Gujarat Assembly Elections 2022 Results: ಗುಜರಾತ್‌ನಲ್ಲಿ ಆಪ್‌ 'ಬೆಂಬಲ'ದಿಂದ ಬಿಜೆಪಿಗೆ ಗೆಲುವು: ಸಿದ್ದರಾಮಯ್ಯ ವಿಶ್ಲೇಷಣೆ!
ಕನ್ನಡ ಸುದ್ದಿ  /  ಕರ್ನಾಟಕ  /  Gujarat Assembly Elections 2022 Results: ಗುಜರಾತ್‌ನಲ್ಲಿ ಆಪ್‌ 'ಬೆಂಬಲ'ದಿಂದ ಬಿಜೆಪಿಗೆ ಗೆಲುವು: ಸಿದ್ದರಾಮಯ್ಯ ವಿಶ್ಲೇಷಣೆ!

Gujarat Assembly Elections 2022 Results: ಗುಜರಾತ್‌ನಲ್ಲಿ ಆಪ್‌ 'ಬೆಂಬಲ'ದಿಂದ ಬಿಜೆಪಿಗೆ ಗೆಲುವು: ಸಿದ್ದರಾಮಯ್ಯ ವಿಶ್ಲೇಷಣೆ!

ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಗುಜರಾತ್‌ ಫಲಿತಾಂಶ ರಾಜ್ಯದ ಮೇಲೆ ಯಾವ ಪರಿಣಾಮವೂ ಬೀರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುಜರಾತ್‌ನಲ್ಲಿ ಆಪ್‌ ಪಕ್ಷವು ಕಾಂಗ್ರೆಸ್‌ ಮತಗಳನ್ನು ಕಸಿಯುವಲ್ಲಿ ಸಫಲವಾಯಿತು ಎಂದು ವಿಶ್ಲೇಷಿಸಿದ್ದಾರೆ.

ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ) (HT_PRINT)

ಮೈಸೂರು: ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಗುಜರಾತ್‌ ಫಲಿತಾಂಶ ರಾಜ್ಯದ ಮೇಲೆ ಯಾವ ಪರಿಣಾಮವೂ ಬೀರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗುಜರಾತ್‌ನಲ್ಲಿ ಆಪ್‌ ಪಕ್ಷವು ಕಾಂಗ್ರೆಸ್‌ ಮತಗಳನ್ನು ಕಸಿಯುವಲ್ಲಿ ಸಫಲವಾಯಿತು ಎಂದು ವಿಶ್ಲೇಷಿಸಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ ಎಂಬ ಸತ್ಯವನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಗುಜರಾತ್‌ನಲ್ಲಿ ಬಿಜೆಪಿ ಗೆದ್ದಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆಪ್‌ ಸ್ಪರ್ಧಿಸಿ ಕಾಂಗ್ರೆಸ್‌ನ ಮತಗಳನ್ನು ಕಸಿದುಕೊಂಡಿತು. ಬಹುತೇಕ ಕ್ಷೇತ್ರಗಳಲ್ಲಿ ಆಪ್‌ ನಮ್ಮ ಮತಗಳನ್ನು ಕಸಿದಿದ್ದರಿಂದ ಬಿಜೆಪಿಗೆ ಅನುಕೂಲವಾಗಿದೆ. ಗುಜರಾತ್‌ನಲ್ಲಿ ಆಪ್‌ಗೆ ಹೇರಳ ಹಣ ನೀಡಿ ಕಾಂಗ್ರೆಸ್‌ ಪಕ್ಷದ ವಿಭಜಿಸಿ ಲಾಭ ಪಡೆಯುವುಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಸರ್ಕಾರ ರಚಿಸಲಿರುವುದು ಸಂತಸದ ಸಂಗತಿ. ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು, ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಇತ್ತು. ಹಾಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇನ್ನು ಗುಜರಾತ್‌ ವಿಧಾನಸಭೆ ಚುನಾವಣೆ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರದು ಎಂದ ಸಿದ್ದರಾಮಯ್ಯ, ಹಾಗಾದರೆ ಹಿಮಾಚಲ ಪ್ರದೇಶ ವಿಧಾನಸಬೆ ಚುನಾವಣೆ ಫಲಿತಾಂಶ ಪ್ರಭಾವ ಬೀರುವುದಿಲ್ಲವೇ ಎಂದು ಪ್ರಶ್ನಿಸಿದರು. ಗುಜರಾತ್‌ನಲ್ಲಿ ಆಪ್‌ ಮುಂದೆ ಮಾಡಿದಂತೆ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್‌ ಪಕ್ಷಕ್ಕೆ ಪರೋಕ್ಷವಾಗಿ ಬೆಂಬಲ ನೀಡಬಹುದು. ಆದರೆ ಗುಜರಾತ್‌ನಲ್ಲಿ ಮಾಡಿದಂತೆ ಇಲ್ಲಿ ಕಾಂಗ್ರೆಸ್‌ ಮತಗಳನ್ನು ಒಡೆಯಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ಒಂದು ರಾಜ್ಯದ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವುದಿಲ್ಲ. ಹಾಗೆ ಯೋಚಿಸುವುದಾದರೆ, ದೆಹಲಿಯ ಪಾಲಿಕೆ ಚುನಾವಣೆಯ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪ್ರಭಾವ ಬೀರುತ್ತದಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆಯಾ ರಾಜ್ಯದ ಸಮಸ್ಯೆಗಳು ಮತ್ತು ಸ್ಥಳೀಯ ವಿಚಾರಗಳ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ನಮ್ಮ ರಾಜ್ಯದಲ್ಲಿ ಅತೀ ಭ್ರಷ್ಟ ಸರ್ಕಾರವಿದೆ. ಇಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟನಾ ದೃಷ್ಟಿಯಿಂದ ಹೆಚ್ಚು ಶಕ್ತಿಶಾಲಿಯಾಗಿದೆ. ಹಾಗಾಗಿ ಗುಜರಾತ್‌ ಫಲಿತಾಂಶ ಇಲ್ಲಿನ ಚುನಾವಣೆಯ ಮೇಲೆ ಯಾವ ಪ್ರಭಾವವೂ ಬೀರುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಚುನಾವಣೆ ಸಂದರ್ಭದಲ್ಲಿ ಬೇರೆ ರೀತಿಯ ಸಂಗತಿಗಳು ಪ್ರಮುಖವಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಪ್ರಬಲವಾದ ಆಡಳಿತ ವಿರೋಧಿ ಅಲೆ ಇದೆ. ಇಲ್ಲಿನ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ನಿಷ್ಕ್ರಿಯತೆ ಇವುಗಳಿಂದ ರಾಜ್ಯದ ಜನ ರೋಸಿ ಹೋಗಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಲಂಚ ನೀಡದೆ ಯಾವ ಕೆಲಸಗಳು ನಡೆಯುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಭ್ರಷ್ಟ ಸರ್ಕಾರವನ್ನು ರಾಜ್ಯದ ಜನ ಕಿತ್ತೆಸೆಯಲಿದ್ದಾರೆ ಎಂದು ಸಿದ್ದರಾಮಯ್ಯ ಇದೇ ವೇಳೆ ಗುಡುಗಿದರು.

ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಯಾವ ತಂತ್ರಗಾರಿಕೆ ನಡೆಸುವ ಅವಶ್ಯಕತೆ ಇಲ್ಲ. ನಾವು ಸುಮ್ಮನೆ ಚುನಾವಣೆ ಎದುರಿಸಿದರೂ ಗೆಲ್ಲುತ್ತೇವೆ. ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸು ಕೆಲಸ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಇಂದಿನ ಪ್ರಮುಖ ಸುದ್ದಿ

Gujarat Assembly Elections 2022 Results: ಗುಜರಾತ್‌ ಬಿಜೆಪಿ ಐತಿಹಾಸಿಕ ಗೆಲುವು: ಬಿಎಸ್‌ವೈ ಪ್ರತಿಕ್ರಿಯೆ ಏನು?

ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಗುಜರಾತ್‌ನಲ್ಲಿ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿರುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

Whats_app_banner