Kannada News  /  Karnataka  /  Kodagu District News Devarapura Kunde Habba Festival Dedicated To Lord Ayyapan And Goddess Bhadra Kali Pcp
Kunde Habba Festival: ಅಯ್ಯಪ್ಪ-ಭದ್ರಕಾಳಿ ದೇವರ ವಿಶಿಷ್ಟ ಆಚರಣೆ, ಅಪರೂಪದ ಕುಂಡೆ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?
Kunde Habba Festival: ಅಯ್ಯಪ್ಪ-ಭದ್ರಕಾಳಿ ದೇವರ ವಿಶಿಷ್ಟ ಆಚರಣೆ, ಅಪರೂಪದ ಕುಂಡೆ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?

Kunde Habba Festival: ಅಯ್ಯಪ್ಪ-ಭದ್ರಕಾಳಿ ದೇವರ ವಿಶಿಷ್ಟ ಆಚರಣೆ, ಅಪರೂಪದ ಕುಂಡೆ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?

26 May 2023, 17:59 ISTHT Kannada Desk
26 May 2023, 17:59 IST

Devarapura Kunde Habba Festival: ಅಯ್ಯಪ್ಪ-ಭದ್ರಕಾಳಿ ದೇವರ ವಿಶಿಷ್ಟ ಆಚರಣೆ ವಿವಿಧ ವೇಷಭೂಷಣ ಹಾಕಿ ಕುಣಿಯುತ್ತಿರುವ ಗಿರಿಜನರು, ಕೈಯಲ್ಲಿ ಬುರುಡೆ, ಬಾಯಲ್ಲಿ ಕುಂಡೆ ಹಾಡು, ತಲೆಯಲ್ಲಿ ಮದ್ಯದ ಅಮಲು. ಇದು ಕೊಡಗು ಜಿಲ್ಲೆಯಲ್ಲಿ ಕುಂಡೆ ಹಬ್ಬದ ಸಂದರ್ಭದಲ್ಲಿ ಕಾಣಸಿಗುವ ಅತಿ ಅಪರೂಪದ ದೃಶ್ಯ.

ಕೊಡಗು: ಅಯ್ಯಪ್ಪ-ಭದ್ರಕಾಳಿ ದೇವರ ವಿಶಿಷ್ಟ ಆಚರಣೆ ವಿವಿಧ ವೇಷಭೂಷಣ ಹಾಕಿ ಕುಣಿಯುತ್ತಿರುವ ಗಿರಿಜನರು, ಕೈಯಲ್ಲಿ ಬುರುಡೆ, ಬಾಯಲ್ಲಿ ಕುಂಡೆ ಹಾಡು, ತಲೆಯಲ್ಲಿ ಮದ್ಯದ ಅಮಲು. ಇದು ಕೊಡಗು ಜಿಲ್ಲೆಯಲ್ಲಿ ಕುಂಡೆ ಹಬ್ಬದ ಸಂದರ್ಭದಲ್ಲಿ ಕಾಣಸಿಗುವ ಅತಿ ಅಪರೂಪದ ದೃಶ್ಯ. ಹೊರಜಗತ್ತಿನಿಂದ ದೂರವೇ ಉಳಿದು ಜೀವನ ಮಾಡುವ ಕಾಡಿನ ಮಕ್ಕಳು ಆಚರಣೆ ಮಾಡುವ ಹಬ್ಬ ಇದು. ಇದು ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದಲ್ಲಿ ನಡೆಯುವ ಶ್ರೀ ಅಯ್ಯಪ್ಪ -ಭದ್ರಕಾಳಿ ದೇವರ ಬೇಡು ಹಬ್ಬ. ಆದರೆ ಗಿರಿಜನರಲ್ಲಿ ಇದು ರಾಜ್ಯದಲ್ಲಿ ಕುಂಡೆ ಹಬ್ಬ ಎಂದೇ ಪ್ರಖ್ಯಾತಿ ಪಡೆದುಕೊಂಡಿದೆ.

ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಯಿಂದಲೂ ಸಾವಿರಾರು ಗಿರಿಜನರು ಈ ಹಬ್ಬಕ್ಕೆ ಆಗಮಿಸುತ್ತಾರೆ. ಜಿಲ್ಲೆಯ ವಿವಿಧೆಡೆ ಎರಡು ದಿನಗಳ ಕಾಲ ಜನತೆಯಿಂದ ಹಣ ವಸೂಲಿ ಮಾಡುತ್ತಾರೆ. ಹಣ ನೀಡದಿದ್ದರೆ ಕೆಟ್ಟ ಕೆಟ್ಟ ಬೈಗುಳದ ಗಿಫ್ಟ್ ಸಿಗುತ್ತದೆ. ಆದ್ದರಿಂದ ಇದು ಬೈಗುಳದ ಹಬ್ಬ ಎಂದು ನಾಮಾಂಕಿತವಾಗಿದೆ. ಹಲವು ಬಗೆ ಬಗೆಯ ಕುಂಡೆ ಹಾಡುಗಳು ಈ ಗಿರಿಜನರ ಬಾಯಲ್ಲಿ ಸದಾ ಜಿನುಗುತ್ತಿರುತ್ತದೆ. ಕೊನೆಗೆ ಎಲ್ಲಾ ಗಿರಿಜನರು ಬಂದು ಸೇರುವುದು ಇದೇ ಅಯ್ಯಪ್ಪ-ಭದ್ರಕಾಳಿ ದೇವಾಲಯದಲ್ಲಿ. ತಾವು ವಸೂಲಿ ಮಾಡಿದರಲ್ಲಿ ಸ್ವಲ್ಪ ಹಣವನ್ನು ದೇವರಿಗೆ ಭಂಡಾರ ರೂಪದಲ್ಲಿ ಒಪ್ಪಿಸಿ ಉಳಿದ ಹಣವನ್ನು ಖರ್ಚು ಮಾಡುತ್ತಾರೆ.

ಈ ಗಿರಿಜನರು ಹೆಚ್ಚಾಗಿ ಬೈಯುವುದು ಅಯ್ಯಪ್ಪ ದೇವರನ್ನು. ಇದಕ್ಕೆ ಕಾರಣ, ಪುರಾತನ ಕಾಲದಲ್ಲಿ ಗಿರಿಜನರು ಅಯ್ಯಪ್ಪ ದೇವರೊಂದಿಗೆ ಕಾಡಿಗೆ ತೆರಳಿದಾಗ ಅಲ್ಲಿ ಭದ್ರಕಾಳಿ ದೇವರ ದರ್ಶನವಾಗುತ್ತದೆ. ಈ ಸಂದರ್ಭ ಅಯ್ಯಪ್ಪ ದೇವರು ಗಿರಿಜನರನ್ನು ಕಾಡಿನಲ್ಲಿ ಬಿಟ್ಟು ಭದ್ರಕಾಳಿ ದೇವರೊಂದಿಗೆ ಹೊರಟುಹೋಗುತ್ತಾನೆ. ಈ ಸಂದರ್ಭ ಗಿರಿಜನರು ಅಯ್ಯಪ್ಪ ದೇವರನ್ನು ನಿಂದಿಸಲು ಪ್ರಾರಂಭ ಮಾಡಿದರು ಎಂಬುದು ಇತಿಹಾಸ. ಈ ಉತ್ಸವವನ್ನು ಗ್ರಾಮಸ್ಥರು ಶ್ರದ್ದಾಭಕ್ತಿಯಿಂದ ಆಚರಣೆ ಮಾಡುತ್ತಾರೆ. ಒಂದು ಕಡೆ ಗಿರಿಜನರಿಗೆ ಬೈಗುಳದ ಹಬ್ಬವಾದರೆ ಗ್ರಾಮಸ್ಥರು ಭಕ್ತಿಯಿಂದ ಆಚರಣೆ ಮಾಡುವ ಬೇಡು ಹಬ್ಬ. ಚಿತ್ರವಿಚಿತ್ರ ವೇಷಧಾರಿಗಳು ಒಟ್ಟೊಟ್ಟಿಗೆ ಕುಣಿದು ಕುಪ್ಪಳಿಸುವ ದೃಶ್ಯವನ್ನು ಕುಂಡೆ ಹಬ್ಬದ ಸಮಯದಲ್ಲಿ ಕಣ್ತುಂಬಿಕೊಳ್ಳಬಹುದು.

ಕಾಡಿನಲ್ಲಿ ಸಿಗುವ ಸೊಪ್ಪು, ಹರಿದ ಹಳೆ ಬಟ್ಟೆ, ಗೋಣಿಚೀಲಗಳು, ಹೀಗೆ ಕೈಗೆ ಸಿಕ್ಕುವ ವಿವಿಧ ವಸ್ತುಗಳಿಂದ ವಿವಿಧ ವೇಷಗಳನ್ನು ತೊಟ್ಟು, ಒಣಗಿದ ಸೋರೆಕಾಯಿ ಬುರುಡೆ ಪ್ಲಾಸ್ಟಿಕ್ ಡಬ್ಬ ಹಾಗೂ ಟಿನ್ನುಗಳನ್ನೇ ತಾಳಮೇಳ ಮಾಡಿಕೊಂಡು ಡೊಳ್ಳಿನ ರೀತಿಯಲ್ಲಿ ಬಡಿಯುತ್ತಾ ಆಕರ್ಷಕವಾಗಿ ಶಬ್ಧ ಹೊರಡಿಸುತ್ತಾ ಆ ಶಬ್ಧಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಸಿಕ್ಕ ಸಿಕ್ಕಿದವರನ್ನು ಕೆಟ್ಟ ಪದಗಳಿಂದ ನಿಂದಿಸಿ ಭಿಕ್ಷಾಟನೆ ಮಾಡುತ್ತಾ ಹಣ ಹಾಗೂ ದವಸ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ನಂತರ ದೇವಾಲಯದಲ್ಲಿ ಇಂತಿಷ್ಟು ಸಂಗ್ರಹಿಸಿದ ಹಣವನ್ನು ಭಂಡಾರಕ್ಕೆ ಸಲ್ಲಿಸುವುದು ವಾಡಿಕೆ. ಮಧ್ಯಾಹ್ನದ ನಂತರ ಕೀರಾತೇಶ್ವರ, ಭದ್ರಕಾಳಿ ದೇವಾಲಯದ ಮುಂಭಾಗಕ್ಕೆ ಆಗಮಿಸುವ ವಿವಿಧ ವೇಷಧಾರಿಗಳು ಅಲ್ಲಿ ಕುಣಿಯುತ್ತ ನಂತರ ದೇವರಿಗೆ ಭಂಡಾರವನ್ನ ಹಾಕಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ತೆರಳುತ್ತಾರೆ.

ಈ ಬೇಡು ಹಬ್ಬವು ವಿಶೇಷವಾದ ಆಚಾರ ವಿಚಾರ ವೇಷ ಭೂಷಣಗಳಿಂದ ಕೂಡಿದ್ದು ಇದನ್ನು ಬೈಗುಳದ ಹಬ್ಬವೆಂದೇ ಕರೆಯುತ್ತಾರೆ. ಜಿಲ್ಲೆಯ ವಿವಿಧಡಗಳಿಂದ ಮತ್ತು ರಾಜ್ಯದ ಹಲವು ಭಾಗಗಳಿಂದ ಇದನ್ನು ವೀಕ್ಷಿಸಲು ಅನೇಕರು ಬರುತ್ತಾರೆ. ಈ ಹಿಂದೆ ಮೈಸೂರು, ಕೇರಳ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಅವರಿಂದ ಬಲವಂತವಾಗಿ ಹಣವನ್ನು ವಸೂಲಿ ಮಾಡುತ್ತಾ ಕೆಲವರು ಹಣ ನೀಡದಿದ್ದಾಗ ದಾಂಧಲೇ ಮಾಡುತ್ತಿದ್ದನ್ನು ಮನ ಗಂಡು ಕಳೆದ ಮೂರು ವರ್ಷದಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ವರದಿ: ಧಾತ್ರಿ ಭಾರದ್ವಾಜ್‌

ಅಪರೂಪದ ಕುಂಡೆ ಹಬ್ಬ
ಅಪರೂಪದ ಕುಂಡೆ ಹಬ್ಬ