Cauvery Theerthodbhava 2024: ಕೊಡಗಿನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ; ಪ್ಲಾಸ್ಟಿಕ್ ಬಾಟಲಿ, ಕ್ಯಾನ್ ತರುವಂತಿಲ್ಲ
ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಇಂದು ಬೆಳಿಗ್ಗೆ 7:30 ಗಂಟೆಗೆ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಿಲ್ಲಾಡಳಿತ ಈ ಪವಿತ್ರ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಮಡಿಕೇರಿ: ಕೊಡಗಿನಲ್ಲಿ ಈಗ ಕಾವೇರಿ ತೀರ್ಥೋದ್ಭವದ ಸಡಗರ. ಗುರುವಾರ ಬೆಳಿಗ್ಗೆ ಪವಿತ್ರ ತೀರ್ಥೋದ್ಭವ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಆಗಲಿದೆ. ಅಕ್ಟೋಬರ್ 17 ರಂದು ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜರುಗಲಿದ್ದು,ಈಗಾಗಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಮಳೆ ಹಾಗೂ ಚಳಿಯನ್ನೂ ಲೆಕ್ಕಿಸದೇ ತಲಕಾವೇರಿಯಲ್ಲಿ ಸೇರಿದ್ದಾರೆ. ಕೊಡಗಿನ ನಾನಾ ಭಾಗಗಳೂ ಸೇರಿದಂತೆ ಕಾವೇರಿ ಭಕ್ತರು ತಲಕಾವೇರಿಯತ್ತ ಆಗಮಿಸುತ್ತಿದ್ದಾರೆ. ಈ ಸಂಬಂಧ ತಲಕಾವೇರಿಯಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಮೊದಲ ಬಾರಿಗೆ ತಲಕಾವೇರಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಅನ್ನು ನಿಷೇಧಿಲಾಗಿದೆ.
ಪ್ರತಿ ವರ್ಷದಂತೆ ಅಕ್ಟೋಬರ್ 17ರಂದೇ ತೀರ್ಥೋದ್ಭವ ಆಗಲಿದೆ. ಈ ಬಾರಿ ಬೆಳಿಗ್ಗೆ ಈ ಕ್ಷಣ ಬಂದಿದೆ. ಕಾವೇರಿ ಕುಂಡಿಕೆಯಿಂದ ಅವಿರ್ಭವಿಸುವ ಕ್ಷಣವನ್ನು ಆನಂದಿಸಿ ಸ್ನಾನ ಮಾಡಲು ಭಕ್ತರು ಆಗಮಿಸಿದ್ದಾರೆ. ಕೊಡಗು ಮಾತ್ರವಲ್ಲದೇ ಹಲವು ಭಾಗದವರಿಗೆ ಕಾವೇರಿ ಆರಾಧ್ಯ ದೇವತೆ. ಕಾವೇರಿ ಮಾತೆಯಿಂದಲೇ ಬದುಕು ಕಟ್ಟಿಕೊಂಡಿರುವವರೂ ಈ ದಿನ ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
ಪ್ಲಾಸ್ಟಿಕ್ ಬಿಂದಿಗೆ, ಬಾಟಲ್, ಕ್ಯಾನ್‍ಗಳ ಬಳಕೆ ನಿಷೇಧ
ಭಾಗಮಂಡಲದಲ್ಲಿರುವ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಅಕ್ಟೋಬರ್, 17 ರಂದು ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ಜಾತ್ರೆ ನಡೆಯಲಿದ್ದು, ಈ ಸಮಯದಲ್ಲಿ ದೇವಾಲಯಕ್ಕೆ ಬರುವ ಭಕ್ತಾಧಿಗಳು,ಯಾಥ್ರಾರ್ಥಿಗಳು ಶ್ರೀ ಕಾವೇರಿಯ ಪವಿತ್ರ ತೀರ್ಥವನ್ನು ಶೇಖರಿಸಿಕೊಂಡು ಹೋಗಲು ಪ್ಲಾಸ್ಟಿಕ್ ಬಿಂದಿಗೆ, ಪ್ಲಾಸ್ಟಿಕ್ ಬಾಟಲ್ ಮತ್ತು ಪ್ಲಾಸ್ಟಿಕ್ ಕ್ಯಾನ್‍ಗಳನ್ನು ಬಳಕೆ ಮಾಡಿರುವುದು ಕಂಡು ಬಂದಿದ್ದು, ಅಧಿಸೂಚಿತ ಸಂಸ್ಥೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‍ಗಳನ್ನು ನಿರ್ಭಂದಿಸುವಂತೆ ಧಾರ್ಮಿಕ ದತ್ತಿ ಇಲಾಖೆ, ಆಯುಕ್ತರು ಆದೇಶದದಲ್ಲಿ ಸೂಚಿಸಿದ್ದಾರೆ.
ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಪವಿತ್ರ ತೀರ್ಥವನ್ನು ಶೇಖರಿಸಲು ಪ್ಲಾಸ್ಟಿಕ್ ಉತ್ಪನ್ನಗಳನ್ನು ಕಲ್ಯಾಣಿ ಮತ್ತು ಪವಿತ್ರ ಕುಂಡಿಕೆಯ ಬಳಿ ಬಳಸದಂತೆ ನಿರ್ಭಂಧಿಸಲಾಗಿದೆ ಎಂದು ಶ್ರೀ ಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಉಚಿತ ಬಸ್ ಸೇವೆ
ತುಲಾ ಸಂಕ್ರಮಣ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ತುಲಾ ಸಂಕ್ರಮಣ ಜಾತ್ರೆ ಸಂಬಂಧ ಮಡಿಕೇರಿ, ಭಾಗಮಂಡಲ, ತಲಕಾವೇರಿಗೆ ಹೋಗುವ ರಸ್ತೆ ಬದಿಯಲ್ಲಿ ಕಾಡನ್ನು ಕಡಿಸಿ ಸುಗಮ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆಯಾಗಿರುವ ಹಿನ್ನೆಲೆ ಮಾರ್ಗದ ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯವಾಗಿದೆ. ಪೊಲೀಸ್ ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಅಗತ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಹಾಗೆಯೇ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗಿದೆ.
ತಲಕಾವೇರಿ ಜಾತ್ರೆ ಹಿನ್ನೆಲೆ ಭಾಗಮಂಡಲ ದಿಂದ ತಲಕಾವೇರಿಗೆ ಹಾಗೂ ತಲಕಾವೇರಿಯಿಂದ-ಭಾಗಮಂಡಲಕ್ಕೆ 15 ಬಸ್‍ಗಳು ಓಡಾಡಲಿದ್ದು, ಭಕ್ತಾಧಿಗಳು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ಮಡಿಕೇರಿ ಕೆಎಸ್‍ಆರ್‍ಟಿಸಿ ಘಟಕದ ವ್ಯವಸ್ಥಾಪಕರಾದ ಮೆಹಬೂಬ್ ಅಲಿ ಮಾಹಿತಿ ನೀಡಿದ್ದಾರೆ.
ತಲಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ ಹಿನ್ನೆಲೆ ತಾಯಿ ಕಾವೇರಿ ಮಾತೆಯ ಭಕ್ತಿಗೀತೆಗಳ ಗೀತಾ ಗಾಯನ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂಬಂಧ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಭಕ್ತಾಧಿಗಳ ಪ್ರಸಾದ ವಿನಿಯೋಗಕ್ಕೆ ಅಗತ್ಯ ಸಿದ್ಧತೆಗಳು ನಡೆದಿವೆ.
ಪರಿಸರ ಶುಚಿತ್ವ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಂದಾಯ, ಪೊಲೀಸ್, ಪಂಚಾಯತ್ ರಾಜ್, ಸೆಸ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹೀಗೆ ವಿವಿಧ ಇಲಾಖೆಗಳು ಆಗಬೇಕಿರುವ ಕೆಲಸಗಳನ್ನು ಕೈಗೊಂಡಿವೆ.
ಮದ್ಯ ಮಾರಾಟ ನಿಷೇಧ
ತಲಕಾವೇರಿ ತೀರ್ಥೋಧ್ಬವ ಹಿನ್ನಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ಅಕ್ಟೋಬರ್ 17 ರ ಮಧ್ಯರಾತ್ರಿ 12 ಗಂಟೆಯವರೆಗೆ ತಲಕಾವೇರಿ, ಭಾಗಮಂಡಲ ಮತ್ತು ಚೇರಂಬಾಣೆ ಗ್ರಾಮದ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೊಟೇಲ್ ಮತ್ತು ಕ್ಲಬ್‍ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.