ಕನ್ನಡ ಸುದ್ದಿ  /  Karnataka  /  Kempegowda Statue Inauguration: Basavaraj Bommai Calls Former Pm Devegowda At Night

Kempegowda Statue: ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡರಿಗೆ ಸಿಎಂ ಬೊಮ್ಮಾಯಿ ಕರೆ ಮಾಡಿ ಆಹ್ವಾನಿಸಿದ್ದರಂತೆ!

ಪ್ರಧಾನಿ ಕಾರ್ಯಾಲಯದಿಂದ ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ ನೀಡಬೇಕು ಎಂಬ ಮಾಹಿತಿ ಬಂದ ಕೂಡಲೇ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ. ಗುರುವಾರ ರಾತ್ರಿ ಎಂಟು ಗಂಟೆಗೆ ಬಸವರಾಜ ಬೊಮ್ಮಾಯಿ ಅವರೇ ಕರೆ ಮಾಡಿ ಆಹ್ವಾನ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ
ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (PTI)

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ನಾನೇ ಖುದ್ದಾಗಿ ಕರೆ ಮಾಡಿ ಆಹ್ವಾನಿಸಿದ್ದೆ ಎಂದು ಕರ್ನಾಟಕ ಬಿಜೆಪಿ ಮೂಲಗಳು ತಿಳಿಸಿವೆ. ದೇವೇಗೌಡರಿಗೆ ಆಹ್ವಾನ ಪತ್ರವನ್ನೂ ಕಳುಹಿಸಲಾಗಿದ್ದು, ರಾತ್ರಿ ಮುಖ್ಯಮಂತ್ರಿಗಳೇ ಕರೆ ಮಾಡಿ ಖುದ್ದಾಗಿ ಆಹ್ವಾನಿಸಿದ್ದಾರೆ ಎಂದು ಬಿಜೆಪಿ ಪ್ರತ್ಯುತ್ತರ ನೀಡಿದೆ.

ದೇವೇಗೌಡರಿಗೆ ನಮ್ಮ ಕಡೆಯಿಂದ ಮೊದಲ ಆಹ್ವಾನ ಪತ್ರ ಕಳುಹಿಸಲಾಗಿದೆ. ಈ ವಿಷಯದಲ್ಲೂ ಸುಳ್ಳಾಡುವ ಜೆಡಿಎಸ್‌ ತನ್ನ ಸಮಯಸಾಧಕ ಬುದ್ದಿ ತೋರಿಸಿದೆ ಎಂದು ಬಿಜೆಪಿ ತಿಳಿಸಿದೆ. ಜೆಡಿಎಸ್‌ಗೆ ಸಬ್‌ ಕ ಸಾಥ್‌, ಸಬ್‌ ಕಾ ವಿಕಾಸ್‌ ಎನ್ನುವುದು ಯಾವತ್ತಿಗೂ ಬಿಡಿಸಲಾಗದ ಒಗಟು ಎಂದು ಬಿಜೆಪಿ ತಿಳಿಸಿದೆ.

ಪ್ರಧಾನಿ ಕಾರ್ಯಾಲಯದಿಂದ ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ ನೀಡಬೇಕು ಎಂಬ ಮಾಹಿತಿ ಬಂದ ಕೂಡಲೇ ಮಾಜಿ ಪ್ರಧಾನಿ ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ. ಗುರುವಾರ ರಾತ್ರಿ ಎಂಟು ಗಂಟೆಗೆ ಬಸವರಾಜ ಬೊಮ್ಮಾಯಿ ಅವರೇ ಕರೆ ಮಾಡಿ ಆಹ್ವಾನ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ತಿಳಿಸಿದೆ.

"ನನ್ನ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಗೌರವವಿದೆ. ಪಾರ್ಲಿಮೆಂಟ್‌ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಕುರಿತು ಖುದ್ದಾಗಿ ಪ್ರಧಾನಿಯವರ ಜತೆ ಮಾತನಾಡುತ್ತೇನೆʼʼ ಎಂದು ಬೊಮ್ಮಾಯಿ ಕರೆ ಮಾಡಿದ ಸಂದರ್ಭದಲ್ಲಿ ಎಚ್‌.ಡಿ. ದೇವೇಗೌಡರು ಹೇಳಿದ್ದಾರೆ ಎನ್ನಲಾಗಿದೆ.

ಬಸವರಾಜ ಬೊಮ್ಮಾಯಿ ಕರೆ ಮಾಡಿದ ಸಂದರ್ಭದಲ್ಲಿ ಸಚಿವರಾದ ಆರ್‌. ಅಶೋಕ್‌, ಅಶ್ವಥ್‌ ನಾರಾಯಣ ಕೂಡ ಇದ್ದರು ಎನ್ನಲಾಗಿದೆ. ಪ್ರತಿಪಕ್ಷ ಸಿದ್ದರಾಮಯ್ಯ ಅವರಿಗೆ ಕರೆಮಾಡಿ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಸಂದರ್ಭದಲ್ಲಿ ಇರುವಂತೆ ಕೋರಲಾಗಿತ್ತು ಎಂದು ರಾಜ್ಯ ಬಿಜೆಪಿ ಮಾಹಿತಿ ನೀಡಿದೆ.

ದೇವೇಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಜೆಡಿಎಸ್‌ ಸರಣಿ ಟ್ವೀಟ್‌ ಮಾಡಿತ್ತು. ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ, ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ಶ್ರೀ ಹೆಚ್​​ ಡಿ ದೇವೇಗೌಡ ಅವರನ್ನು ಶ್ರೀ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಸರಕಾರವು ಆಹ್ವಾನ ಮಾಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಜೆಡಿಎಸ್​ ಆಕ್ರೋಶ ವ್ಯಕ್ತಪಡಿಸಿದೆ.

ನಾಡಪ್ರಭುಗಳ ಪ್ರತಿಮೆ ಸ್ಥಾಪನೆಯ ಕಾಮಗಾರಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳನ್ನು ಆಹ್ವಾನಿಸಿದ ಬಿಜೆಪಿ ಸರಕಾರ, ಅದೇ ಪ್ರಧಾನಿಗಳಿಂದ ಪ್ರತಿಮೆ ಲೋಕಾರ್ಪಣೆ ಮಾಡಿಸುವ ಸಮಾರಂಭಕ್ಕೆ ಅವರನ್ನು ಆಹ್ವಾನ ಮಾಡಲಿಲ್ಲ, ಯಾಕೆ? ಎಂದು ಪ್ರಶ್ನಿಸಿದೆ.

ಯಾವುದೋ ಸ್ಥಳೀಯ ಮಟ್ಟದ ಕಾರ್ಯಕ್ರಮ ಆಗಿದ್ದಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ, ನಾಡಪ್ರಭುಗಳ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿಗಳೇ ಬರುತ್ತಾರೆ ಎಂದರೆ, ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳನ್ನು ಅಧಿಕೃತವಾಗಿ ಕರೆಯಲೇಬೇಕಿತ್ತು. ಅವರ ಬಗ್ಗೆ ಅನಾದರ ತೋರಿದ್ದು ಕನ್ನಡಿಗರಿಗೆ ಅಪಾರ ನೋವುಂಟು ಮಾಡಿದೆ ಎಂದು ಟ್ವೀಟ್​ ಮಾಡಿತ್ತು.

ರಾಜ್ಯ ಬಿಜೆಪಿ ಸರಕಾರ, ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕಾಗಿ ಮಾಜಿ ಪ್ರಧಾನಿಗಳನ್ನು ಕಡೆಗಣಿಸಿದ್ದಾರೆ ಎನ್ನುವುದು ಎಲ್ಲರ ಭಾವನೆ. ಇದನ್ನು ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ನಡೆಸಿದ್ದು ಮಾಜಿ ಪ್ರಧಾನಿಗಳಿಗೆ ಮಾತ್ರವಲ್ಲ, ಸಮಸ್ತ ಕನ್ನಡಿಗರು ಹಾಗೂ ಸ್ವತಃ ನಾಡಪ್ರಭುಗಳಿಗೇ ಮಾಡಿದ ಅಪಮಾನ. ಇದು ಅಕ್ಷಮ್ಯದ ಪರಮಾವಧಿ ಎಂದು ಜೆಡಿಎಸ್‌ ಟ್ವೀಟ್‌ ಮಾಡಿತ್ತು.

IPL_Entry_Point