ಮೈಸೂರಿನ ಡಾ. ಕೂಡ್ಲಿ ಗುರುರಾಜ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ
ಕಳೆದ 38 ವರ್ಷಗಳಿಂದ ಸತತವಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಕೂಡ್ಲಿ ಗುರುರಾಜ ಅವರಿಗೆ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ನಿರ್ಧರಿಸಿದೆ.

ಮೈಸೂರು: ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ (ರಿ.) ಕೊಡಮಾಡುವ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಈ ಬಾರಿ ಹಿರಿಯ ಪತ್ರಕರ್ತರಾದ ಮೈಸೂರಿನ ಡಾ. ಕೂಡ್ಲಿ ಗುರುರಾಜ ಅವರಿಗೆ ಲಭಿಸಿದೆ. ಪ್ರಶಸ್ತಿಯು 15 ಸಾವಿರ ರೂ. ನಗದು ಹಾಗೂ ಫಲಕ ಹೊಂದಿದೆ. ಕೂಡ್ಲಿ ಗುರುರಾಜ ಅವರು ಮೂಲತಃ ಮೈಸೂರಿನವರು. ಕಿರಿಯ ವಯಸ್ಸಿನಲ್ಲೇ ಪತ್ರಿಕೋದ್ಯಮಕ್ಕೆ ಬಂದವರು.
ಪತ್ರಿಕೋದ್ಯಮದಲ್ಲಿ ಡಾಕ್ಟರೇಟ್ ಪಡೆದು ಅಧ್ಯಾಪಕರಾಗಿ ಹಾಗೂ ಪತ್ರಕರ್ತರಾಗಿ ಮೈಸೂರಿನ ಆರತಿ ಪತ್ರಿಕೆಯಿಂದ ವೃತ್ತಿ ಆರಂಭಿಸಿ, ಮೈಸೂರು ಮಿತ್ರ, ಆಂದೋಲನ ಪತ್ರಿಕೆಗಳಲ್ಲಿ ದುಡಿದು ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ ಕನ್ನಡ ಆವೃತ್ತಿ, ವಿಜಯ ನೆಕ್ಟ್, ಉದಯವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಪಡೆದವರು. ಹುಬ್ಬಳ್ಳಿ, ಬೆಂಗಳೂರಿನಲ್ಲಿ ವರದಿಗಾರರಾಗಿ ಕೆಲಸ ಮಾಡಿ, ಈಗ ಮೈಸೂರಿನಲ್ಲಿ ಜನಮಿತ್ರ ಪತ್ರಿಕೆ ವಿಶೇಷ ವರದಿಗಾರರು. ಪತ್ರಿಕೋದ್ಯಮದ ಬಗ್ಗೆ ಗ್ರಂಥಗಳನ್ನೂ ರಚಿಸಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದಾರೆ.
ಕಳೆದ 38 ವರ್ಷಗಳಿಂದ ಸತತವಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಕೂಡ್ಲಿ ಗುರುರಾಜ ಅವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಜೂನ್‌ನಲ್ಲಿ ನಡೆಯಲಿದೆ. ಕಳೆದ ವರ್ಷ ಪ್ರಜಾವಾಣಿ ಪತ್ರಿಕೆಯ ಶ್ರೀ ಎಂ. ನಾಗರಾಜ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು ಎಂದು ಟ್ರಸ್ಟ್ ಪರವಾಗಿ ಪತ್ರಕರ್ತ ಎಚ್.ಆರ್. ಶ್ರೀಶ ತಿಳಿಸಿದ್ದಾರೆ.
ಡಾ. ಕೂಡ್ಲಿ ಗುರುರಾಜ ಅವರ ವೈಯಕ್ತಿಕ ಪರಿಚಯ
ವಿದ್ಯಾರ್ಹತೆ : ಪತ್ರಿಕೋದ್ಯಮದಲ್ಲಿ ಎಂ.ಎ ಸ್ನಾತಕೋತ್ತರ ಪದವೀಧರ, ಪಿಎಚ್.ಡಿ
ಅನುಭವ: ಪತ್ರಿಕೋದ್ಯಮದಲ್ಲಿ 37 ವರ್ಷಗಳ ಅನುಭವ.
ಜನಮಿತ್ರ ದಿನಪತ್ರಿಕೆಯಲ್ಲಿ ವಿಶೇಷ ಪ್ರತಿನಿಧಿಯಾಗಿ ಮೈಸೂರಿನಲ್ಲಿ ಈಗ ಕಾರ್ಯನಿರ್ವಹಣೆ
ಈ ಹಿಂದೆ ಕಾರ್ಯ ನಿರ್ವಹಿಸಿದ ಅನುಭವ : ಮೈಸೂರಿನ ಆರತಿ ಕನ್ನಡ ದಿನ ಪತ್ರಿಕೆಯ ಮೂಲಕ 1987ರಲ್ಲಿ ಪತ್ರಿಕಾ ರಂಗಕ್ಕೆ ಪ್ರವೇಶ. ನಂತರ ಮೈಸೂರಿನ ಮೈಸೂರು ಮಿತ್ರ, ಆಂದೋಲನ ಕನ್ನಡ ದಿನ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ.
ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರನಾಗಿ 5 ವರ್ಷಗಳ ಕಾಲ ಬೆಂಗಳೂರು ಹಾಗೂ ಮೈಸೂರಿನಲ್ಲಿ ಕಾರ್ಯನಿರ್ವಹಣೆ.
ಕನ್ನಡಪ್ರಭ ಪತ್ರಿಕೆಯಲ್ಲಿ ಮೈಸೂರು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ವರದಿಗಾರ, ಹಿರಿಯ ವರದಿಗಾರ, ಪ್ರಧಾನ ವರದಿಗಾರನಾಗಿ ಕಾರ್ಯ.
ದಿ ಟೈಮ್ಸ್ ಆಫ್ ಇಂಡಿಯಾ ( ಕನ್ನಡ) ದಿನ ಪತ್ರಿಕೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯ ವರದಿಗಾರನಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ.
ವಿಜಯ ಕರ್ನಾಟಕ ಬಳಗದ ವಿಜಯ ನೆಕ್ಸ್ಟ್ ವಾರಪತ್ರಿಕೆಯಲ್ಲಿ ಹಿರಿಯ ವಿಶೇಷ ಪ್ರತಿನಿಧಿಯಾಗಿ, ಮುಖ್ಯ ರಾಜಕೀಯ ಸಂಪಾದಕನಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಣೆ
ವಿಜಯಕರ್ನಾಟಕ ದಿನ ಪತ್ರಿಕೆಯಲ್ಲಿ ಮೈಸೂರಿನ ಬ್ಯೂರೋದಲ್ಲಿ ಮುಖ್ಯ ವರದಿಗಾರರಾಗಿ ಐದು ವರ್ಷಗಳ ಕಾಲ ಕಾರ್ಯನಿರ್ವಹಣೆ
ಉದಯವಾಣಿ ದಿನಪತ್ರಿಕೆಯಲ್ಲಿ ಮೈಸೂರಿನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ
ಹೀಗೆ ಒಟ್ಟಾರೆ 37 ವರ್ಷಗಳ ಕಾಲ ವರದಿಗಾರ, ಹಿರಿಯ ವರದಿಗಾರ, ಮುಖ್ಯ ವರದಿಗಾರ, ವಿಶೇಷ ಪ್ರತಿನಿಧಿ, ಮುಖ್ಯ ರಾಜಕೀಯ ಸಂಪಾದಕನಾಗಿ ಮೈಸೂರು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ.
ಎಲೆಕ್ಟ್ರಾನಿಕ್ ಮಾಧ್ಯಮದ ಅನುಭವ : ಬೆಂಗಳೂರು ದೂರದರ್ಶನ ಕೇಂದ್ರ ಚಂದನ ನಡೆಸುತ್ತಿದ್ದ
ಪ್ರಚಲಿತ ವಿದ್ಯಮಾನಗಳ ಕುರಿತ ಪ್ರಚಲಿತ ಎಂಬ ಕಾರ್ಯಕ್ರಮದಲ್ಲಿ ಆ್ಯಂಕರ್ ಆಗಿ ಸುಮಾರು 100 ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಅನುಭವ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡ ಅನುಭವ.
ಶೈಕ್ಷಣಿಕ ಸೇವೆ: ವಿಶ್ವವಿದ್ಯಾನಿಲಯಗಳ ಪತ್ರಿಕೋದ್ಯಮ ವಿಭಾಗ, ಮೈಸೂರು ಹಾಗೂ ಬೆಂಗಳೂರಿನ ಕೆಲವು ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೋಧನೆ. ಮಾಧ್ಯಮ ಕುರಿತ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡನೆ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ನಡೆಸುವ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ ಅನುಭವ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಕಾಲ ಬೋಧಿಸಿದ ಅನುಭವ. ಬೆಂಗಳೂರಿನ ಶ್ರೀ ಶ್ರೀ ಮೀಡಿಯಾ ಸೆಂಟರ್ ನಲ್ಲಿ ಬೋಧಕನಾಗಿ ಎರಡು ವರ್ಷಗಳ ಸೇವೆ. ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಬೋಧಕನಾಗಿ ಒಂದು ವರ್ಷ ಸೇವೆ ಸಲ್ಲಿಸಿದ ಅನುಭವ
ಅಂಕಣ ಬರಹ: ವ್ಯಕ್ತಿ- ವಿಶೇಷ (ಜನಮಿತ್ರ ದಿನಪತ್ರಿಕೆ)
ಪ್ರಶಸ್ತಿಗಳ ಸ್ವೀಕಾರ
ಬೆಂಗಳೂರಿನ ಕಮ್ಯುನಿಕೇಷನ್ ಫಾರ್ ಡೆವಲಪ್ಮೆಂಟ್ ಆ್ಯಂಡ್ ಲರ್ನಿಂಗ್ (ಸಿಡಿಎಲ್)ಎಂಬ ಸ್ವಯಂ ಸೇವಾ ಸಂಸ್ಥೆ ಪ್ರತಿ ವರ್ಷ ಸಾಮಾಜಿಕ ಕಾಳಜಿಯ ಉತ್ತಮ ಬರಹಗಳಿಗೆ ನೀಡುವ ಚರಕ ಪ್ರಶಸ್ತಿಯು 2010ನೇ ಸಾಲಿನಲ್ಲಿ ಸಂದ ಗೌರವ. ಬೆಂಗಳೂರಿನಲ್ಲಿ ಹೇಗೆ ಕುಡಿಯುವ ನೀರು ಮಾಲಿನ್ಯ ಆಗುತ್ತಿದೆ ಎಂಬ ಲೇಖನಕ್ಕೆ ಈ ಪ್ರಶಸ್ತಿ ಸಂದಿದೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ನೀಡುವ ವಿಜಯ ದುಂದುಬಿ ಪ್ರಶಸ್ತಿ,
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ,
ಮೈಸೂರಿನ ರೋಟರಿ ಕ್ಲಬ್ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ ಸಿಲಿಕಾನ್ ಪ್ರಶಸ್ತಿ,
ಮೈಸೂರು ಜಿಲ್ಲಾಡಳಿತ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಕಲಬುರಗಿಯಲ್ಲಿ 2020ರಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡು, ನುಡಿಗಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನೀಡಿದ ಸನ್ಮಾನ.
ಬೆಂಗಳೂರು ಪ್ರೆಸ್ ಕ್ಲಬ್ ಪತ್ರಿಕೋದ್ಯಮದಲ್ಲಿ ಜೀವಮಾನ ಸಾಧನೆಗಾಗಿ ಕೊಡ ಮಾಡುವ ಪ್ರಶಸ್ತಿ ಸಂದಿದೆ.
ಪುಸ್ತಕ ಪ್ರಕಟಣೆ: ಪಿಎಚ್ ಡಿ ಪ್ರೌಢಪ್ರಬಂಧ ಪುಸ್ತಕ ರೂಪ ‘ಪತ್ರಿಕಾ ಮಾಧ್ಯಮ: ವಾಣಿಜ್ಯದ ಆಯಾಮ ಪುಸ್ತಕ ರಚನೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಈ ಪುಸ್ತಕವನ್ನು ಪ್ರಕಟಿಸಿದೆ.
ಸುದ್ದಿ ಬರಹ ಮತ್ತು ವರದಿಗಾರಿಕೆ ಪುಸ್ತಕ ರಚನೆ. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇದು ಪರಾಮರ್ಶನ ಗ್ರಂಥವಾಗಿದೆ.
ಡೈನಾಮಿಕ್ಸ್ ಆಫ್ ರಿಪೋರ್ಟಿಂಗ್- ಸುದ್ದಿ ಬರಹ ಮತ್ತು ವರದಿಗಾರಿಕೆ ಪುಸ್ತಕದ ಇಂಗ್ಲಿಷ್ ಅನುವಾದ. ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ಎಂಎ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥವಾಗಿದೆ.
ಸುಧರ್ಮಾ- ಐದು ದಶಕ ಕಂಡ ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ ಪುಸ್ತಕ ರಚನೆ
ದಿ ಸಾಗಾ ಆಫ್ ಸುಧರ್ಮಾ. ಸುಧರ್ಮಾ ಕನ್ನಡ ಪುಸ್ತಕದ ಇಂಗ್ಲಿಷ್ ಅನುವಾದ.