ಕೆಎಂಎಫ್ ನಂದಿನಿ- ಚಾಯ್ ಪಾಯಿಂಟ್ ಪಾಲುದಾರಿಕೆಯಲ್ಲಿ 1 ಕೋಟಿ ಕಪ್ ಚಹಾ ಮಾರಾಟದ ಗುರಿ, ಮಹಾ ಕುಂಭ ಮೇಳದಲ್ಲಿ ಗಿನ್ನೆಸ್ ದಾಖಲೆಗೆ ಪ್ರಯತ್ನ
Maha Kumbh Mela: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ಶುರುವಾಗಿದೆ. ಫೆ.26ರ ತನಕ ನಡೆಯುವ ಈ ಮಹಾ ಕುಂಭ ಮೇಳದಲ್ಲಿ ಗಿನ್ನೆಸ್ ದಾಖಲೆಗೆ ಪ್ರಯತ್ನ ನಡೆಸಿರುವ ಕೆಎಂಎಫ್ ನಂದಿನಿ- ಚಾಯ್ ಪಾಯಿಂಟ್ ಪಾಲುದಾರಿಕೆಯಲ್ಲಿ 1 ಕೋಟಿ ಕಪ್ ಚಹಾ ಮಾರಾಟದ ಗುರಿ ಇಟ್ಟುಕೊಂಡಿವೆ.

Maha Kumbh Mela: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಶುರುವಾಗಿರುವ ಮಹಾ ಕುಂಭ ಮೇಳದಲ್ಲಿ 1 ಕೋಟಿ ಕಪ್ ಚಹಾ ಮಾರಾಟ ಮಾಡುವ ಗುರಿಯೊಂದಿಗೆ ನಂದಿನಿ ಬ್ರ್ಯಾಂಡ್‌ನ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಮತ್ತು ಚಾಯ್ ಪಾಯಿಂಟ್ ಪಾಲುದಾರಿಕೆ ಘೋಷಿಸಿವೆ. ಈ ಸಹಭಾಗಿತ್ವದಲ್ಲಿ 1 ಕೋಟಿ ಕಪ್ ಚಹಾ ಮಾರಾಟ ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸುವ ಗುರಿಯನ್ನು ಎರಡೂ ಸಂಸ್ಥೆಗಳು ಹೊಂದಿವೆ.
ಮಹಾ ಕುಂಭ ಮೇಳದಲ್ಲಿ 1 ಕೋಟಿ ಕಪ್ ಚಹಾ ಮಾರಾಟದ ಗುರಿ; ಕೆಎಂಎಫ್ ನಂದಿನಿ- ಚಾಯ್ ಪಾಯಿಂಟ್ ಪಾಲುದಾರಿಕೆ
ಕೆಎಂಎಫ್ ನಂದಿನಿ- ಚಾಯ್ ಪಾಯಿಂಟ್ ಸಹಯೋಗದ ಭಾಗವಾಗಿ, ಚಾಯ್ ಪಾಯಿಂಟ್ ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದ ಸ್ಥಳದಲ್ಲಿ 10 ಔಟ್‌ಲೆಟ್‌ಗಳನ್ನು ಸ್ಥಾಪಿಸಿದೆ. ಮೇಳದ ಸಮಯದಲ್ಲಿ 1 ಕೋಟಿ ಕಪ್ ಚಹಾವನ್ನು ಪೂರೈಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮದ ಮೂಲಕ ಒಂದೇ ಸಮಾರಂಭದಲ್ಲಿ ಅತಿ ಹೆಚ್ಚು ಕಪ್ ಚಹಾ ಮಾರಾಟ ಮಾಡಿದ ಗಿನ್ನಿಸ್ ವಿಶ್ವ ದಾಖಲೆಯನ್ನು ಸಾಧಿಸಲು ಪ್ರಯತ್ನಿಸಲಾಗುತ್ತದೆ ಎಂದು ಕೆಎಂಎಫ್ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರತಿ ಚಹಾ ಕಪ್‌ನಲ್ಲೂ ನಂದಿನಿಯ ಶ್ರೀಮಂತಿಕೆ ಮತ್ತು ಉತ್ತಮ ಗುಣಮಟ್ಟ ಎದ್ದುಗೋಚರಿಸಲಿದೆ. ಚಹಾ ಪ್ರಿಯರಿಗೆ ಉತ್ತಮ ಸ್ವಾದ ಮತ್ತು ಅನುಭವ ನೀಡುವುದರಲ್ಲಿ ಅನುಮಾನವೇ ಇಲ್ಲ ಎಂದು ಕೆಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ. ಚಾಯ್ ಪಾಯಿಂಟ್ ಚೌಟ್‌ಲೆಟ್‌ಗಳಲ್ಲಿ ಸಿಹಿತಿಂಡಿಗಳು ಮತ್ತು ಮಿಲ್ಕ್‌ಶೇಕ್‌ಗಳು ಸೇರಿ ವಿವಿಧ ನಂದಿನಿ ಉತ್ಪನ್ನಗಳು ಸಿಗುತ್ತವೆ. ಇದು ಮಹಾ ಕುಂಭ ಮೇಳದಲ್ಲಿ ನಂದಿನಿಯ ಉಪಸ್ಥಿತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ ಎಂದು ಕೆಎಂಎಫ್ ಹೇಳಿಕೊಂಡಿದೆ.
ಈ ಪಾಲುದಾರಿಕೆಯು ಭಾರತದ ಉತ್ತರದ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ನಂದಿನಿಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರವ್ಯಾಪಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ತಲುಪಿಸಲು ಅದರ ಸಮರ್ಪಣೆಯನ್ನು ಒತ್ತಿಹೇಳುತ್ತದೆ ಎಂದು ಅದು ಹೇಳಿದೆ.
"ಮಹಾ ಕುಂಭ ಮೇಳ 2025 ಗಾಗಿ ಚಾಯ್ ಪಾಯಿಂಟ್‌ನೊಂದಿಗೆ ಪಾಲುದಾರಿಕೆ ಮಾಡಲು ಕೆಎಂಎಫ್ ಥ್ರಿಲ್ ಆಗಿದೆ. ನಂದಿನಿಯು ತನ್ನ ಉತ್ಪನ್ನಗಳನ್ನು ವೈವಿಧ್ಯಮಯ ಪ್ರೇಕ್ಷಕರಿಗೆ ಪ್ರದರ್ಶಿಸಲು ಮತ್ತು ಉತ್ತರ ಭಾರತದಲ್ಲಿ ನಮ್ಮ ಉಪಸ್ಥಿತಿಯನ್ನು ಬಲಪಡಿಸಲು ಇದು ಒಂದು ಅನನ್ಯ ಅವಕಾಶವಾಗಿದೆ. ಇದರ ಯಶಸ್ಸಿಗೆ ಕೊಡುಗೆ ನೀಡಲು ನಾವು ಎದುರು ನೋಡುತ್ತಿದ್ದೇವೆ. ಇದೊಂದು ಐತಿಹಾಸಿಕ ಘಟನೆ" ಎಂದು ಕೆಎಂಎಫ್ ಎಂಡಿ ಬಿ ಶಿವಸ್ವಾಮಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಫೆ.26ರ ತನಕ ನಡೆಯಲಿದೆ ಮಹಾ ಕುಂಭ ಮೇಳ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ 2025 ಜನವರಿ 13 ರಂದು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಿ ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ. ಗಂಗಾ, ಯಮುನಾ ಮತ್ತು ಗುಪ್ತಗಾಮಿನಿಯಾಗಿರುವ ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ನಡೆಯುವ ಈ ಧಾರ್ಮಿಕ ಉತ್ಸವ ಧಾರ್ಮಿಕ ಮಹತ್ವ ಇರುವಂಥದ್ದು. ಈ ಉತ್ಸವದ ಮೊದಲ ಶಾಹಿ ಸ್ನಾನಕ್ಕೆ 4 ಕೋಟಿ ಭಕ್ತರು ಪಾಲ್ಗೊಳ್ಳುತ್ತಿರುವ ನಿರೀಕ್ಷೆ ಇದೆ. ಈ ಪೈಕಿ 1 ಕೋಟಿ ಭಕ್ತರು ಪೌಷ ಹುಣ್ಣಿಮೆ ದಿನ ಭೇಟಿ ನೀಡಿದ್ದು, ಇಂದು 3 ಕೋಟಿ ಭಕ್ತರು ಮಕರ ಸಂಕ್ರಾಂತಿ ದಿನ ಪುಣ್ಯ ಸ್ನಾನ ಮಾಡುವ ನಿರೀಕ್ಷೆ ಇದೆ. ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
