Kodagu News: ಕಚೇರಿಯಲ್ಲಿ ಕುಳಿತುಕೊಳ್ಳಲು ಬಂದ ಕೊಡಗು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಧರ್‌ ಮೂರ್ತಿ ಹಠಾತ್‌ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Kodagu News: ಕಚೇರಿಯಲ್ಲಿ ಕುಳಿತುಕೊಳ್ಳಲು ಬಂದ ಕೊಡಗು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಧರ್‌ ಮೂರ್ತಿ ಹಠಾತ್‌ ಸಾವು

Kodagu News: ಕಚೇರಿಯಲ್ಲಿ ಕುಳಿತುಕೊಳ್ಳಲು ಬಂದ ಕೊಡಗು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಧರ್‌ ಮೂರ್ತಿ ಹಠಾತ್‌ ಸಾವು

ಕೊಡಗು ಜಿಲ್ಲೆಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರಮೂರ್ತಿ ಅವರು ಕಚೇರಿಗೆ ಬಂದು ಕುಳಿತುಕೊಳ್ಳುವಾಗಲೇ ಹಠಾತ್‌ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕೊಡಗು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಧರಮೂರ್ತಿ
ಕೊಡಗು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಧರಮೂರ್ತಿ

ಮಡಿಕೇರಿ: ಕಚೇರಿಯಲ್ಲಿ ಕುಳಿತಾಗ ಇಲ್ಲವೇ ವಾಹನದಲ್ಲಿ ಸಂಚರಿಸುವಾಗ ಅಥವಾ ಚಟುವಟಿಕೆ ಮಾಡುವಾಗ ಹಠಾತ್‌ ಸಾವು ಪ್ರಕರಣಗಳು ವರದಿಯಾಗುತ್ತಲೇ ಇವೆ. ಕೊಡಗಿನಲ್ಲೂ ಇಂತಹದ್ದೇ ಪ್ರಕರಣ ಮಂಗಳವಾರ ನಡೆದಿದೆ. ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಜೆ.ಬಿ.ಶ್ರೀಧರಮೂರ್ತಿ (59) ಅವರು ಮಂಗಳವಾರ ಬೆಳಿಗ್ಗೆ 11.30 ರ ಸಮಯದಲ್ಲಿ ಇಲಾಖೆಯ ಮಡಿಕೇರಿಯಲ್ಲಿರುವ ಕಛೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅವರು ಕಚೇರಿಗೆ ಬಂದು ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾದಾಗ ಏಕಾಏಕಿ ನಿಯಂತ್ರಣ ಕಳೆದುಕೊಂಡು ಅಲ್ಲಿಯೇ ಕುಸಿತು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಮೃತಪಟ್ಟಿರುವುದು ಕಂಡು ಬಂದಿದೆ. ದಿಢೀರ್‌ ಆದ ಈ ಘಟನೆಯಿಂದ ಕಚೇರಿಯಲ್ಲಿನ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದು ಕಂಡು ಬಂದಿತು.

ಮಂಗಳವಾರ ಬೆಳಿಗ್ಗೆ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಗೆ ಆಗಮಿಸಿದ ಕೊಡಗು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಧರಮೂರ್ತಿ ಅವರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಆಗನೇ ಹಠಾತ್ತಾನೆ ಕುಸಿದುಬಿದ್ದಿದ್ದಾರೆ. ಅಲ್ಲಿಯೇ ಇದ್ದ ಸಿಬ್ಬಂದಿ ಅವರಿಗೆ ನೀರು ಕುಡಿಸಿ ಮೇಲೆ ಕೂರಿಸಲು ಯತ್ನಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಶ್ರೀಧರಮೂರ್ತಿ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದರು. ಆಸ್ಪತ್ರೆಗೆ ಕರೆದೊಯ್ದ ನಂತರ ಅಲ್ಲಿ ಅವರು ಮೃತಪಟ್ಟಿರುವುದನ್ನು ಅಧಿಕೃತವಾಗಿ ಘೋಷಿಸಲಾಯಿತು. ಆನಂತರ ಸರ್ಕಾರಿ ಗೌರವ ಸಲ್ಲಿಸಿ ಮೃತರ ದೇಹವನ್ನು ಅವರ ತವರೂರಾದ ಚಿತ್ರದುರ್ಗಕ್ಕೆ ರವಾನೆ ಮಾಡಲಾಯಿತು. ಚಿತ್ರದುರ್ಗದಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಶ್ರೀಧರಮೂರ್ತಿ ಅವರು ಕೊಡಗು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾಗಿ ನೇಮಕಗೊಂಡು ಇಂದಿಗೆ 28 ದಿವಸಗಳಷ್ಟೇ ಆಗಿದ್ದು ಇನ್ನು ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದರು. ಮೂರು ದಶಕಕ್ಕೂ ಹೆಚ್ಚು ಕಾಲ ಅವರು ಆಹಾರ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಮಡಿಕೇರಿಯಲ್ಲಿ ನಡೆದಿದ್ದ ಕೊಡಗು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶ್ರೀಧರಮೂರ್ತಿ ಸಕ್ರಿಯವಾಗಿಯೇ ಭಾಗವಹಿಸಿದ್ದರು.

ಎರಡು ವರ್ಷದ ಹಿಂದೆ

ಕರ್ತವ್ಯಕ್ಕೆ ತೆರಳಿದ್ದಾಗ ಕೊಡಗಿನ ಜಾನುವಾರು ಅಭಿವೃದ್ಧಿ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಇದೇ ರೀತಿ ಸಾವನ್ನಪ್ಪಿದ್ದುದು ಎರಡು ವರ್ಷದ ಹಿಂದೆ ನಡೆದಿತ್ತು.

ಮಡಿಕೇರಿ ತಾಲೂಕು ಪಶುವೈದ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೆ.ಆರ್‌. ದಯಾನಂದ (59) ಕೆ.ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಶಾಲೆಯಲ್ಲಿ ಕರ್ತವ್ಯಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿ ನಿಧನರಾಗಿದ್ದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner