ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಪೈಪೋಟಿ: ಡಿಕೆಸುರೇಶ್ ಪ್ರಬಲ ಆಕಾಂಕ್ಷಿ,ಸಿದ್ದರಾಮಯ್ಯ ಬೆಂಬಲ ಯಾರಿಗೆ?
ಕನ್ನಡ ಸುದ್ದಿ  /  ಕರ್ನಾಟಕ  /  ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಪೈಪೋಟಿ: ಡಿಕೆಸುರೇಶ್ ಪ್ರಬಲ ಆಕಾಂಕ್ಷಿ,ಸಿದ್ದರಾಮಯ್ಯ ಬೆಂಬಲ ಯಾರಿಗೆ?

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಪೈಪೋಟಿ: ಡಿಕೆಸುರೇಶ್ ಪ್ರಬಲ ಆಕಾಂಕ್ಷಿ,ಸಿದ್ದರಾಮಯ್ಯ ಬೆಂಬಲ ಯಾರಿಗೆ?

ಕರ್ನಾಟಕ ಹಾಲು ಮಹಾ ಮಂಡಳದ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಸದ್ದಿಲ್ಲದೇ ನಡೆದಿದೆ. ಡಿ.ಕೆ.ಶಿವಕುಮಾರ್‌ ಅವರು ತಮ್ಮ ಸಹೋದರ ಡಿಕೆ ಸುರೇಶ್‌ಗೆ ಈ ಹುದ್ದೆ ಕೊಡಿಸಲು ಮುಂದಾಗಿದ್ದಾರೆ, ಸಿಎಂ ಸಿದ್ದರಾಮಯ್ಯ ತಮ್ಮ ಬಣದಲ್ಲೇ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.ವರದಿ: ಎಚ್‌.ಮಾರುತಿ.ಬೆಂಗಳೂರು

ಕೆಎಂಎಫ್‌ ಅಧ್ಯಕ್ಷ ಗಾದಿಗೆ ಡಿಕೆ ಸುರೇಶ್‌ ಹಾಗೂ ನಂಜೇಗೌಡ ಪ್ರಬಲ ಆಕಾಂಕ್ಷಿಗಳು.
ಕೆಎಂಎಫ್‌ ಅಧ್ಯಕ್ಷ ಗಾದಿಗೆ ಡಿಕೆ ಸುರೇಶ್‌ ಹಾಗೂ ನಂಜೇಗೌಡ ಪ್ರಬಲ ಆಕಾಂಕ್ಷಿಗಳು.

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿಲೋಕಸಭಾ ಸದಸ್ಯ, ಕಾಂಗ್ರೆಸ್‌ ಮುಖಂಡ ಡಿ.ಕೆ. ಸುರೇಶ್‌ ಬೆಂಗಳೂರು ಹಾಲು ಒಕ್ಕೂಟ(ಬಮೂಲ್)‌ ನಿಂದ ಕಾಂಗ್ರೆಸ್‌ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿಆರಿಸಿ ಬರುವಂತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಂದು ಸುರೇಶ್‌ ಹಾದಿ ಸುಗಮವಾಗಿಲ್ಲ. ಸುರೇಶ್‌ ಅವರಿಗೆ ಅವರ ಸಹೋದರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಗುಂಪಿನ ಬೆಂಬಲವಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಮಾಲೂರು ಶಾಸಕ ಕೆವೈ ನಂಜೇಗೌಡ ಅವರ ಪರವಾಗಿ ಬ್ಯಾಟಿಂಗ್‌ ಮಾಡುತ್ತಿದೆ.ಈಗಾಗಲೇ ಇಬ್ಬರೂ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದು, ಈ ಘರ್ಷಣೆ ಇದುವರೆಗೂ ಬಗೆಹರಿದಿಲ್ಲ. ಜತೆಗೆ ಕೆಎಂಎಫ್‌ ನ ಹಾಲಿ ಅಧ್ಯಕ್ಷ ಭೀಮಾ ನಾಯ್ಕ್‌ ಅವರೂ ಮತ್ತೊಮ್ಮೆ ಸ್ಪರ್ಧಿಸುವುದಾಗಿ ಹೇಳಿದ್ದು ಪರಿಸ್ಥಿತಿ ಮತ್ತಷ್ಟು ಹೆಪ್ಪುಗಟ್ಟುವಂತೆ ಮಾಡಿದೆ. ಸಿದ್ದರಾಮಯ್ಯ ಅವರು ಮತ್ತೊಂದು ಅವಧಿಗೆ ಆಯ್ಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಭೀಮಾ ನಾಯ್ಕ್‌ ಪ್ರತಿಪಾದಿಸುತ್ತಿದ್ದಾರೆ.

ಕೆಎಂಎಫ್‌ ಅಡಿಯಲ್ಲಿ 16 ಹಾಲು ಒಕ್ಕೂಟಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಹಾಲು ಒಕ್ಕೂಟಗಳ ಅಧ್ಯಕ್ಷರು ಕೆಎಂಎಫ್‌ ನ ನಿರ್ದೇಶಕರಾಗಲಿದ್ದಾರೆ. ಈ ನಿರ್ದೇಶಕರಲ್ಲಿ ಒಬ್ಬರು ಕೆಎಂಎಫ್‌ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಇದುವರೆಗೂ 16 ಒಕ್ಕೂಟಗಳ ಪೈಕಿ 15 ಒಕ್ಕೂಟಗಳ ಚುನಾವಣೆ ಪೂರ್ಣಗೊಡಿದೆ. ಕೋಲಾರ ಹಾಲು ಒಕ್ಕೂಟದ ಚುನಾವಣೆ ಬಾಕಿ ಇದ್ದು ಜೂನ್ 25 ರಂದು ಚುನಾವಣೆ ನಡೆಯಲಿದೆ. ಜುಲೈ ಮೊದಲ ವಾರದಲ್ಲಿ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವನೆ ನಡೆಯಲಿದೆ. ಬಮೂಲ್ ನ ಅಧ್ಯಕ್ಷರ ಆಯ್ಕೆ ಜೂನ್‌ 10 ರಂದು ನಡೆಯಲಿದೆ. 14 ಸದಸ್ಯರ ಪೈಕಿ 11 ಮಂದಿ ಕಾಂಗ್ರೆಸ್‌ ನವರೇ ಆಗಿದ್ದಾರೆ. ಸುರೇಶ್‌ ಅಧ್ಯಕ್ಷರಾಗಲು ಹಾದಿ ಕಠಿಣವಾಗಿಲ್ಲ. ಆದರೆ ಪಕ್ಷದೊಳಗೆ ಪೈಪೋಟಿ ಎದುರಾಗಿದೆ.

ಬಮೂಲ್‌ ನಲ್ಲಿ ಬಿಜೆಪಿ ಇಬ್ಬರು ಮತ್ತು ಜೆಡಿಎಸ್‌ ಒಬ್ಬ ಸದಸ್ಯರನ್ನು ಹೊಂದಿದೆ. ಸುರೇಶ್‌ ಅಧ್ಯಕ್ಷರಾಗಬೇಕು ಎನ್ನುವುದು ನಮ್ಮ ಬಯಕೆ. ಕೆಎಂಎಫ್‌ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅವರ ಅವಶ್ಯಕತೆ ಇದೆ ಎಂದು ಬಮೂಲ್‌ ನಿರ್ಗಮಿತ ಅಧ್ಯಕ್ಷ ಎಚ್‌ ಎಸ್‌ ರಾಜಕುಮಾರ್‌ ಹೇಳುತ್ತಾರೆ. ಈ ಹಿಂದೆ ಪಕ್ಷ ಬೇರೊಬ್ಬರಿಗೆ ಮತು ಕೊಟ್ಟಿರಬಹುದು. ಆದರೆ ಬದಲಾದ ಸನ್ನಿವೇಶದಲ್ಲಿ ಸುರೇಶ್‌ ಅವರ ಆಯ್ಕೆ ಅನಿವಾರ್ಯವಾಗಿದೆ.ಅವರನ್ನು ಯಾರೂ ತಡೆಯಲಾರರು ಎನ್ನುವುದು ಅವರ ಅಭಿಪ್ರಾಯ. 2024ರ ಲೋಕಸಭಾ ಚುನಾವಣೆಯಲ್ಲಿ ಸೋತ ಸುರೇಶ್‌ ಅವರನ್ನು ಮತ್ತೆ ಮುನ್ನೆಲೆಗೆ ತರಲು ಡಿಸಿಎಂ ಶಿವಕುಮಾರ್‌ ಕೆಎಂಎಫ್‌ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪ್ರಯತ್ನ ನಡೆಸಿದ್ದಾರೆ.

ಕೆಎಂಎಫ್‌ ಅಧ್ಯಕ್ಷ ಸ್ಥಾನ ರಾಜಕೀಯವಾಗಿಯೂ ಪ್ರಾಮುಖ್ಯತೆ ಪಡೆದಿದೆ. ರಾಜ್ಯದ್ಯಂತ ಸುಮಾರು 25 ಲಕ್ಷ ಹಾಲು ಉತ್ಪಾದಕರಿದ್ದಾರೆ. ಐತಿಹಾಸಿಕವಾಗಿಯೂ ಕೆಎಂಎಫ್‌ ಅಧ್ಯಕ್ಷ ಸ್ಥಾನ ತುಂಬಾ ಬಲಶಾಲಿಯಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪುತ್ರ ಎಚ್‌ ಡಿ ರೇವಣ್ಣ ಅವರು 2009 ರವರೆಗೆ 13 ವರ್ಷ ಕೆಎಂಎಫ್‌ ಅಧ್ಯಕ್ಷರಾಗಿದ್ದರು. ಡಿಸಿಎಂ ಶಿವಕುಮಾರ್‌ ಅವರೂ ಇದೇ ತಂತ್ರದ ಮೊರೆ ಹೋಗುತ್ತಿದ್ದಾರೆ. ಕೆಎಂಎಫ್‌ ಅಧ್ಯಕ್ಷರಾಗಬೇಕು ಎಂದು ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಕೆಎಂಎಫ್‌ ನಿರ್ದೇಶಕರು ಮತ್ತು ಪಕ್ಷದ ಬೆಂಬಲ ಬೇಕು ಎಂದು ಸುರೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಬೆಂಬಲಿಗರು ಕಾದು ನೋಡುವ ತಂತ್ರದ ಮೊರ ಹೋಗಿದ್ದಾರೆ. ಕೆಲವು ಮುಖಂಡರು, ಡಿಸಿಎಂ ಶಿವಕುಮಾರ್‌ ಅವರ ಒತ್ತಡಕ್ಕೆ ಮಣಿಯಬಾರದು ಎಂದು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮಧ್ಯೆ ಮಾಲೂರು ಶಾಸಕ ನಂಜೇಗೌಡ ಅಧ್ಯಕ್ಷ ಸ್ಥಾನದ ಬಲವಾದ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ನನಗೆ ಸಿಎಂ ಮತ್ತು ಡಿಸಿಎಂ ಇಬ್ಬರೂ ಭರವಸೆ ನೀಡಿದ್ದರು. ಈಗ ಇಬ್ಬರೂ ಮಾತು ಉಳಿಸಿಕೊಳ್ಳಬೇಕು. ಹೈನೋದ್ಯಮದಲ್ಲಿ38 ವರ್ಷಗಳಿಂದ ತೊಡಗಿಸಿಕೊಂಡಿರುವ ನನಗೆ ಅಧ್ಯಕ್ಷನಾಗುವ ಅರ್ಹತೆ ಇದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಹೆಪ್ಪುಗಟ್ಟಿರುವ ವಾತಾವರಣ ತಿಳಿಯಾಗಲು ಜುಲೈ ಮೊದಲ ವಾರದವರೆಗೆ ಕಾಯಲೇಬೇಕು.

ವರೆದಿ: ಎಚ್.ಮಾರುತಿ, ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.