Red sandalwood Mafia: ಪುಷ್ಪ ಸಿನಿಮಾದ ತಳಹದಿ ರಕ್ತಚಂದನಕ್ಕೆ ಏಕಿಷ್ಟು ಬೇಡಿಕೆ? ಕರ್ನಾಟಕ, ಆಂಧ್ರದಲ್ಲಿಯೇ ಅಷ್ಟೊಂದು ಬೆಳೆಯೋದು ಏಕೆ?
Pushpa 2 Movie: ಪುಷ್ಪ ಸಿನಿಮಾ ನೋಡಿದವರು ರಕ್ತಚಂದನವನ್ನು ಮರೆಯುವಂತೆಯೇ ಇಲ್ಲ. ಕ್ರಿಮಿನಲ್ ಗ್ಯಾಂಗ್‌ಗಳ ಆಟಾಟೋಪವಾಗಿರುವ ರಕ್ತಚಂದನಕ್ಕೆ ಶ್ರೀಗಂಧದಂತೆಯೇ ಹಲವು ಕಾರಣಕ್ಕೆ ಬೇಡಿಕೆ. ಆಂಧ್ರಪ್ರದೇಶ, ಕರ್ನಾಟಕ ಗಡಿಯಲ್ಲಿ ಮಾಫಿಯಾ ಹಿಡಿತ ಬಿಗಿಯಾಗಲೂ ಈ ಬೇಡಿಕೆಯೇ ಮುಖ್ಯ ಕಾರಣ. ‘ಪುಷ್ಪ 2 ’ ಸಿನಿಮಾ ನೆಪದಲ್ಲಿ ರಕ್ತಚಂದನದ ಕುರಿತಾದ ಮಾಹಿತಿ ಇಲ್ಲಿದೆ.
Red Sandalwood Mafia: ರಕ್ತಚಂದನ ಈ ಹೆಸರನ್ನು ನೀವು ಎಲ್ಲೆಲ್ಲಿ ಕೇಳಿದ್ದೀರಿ? ಹಾಸನದ ಶ್ರವಣ ಗೊಮ್ಮಟೇಶ್ವರ, ಕಾರ್ಕಳದ ಗೊಮ್ಮಟೇಶ್ವರ ಮೂರ್ತಿಯ ಮಸ್ತಕಾಭಿಷೇಷಕ, ತಿರುಪತಿ ತಿಮ್ಮಪ್ಪನ ಅಲಂಕಾರ ಹೀಗೆ ಹಲವು ಸಂದರ್ಭಗಳು ನಿಮ್ಮ ಕಣ್ಣೆದುರು ತೇಲಿ ಹೋಗಬಹುದು. ದೇಗುಲಗಳು, ದೇವರ ಪೂಜೆಗೆ ರಕ್ತಚಂದನ ಬೇಕೇಬೇಕು. ರಕ್ತಚಂದನದ ಅಲಂಕಾರ ಎನ್ನುವ ವೈಶಿಷ್ಟ್ಯ ದೇಗುಲಗಳಲ್ಲಿ ಇದೆ. ಇನ್ನೊಂದು ಕಡೆ ರಕ್ತಚಂದನ ವಾಹನದ ಮೇಲೆ ದಾಳಿ, ಭಾರೀ ಮೌಲ್ಯದ ರಕ್ತಚಂದನ ವಶ. ಆಂಧ್ರದಲ್ಲಂತೂ ರಕ್ತಚಂದನದ ವಿಚಾರದಲ್ಲಿ ಅದೆಷ್ಟು ಮಂದಿ ನೆತ್ತರು ಹರಿದಿದೆಯೋ ಗೊತ್ತಿಲ್ಲ. ಇವುಗಳ ಮಧ್ಯೆ ರಕ್ತಚಂದನ ಎಂದ ತಕ್ಷಣ ಜಪಾನ್ ಹಾಗೂ ಚೀನಾ ದೇಶಗಳ ಹೆಸರೂ ಮುಂಚೂಣಿಗೆ ಬರುತ್ತವೆ. ಇಡೀ ಪುಷ್ಪ ಸಿನಿಮಾ ನಡೆಯುವುದೇ ರಕ್ತಚಂದನದ ಮಾಫಿಯಾ ಸುತ್ತಮುತ್ತ. ಪುಷ್ಪ ಸಿನಿಮಾ ನೋಡಿದವರಲ್ಲಿ ಮತ್ತು ಆ ಸಿನಿಮಾ ಬಗ್ಗೆ ತಿಳಿದವರಲ್ಲಿ ಸಹಜವಾಗಿಯೇ ರಕ್ತಚಂದನದ ಬಗ್ಗೆಯೂ ಕುತೂಹಲ ಇರಬಹುದು.
ಅರಣ್ಯದಲ್ಲಿ ಬೆಳೆಯುವ ಪ್ರಮುಖ ಮರಗಳಲ್ಲಿ ಶ್ರೀಗಂಧ ಹಾಗೂ ರಕ್ತಚಂದನಕ್ಕೆ ಅಗ್ರ ಪಟ್ಟ. ಶ್ರೀಗಂಧ ಹಳದಿ ಬಣ್ಣದ ರೂಪದಲ್ಲಿದ್ದರೆ, ರಕ್ತಚಂದನಕ್ಕೆ ಕೆಂಪು ಬಣ್ಣದ್ದು. ಎರಡಕ್ಕೂ ಅದರದ್ದೇ ಆದ ಮಹತ್ವವಿದೆ. ಶ್ರೀಗಂಧಕ್ಕೆ ಕೊಂಚ ಹೆಚ್ಚಿನ ಬೆಲೆ ಇದ್ದರೆ, ರಕ್ತಚಂದನದ ಬೆಲೆ ಅದಕ್ಕಿಂತಲೂ ಕೊಂಚ ಕಡಿಮೆಯಷ್ಟೇ. ಆದರೆ ಬೇಡಿಕೆ ವಿಚಾರದಲ್ಲಿ ಎರಡಕ್ಕೂ ಒಂದೇ ಗೌರವ. ರಕ್ತಚಂದನ ದಕ್ಷಿಣ ಭಾರತದ ಪರ್ವತ ವ್ಯಾಪ್ತಿಯ ಸ್ಥಳೀಯ ಸಸ್ಯ. ರೆಡ್ ಸ್ಯಾಂಡಲ್‍ವುಡ್, ಕೆಂಪು ಚಂದನ, ಇವು ಈ ಮರಕ್ಕಿರುವ ಸಾಮಾನ್ಯ ಹೆಸರು ಇದು ಫ್ಯಾಬೇಸೀ ಕುಟುಂಬದ ಫ್ಯಾಬಾಯ್ಡೀ ಉಪಕುಟುಂಬಕ್ಕೆ ಸೇರಿರುವ ಪರ್ಣಪಾತಿ ಮರ.
ರಕ್ತಚಂದನಕ್ಕೆ ಶತಮಾನದಿಂದಲೂ ದೇಗುಲಗಳಲ್ಲಿ ಭಾರೀ ಬೇಡಿಕೆಯಿದೆ. ಕೆಲವು ದೇವಸ್ಥಾನಗಳಲ್ಲಿ ರಕ್ತಚಂದನದ ಪೂಜೆ ನಡೆಯದೇ ಇದ್ದರೆ ಅದು ಪೂರ್ಣವಾಗುವುದೇ ಇಲ್ಲ. ತಿರುಪತಿ ತಿಮ್ಮಪ್ಪನ ದೇಗುಲ ಸೇರಿ ಆಂಧ್ರದಲ್ಲಂತೂ ವಾರದಲ್ಲಿ ಕನಿಷ್ಠ ನಾಲ್ಕೈದು ದಿನವಾದರೂ ರಕ್ತಚಂದನದ ಅಲಂಕಾರ ಮಾಡಲಾಗುತ್ತದೆ. ಇದರಿಂದ ದೇಗುಲಗಳಿಗೆ ಟನ್‌ಗಟ್ಟಲೇ ರಕ್ತ ಚಂದನ ಬೇಕು. ಕರ್ನಾಟಕ, ತಮಿಳುನಾಡಿನ ಕೆಲವು ದೇಗುಲಗಳಲ್ಲೂ ಇದರ ಬಳಕೆಯಿದೆ.
ತಿರುಪತಿ ನಂಟು
ಆಂಧ್ರಪ್ರದೇಶ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ರಕ್ತಚಂದನ ಬೆಳೆಯಲಾಗುತ್ತದೆ. ಅದರಲ್ಲೂ ಆಂಧ್ರಪ್ರದೇಶದ ತಿರುಪತಿ ಬೆಟ್ಟ ಹಾಗೂ ಸುತ್ತಮುತ್ತಲಿನ ಕಾಡು ಜನಪ್ರಿಯವಾಗಿರುವುದು ರಕ್ತ ಚಂದನದಿಂದಲೇ. ಚಿತ್ತೂರು ಭಾಗದಲ್ಲೂ ಇದನ್ನು ಬೆಳೆಯಲಾಗುತ್ತದೆ. ಕರ್ನಾಟಕದ ಕೋಲಾರ, ಮಂಡ್ಯ, ತುಮಕೂರು ಭಾಗದಲ್ಲಿ ಹೆಚ್ಚು ಇದನ್ನು ಬೆಳೆಯಲಾಗುತ್ತದೆ. ಎರಡೂ ರಾಜ್ಯಗಳಿಂದಲೂ ರಕ್ತಚಂದನಕ್ಕೆ ಇನ್ನಿಲ್ಲದ ಬೇಡಿಕೆ. ಏಕೆಂದರೆ ಈ ಭಾಗದಲ್ಲಿನ ಹವಾಗುಣ, ಮಣ್ಣಿನ ಗುಣ ಲಕ್ಷಣವು ಅತ್ಯುತ್ತಮ ದರ್ಜೆಯ ರಕ್ತಚಂದನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಇಲ್ಲಿನ ರಕ್ತಚಂದನದ ಘಮಲಿನಿಂದಲೇ ಅದರ ಶ್ರೇಷ್ಠತೆ ತಿಳಿಯುತ್ತದೆ.
ರಕ್ತಚಂದನ ಮರದ ರೀತಿಯಲ್ಲಿಯೇ ಬೆಳೆಯುತ್ತದೆ. ಮೊಳೆತ ಕನಿಷ್ಠ 15 ವರ್ಷಗಳ ನಂತರ ರಕ್ತಚಂದನ ಒಂದು ಹಂತಕ್ಕೆ ಬರುತ್ತದೆ. ಆದರೆ 25 ವರ್ಷದ ನಂತರ ರಕ್ತಚಂದನದ ಗುಣಮಟ್ಟ ಅತ್ಯುತ್ತಮ. ಶ್ರೀಗಂಧದ ರೀತಿಯಲ್ಲಿಯೇ ಇದು ಕೂಡ ಒಂದು ಮರವೇ. ತುಂಡುಗಳ ರೂಪದಲ್ಲಿ ಕತ್ತರಿಸಿ ಇದನ್ನು ಸಾಗಿಸಲಾಗುತ್ತದೆ. ಶ್ರೀಗಂಧಕ್ಕೆ ಒಂದು ಕೆಜಿಗೆ 15 ಸಾವಿರ ರೂ. ಇದ್ದರೆ, ರಕ್ತಚಂದನಕ್ಕೆ ಇರುವ ಬೆಲೆ ಕೆಜಿಗೆ 10 ಸಾವಿರ ರೂ.ಗೂ ಅಧಿಕ.
ಜಾಗತಿಕ ಬೇಡಿಕೆ ಸ್ವರೂಪ
ಆದರೆ ರಕ್ತ ಚಂದನಕ್ಕೆ ಬೇಡಿಕೆ ಬಂದಿದ್ದು, ಇದು ಮಾಫಿಯಾ ಸ್ವರೂಪ ಪಡೆಯಲು ಕಾರಣವಾಗಿದ್ದು ಜಾಗತಿಕ ಬೇಡಿಕೆಯಿಂದ. ಜಪಾನ್ ಹಾಗೂ ಚೀನಾ ದೇಶದವರು ಆಂಧ್ರಪ್ರದೇಶ ಹಾಗೂ ಕರ್ನಾಟಕದ ರಕ್ತ ಚಂದನ ಖರೀದಿಗೆ ಕೋಟಿಗಟ್ಟಲೇ ಬಿಡ್ ಕೂಗಿದಾಗಲೇ. ಕೆಲವು ವರ್ಷದ ಹಿಂದೆ ಆಂಧ್ರಪ್ರದೇಶದಲ್ಲಿ ಜಾಗತಿಕ ಟೆಂಡರ್ ಪ್ರಕ್ರಿಯೆ ನಡೆಸಲಾಯಿತು. ಅದೂ ರಕ್ತಚಂದನ ಮಾರಾಟದ್ದು.
ಆಗ ನಡೆದ ವಹಿವಾಟು 10 ರಿಂದ 15 ಸಾವಿರ ಕೋಟಿ ರೂ. ಅಷ್ಟು ರಕ್ತಚಂದನ ಹೊರ ದೇಶಗಳಿಗೆ ರವಾನೆಯಾಯಿತು. ಜಪಾನ್‌ನಲ್ಲಂತೂ ರಕ್ತಚಂದನದ ಆಟಿಕೆಗಳನ್ನು ಶ್ರೇಷ್ಠ ಗುಣಮಟ್ಟದಲ್ಲಿ ತಯಾರಿಸಲಾಗುತ್ತದೆ. ಇದಕ್ಕೆ ಭಾರೀ ಬೇಡಿಕೆ. ಇದನ್ನು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜಪಾನ್‌ನಲ್ಲಿದೆ. ಚೀನಾದಲ್ಲೂ ಕೂಡ ಇದೇ ನಂಬಿಕೆಯಿದೆ. ಅಲ್ಲಿ ಔಷಧಗಳಿಗೂ ಇದನ್ನು ಬಳಸಲಾಗುತ್ತದೆ.
ಮಾಫಿಯಾ ಸ್ವರೂಪ
ಹೊರ ದೇಶದಲ್ಲಿ ಇಷ್ಟೊಂದು ಬೇಡಿಕೆ ಇದೆ ಎಂದಾಗ ಅದರ ಬೆಲೆಯೂ ಸಹಜವಾಗಿಯೇ ಏರುತ್ತಾ ಹೋಯಿತು. ಬೆಳೆದವರಿಗೆ ಬೆಲೆ ಬಂದಿತು. ಇದರೊಟ್ಟಿಗೆ ಮಾಫಿಯಾ ಸ್ವರೂಪವೂ ಶುರುವಾಗಿ ಕಳ್ಳ ಸಾಗಣೆ, ಶೂಟೌಟ್, ಎನ್‌ಕೌಂಟರ್‌ಗಳೆಲ್ಲಾ ನಡೆದು ಹೋದವು.
ಕರ್ನಾಟಕದಲ್ಲಿಯೇ ವರ್ಷಕ್ಕೆ 150ಕ್ಕೂ ಹೆಚ್ಚು ಪ್ರಕರಣ ಅರಣ್ಯ ಇಲಾಖೆಯ ಕೆಲವು ವಿಭಾಗ, ಪೊಲೀಸ್ ಠಾಣೆಯಲ್ಲಿ ದಾಖಲಾಗತೊಡಗಿದವು. ಆಂಧ್ರದಲ್ಲಿ ಇದು ಸಾವಿರವನ್ನೂ ದಾಟಿತು. ಅಷ್ಟರ ಮಟ್ಟಿಗೆ ರಕ್ತಚಂದನ ಮಾಫಿಯಾವಾಗಿ ಬೆಳೆಯಿತು. ಇದರ ಹಿಂದೆ ಇದ್ದವರು ಆಂಧ್ರದ ಜನಪ್ರತಿನಿಧಿಗಳು. ಅಲ್ಲಿನ ಶಾಸಕರೇ ಇದಕ್ಕೆ ಬೆಂಬಲ ನೀಡಿ ದುಡ್ಡು ಮಾಡಿದರೆ ಸಿಕ್ಕಿಬಿದ್ದವರು ಕೆಳ ಹಂತದವರು. ತಿರುಪತಿ, ಚಿತ್ತೂರು ಭಾಗದಲ್ಲಿ ರಕ್ತಚಂದನದ ಮಾಫಿಯಾ ಪ್ರಭಾವ ಎಷ್ಟಿದೆ ಎಂದರೆ ಅಲ್ಲಿ ಬಹುತೇಕ ಮನೆಗಳಲ್ಲಿ ರಕ್ತಚಂದನ ಇರುವಂತೆ ಆಗಿದೆ. ಎನ್‌ಕೌಂಟರ್, ಗುಂಡೇಟು ಪ್ರಕರಣಗೂ ಏರಿಕೆಯಾದವು.
ಕೋಟಿಗಟ್ಟಲೇ ಜಪ್ತಿ
ಕರ್ನಾಟಕದಲ್ಲೂ ರಕ್ತಚಂದನ ಸಾಗಣೆಗೆ ಇರುವುದು ಆಂಧ್ರಪ್ರದೇಶದ ನಂಟೇ. ಆಂಧ್ರದಿಂದ ಖರೀದಿ ಮಾಡಿಕೊಂಡು ಚೆನ್ನೈ ಮೂಲಕ ಅವುಗಳನ್ನು ಹೊರ ದೇಶಕ್ಕೆ ಸಾಗಿಸುವ ಮಾರ್ಗವಿದೆ. ಈ ವೇಳೆ ಕೋಲಾರ ಇಲ್ಲವೇ ಚಿಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಬೆಂಗಳೂರು ನಗರಕ್ಕೆ ತಂದು ಇಲ್ಲಿಂದ ಸಾಗಣೆ ಮಾಡುವುದು ನಡೆದಿದೆ. ಈ ಕಾರಣದಿಂದಲೇ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಪೊಲೀಸರು ರಕ್ತಚಂದನದ ಪ್ರಕರಣಗಳನ್ನು ದಾಖಲಿಸಿ ಕೋಟ್ಯಂತರ ರೂ. ಮೌಲ್ಯದ ಮಾಲು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಹೆಸರಘಟ್ಟದಲ್ಲಿ ದಾಳಿ ನಡೆಸಿದ್ದ ಪಶ್ಚಿಮ ವಿಭಾಗದ ಪೊಲೀಸರು ಫಾರ್ಮ್ ಹೌಸ್‌ನ ನೀರಿನ ಸಂಪ್‌ನಲ್ಲಿ ಶೇಖರಿಸಿಡಲಾಗಿದ್ದ 2.68 ಕೋಟಿ ರೂ ಮೌಲ್ಯದ 1693 ಕೆ.ಜಿ ರಕ್ತ ಚಂದನವನ್ನು ವಶ ಪಡಿಕೊಳ್ಳಲಾಗಿತ್ತು. ತಿರುಪತಿಯಲ್ಲಿ ಕೆಲವು ವರ್ಷದ ಹಿಂದೆ ರಕ್ತಚಂದನ ಸಾಗಿಸಲು ಯತ್ನಿಸಿದವರ ಮೇಲೆ ಪೊಲೀಸರು ಎನ್‌ಕೌಂಟರ್ ನಡೆಸಿದಾಗ ಹಲವರು ಜೀವ ಕಳೆದುಕೊಂಡಿದ್ದರು. ಮೂರು ವರ್ಷದ ಹಿಂದೆ ಬೆಂಗಳೂರು ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನೂ ಕೂಡ ವಶಕ್ಕೆ ಪಡೆದಿದ್ದರು. ಆಗ ಅವರ ಬಳಿ ಸಿಕ್ಕಿದ್ದು 4.5 ಕೋಟಿ ರೂ ಮೌಲ್ಯದ 9 ಟನ್ ರಕ್ತಚಂದನ ಮರಗಳು.
ಅದೇ ರೀತಿ ಅರಣ್ಯ ಇಲಾಖೆಗೂ ಆಗಾಗ ಬರುವ ನಿಖರ ಮಾಹಿತಿ ಆಧರಿಸಿ ಹಾಲಿನ ಟ್ಯಾಂಕರ್, ಇಲ್ಲವೇ ಹಣ್ಣು ತರಕಾರಿ ಸಾಗಿಸುವ ವಾಹನಗಳ ಕೆಳ ಭಾಗದಲ್ಲಿ ತೆಗೆದುಕೊಂಡು ಹೋಗುವ ಜಾಲವನ್ನು ಭೇದಿಸಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಅರಣ್ಯ ಇಲಾಖೆಗಳ ಕೋಠಿಗಳಲ್ಲಿಯೇ ನಾಲ್ಕೈದು ಸಾವಿರ ಕೋಟಿ ಬೆಲೆ ಬಾಳುವ ರಕ್ತ ಚಂದನ ಸಂಗ್ರಹವಿದೆ.
ನಿಯಮ ಸಡಿಲು
ಇತ್ತೀಚಿನ ವರ್ಷಗಳಲ್ಲಿ ಶ್ರೀಗಂಧದ ರೀತಿಯಲ್ಲಿಯೇ ರಕ್ತಚಂದನ ಮರ ಕಡಿಯಲು, ಸಾಗಿಸಲು ಮುಕ್ತ ನೀತಿ ಜಾರಿಗೊಳಿಸಲಾಗಿದೆ. ಕರ್ನಾಟಕ, ಆಂಧ್ರದಲ್ಲೂ ಇದೆ. ಇದಕ್ಕೆ ಪೂರ್ವಾನುಮತಿ ಇದ್ದರೆ ಸಾಕು. ನೀತಿ ಸಡಿಸಿಲಿದರೂ ರಕ್ತಚಂದನ ಅಕ್ರಮ ಮಾರಾಟ ನಿಂತಿಲ್ಲ. ಸಿಕ್ಕಿ ಹಾಕಿಕೊಂಡವರು ಕನಿಷ್ಠ ಮೂರು ವರ್ಷ ಶಿಕ್ಷೆ ಅನುಭವಿಸುವ ಕಾನೂನು ಕೂಡ ಇದೆ.
ಕರ್ನಾಟಕ ಅರಣ್ಯ ಇಲಾಖೆಯು ಶ್ರೀಗಂಧದ ರೀತಿಯಲ್ಲಿಯೇ ರಕ್ತಚಂದನ ಮಾರಾಟಕ್ಕೆ ಮೈಸೂರಿನಲ್ಲಿರುವ ಶ್ರೀಗಂಧ ಕೋಠಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ. ಇದಲ್ಲದೇ ಕೋಲಾರ, ಮಂಡ್ಯ ಭಾಗದಲ್ಲೂ ಖರೀದಿಗೆ ಅರಣ್ಯ ಇಲಾಖೆ ಅವಕಾಶ ಮಾಡಿದೆ. ಏನೇ ಕಾನೂನು ಮಾಡಿದರೂ ಬೇಡಿಕೆ ಇದೆ ಎಂದಾಗ ಅದಕ್ಕೆ ಮಾಫಿಯಾ ಸ್ವರೂಪ ಬಲಗೊಳ್ಳುವುದು ಇದ್ದೇ ಇದೆ. ಕಾನೂನು ಸರಳೀಕರಣದ ನಂತರ ಈಗ ಮಾಫಿಯಾ ಪ್ರಮಾಣ ತಗ್ಗಿದರೂ ಅಕ್ರಮ ವಹಿವಾಟು, ಸಾಗಣೆ ಮುಂದುವರಿದೇ ಇದೆ. ಪೊಲೀಸ್, ಅರಣ್ಯ ಇಲಾಖೆಯ ವಿಚಕ್ಷಣೆಯೂ ರಕ್ತಚಂದನದ ಮೇಲೆ ನಿಂತಿಲ್ಲ.
ಪುಷ್ಟ 2 ಕಥೆಯ ತಳಹದಿ
ಪುಷ್ಪ ಸಿನಿಮಾದ ಮೊದಲ ಮತ್ತು ಎರಡನೇ ಭಾಗಗಳು ಸಂಪೂರ್ಣವಾಗಿ ರಕ್ತಚಂದನದ ಕಳ್ಳಸಾಗಣೆಗೆ ಸಂಬಂಧಿಸಿದ ಬೆಳವಣಿಗೆಗಳನ್ನೇ ತಳಹದಿಯಾಗಿ ಹೊಂದಿವೆ. ಕಳ್ಳಸಾಗಣೆ ಮತ್ತು ಅಪರಾಧವನ್ನು ವಿಜೃಂಭಿಸುವ ಸಿನಿಮಾಗಳಿವು ಎನ್ನುವ ಆಕ್ಷೇಪಗಳೂ ಕೆಲವರಿಂದ ಕೇಳಿಬಂದಿವೆ. ಆದರೆ ಒಟ್ಟಾರೆ ರಕ್ತಚಂದನದ ಬಗ್ಗೆ ಹಲವರಿಗೆ ಆಸಕ್ತಿ ಮತ್ತು ಕುತೂಹಲ ಮೂಡಲು ಪುಷ್ಪ ಸರಣಿಯ ಸಿನಿಮಾಗಳು ನೆಪವಾಗಿದ್ದಂತೂ ಸುಳ್ಳಲ್ಲ.