂಬಳೆ ಅರಸ ಜಯಸಿಂಹ ಆತನೊಂದಿಗೆ ಹೋರಾಡಿ, ಜಯಗಳಿಸಿದ್ದ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner