Kodagu Crime: ಕೊಡಗಿನಲ್ಲಿ ವಯೋವೃದ್ದರು, ಬಾಲಕಿ ಸಹಿತ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ, ಅಳಿಯನಿಂದಲೇ ಕೃತ್ಯ, ಕೇರಳದಲ್ಲಿ ಆರೋಪಿ ಸೆರೆ
ಕನ್ನಡ ಸುದ್ದಿ  /  ಕರ್ನಾಟಕ  /  Kodagu Crime: ಕೊಡಗಿನಲ್ಲಿ ವಯೋವೃದ್ದರು, ಬಾಲಕಿ ಸಹಿತ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ, ಅಳಿಯನಿಂದಲೇ ಕೃತ್ಯ, ಕೇರಳದಲ್ಲಿ ಆರೋಪಿ ಸೆರೆ

Kodagu Crime: ಕೊಡಗಿನಲ್ಲಿ ವಯೋವೃದ್ದರು, ಬಾಲಕಿ ಸಹಿತ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ, ಅಳಿಯನಿಂದಲೇ ಕೃತ್ಯ, ಕೇರಳದಲ್ಲಿ ಆರೋಪಿ ಸೆರೆ

Kodagu Crime: ಕೊಡಗು ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ್ದಾನೆ. ಇದರಲ್ಲಿ ಇಬ್ಬರು ವಯಸ್ಸಾದವರು, ಒಬ್ಬ ಬಾಲಕಿ ಸೇರಿದ್ದಾಳೆ. ಆರೋಪಿಯನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಕೊಡಗಿನಲ್ಲಿ ಭೀಕರ ಕೊಲೆ ಪ್ರಕರಣ ನಡೆದಿದೆ.
ಕೊಡಗಿನಲ್ಲಿ ಭೀಕರ ಕೊಲೆ ಪ್ರಕರಣ ನಡೆದಿದೆ.

Kodagu Crime:ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕು ಬೇಗೂರು ಕೊಳತೋಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದವರನ್ನು ಕಾಫಿ ತೋಟದ ಮನೆಯಲ್ಲಿ ವಾಸವಿದ್ದ ಕಾರ್ಮಿಕರಾದ ಕರಿಯ (75), ಗೌರಿ (70). ಅವರ ಮೊಮ್ಮಗಳು ನಾಗಿ (35) ಹಾಗೂ ನಾಗಿ ಪುತ್ರಿ ಕಾವೇರಿ(6 ) ಎಂದು ಗುರುತಿಸಲಾಗಿದೆ. ಆರೋಪಿ ಗಿರೀಶ್‌ ಜತೆಗೆ ನಾಗಿ ವಿವಾಹವಾಗಿತ್ತು. ಅವರದ್ದೇ ಕುಟುಂಬದ ವ್ಯಕ್ತಿ ಗಿರೀಶ್‌ ಎಂಬಾತ ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಿರುವುದು ತನಿಖೆಯ ವೇಳೆ ಬಯಲಾಗಿದೆ. ಕೊಡಗಿನಲ್ಲಿ ತಲ್ಲಣ ಮೂಡಿಸಿದ್ದ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಆರು ಗಂಟೆಯಲ್ಲೇ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳದಲ್ಲಿ ಅಡಗಿಕೊಂಡಿದ್ದ ಗಿರೀಶ್‌ನನ್ನು ಶುಕ್ರವಾರ ರಾತ್ರಿ ಬಂಧಿಸಿ ಕರೆ ತರಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಡಿಐಜಿಪಿ ಡಾ.ಬೋರಲಿಂಗಯ್ಯ, ಕೊಡಗು ಎಸ್ಪಿ ರಾಮರಾಜನ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಬಂಧನಕ್ಕೆ ತಂಡ ರಚಿಸಿ ಸೂಚನೆಗಳನ್ನು ನೀಡಿದ್ದರು.

ಅಳಿಯನೇ ಕುಟುಂಬದವರನ್ನು ಕೊಲೆ ಮಾಡಿರುವ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿತ್ತು.

ಕೇರಳ ರಾಜ್ಯದ ವೈನಾಡು ಜಿಲ್ಲೆಯ ತಿರುನಲ್ಲಿಯ ಉಣಿತು ಪರಂಬು ಗ್ರಾಮದವರಾಗಿರುವ ಇವರೆಲ್ಲ ಕೂಲಿ ಕೆಲಸಕ್ಕಾಗಿ ಕೊಡಗಿಗೆ ಬಂದು ಬೇಗೂರು ಗ್ರಾಮದಲ್ಲಿ ನೆಲೆಸಿದ್ದರು.

ಗಿರೀಶ್‌ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಈತನೊಂದಿಗೆ ಕುಟುಂಬದವರು ವಾಸವಿದ್ದರು. ಗಿರೀಶನ ಅಕ್ರಮ ಸಂಬಂಧದ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಶುಕ್ರವಾರವೂ ಜಗಳ ನಡೆದಿದ್ದು. ಈ ವೇಳೆ ಗಿರೀಶ ಸಿಟ್ಟಿನಲ್ಲಿ ಕತ್ತಿಯಲ್ಲಿ ನಾಲ್ವರನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ನೆರೆಹೊರೆವರೊಂದಿಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ ಪ್ರಕಾರ, ಮನೆಯಲ್ಲಿ ಜಗಳ ಆಗಾಗ ಆಗುತ್ತಿತ್ತು. ಇಂದೂ ಕೂಡ ಜೋರಾಗಿಯೇ ಇತ್ತು. ಸಾಮಾನ್ಯ ಜಗಳ ಎಂದು ಸುಮ್ಮನಾಗಿದ್ದರು. ಆದರೆ ಕೂಲಿ ಕೆಲಸಕ್ಕೆ ಮನೆಯವರು ಬರಲಿಲ್ಲ ಎಂದು ಅಕ್ಕಪಕ್ಕದವರು ಅಲ್ಲಿ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ನಾಲ್ವರು ಬಿದ್ದು ಮೃತಪಟ್ಟಿರುವುದು ಬಯಲಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊನ್ನಂಪೇಟೆ ಪೊಲೀಸರು ಧಾವಿಸಿದರು. ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಕ್ರಮ ವಹಿಸಿದ್ದರು. ತಂಡಗಳನ್ನು ರಚಿಸಿದ್ದರು. ಖಚಿತ ಮಾಹಿತಿ ಮೇರೆಗೆ ಆತನನ್ನು ವೈನಾಡು ಜಿಲ್ಲೆಯ ತಾಲಪೋಯ ಬಳಿ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner