ಕನ್ನಡ ಸುದ್ದಿ  /  Karnataka  /  Kitturu Karnataka Santosh Lad As Dharwad District In Charge Satish Jarakiholi For Belgavi Jameer Ahmad For Haveri Mnk

District Ministers: ಲಾಡ್‌ಗೆ ಧಾರವಾಡ ಪೇಡಾ, ಸತೀಶ್‌ಗೆ ಬೆಳಗಾವಿ ಕುಂದಾ! ಗದಗಕ್ಕೆ ಎಚ್.ಕೆ. ಪಾಟೀಲ್‌, ಹಾವೇರಿಗೆ ಬಂದ ಜಮೀರ್ ಅಹ್ಮದ್

ಕಿತ್ತೂರು ಕರ್ನಾಟಕದ ಪ್ರಮುಖ ಮೂರು ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಆಯ್ಕೆಯಾಗಿದೆ. ಧಾರವಾಡಕ್ಕೆ ಸಂತೋಷ್‌ ಲಾಡ್‌ ನೇಮಕವಾದರೆ, ಏಲಕ್ಕಿ ನಗರ ಹಾವೇರಿಗೆ ಚಾಮರಾಜಪೇಟೆಯಿಂದ ಜಮೀರ್‌ ಅಹ್ಮದ್‌ ಬರಲಿದ್ದಾರೆ. ಇನ್ನುಳಿದ ಜಿಲ್ಲೆಗಳ ಮಾಹಿತಿ ಇಲ್ಲಿದೆ.

ಲಾಡ್‌ಗೆ ಧಾರವಾಡ ಪೇಡಾ, ಸತೀಶ್‌ಗೆ ಬೆಳಗಾವಿ ಕುಂದಾ! ಗದಗಕ್ಕೆ ಎಚ್.ಕೆ. ಪಾಟೀಲ್‌, ಹಾವೇರಿಗೆ ಬಂದ ಜಮೀರ್ ಅಹ್ಮದ್
ಲಾಡ್‌ಗೆ ಧಾರವಾಡ ಪೇಡಾ, ಸತೀಶ್‌ಗೆ ಬೆಳಗಾವಿ ಕುಂದಾ! ಗದಗಕ್ಕೆ ಎಚ್.ಕೆ. ಪಾಟೀಲ್‌, ಹಾವೇರಿಗೆ ಬಂದ ಜಮೀರ್ ಅಹ್ಮದ್

ಹುಬ್ಬಳ್ಳಿ: ರಾಜ್ಯದ ಎಲ್ಲ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ರಾಜ್ಯ ಸರ್ಕಾರ ನೇಮಕ ಮಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಧಾರವಾಡ ಜಿಲ್ಲೆಗೆ ಕಾರ್ಮಿಕ ಸಚಿವ ಸಂತೋಷ ಎಸ್. ಲಾಡ್ ಅವರನ್ನು ನೇಮಕ ಮಾಡಿದೆ. ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೀಡಲಾಗುತ್ತಿದೆ ಎಂಬ ಊಹಾಪೋಹಗಳು ಸುಳ್ಳಾಗಿದ್ದು, ಅವರಿಗೆ ವಿಜಯನಗರ ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ.

ನಿರೀಕ್ಷೆಯಂತೆ ಧಾರವಾಡ ಜಿಲ್ಲೆ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರ ಸಂತೋಷ ಲಾಡ್ ಅವರಿಗೆ ಜಿಲ್ಲಾ ಉಸ್ತುವಾರಿ ಲಭಿಸಿದೆ. ಅಂತೆಯೇ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಬೆಳಗಾವಿ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಗದಗ ಜಿಲ್ಲೆ ಉಸ್ತುವಾರಿ ನೀಡಿ ಸ್ವಂತ ಜಿಲ್ಲೆಗಳ ಜವಾಬ್ದಾರಿಯನ್ನು ಸರ್ಕಾರ ನೀಡಿದೆ. ಹಾವೇರಿ ಜಿಲ್ಲೆಯಿಂದ ಯಾರೂ ಸಚಿವರಾಗಿ ಆಯ್ಕೆಯಾಗದ ಕಾರಣ ಚಾಮರಾಜಪೇಟೆ ಕ್ಷೇತ್ರ ಪ್ರತಿನಿಧಿಸುವ ಜಮೀರ್ ಅಹ್ಮದ್‌ ಖಾನ್ ಅವರಿಗೆ ಹಾವೇರಿ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.

ಕಿತ್ತೂರು ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಂದ ನಾಲ್ವರು ಶಾಸಕರು ಸಚಿವರಾಗಿ ಆಯ್ಕೆಯಾಗಿದ್ದರು. ಬೆಳಗಾವಿ ಜಿಲ್ಲೆಯಿಂದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ, ಧಾರವಾಡ ಜಿಲ್ಲೆಯಿಂದ ಸಂತೋಷ ಲಾಡ್ ಹಾಗೂ ಗದಗ ಜಿಲ್ಲೆಯಿಂದ ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾವೇರಿಗೆ ಈ ಬಾರಿ ಯಾವುದೇ ಸ್ಥಾನ ದಕ್ಕಿರಲಿಲ್ಲ.

ಇದನ್ನೂ ಓದಿ: ಹಸೆಮಣಿ ಏರಬೇಕಿದ್ದ ಯುವಕ ಮಸಣ ಸೇರಿದ; ಧಾರವಾಡದ ಕಲಘಟಗಿಯಲ್ಲಿ ಖಾರದ ಪುಡಿ ಎರಚಿ ಯುವಕನ ಕೊಲೆ

ಜಿಲ್ಲೆಯಿಂದ ಒಬ್ಬರೆ ಸಚಿವರಾಗಿದ್ದ ಸಂತೋಷ ಲಾಡ್ ಅವರಿಗೆ ಬೇರೆ ಜಿಲ್ಲೆ ನೀಡಿ ಬೆಳಗಾವಿ ಜಿಲ್ಲೆಯ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧಾರವಾಡದ ಉಸ್ತುವಾರಿ ನೀಡಲಾಗುತ್ತಿದೆ ಎಂಬ ಮಾತುಗಳು ಕಳೆದ ಒಂದು ವಾರದಿಂದ ಕೇಳಿಬರುತ್ತಿದ್ದವು. ಈ ಎಲ್ಲ ಊಹಾಪೋಹಗಳಿಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದ್ದು, ಧಾರವಾಡ ಪ್ರತಿನಿಧಿಸುವ ಸಂತೋಷ ಲಾಡ್ ಅವರಿಗೆ ಜಿಲ್ಲೆಯ ಉಸ್ತುವಾರಿಯ ಜವಾಬ್ದಾರಿ ವಹಿಸಿದೆ.

ದೂರದೂರಿಗೆ ಬಂದ ಜಮೀರ್

ಬೆಂಗಳೂರಿನ ಚಾಮರಾಜಪೇಟೆ ಶಾಸಕರಾಗಿ, ಸಚಿವರಾಗಿ ಆಯ್ಕೆಯಾದ ಜಮೀರ್ ಅಹ್ಮದ್‌ ಖಾನ್ ಅವರಿಗೆ ಹಾವೇರಿ ಜಿಲ್ಲೆ ಉಸ್ತವಾರಿ ಸಚಿವರನ್ನಾಗಿ ಸರ್ಕಾರ ನೇಮಿಸಿದೆ. ಈ ಬಾರಿ ಹಾವೇರಿ ಜಿಲ್ಲೆಯಿಂದ ಯಾರೊಬ್ಬರೂ ಸಚಿವರಾಗಿರಲಿಲ್ಲ. ಸಹಜವಾಗಿಯೇ ಹಾವೇರಿ ಉಸ್ತುವಾರಿ ಯಾರಿಗೆ ನೀಡುತ್ತಾರೆ ಎಂಬ ಕುತೂಹಲ ಮೂಡಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲುದಲ್ಲಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹ್ಮದ್ ಅವರಿಗೆ ಹಾವೇರಿ ಜವಾಬ್ದಾರಿಯನ್ನು ಸರ್ಕಾರ ನೀಡಿದೆ.

‘ವಿಜಯ’ ಲಕ್ಷ್ಮೀ !

ಬೆಳಗಾವಿ ಜಿಲ್ಲೆ ಪ್ರತಿನಿಧಿಸುವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ ಅವರನ್ನು ಸರ್ಕಾರ ಸಚಿವರನ್ನಾಗಿ ಆಯ್ಕೆ ಮಾಡಲಾಗಿತ್ತು. ಜೇಷ್ಠತೆ ಹಾಗೂ ಈ ಹಿಂದೆ ಕಾರ್ಯನಿರ್ವಹಿಸಿದ್ದ ಆಧಾರದ ಮೇಲೆ ಸತೀಶ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡುವುದು ಬಹುತೇಕ ಖಚಿತವಾಗಿತ್ತು. ಪ್ರಥಮಬಾರಿಗೆ ಸಚಿವರಾಗಿ ಆಯ್ಕೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವರಿಷ್ಠರು ಯಾವ ಜಿಲ್ಲೆ ಜವಾಬ್ದಾರಿ ನೀಡುತ್ತಾರೆ ಎಂಬುದು ಚರ್ಚಿತ ವಿಷಯವಾಗಿತ್ತು.

ಅಖಂಡ ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟು ನೂತನ ಜಿಲ್ಲೆಯಾದ ವಿಜಯನಗರಕ್ಕೆ ಉಸ್ತುವಾರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸರಕಾರ ನೇಮಿಸಿದೆ. ಈ ಹಿಂದೆ ಬೆಳಗಾವಿ ಜಿಲ್ಲೆಯವರೇ ಆದ ನಿಪ್ಪಾಣಿ ಕ್ಷೇತ್ರದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ವಿಜಯನಗರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು ಸ್ಮರಿಸಬಹುದು.

ವರದಿ -ಪ್ರಹ್ಲಾದಗೌಡ ಬಿ.ಜಿ.

IPL_Entry_Point