KMF Nandini: ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌; ಸಿಬ್ಬಂದಿ ವಜಾಗೊಳಿಸಿದ ಚಿಮುಲ್‌
ಕನ್ನಡ ಸುದ್ದಿ  /  ಕರ್ನಾಟಕ  /  Kmf Nandini: ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌; ಸಿಬ್ಬಂದಿ ವಜಾಗೊಳಿಸಿದ ಚಿಮುಲ್‌

KMF Nandini: ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌; ಸಿಬ್ಬಂದಿ ವಜಾಗೊಳಿಸಿದ ಚಿಮುಲ್‌

KMF Nandini: ನಂದಿನಿ ಬ್ರಾಂಡ್‌ನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಆದರೆ, ಚಿಕ್ಕಬಳ್ಳಾಪುರದಲ್ಲಿ ಹಾಲಿನ ಡೈರಿಗಳಲ್ಲಿ ಕಲಬೆರಕೆಯಾಗುತ್ತಿರುವ ವಿಚಾರ ಗಮನಸೆಳೆದಿದೆ. ಅಲ್ಲಿನ ಸಿಬ್ಬಂದಿಯೇ ಅದರಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿ. ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌ ಆದ ಕೂಡಲೇ, ಚಿಮುಲ್‌ ಸಿಬ್ಬಂದಿ ವಜಾಗೊಳಿಸಿದೆ.

ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌; ಸಿಬ್ಬಂದಿ ವಜಾಗೊಳಿಸಿದ ಚಿಮುಲ್‌
ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌; ಸಿಬ್ಬಂದಿ ವಜಾಗೊಳಿಸಿದ ಚಿಮುಲ್‌ (Karnataka Portfolio/ X)

\KMF Nandini: ಕೆಎಂಎಫ್‌ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಆದಾಗ್ಯೂ, ಈ ವಿಚಾರದ ಬಗ್ಗೆ ಪದೇಪದೆ ಚರ್ಚೆಗಳಾಗುತ್ತಿರುವಾಗಲೇ, ಹಾಲಿನ ಡೈರಿಯಲ್ಲಿ ನೀರಿಗೆ ಹಾಲು ಸೇರಿಸಿದ ವಿಡಿಯೋ ವೈರಲ್ ಆಗಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ತನ್ನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಪದೇಪದೆ ಕಠಿಣ ಮಾನದಂಡ ಅನುಸರಿಸುತ್ತಿರುವುದಾಗಿ ಹೇಳುತ್ತಿದೆ. ಆದಾಗ್ಯೂ, ಈ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಗಳಾಗುತ್ತಿದ್ದು, ಡೈರಿಯಲ್ಲಿ ಹಾಲಿಗೆ ನೀರು ಸೇರಿಸುತ್ತಿರುವ ವಿಡಿಯೋ ವೈರಲ್ ಆದ ಕಾರಣ ಚಿಕ್ಕಬಳ್ಳಾಪುರದ ಚಿಮುಲು, ಈ ಕೃತ್ಯದಲ್ಲಿ ಭಾಗಿಯಾದ ಸಿಬ್ಬಂದಿಯನ್ನು ವಜಾಗೊಳಿಸಿದೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್‌

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಎಕ್ಸ್ ತಾಣದಲ್ಲಿ ಶೇರ್ ಮಾಡಿಕೊಂಡಿರುವ ಕರ್ನಾಟಕ ಪೋರ್ಟ್‌ಫೋಲಿಯೋ, ಈ ಬಗ್ಗೆ ಗಮನಹರಿಸುವಂತೆ ಕೆಎಂಎಫ್‌ ಮತ್ತು ಸರ್ಕಾರದ ಗಮನಸೆಳೆದಿದೆ.

"ಕರ್ನಾಟಕದ ಹಾಲು ಮತ್ತು ಹಾಲಿನ ಉತ್ಪನ್ನ ಕ್ಷೇತ್ರದಲ್ಲಿ ನಂದಿನಿ ನಂಬಲರ್ಹ ಸಹಕಾರ ತತ್ತ್ವದ ಬ್ರಾಂಡ್‌. ಆದರೆ, ಚಿಕ್ಕಬಳ್ಳಾಪುರದಲ್ಲಿ ಇತ್ತೀಚಿನ ಕಲಬೆರಕೆ ವರದಿಗಳು ಗಮನಸೆಳೆಯುತ್ತಿದ್ದು, ಗುಣಮಟ್ಟದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಈಗಾಗಲೇ ನಿತ್ಯ ದರ ಏರಿಕೆ ಎದುರಿಸುತ್ತಿರುವ ಗ್ರಾಹಕರ ನಂಬಿಕೆಗೆ ದ್ರೋಹ ಬಗೆಯುತ್ತಿರುವ ಕೆಎಂಎಫ್ ಸಿಬ್ಬಂದಿ ಹಾಲಿನಲ್ಲಿ ನೀರು ಬೆರೆಸುತ್ತಿರುವುದು ಕಂಡು ಬಂದಿದೆ. ಈ ದುಷ್ಕೃತ್ಯವು ಅನೈತಿಕ ಮಾತ್ರವಲ್ಲ, ಸಾರ್ವಜನಿಕ ಆರೋಗ್ಯಕ್ಕೆ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಂತಹ ದುರ್ಬಲ ವರ್ಗದವರ ಆರೋಗ್ಯಕ್ಕೆ ಅಪಾಯವೂ ಆಗಿದೆ.

ಈ ಸಮಸ್ಯೆಯನ್ನು ಬಗೆಹರಿಸಲು ಸರಕಾರ ಮತ್ತು ಕೆಎಂಎಫ್ ಶೀಘ್ರ ಕ್ರಮಕೈಗೊಳ್ಳಬೇಕು. ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ನಿಯತ ತಪಾಸಣೆ ಜಾರಿಗೊಳಿಸಬೇಕು. ನಂದಿನಿ ಒಂದು ಬ್ರಾಂಡ್ ಆಗಿ, ಶುದ್ಧತೆ ಮತ್ತು ವಿಶ್ವಾಸಾರ್ಹತೆಯ ಸಂಕೇತವಾಗಿ, ಅಂತಹ ಘಟನೆಗಳು ತನ್ನ ಖ್ಯಾತಿಯನ್ನು ಹಾಳುಮಾಡಲು ಅವಕಾಶ ನೀಡುವುದಿಲ್ಲ. ಸಾರ್ವಜನಿಕ ನಂಬಿಕೆಯನ್ನು ಮರಳಿ ಪಡೆಯಲು ಪಾರದರ್ಶಕತೆಯನ್ನು ಮರುಸ್ಥಾಪಿಸುವುದು ಮತ್ತು ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಬರೆದಿಕೊಂಡಿದ್ದಾರೆ.

ಸಿಬ್ಬಂದಿ ವಜಾಗೊಳಿಸಿದ ಚಿಮುಲ್‌

ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ಚಿಂತಾಮಣಿ ತಾಲೂಕಿನ ಮಾಡಿಕೆರೆ ಹಾಲಿನ ಡೈರಿಯದ್ದು ಎಂದು ಹೇಳಲಾಗಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಲಿನ ಡಂಪ್ ಟ್ಯಾಂಕ್‌ಗೆ ನೀರು ಕಲಬೆರಕೆ ಮಾಡಿ, ಹಾಲಿನ ಟ್ಯಾಂಕ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಡೈರಿಗೆ ಸರಬರಾಜು ಮಾಡಿರುವುದು ಈಗ ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಮತ್ತೊಬ್ಬ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅದು ಸೋಷಿಯಲ್ ಮೀಡಿಯಾಗಳಲ್ಲೂ ಶೇರ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಚಿಮುಲ್ ಎಂಡಿ ಶ್ರೀನಿವಾಸ ಗೌಡ ಅವರು, ಡೈರಿಯ ಸಹಾಯಕ ಚೇತನ್‌ ಎಂಬುವವನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಅಲ್ಲದೇ, ಈ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿದ್ದಾರೆ ಎಂದು ವರದಿ ಹೇಳಿದೆ.

Whats_app_banner