ಕರ್ನಾಟಕ ಬಜೆಟ್ 2025 ಮಂಡನೆಯಾದ ಬೆನ್ನಿಗೆ ನಂದಿನಿ ಹಾಲಿನ ದರ 5 ರೂಪಾಯಿ ಹೆಚ್ಚಳ ಸಾಧ್ಯತೆ, 16 ಹಾಲು ಒಕ್ಕೂಟಗಳಿಂದ ಬೆಲೆ ಏರಿಕೆಗೆ ಒತ್ತಡ
Nandini milk prices: ಕರ್ನಾಟಕ ಬಜೆಟ್ ಮಂಡನೆ ಬೆನ್ನಿಗೆ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ ಇದೆ. ಕೆಎಂಎಫ್ ಮೂಲಗಳು ಹಾಗೂ ಸರ್ಕಾರದ ಮೂಲಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಂಡ ಬಳಿಕ ಲೀಟರಿಗೆ 5 ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿವೆ.

Nandini milk prices: ಕರ್ನಾಟಕ ಬಜೆಟ್ 2025 ಮಂಡಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಮಾರ್ಚ್ 7 ರಂದು ಬಜೆಟ್ ಮಂಡನೆಯಾಗಲಿದ್ದು, ಅದಾದ ಬಳಿಕ ಹಾಲಿನ ದರ ಪ್ರತಿ ಲೀಟರ್‌ಗೆ 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈಗಾಗಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ದರ ಹೆಚ್ಚಳ, ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆಯ ಬರೆ ಕಾಯುತ್ತಿರುವ ಸಂದರ್ಭದಲ್ಲೇ ಹಾಲಿನ ದರ ಏರಿಕೆ ವಿಚಾರ ಗಮನಸೆಳೆದಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಹಾಲಿನ ದರ ಲೀಟರ್‌ಗೆ 5 ರೂಪಾಯಿ ಏರಿಸುವುದಕ್ಕೆ ಸಿದ್ಧತೆ ನಡೆಸಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
ಕರ್ನಾಟಕ ಬಜೆಟ್ 2025 ಬೆನ್ನಿಗೆ ನಂದಿನಿ ಹಾಲಿನ ದರ 5 ರೂ ಹೆಚ್ಚಳ ಸಾಧ್ಯತೆ
ಕಳೆದ ತಿಂಗಳು ರಾಜ್ಯದ ಎಲ್ಲಾ 16 ಹಾಲು ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೆಎಂಎಫ್ ಪ್ರತಿನಿಧಿಗಳೊಂದಿಗೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಹಾಲಿನ ದರ ಏರಿಕೆ ಮಾಡಬೇಕಾದ ಅನಿವಾರ್ಯತೆ ಕುರಿತು ಚರ್ಚೆ ನಡೆದಿದೆ. ಪಶು ಆಹಾರದ ಬೆಲೆ ಏರಿಕೆಯಾಗಿದೆ. ಪಶು ಸಂಗೋಪನೆಯ ಖರ್ಚು ವೆಚ್ಚಗಳು ಹೆಚ್ಚಾಗಿವೆ. ಹೀಗಾಗಿ ಹಾಲಿನ ದರ ಲೀಟರಿಗೆ 5 ರೂಪಾಯಿ ಏರಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕರ್ನಾಟಕ ಬಜೆಟ್ 2025ರ ಬಳಿಕ ಸರ್ಕಾರ ಈ ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ನೀಡಬಹುದು ಎಂಬ ಆಶಯವನ್ನು 16 ಒಕ್ಕೂಟಗಳ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾಗಿ ಕೆಎಂಎಫ್ ಮೂಲಗಳು ತಿಳಿಸಿವೆ.
ಮೇವು, ಲೇಬರ್, ವಿದ್ಯುತ್ ಸೇರಿ ಇತರೆ ಖರ್ಚು ದಿನೇದಿನೆ ಹೆಚ್ಚುತ್ತಿದ್ದು, ಹಾಲಿನ ದರ ಏರಿಕೆ ಅನಿವಾರ್ಯ. ಇಲ್ಲದಿದ್ದರೆ ಒಕ್ಕೂಟಗಳು ತಮ್ಮ ಬೊಕ್ಕಸದಿಂದಲೇ ಪಶುಪಾಲಕರಿಗೆ ಹಾಲಿನ ದರ ಏರಿಕೆ ಮಾಡಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ಹಣಕಾಸಿನ ಆರೋಗ್ಯ ಕೆಡಿಸಬಹುದು. ಆದ್ದರಿಂದ ಕಳೆದ ವರ್ಷವೇ 5 ರೂಪಾಯಿ ದರ ಏರಿಕೆಗೆ ಆಗ್ರಹಿಸಿ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ಸರ್ಕಾರ ಪರಿಗಣಿಸಬಹುದು ಎಂದು ಒಕ್ಕೂಟ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಂದಿನಿ ಹಾಲಿನ ದರ 2024ರ ಜೂನ್ 26 ರಂದು ಪರಿಷ್ಕರಣೆಯಾಗಿ ಜಾರಿಗೊಂಡಿದೆ. ಸದ್ಯ ನೀಲಿ ಪ್ಯಾಕೆಟ್ ಹಾಲು 44 ರೂಪಾಯಿ ( ಹಿಂದೆ 42 ರೂಪಾಯಿ), ನೀಲಿ ಪ್ಯಾಕೆಟ್ ಟೋನ್ಡ್ ಹಾಲು 45 ರೂಪಾಯಿ (ಹಿಂದೆ 43 ರೂಪಾಯಿ), ಆರೆಂಜ್ ಪ್ಯಾಕೆಟ್ ಹಾಲು 48 ರೂಪಾಯಿ (46 ರೂಪಾಯಿ), ಆರೆಂಜ್ ಸ್ಪೆಷಲ್ ಹಾಲು 50 ರೂಪಾಯಿ (ಹಿಂದೆ 48 ರೂಪಾಯಿ), ಶುಭಂ ಹಾಲು 50 ರೂಪಾಯಿ (ಹಿಂದೆ 48 ರೂಪಾಯಿ), ಸಮೃದ್ಧಿ ಹಾಲು 53 ರೂಪಾಯಿ ( ಹಿಂದೆ 51 ರೂ.), ಶುಭಂ ಟೋನ್ಡ್ ಹಾಲು 51 ರೂಪಾಯಿ ( ಹಿಂದೆ 49 ರೂ), ಸಂತೃಪ್ತಿ ಹಾಲು 57 ರೂಪಾಯಿ (55 ರೂ), ಶುಭಂ ಗೋಲ್ಡ್ ಹಾಲು 51 ರೂಪಾಯಿ (49 ರೂ), ಶುಭಂ ಡಬಲ್ ಟೋನ್ಡ್ ಹಾಲು 43 ರೂಪಾಯಿ ( ಹಿಂದೆ 41 ರೂಪಾಯಿ) ಇತ್ತು. 50 ಎಂಎಲ್ ಹೆಚ್ಚುವರಿ ಹಾಲು ಕೊಡ್ತಾ ಇರುವ ಕಾರಣ ದರ ಏರಿಸಿದ್ದಾಗಿ ಕೆಎಂಎಫ್ ಹೇಳಿಕೊಂಡಿತ್ತು. ಬಳಿಕ ಹೆಚ್ಚುವರಿ 50 ಎಂಎಲ್ ಹಾಲು ಕೊಡುವುದನ್ನು ನಿಲ್ಲಿಸಲಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ಹಾಲಿನ ದರವನ್ನು 3 ರೂಪಾಯಿ ಹೆಚ್ಚಿಸಿದ್ದು ಆಗ ಕೆಎಂಎಫ್ ನಂದಿನಿ ನೀಲಿ ಪ್ಯಾಕಟ್‌ನ ಹಾಲಿಗೆ ಲೀಟರ್‌ಗೆ 42 ರೂಪಾಯಿ ಆಗಿತ್ತು.
