ಕೇರಳ, ಕೊಡಗಿನಲ್ಲಿ ನಿರಂತರ ಮಳೆ; ಕಬಿನಿ, ಕೆಆರ್‌ಎಸ್‌ ಜಲಾಶಯಕ್ಕೆ ಮೇ ನಲ್ಲೇ ಹರಿದು ಬಂತು ಭಾರೀ ನೀರು, ಎಷ್ಟಿದೆ ನೀರಿನ ಮಟ್ಟ
ಕನ್ನಡ ಸುದ್ದಿ  /  ಕರ್ನಾಟಕ  /  ಕೇರಳ, ಕೊಡಗಿನಲ್ಲಿ ನಿರಂತರ ಮಳೆ; ಕಬಿನಿ, ಕೆಆರ್‌ಎಸ್‌ ಜಲಾಶಯಕ್ಕೆ ಮೇ ನಲ್ಲೇ ಹರಿದು ಬಂತು ಭಾರೀ ನೀರು, ಎಷ್ಟಿದೆ ನೀರಿನ ಮಟ್ಟ

ಕೇರಳ, ಕೊಡಗಿನಲ್ಲಿ ನಿರಂತರ ಮಳೆ; ಕಬಿನಿ, ಕೆಆರ್‌ಎಸ್‌ ಜಲಾಶಯಕ್ಕೆ ಮೇ ನಲ್ಲೇ ಹರಿದು ಬಂತು ಭಾರೀ ನೀರು, ಎಷ್ಟಿದೆ ನೀರಿನ ಮಟ್ಟ

ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮವಾಗಿ ಮೈಸೂರು ಜಿಲ್ಲೆಯ ಕಬಿನಿ ಹಾಗೂ ಕೊಡಗಿನಲ್ಲಿ ಉತ್ತಮ ಮಳೆ ಕಾರಣದಿಂದ ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.

ಉತ್ತಮ ಮಳೆಯಿಂದ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಉತ್ತಮ ಮಳೆಯಿಂದ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.

ಮೈಸೂರು:ಕೇರಳದ ವಯನಾಡು ಭಾಗದಲ್ಲಿ ಮೂರು ದಿನದಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಕಾಣುತ್ತಿದೆ. ಅದೇ ರೀತಿ ಕೊಡಗು ಜಿಲ್ಲೆಯ ಹಲವು ಭಾಗದಲ್ಲೂ ನಿರಂತರ ಮಳೆ ಸುರಿದದ್ದು ಕಾವೇರಿ ನದಿ ಪೂರ್ಣ ಪ್ರಮಾಣದಲ್ಲಿ ಹರಿದು ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ಒಳಹರಿವಿನ ಏರಿಕೆಯಲ್ಲಿ ಗೋಚರಿಸುತ್ತಿದೆ. ಮೇ ತಿಂಗಳಿನಲ್ಲಿಯೇ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳಿಗೆ ಇಷ್ಟು ಪ್ರಮಾಣದ ಒಳಹರಿವಿನ ಪ್ರಮಾಣ ಇರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಜೂನ್‌ನಲ್ಲಿ ಮುಂಗಾರು ಚುರುಕುಗೊಂಡು ಒಳಹರಿವಿನ ಪ್ರಮಾಣ ಹೆಚ್ಚುತ್ತಿತ್ತು.ಅದಕ್ಕಿಂತ ಮೊದಲೇ ಮಳೆ ಪ್ರಮಾಣ ಹೆಚ್ಚಿರುವುದರಿಂದ ಜಲಾಶಯಕ್ಕೂ ಯಥೇಚ್ಛ ನೀರು ಹರಿದು ಬರುತ್ತಿದೆ. ಈ ಬಾರಿ ಎರಡೂ ಜಲಾಶಯಗಳು ಬೇಗನೇ ತುಂಬುವ ವಿಶ್ವಾಸವೂ ವ್ಯಕ್ತವಾಗಿದೆ. ಎರಡು ವರ್ಷದಿಂದ ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿರಲೇ ಇಲ್ಲ. ಆದರೆ ಹಿಂದಿನ ವರ್ಷ ಮಾತ್ರ ಉತ್ತಮ ಮಳೆಯಾಗಿದ್ದರಿಂದ ಕಬಿನಿ ಜಲಾಶಯ ಬೇಗನೇ ತುಂಬಿದರೆ ಕೆಆರ್‌ಎಸ್‌ ಜಲಾಶಯವೂ ನಿಗದಿತ ಅವಧಿಯಲ್ಲಿ ಭರ್ತಿಯಾಗಿತ್ತು.

ಕಬಿನಿಗೆ ಏಳು ಅಡಿ ನೀರು

ಕೇರಳದ ವಯನಾಡು ಭಾಗದಲ್ಲಿ ಹೆಚ್ಚಿನ ಮಳೆಯಾದರೆ ಒಳ ಹರಿವಿನ ಪ್ರಮಾಣ ಏರಿಕೆಯಾಗಿ ಬೇಗನೇ ಭರ್ತಿಯಾಗುವ, ಬೆಂಗಳೂರಿನ ಕುಡಿಯುವ ನೀರಿನ ಜತೆಗೆ ತಮಿಳುನಾಡಿಗೂ ಹೆಚ್ಚಿನ ನೀರು ಹರಿಸುವ ಕಬಿನಿ ಜಲಾಶಯ ಈ ಬಾರಿ ಬೇಗನೇ ನೀರಿನ ಪ್ರಮಾಣ ಕಂಡಿದೆ. ಮಂಗಳವಾರ ಬೆಳಿಗ್ಗೆ ಲಭ್ಯವಿರುವ ಮಾಹಿತಿ ಪ್ರಕಾರ ಜಲಾಶಯಕ್ಜೆ 21946 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ದಿನ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಬರೀ 1034 ಕ್ಯೂಸೆಕ್‌ ಮಾತ್ರ.ಜಲಾಶಯದ ನೀರಿನ ಮಟ್ಟವು 2267.75 ಅಡಿಗೆ ತಲುಪಿದೆ. ಕಳೆದ ವರ್ಷ ಇದೇ ದಿನ 2260.60 ಅಡಿ ನೀರು ಸಂಗ್ರಹವಾಗಿತ್ತು.ಸದ್ಯ ಜಲಾಶಯದಲ್ಲಿ 10.61 ಟಿಎಂಸಿ ನೀರು ಸಂಗ್ರಹವಾಗಿದೆ. ಹಿಂದಿನ ವರ್ಷ 7.55 ಟಿಎಂಸಿ ನೀರು ಸಂಗ್ರಹವಾಗಿತ್ತು.

ಕಬಿನಿ ಜಲಾಶಯಕ್ಕೆ ಮೂರು ದಿನದಲ್ಲಿ ಬಂದ ಭಾರೀ ನೀರು ಬಂದಿದ್ದರಿಂದ ಏಳು ಅಡಿ ನೀರು ಹೆಚ್ಚಾಗಿದೆ. ಇದು ಇನ್ನೂ ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶಿಸಿದೆ.ವಯನಾಡು ಸಹಿತ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಕಬಿನಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾದ ಕಾರಣದಿಂದ ಜಲಾಶಯಕ್ಕೆ ಮೇ ತಿಂಗಳಲ್ಲೇ ಹೆಚ್ಚಿನ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯದ ಮಟ್ಟದಲ್ಲೂ ಗಣನೀಯ ಏರಿಕೆಯಾಗಿದೆ. ಇನ್ನೂ ಮಳೆ ಇರುವುದರಿಂದ ಜಲಾಶಯ ಬೇಗನೇ ತುಂಬಬಹುದು ಎನ್ನುವುದು ಅಧಿಕಾರಿಗಳು ನೀಡುವ ವಿವರಣೆ.

ಕೆಅರ್‌ಎಸ್‌ಗೂ ಮೂರು ಅಡಿ ನೀರು

ಮಂಡ್ಯ ಜಿಲ್ಲೆಯ ಕೃಷ್ಣಸಾಗರ ಜಲಾಶಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ನೀರು ಲಭ್ಯವಿದ್ದರೂ ಆತಂಕದ ಮಟ್ಟಕ್ಕೆ ಕುಸಿದಿತ್ತು. ಕೊಡಗಿನ ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮವಾಗಿ ಕೆಆರ್‌ಎಸ್‌ ಜಲಾಶಯಕ್ಕೂ ಮೇ ತಿಂಗಳಾಂತ್ಯಕ್ಕೆ ಉತ್ತಮ ಒಳಹರಿವು ಇರುವುದು ಕಂಡು ಬಂದಿದೆ. ಒಂದೇ ದಿನದಲ್ಲಿ ಮೂರು ಅಡಿ ನೀರು ಹರಿದಿದೆ. ಮಂಗಳವಾರ ಬೆಳಿಗ್ಗೆ ಕೆಆರ್‌ಎಸ್‌ ಜಲಾಶಯಕ್ಕೆ 19129 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ ಕಳೆದ ವರ್ಷದಲ್ಲಿ ಇದೇ ಸಮಯದಲ್ಲಿ ಸುಮಾರು 200 ಕ್ಯೂಸೆಕ್‌ ಮಾತ್ರ ಹರಿದು ಬರುತ್ತಿತ್ತು. ಸದ್ಯ ಜಲಾಶಯದಲ್ಲಿ 17.163 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 92 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ. ಹಾಗೂ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ. ಕಳೆದ ವರ್ಷ ಜಲಾಶಯದಲ್ಲಿ ಇದೇ ವೇಳೆ 12 ಟಿಎಂಸಿ ನೀರು ಸಂಗ್ರಹವಾಗಿತ್ತು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.