ಕನ್ನಡ ಸುದ್ದಿ  /  Karnataka  /  Know Details About Common University Entrance Test

CUET: 'ಸಿಇಟಿ' ಬಗ್ಗೆ ಗೊತ್ತು, ಆದ್ರೆ 'ಸಿಯುಇಟಿ' ಬಗ್ಗೆ ಗೊತ್ತಿಲ್ವಾ? ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಈ ವರದಿ ಓದಿ

ನೀಟ್, ಜೆಇಇ, ಸಿಇಟಿ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಹೊಂದಿರುವ ದ್ವಿತೀಯ ಪಿಯುಸಿ ಬಹಳಷ್ಟು ವಿದ್ಯಾರ್ಥಿಗಳು ಸಿಯುಇಟಿ ಬಗ್ಗೆ ತಿಳಿಯದೆ ತಮಗಿರುವ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ನಿಮಗಾಗಿ ಇಲ್ಲಿದೆ ಮಾಹಿತಿ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನೀಟ್, ಜೆಇಇ, ಸಿಇಟಿ ಬಗ್ಗೆ ಮಾಹಿತಿ ಮತ್ತು ಆಸಕ್ತಿ ಹೊಂದಿರುವ ದ್ವಿತೀಯ ಪಿಯುಸಿ ಬಹಳಷ್ಟು ವಿದ್ಯಾರ್ಥಿಗಳು ಸಿಯುಇಟಿ ಬಗ್ಗೆ ತಿಳಿಯದೆ ತಮಗಿರುವ ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. 2022ರವರೆಗೆ ಪ್ರತಿ ಕೇಂದ್ರ ವಿಶ್ವವಿದ್ಯಾಲಯಗಳು ತಮ್ಮ ಪದವಿ ಕೋರ್ಸುಗಳಿಗೆ ಪ್ರವೇಶ ತೆಗೆದುಕೋಳ್ಳಲು ತಮ್ಮದೇ ಆದ ವಿಭಿನ್ನ ಕಾರ್ಯವಿಧಾನವನ್ನು ಹೊಂದಿದ್ದವು. ಈ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಕೀಕರಿಸಲು ಶಿಕ್ಷಣ ಸಚಿವಾಲಯ ಯುಜಿಸಿಯೊಂದಿಗೆ ಸೇರಿ ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ (ಸಿಯುಇಟಿ) ಎಂಬ ವಿನೂತನ ಪರೀಕ್ಷೆಯನ್ನು ಪರಿಚಯಿಸಿದೆ. ಇದು ಭಾರತದ ಎಲ್ಲಾ ಕೇಂದ್ರೀಯ ಮತ್ತು ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಸಾಮಾನ್ಯ ಪರೀಕ್ಷೆಯಾಗಿದೆ. ಪ್ರಾರಂಭದಲ್ಲಿ 90 ವಿಶ್ವವಿದ್ಯಾಲಯಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, ಈ ಶೈಕ್ಷಣಿಕ ವರ್ಷದಲ್ಲಿ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಸಿಯುಇಟಿಗೆ ತಮ್ಮ ಸಹಭಾಗಿತ್ತವನ್ನು ನೀಡಿವೆ. ಹಾಗಾಗಿಯೇ ದೇಶದ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಪದವಿಗಾಗಿ ಪ್ರವೇಶ ಅಪೇಕ್ಷಿಸುವ ವಿದ್ಯಾರ್ಥಿಗಳಿಗೆ ಸಿಯುಇಟಿ ಅತ್ಯಂತ ಮಹತ್ವದ ಪರೀಕ್ಷೆಯಾಗಿದೆ.

ದ್ವಿತೀಯ ಪಿಯುಸಿ ನಂತರ ಬಹಳಷ್ಟು ಸ್ಪರ್ಧಾತಕ ಪ್ರವೇಶ ಪರೀಕ್ಷೆಗಳು ವಿಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿರುವುದನ್ನು ಗಮನಿಸಿದ್ದೇವೆ. ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಸಿಯುಇಟಿ ಕಲ್ಪಿಸಿಕೊಡುತ್ತಿದೆ. ಮೂರೂ ವಿಭಾಗಗಳಲ್ಲೂ ಪದವಿ ಕೋರ್ಸುಗಳ ಜೊತೆಗೆ ಅನೇಕ ಸಮಗ್ರ ಪದವಿಗಳಿಗೂ (ಇಂಟೆಗ್ರೇಟೆಡ್​​ ಡಿಗ್ರಿ) ಅವಕಾಶವಿದೆ. ನಮ್ಮ ದೇಶದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಸಿ) ಜೊತೆಗೆ ಅನೇಕ ರಾಜ್ಯ ಶಿಕ್ಷಣ ಮಂಡಳಿಗಳಿವೆ. ಈ ಹಿಂದೆ ಕೇಂದ್ರೀಯ ವಿಶ್ವವಿದ್ಯಾನಿಲಯಗಳು ತಮ್ಮದೇ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತಿದ್ದಾಗ ಸಿಬಿಎಸ್‌ಸಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿ ಮೇಲುಗೈ ಸಾಧಿಸಿ, ಬೇರೆ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದರು. ಎಲ್ಲರಿಗೂ ಸಿಬಿಎಸ್‌ಸಿ ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಅವಕಾಶ ಸಿಗುವುದಿಲ್ಲ. ಹಾಗಾಗಿ ಸಿಯುಇಟಿ ಪರೀಕ್ಷೆಯಲ್ಲಿ ಕೇವಲ ಎನ್‌ಸಿಇಆರ್‌ಟಿ ಸಿಲಬಸ್ಸಿಗೆ ಮಾನ್ಯತೆ ನೀಡಲಾಗಿ ಯಾವುದೇ ಬೋರ್ಡಿನ ಅರ್ಹ ವಿದ್ಯಾರ್ಥಿಳಿಗೆ ಅವಕಾಶ ದೊರೆಯುತ್ತದೆ.

ಪ್ರತ್ಯೇಕ ಪರೀಕ್ಷೆಗಳಿದ್ದಾಗ ಪರೀಕ್ಷಾ ದಿನಾಂಕಗಳಲ್ಲಿಯೂ ಗೊಂದಲ ಉಂಟಾಗುವುದರ ಜೊತೆಗೆ, ಪ್ರತಿಯೊಂದು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗೆ ಪ್ರತ್ಯೇಕ ಶುಲ್ಕವಿರುತ್ತಿತ್ತು. ಸಿಯುಇಟಿ ಪರೀಕ್ಷೆಯಿಂದ ಎಕ ದಿನ ಪರೀಕ್ಷೆಯ ಜೊತೆಗೆ ಒಂದೇ ಶುಲ್ಕದಿಂದಾಗಿ ಆರ್ಥಿಕ ಹಿಂಜರಿತಕ್ಕೂ ಕಡಿವಾಣ ಹಾಕಿದಂತಾಗಿದೆ. ಪರೀಕ್ಷಾ ಕೇಂದ್ರಗಳೂ ಸಹ ಭಾರತದಾತ್ಯಂತ ಎಲ್ಲಾ ಸ್ಥಳಗಳಲ್ಲಿಯೂ ಏಕ ಸಮಯದಲ್ಲಿ ಕಾರ್ಯನಿರ್ವಹಿಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಯಾಣದ ಖರ್ಚು ಹಾಗೂ ಆಯಾಸವೂ ತಗ್ಗಿದಂತಾಗಿದೆ. ಉದಾ: ಈ ಹಿಂದೆ ತುಮಕೂರಿನ ವಿದ್ಯಾರ್ಥಿ ದೆಹಲಿ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ದೆಹಲಿಗೇ ಹೋಗಬೇಕಿತ್ತು, ಈಗ ತುಮಕೂರಿನಲ್ಲೇ ಕುಳಿತು ಪರೀಕ್ಷೆ ಬರೆಯಬಹುದು.

ದ್ವಿತೀಯ ಪಿಯುಸಿಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿವಿಧ ಕೇಂದ್ರೀಯ ವಿಶ್ವವಿದ್ಯಾಲಯಗಳು, ಅವುಗಳ ಪ್ರವೇಶ ಪರೀಕ್ಷೆ, ದಿನಾಂಕ, ಪಠ್ಯಕ್ರಮ, ಪ್ರಶ್ನೆಗಳ ರೀತಿಗಳ ಬಗೆಗಿನ ಮಾಹಿತಿ ಕೊರತೆಯಿಂದಾಗಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದರು. ಸಿಯುಇಟಿ ಪರೀಕ್ಷೆಯನ್ನು ಪರಿಚಯಿಸಿದ ಮೇಲೆ ಒಂದೇ ಬುಲೆಟಿನ್‌ನಲ್ಲಿ ಈ ಎಲ್ಲಾ ಮಾಹಿತಿಗಳನ್ನೂ ಒದಗಿಸುವುದರಿಂದ ವಿದ್ಯಾರ್ಥಿಯು ಕೇಂದ್ರೀಯ ವಿಶ್ವವಿದ್ಯಾಲಯಗಳ ಹಾಗೂ ಅವುಗಳು ಒದಗಿಸುವ ಕೋರ್ಸಗಳ ಪಟ್ಟಿಯೊಂದಿಗೆ ತನ್ನ ಅರ್ಹತೆ ಹಾಗೂ ಇಚ್ಛೆಗನುಗುಣವಾಗಿ ಪರೀಕ್ಷೆ ತೆಗೆದುಕೊಳ್ಳುತ್ತಾನೆ. ಪರೀಕ್ಷೆಗಳು ಪ್ರತ್ಯೇಕವಾಗಿ ನಡೆಯುತ್ತಿದ್ದಾಗ ಕೆಲವು ವಿಶ್ವವಿದ್ಯಾಲಯಗಳು ಒಎಂಆರ್ ಬಳಸಿದರೆ ಹಲವು ವಿಶ್ವವಿದ್ಯಾಲಯಗಳು ಲಿಖಿತ ಮಾದರಿಯಲ್ಲಿ ನಡೆಸುತ್ತಿದ್ದುದರಿಂದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳ ಸ್ವರೂಪ ಅರಿಯುವುದರಲ್ಲೇ ಗೊಂದಲವಾಗುತ್ತಿತ್ತು. ಹಲವು ಬಾರಿ ಪ್ರಶ್ನೆಪತ್ರಿಕೆಗಳ ಸೋರಿಕೆಯ ಘಟನೆಗಳೂ ಇವೆ. ಸಿಯುಇಟಿ ಪರೀಕ್ಷೆಯನ್ನು ಎನ್‌ಟಿಎ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ನಡೆಸುತ್ತಿದ್ದು ಸಂಪೂರ್ಣ ಗಣಕೀಕೃತವಾಗಿ ವಿದ್ಯಾರ್ಥಿ ಸರಿಯಾದ ಸಮಯದಲ್ಲಿ ಲಾಗಿನ್ ಆದರೆ ಮಾತ್ರ ಪ್ರಶ್ನೆಪತ್ರಿಕೆ ಗೋಚರಿಸುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ರಾಷ್ಟ್ರೀಯ ಮಟ್ಟದಲ್ಲಿ ಸಿಯುಇಟಿ ಎಂಬ ಏಕರೂಪ ಪರೀಕ್ಷೆಯನ್ನು ಪರಿಚಯಿಸಿರುವುದರಿಂದ ಪರೀಕ್ಷೆಯ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಪ್ರಾಮುಖ್ಯತೆ ಹೆಚ್ಚಾಗಿ ವಿದ್ಯಾರ್ಥಿ ಸ್ನೇಹಿಯಾಗಿದೆ. ಎಲ್ಲ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಗಮನಿಸಬೇಕಿರುವ ಪ್ರಮುಖ ವಿಷಯವೆಂದರೆ ಈ ವರ್ಷದ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 30. ವಿಶ್ವವಿದ್ಯಾನಿಲಯಗಳು ಹಾಗೂ ಕೋರ್ಸುಗಳ ಪಟ್ಟಿ, ಹತ್ತನೇ ತರಗತಿ ಹಾಗೂ ಪಿಯುಸಿ ರಿಜಿಸ್ಟ್ರೇಶನ್ ನಂಬರ್, ಸ್ಯಾನ್ ಮಾಡಿದ ಭಾವಚಿತ್ರ ಹಾಗೂ ಸಹಿ ಅರ್ಜಿ ಭರ್ತಿಮಾಡಲು ಅವಶ್ಯವಿದೆ.

ಸೂಚನೆ: ಐಸಿಎಆರ್ (ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್) ಮಾನ್ಯತೆ ಪಡೆದ ದೇಶದ ಕೇಂದ್ರ / ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪದವಿಗೆ ಪ್ರವೇಶ ಬಯಸುವವರು ಸಿಯುಇಟಿ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ..

ನಾಗೇಂದ್ರ ಟಿ ಸಿ

ಸಂಸ್ಥಾಪಕರು ಹಾಗೂ ಸಿಇಒ

ಪ್ರಣವಸ್ಯ ಅಕಾಡಮಿ, ತುಮಕೂರು

9483846333

ವರದಿ - ನಾಗೇಂದ್ರ ಟಿ ಸಿ

IPL_Entry_Point

ವಿಭಾಗ