Karnataka Election Date: ಮೇ 10ರಂದೇ ಏಕೆ ಚುನಾವಣೆ?: ಇದು ಚುನಾವಣಾ ಆಯೋಗದ 'ವೋಟಿಂಗ್ ಡೇ' ಸ್ಟ್ರ್ಯಾಟರ್ಜಿ
ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ ಕರ್ನಾಟಕದಲ್ಲಿ ಮೇ 10(ಬುಧವಾರ) ರಂದು ವಿಧಾನಸಭಾ ಚುನಾವಣೆಗೆ ಮತದಾನವನ್ನು ನಿಗದಿಪಡಿಸಿದೆ, ಇದರಿಂದಾಗಿ ನಗರ ಮತದಾರರು ವಾರಾಂತ್ಯದ ರಜೆ ಪಡೆದು, ಮತದಾನದ ದಿನದ ರಜೆಯ ಲಾಭವನ್ನು ಪಡೆಯಲು ಸಾಧ್ಯವಾಗದಿರುವಂತೆ ಚುನಾವಣಾ ಆಯೋಗ ಸೂಕ್ತ ತೀರ್ಮಾನ ಕೈಗೊಂಡಿದೆ. ಮತದಾನದ ಬಗೆಗಿನ ನಗರ ನಿರಾಸಕ್ತಿಯನ್ನು ದೂರ ಮಾಡುವುದು ಆಯೋಗದ ಉದ್ದೇಶವಾಗಿದೆ.
ಬೆಂಗಳೂರು: ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ ಕರ್ನಾಟಕದಲ್ಲಿ ಮೇ 10(ಬುಧವಾರ) ರಂದು ವಿಧಾನಸಭಾ ಚುನಾವಣೆಗೆ ಮತದಾನವನ್ನು ನಿಗದಿಪಡಿಸಿದೆ, ಇದರಿಂದಾಗಿ ನಗರ ಮತದಾರರು ವಾರಾಂತ್ಯದ ರಜೆ ಪಡೆದು, ಮತದಾನದ ದಿನದ ರಜೆಯ ಲಾಭವನ್ನು ಪಡೆಯಲು ಸಾಧ್ಯವಾಗದಿರುವಂತೆ ಚುನಾವಣಾ ಆಯೋಗ ಸೂಕ್ತ ತೀರ್ಮಾನ ಕೈಗೊಂಡಿದೆ.
"ಮತದಾನದ ದಿನಾಂಕವನ್ನು ಬುಧವಾರಕ್ಕೆ ನಿಗದಿ ಮಾಡಲಾಗಿದೆ. ಸೋಮವಾರಕ್ಕೆ ಮತದಾನ ನಿಗದಿ ಮಾಡಿದ್ದರೆ ಶನಿವಾರ ಮತ್ತು ಭಾನುವಾರದ ವಾರಾಂತ್ಯದ ರಜೆ ಬಳಸಿಕೊಂಡು, ನಗರ ಮತದಾರರು ಮೂರು ದಿನಗಳ ಪ್ರವಾಸ ಯೋಜನೆ ಹಾಕಿಕೊಳ್ಳುವ ಸಾಧ್ಯತೆ ಇತ್ತು. ಇದನ್ನು ತಪ್ಪಿಸಲೆಂದೇ ಬುಧವಾರಕ್ಕೆ ಮತದಾನ ನಿಗದಿಪಡಿಸಲಾಗಿದೆ.." ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಮತದಾನ ಮಾಡುವುದು ತಮ್ಮ ಪವಿತ್ರ ಕರ್ತವ್ಯ ಎಂಬುದು ಮತದಾರರು ಭಾವಿಸಬೇಕು. ಮತದಾನದ ದಿನವನ್ನು ಕೇವಲ ರಜೆ ದಿನವನ್ನಾಗಿ ಪರಿಗಣಿಸದೇ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಮ್ಮ ಬದ್ಧತೆ ಎಂದು ಪರಿಗಣಿಸಬೇಕು. ಅದರಲ್ಲೂ ವಿಶೇಷವಾಗಿ ನಗರ ಮತದಾರರು ತಮ್ಮ ಮತದಾನವನ್ನು ತಪ್ಪಿಸಬಾರದು ಎಂಬ ಉದ್ದೇಶದಿಂದ, ಮತದಾನ ಪ್ರಕ್ರಿಯೆನ್ನು ಬುಧವಾರಕ್ಕೆ ನಿಗದಿಪಡಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಮತದಾನದ ಬಗೆಗಿನ ನಗರ ನಿರಾಸಕ್ತಿಯು ಕರ್ನಾಟಕದಲ್ಲಿ ಚುನಾವಣಾ ಆಯೋಗವು ಗುರುತಿಸಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಮತದಾನದ ಪ್ರಮಾಣವು, 2013ರಲ್ಲಿ ಶೇ.71.83ರಿಂದ 2018ರಲ್ಲಿ ಶೇ. 72.44ಕ್ಕೆ ಏರಿಕೆ ಕಂಡಿದೆ.
ಆದಾಗ್ಯೂ ಬಿಬಿಎಂಪಿ(ದಕ್ಷಿಣ) ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಶೇ. 55.04 ರಿಂದ ಶೇ. 51.98ಕ್ಕೆ, ಹಾಗೂ ಬಿಬಿಎಂಪಿ(ಉತ್ತರ) ವ್ಯಾಪ್ತಿಯಲ್ಲಿ ಶೇ. 56.58ರಿಂದ ಶೇ. 53.47ಕ್ಕೆ ಇಳಿಕೆ ಕಂಡಿದೆ. ಹಾಗೆಯೇ ಬಿಬಿಎಂಪಿ (ಕೇಂದ್ರ) ವ್ಯಾಪ್ತಿಯಲ್ಲಿ ಶೇ. 57.71ರಿಂದ ಶೇ.55.18ಕ್ಕೆ ಮತ್ತು ಬೆಂಗಳೂರು ನಗರದಲ್ಲಿ ಶೇ.62.03ರಿಂದ ಶೇ.57ಕ್ಕೆ ಮತದಾನ ಪ್ರಮಾಣ ಕುಸಿತ ಕಂಡಿದೆ.
ಬೆಂಗಳೂರು ನಗರವೊಂದರಲ್ಲೇ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿದ್ದು, ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿ ನೆಲೆಗೊಂಡಿರುವ ಒಟ್ಟು 8,615 ಮತಗಟ್ಟೆಗಳ ಪೈಕಿ ಶೇ. 88ರಷ್ಟು ಪಾಲನ್ನು ಹೊಂದಿದೆ. ಆದರೆ ಇಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ಚುನಾವಣಾ ಆಯೋಗದ ಚಿಂತೆಗೆ ಕಾರಣವಾಗಿದೆ.
ಹೀಗಾಗಿ ನಗರ ಪ್ರದೇಶಗಳ ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನ ಮತದಾರರನ್ನು ಮತಗಟ್ಟೆಗೆ ಕರೆತರುವ ಉದ್ದೇಶದಿಂದಲೇ, ಮತದಾನ ಪ್ರಕ್ರಿಯೆಯನ್ನು ಬುಧವಾರಕ್ಕೆ ನಿಗದಿಪಡಿಸಲಾಗಿದೆ. ಇದರಿಂದ ಮತದಾರರು ದೀರ್ಘ ರಜೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳುತ್ತಾರೆ.
ಕೇವಲ ಕರ್ನಾಟಕ ಮಾತ್ರವಲ್ಲದೇ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ, ನಗರ ಪ್ರದೇಶಗಳ ಮತದಾರರು ಮತದಾನಕ್ಕೆ ನಿರಾಸಕ್ತಿ ತೋರಿದ ಉದಾಹರಣೆಗಳಿವೆ. 2022ರ ನವೆಂಬರ್‌ನಲ್ಲಿ ನಡೆದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ, ಒಟ್ಟು ಶೇ. 75.78ರಷ್ಟು ಮತದಾನವಾಗಿತ್ತು. ಆದರೆ ರಾಜಧಾನಿ ಶಿಮ್ಲಾದಲ್ಲಿ ಕೇವಲ ಶೇ. 62.53ರಷ್ಟು ಮತದಾನ ದಾಖಲಾಗಿತ್ತು.
ಅದೇ ರೀತಿ 2022ರ ಡಿಸೆಂಬರ್‌ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ, ಒಟ್ಟು ಶೇ. 64.33ರಷ್ಟು ಮತದಾನವಾಗಿತ್ತು. ಆದರೆ ರಾಜ್‌ಕೋಟ್‌ನಲ್ಲಿ ಕೇವಲ ಶೇ. 57.12ರಷ್ಟು ಮತ್ತು ಗಾಂಧಿಧಾಮ್‌ನಲ್ಲಿ ಕೇವಲ ಶೇ. 47.86ರಷ್ಟು ಮತದಾನ ದಾಖಲಾಗಿತ್ತು. ಹಾಗೆಯೇ 2019ರ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನ ನಡೆದ 20 ಲೋಕಸಭಾ ಕ್ಷೇತಗ್ರಳ ಪೈಕಿ, ಒಂಬತ್ತು ನಗರ ಪ್ರದೇಶಗಳಾಗಿದ್ದವು. ಹೈದರಾಬಾದ್, ಪಾಟ್ನಾ ಸಾಹಿಬ್, ಸಿಕಂದರಾಬಾದ್, ಕಲ್ಯಾಣ್, ಪುಣೆ, ಥಾಣೆ, ಮುಂಬೈ ದಕ್ಷಿಣ, ಕಾನ್ಪುರ ಮತ್ತು ಅಲಹಾಬಾದ್ ನಗರಗಳಲ್ಲಿ ಅತ್ಯಂತ ಕಡಿಮೆ ಮತದಾನ ದಾಖಲಾಗಿತ್ತು.