ಕನ್ನಡ ಸುದ್ದಿ  /  Karnataka  /  Kitu Held Protest In Bengaluru As It Employees Demand For Cancel Of Industrial Employment Act Harassment By Company Mrt

ಕಂಪನಿಗಳಿಂದ ಷರತ್ತು ಉಲ್ಲಂಘನೆ, ಕಿರುಕುಳ ಆರೋಪ; ಕೈಗಾರಿಕಾ ಉದ್ಯೋಗ ಕಾಯಿದೆ ವಿನಾಯಿತಿ ರದ್ದತಿಗೆ ಐಟಿ ಉದ್ಯೋಗಿಗಳ ಆಗ್ರಹ

ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯಕ್ಕೆ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ ಅಡಿಯಲ್ಲಿ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯದ ಉದ್ಯೋಗಿಗಳ ಒಕ್ಕೂಟ ಆಗ್ರಹಪಡಿಸಿದೆ. ವರದಿ: ಎಚ್ ಮಾರುತಿ

ಕೈಗಾರಿಕಾ ಉದ್ಯೋಗ ಕಾಯಿದೆ ವಿನಾಯಿತಿ ರದ್ದತಿಗೆ ಐಟಿ ಉದ್ಯೋಗಿಗಳ ಆಗ್ರಹ
ಕೈಗಾರಿಕಾ ಉದ್ಯೋಗ ಕಾಯಿದೆ ವಿನಾಯಿತಿ ರದ್ದತಿಗೆ ಐಟಿ ಉದ್ಯೋಗಿಗಳ ಆಗ್ರಹ

ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯಕ್ಕೆ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ ಅಡಿಯಲ್ಲಿ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯದ ಉದ್ಯೋಗಿಗಳ ಒಕ್ಕೂಟ (ಕೆಐಟಿಯು) ಪ್ರತಿಭಟನೆ ನಡೆಸಿದೆ.

ಇತ್ತೀಚೆಗೆ ಕೆಐಟಿಯು ಬೆಂಗಳೂರಿನ ಕಾರ್ಮಿಕ ಆಯುಕ್ತರ ಕಚೇರಿ (ಕಾರ್ಮಿಕ ಭವನ) ಎದುರು ಪ್ರತಿಭಟನೆ ನಡೆಸಿದರು. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯಕ್ಕೆ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ ಅಡಿಯಲ್ಲಿ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸುವಂತೆ ಅವರು ಆಗ್ರಹಪಡಿಸಿದರು. ಮಾಹಿತಿ ತಂತ್ರಜ್ಞಾನ ವಲಯದ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಂತರ ಕೆಐಟಿಯು ಸಂಘಟನೆಯ ಅಧ್ಯಕ್ಷ ವಿಜೆಕೆ ನಾಯರ್ ಮತ್ತು ಪ್ರಧಾನ ಕಾರ್ಯದರ್ಶಿ ಸೂರಜ್ ನಿದಿಯಂಗ‌ ನೇತೃತ್ವದಲ್ಲಿ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯದಲ್ಲಿ 20 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯವು ನಾಲ್ಕು ಬಾರಿ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ ಅಡಿಯಲ್ಲಿ ವಿನಾಯಿತಿಯನ್ನು ಪಡೆದುಕೊಂಡಿದೆ. ಕೊನೆಯದಾಗಿ 2019ರ ಮೇ‌25ರಂದು‌‌ ವಿನಾಯಿತಿ ಪಡೆದುಕೊಂಡಿದ್ದು, ಇದೇ ಮೇ 25ಕ್ಕೆ ಕೊನೆಗೊಳ್ಳಲಿದೆ. ಈ ವಿನಾಯಿತಿಯನ್ನು ಮುಂದುವರೆಸಬಾರದು ಎಂದು ಕೆಐಟಿಯು ಸಂಘಟನೆಯ ಅಧ್ಯಕ್ಷ ವಿಜೆಕೆ ನಾಯರ್ ಒತ್ತಾಯಿಸಿದರು.

ಇದನ್ನೂ ಓದಿ | ನೀರಿಗಾಗಿ ಬೆಂಗಳೂರಿಗರ ಪರದಾಟದ ನಡುವೆ, ಅಕ್ರಮ ನೀರು ಸಂಪರ್ಕದ ಪ್ರಕರಣಗಳನ್ನು ವಿಚಾರಣೆ ಇಲ್ಲದೆ ಮುಗಿಸುತ್ತಿದೆ ಬಿಟಿಎಂಎಫ್!

ವಿನಾಯಿತಿಯನ್ನು ಕೊಡುವಾಗ ಮಾಲೀಕರಿಗೆ ನಾಲ್ಕು ಷರತ್ತುಗಳನ್ನು ವಿಧಿಸಲಾಗಿರುತ್ತದೆ. ಆದರೆ ಮಾಲೀಕರು ಈ ಷರತ್ತುಗಳನ್ನು ಪಾಲಿಸುತ್ತಿಲ್ಲ. ಮೊದಲನೆಯದಾಗಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ (ನಿಯಂತ್ರಣ, ನಿಷೇಧ ಮತ್ತು ನಿವಾರಣೆ) ಕಾಯಿದೆ -2013ರ ಪ್ರಕಾರ ಆಂತರಿಕ ಸಮಿತಿ ರಚಿಸಬೇಕು. ಪ್ರತಿಯೊಂದು ಉದ್ಯಮವೂ ಕುಂದುಕೊರತೆ ನಿವಾರಣಾ ಸಮಿತಿ ರಚಿಸಬೇಕು. ಶಿಸ್ತು ಕ್ರಮ, ಉದ್ಯೋಗದಿಂದ ವಜಾ, ಹಿಂಬಡ್ತಿ ಮುಂತಾದ ಪ್ರಕ್ರಿಯೆಗಳನ್ನು ಕುರಿತು ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದ್ದರೂ ಪಾಲನೆಯಾಗುತ್ತಿಲ್ಲ. ಉದ್ಯಮಗಳು ಈ ಎಲ್ಲ ಷರತ್ತುಗಳನ್ನು ಸಾರಾಸಗಟಾಗಿ ಉಲ್ಲಂಘಿಸುತ್ತಿವೆ. ಆದರೆ ಯಾವುದೇ ನೋಟಿಸ್ ಅಥವಾ ತನಿಖೆಯಿಲ್ಲದೆ ಉದ್ಯೋಗದಿಂದ ವಜಾ, ಹಿಂಬಡ್ತಿ ನೀಡುತ್ತಿವೆ. ಈ ಪ್ರಕ್ರಿಯೆಗಳಿಗೆ ಕೈಗಾರಿಕಾ ವಿವಾದ ಕಾಯಿದೆ ಪ್ರಕಾರ ಸರ್ಕಾರದ ಅನುಮತಿ ಕಡ್ಡಾಯವಾಗಿರುತ್ತದೆ. ಆದರೆ ವಿನಾಯಿತಿ ಹೆಸರಿನಲ್ಲಿ ಪಾಲಿಸುತ್ತಿಲ್ಲ ಎಂದು ಕೆಐಟಿಯು ಕಳವಳ ವ್ಯಕ್ತಪಡಿಸಿದೆ.

ಹೈಕೋರ್ಟ್‌ನಲ್ಲಿ ದಾವೆ

ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯಕ್ಕೆ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ ಅಡಿಯಲ್ಲಿ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸಿದರೆ ಮಾತ್ರ ಮಾಲೀಕರು ಮತ್ತು ಉದ್ಯೋಗಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಇದರಿಂದ ಕಾರ್ಮಿಕರಿಗೆ ಪ್ರಯೋಜನವಾಗುತ್ತದೆ ಎಂದು ಪ್ರದಾನ ಕಾರ್ಯದರ್ಶಿ ಸೂರಜ್ ನಿದಿಯಂಗ‌ ಅಭಿಪ್ರಾಯಪಟ್ಟಿದ್ದಾರೆ. ಈ ವಿನಾಯಿತಿಯನ್ನು ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ಒಕ್ಕೂಟ ದಾವೆ ಹೂಡಲು ತೀರ್ಮಾನಿಸಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ವಿನಾಯಿತಿಯನ್ನು ರದ್ದುಗೊಳಿಸಿ ಎಲ್ಲ ಕಂಪನಿಗಳನ್ನು ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ ಅಡಿಯಲ್ಲಿ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 8,785 ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಗಳಿದ್ದು, ಅಂದಾಜು 18 ಲಕ್ಷ ಉದ್ಯೋಗಿಗಳಿದ್ದಾರೆ. ಕಾರ್ಮಿಕ ನಿಯಮಗಳಿಂದ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ವಲಯಕ್ಕೆ ವಿನಾಯಿತಿ ನೀಡಿದೆ.

ಇದನ್ನೂ ಓದಿ | 204 ಕೋಟಿ ರೂ ಮಾನನಷ್ಟ ಕೇಸ್‌; ಕನಕಪುರದಿಂದ ಬೆಂಗಳೂರಿಗೆ ವರ್ಗಾಯಿಸುವುದಕ್ಕೆ ಬಸನಗೌಡ ಯತ್ನಾಳ್ ಮನವಿ

ಕಾರ್ಮಿಕ ಕಾನೂನಿನಡಿಯಲ್ಲಿ ಬರುವ ಎಲ್ಲಾ ಸೇವೆಯ ಷರತ್ತುಗಳ ನಿಯಮಗಳನ್ನು ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಅನುಭಂದಿತ ಸೇವೆಗಳ ಕೈಗಾರಿಕೆಗಳಲ್ಲಿ ಇದರ ಸೂಕ್ತ ವ್ಯಾಖ್ಯಾನಗಳನ್ನು ಕಾರ್ಮಿಕ ಮತ್ತು ಮಾಲಿಕರ ಸಹಭಾಗಿತ್ವದಲ್ಲಿ ನಿರ್ಣಯಿಸಬೇಕಿದೆ. ಇದು ರಾಜ್ಯ ಸರ್ಕಾರವು ಮಾಹಿತಿ ತಂತ್ರಜ್ಞಾನದ ಕೈಗಾರಿಕೆಯಲ್ಲಿ ನೀಡಿರುವ ವಿನಾಯತಿಯನ್ನು ರದುಗೊಳಿಸಿ ಕೈಗಾರಿಕೆಗೆ ಸೂಕ್ತವಾದಂತೆ ಕೈಗಾರಿಕಾ ಉದ್ಯೋಗ (ಜಾರಿಯಲ್ಲಿರುವ ಆದೇಶ) ಜಾರಿ ಮಾಡಿದರೆ ಮಾತ್ರ ಸಾದ್ಯ ಎಂದು ಕೆಐಟಿಯು ಒತ್ತಾಯಿಸಿದೆ‌.

ಕೈಗಾರಿಕೆಯಲ್ಲಿ ನೀಡಿರುವ ವಿನಾಯಿತಿ ರದ್ದತಿಗೆ ಕರ್ನಾಟಕ ಉಚ್ಚ ನ್ಯಾಯಾಲದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ. ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯಿದೆ -1946 ಕಾಯಿದೆ ಅಡಿಯಿಂದ 2014,ಜನವರಿ 25ರಿಂದ ವಿನಾಯಿತಿ ನೀಡುತ್ತಾ ಬರಲಾಗಿದೆ. ಕೊನೆಯದಾಗಿ 2019 ರ ಮೇ‌25ರಂದು‌‌ ಮತ್ತೊಮ್ಮೆ ವಿಸ್ತರಿಸಲಾಗಿದೆ.

ವರದಿ: ಎಚ್‌ ಮಾರುತಿ, ಬೆಂಗಳೂರು

ಕರ್ನಾಟಕ ಕುರಿತ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point